ಬೆಂಗಳೂರು: ಶಾಲೆಗಳಲ್ಲಿ ಕಳಪೆ ಮೊಟ್ಟೆ ನೀಡುತ್ತಿರುವ ಕುರಿತು ರಾಜ್ಯಾದ್ಯಂತ ತನಿಖೆಗೆ ಆದೇಶಿಸಲಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳಪೆ ಮೊಟ್ಟೆ ವಿತರಿಸುತ್ತಿರುವ ಪ್ರಕರಣಗಳು ವರದಿಯಾದ ಜಿಲ್ಲೆಗಳಷ್ಟೇ ಅಲ್ಲ ರಾಜ್ಯಾದ್ಯಂತ ಈ ಕುರಿತು ತನಿಖೆಗೆ ಸೂಚನೆ ನೀಡಿದ್ದೇವೆ. ವರದಿ ಬಂದ ಬಳಿಕ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಹೇಳಿದರು.
ಮಹತ್ವಾಕಾಂಕ್ಷಿ ಮಾತೃ ವಂದನಾ ಮತ್ತು ಮಾತೃಪೂರ್ಣ ಯೋಜನೆಗಳನ್ನು ನಿಲ್ಲಿಸಲು ಅವಕಾಶವಿಲ್ಲ. ಮಾತೃವಂದನಾ ಕೇಂದ್ರ ಸರ್ಕಾರದ ಯೋಜನೆಯಾಗಿದ್ದು, ಅದಕ್ಕೆ ನಿರಂತರವಾದ ಅನುದಾನ ಬರುತ್ತದೆ. ಮಾತೃಪೂರ್ಣ ರಾಜ್ಯ ಸರ್ಕಾರದ ಅನುದಾನದಲ್ಲಿ ನಡೆಯುತ್ತದೆ. ಇವನ್ನು ಮತ್ತಷ್ಟು ಸುಧಾರಿಸುವ ನಿಟ್ಟಿನಲ್ಲಿ ಪರಿಶೀಲನೆ ನಡೆಯುತ್ತಿವೆ ಎಂದರು.
ಬಜೆಟ್‍ನಲ್ಲಿ ಇವುಗಳಿಗಾಗಿ ಪ್ರತ್ಯೇಕ ಅನುದಾನ ನೀಡುವ ಅಗತ್ಯವಿಲ್ಲ. ನಿರಂತರ ಕಾರ್ಯಕ್ರಮಗಳಡಿಯಲ್ಲೇ ಹಣ ಹಂಚಿಕೆಯಾಗುತ್ತದೆ ಎಂದು ಸ್ಪಷ್ಟಪಡಿಸಿದರು.



