ಫೆಬ್ರವರಿಯಲ್ಲೇ ರಾಜ್ಯ ಬಜೆಟ್ ಮಂಡನೆ: ಸಿದ್ದರಾಮಯ್ಯ

2 years ago

ಹಾವೇರಿ: ಲೋಕಸಭಾ ಚುನಾವಣೆಗೆ ಮಾರ್ಚ್ ಮೊದಲ ವಾರದೊಳಗೆ ವೇಳಾಪಟ್ಟಿ ಪ್ರಕಟವಾಗಲಿದ್ದು ನೀತಿ ಸಂಹಿತೆ ಜಾರಿಯಾಗುವುದರಿಂದ ಫೆಬ್ರವರಿ ತಿಂಗಳಲ್ಲಿಯೇ ಬಜೆಟ್ ಮಂಡಿಸಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.

ಹಾವೇರಿಯಲ್ಲಿ ಸಾಮೂಹಿಕ ಅತ್ಯಾಚಾರ ಸಂತ್ರಸ್ತರ ಕುಟುಂಬದವರನ್ನು ಭೇಟಿ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತಾಡಿದ ಅವರು, ಬರಗಾಲ ಪೀಡಿತ ಪ್ರದೇಶಗಳಲ್ಲಿ ರೈತರಿಗೆ 2000 ರೂ.ಗಳ ತಾತ್ಕಾಲಿಕ ಪರಿಹಾರವನ್ನು ನೀಡುತ್ತಿದ್ದು, ಕೇಂದ್ರ ಸರ್ಕಾರದಿಂದ ಪರಿಹಾರ ಬಂದ ನಂತರ ಪುನಃ ಎನ್.ಡಿ.ಆರ್.ಎಫ್ ನಿಯಮಾವಳಿ ಗಳ ಪ್ರಕಾರ ಪರಿಹಾರ ನೀಡಲಾಗುವುದು ಎಂದರು.

ರಾಜ್ಯಸರ್ಕಾರ ನೀಡಿರುವ ಪರಿಹಾರ ಸಾಲುವುದಿಲ್ಲ ಎಂಬುದು ನಮಗೂ ಗೊತ್ತಿದೆ. ಆದರೆ ಕೇಂದ್ರದಿಂದ ಈವರೆಗೂ ಯಾವುದೇ ನೆರವು ಬಂದಿಲ್ಲ. ರಾಜ್ಯದ ಬಿಜೆಪಿ ನಾಯಕರು ಇಲ್ಲಿ ಟೀಕೆ ಮಾಡುವ ಬದಲು ದೆಹಲಿಗೆ ಹೋಗಿ ಕೇಂದ್ರ ಸರ್ಕಾರದಿಂದ ಹಣ ಬಿಡುಗಡೆ ಮಾಡಿಸಲಿ ಎಂದು ಸವಾಲೆಸೆದರು.

ಕಾರವಾರ ಕ್ಷೇತ್ರದ ಸಂಸದ ಅನಂತಕುಮಾರ್ ಹೆಗಡೆ ಅವರು ಏಕವಚನದಲ್ಲಿ ಮಾತನಾಡುವುದನ್ನು ಕಲಿಸಿದ್ದೇ ಸಿದ್ದರಾಮಯ್ಯ ಅವರು ಎಂದು ಸಮರ್ಥಿಸಿಕೊಂಡಿದ್ದಾರೆ ಎಂಬ ಸುದ್ದಿಗಾರರ ಮಾತಿಗೆ ಪ್ರತಿಕ್ರಿಯೆ ನೀಡಿದ ಅವರು, ರಾಜಕೀಯವಾಗಿ ಆರೋಪ ಮಾಡುತ್ತಾರೆ. ಅನಂತ ಕುಮಾರ್ ಹೆಗಡೆ ಅವರು ಇವತ್ತಿನವರೆಗೆ ನಾಪತ್ತೆಯಾಗಿದ್ದರು. ಚುನಾವಣೆ ಹತ್ತಿರ ಬಂದಂತೆ ಕಾಣಿಸಿಕೊಂಡು ಹೇಳಿಕೆ ನೀಡಿದ್ದಾರೆ. ಸಂಸದರಾಗಿ ಮಾಜಿ ಮಂತ್ರಿಯಾಗಿ ಕ್ಷೇತ್ರ ಕ್ಕೆ ಏನಾದರೂ ಮಾಡಿದ್ದಾರೆ ಎಂದು ಪ್ರಶ್ನಿಸಿದರು.

ಅನಂತಕುಮಾರ ಹೆಗಡೆಯವರು ಇಂದಿನವರೆಗೆ ಬಡವರ ಸಮಸ್ಯೆ ಕೇಳಿದ್ದಾರೆಯೇ? ಸಂಸ್ಕೃತಿ ಎಂದರೆ ಮನುಷ್ಯತ್ವ. ಮೊದಲು ಮನುಷ್ಯತ್ವ ಇರಬೇಕು ಎಂದರು.

Leave a Reply