ಬೆಂಗಳೂರು: ಕ್ರೀಡಾ ಚಟುವಟಿಕೆಗಳನ್ನು ಉತ್ತೇಜಿಸುವ ದೃಷ್ಟಿಯಿಂದ ರಾಜ್ಯಸರ್ಕಾರ ಒಂದು ಜಿಲ್ಲೆ, ಒಂದು ಕ್ರೀಡೆ ಎಂಬ ಪರಿಕಲ್ಪನೆಯಡಿ ಕ್ರೀಡಾಯೋಜನೆಗಳನ್ನು ಕೈಗೆತ್ತಿಕೊಳ್ಳುತ್ತಿದೆ. ಇದರ ಅಂಗವಾಗಿ ಹೋಬಳಿ ಮಟ್ಟದಲ್ಲಿ ಕ್ರೀಡಾಂಗಣದ ಅಭಿವೃದ್ಧಿಗೆ ಕಾರ್ಯಯೋಜನೆ ಸಿದ್ಧಪಡಿಸಿದೆ ಎಂದು ಯುವ ಸಬಲೀಕರಣ ಮತ್ತು ಕ್ರೀಡಾಸಚಿವ ಬಿ.ನಾಗೇಂದ್ರ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗ್ರಾಮ ಪಂಚಾಯಿತಿ ಮತ್ತು ಹೋಬಳಿ ಮಟ್ಟದಲ್ಲಿ ಮೂಲ ಸೌಲಭ್ಯಗಳನ್ನು ಹೆಚ್ಚಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಈಗಾಗಲೇ ಕಂದಾಯ ಇಲಾಖೆಯವರ ಜೊತೆ ಒಂದು ಸುತ್ತಿನ ಸಭೆ ನಡೆಸಿದ್ದು, ಹೋಬಳಿ ಮಟ್ಟದಲ್ಲಿ ಸರ್ಕಾರಿ ಶಾಲೆಗಳ ಸಮೀಪ ಖಾಲಿ ಇರುವ ಜಾಗಗಳನ್ನು ಗುರುತಿಸಲಾಗುತ್ತಿದೆ ಎಂದರು.
ಆ ಜಾಗದ ವಿವರವಾದ ಪಟ್ಟಿಯೊಂದಿಗೆ ಕಂದಾಯ ಇಲಾಖೆ ವರದಿ ಸಲ್ಲಿಸಿದ ಬಳಿಕ ಕ್ರೀಡಾಂಗಣದ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗುವುದು. ಪ್ರತಿ ವರ್ಷ ಕ್ರೀಡಾ ಇಲಾಖೆಗೆ 100 ಕೋಟಿ ರೂ ಅನುದಾನ ಲಭ್ಯವಿದೆ. ಅದರಲ್ಲಿ ಹಂತ ಹಂತವಾಗಿ ಕ್ರೀಡಾ ಮೂಲ ಸೌಕರ್ಯಗಳನ್ನು ಅಭಿವೃದ್ಧಿಪಡಿಸಲಾಗುವುದು. ಒಂದು ಜಿಲ್ಲೆ, ಒಂದು ಕ್ರೀಡೆ ಎಂಬ ಪರಿಕಲ್ಪನೆಯಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದರು.
ಹಾಕಿ ಮಾಂತ್ರಿಕ ಮೇಜರ್ ಧ್ಯಾನ್ಚಂಾದ್ ಅವರ ಹುಟ್ಟುಹಬ್ಬದ ದಿನವಾದ ಆ.29 ರಂದು ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ರಾಜ್ಯದ ವಿವಿಧ ಭಾಗಗಳಿಂದ ಏಳೆಂಟು ಸಾವಿರ ಮಕ್ಕಳನ್ನು ಆಹ್ವಾನಿಸಿ 30 ಕ್ಕೂ ಹೆಚ್ಚು ಕ್ರೀಡಾಕೂಟಗಳನ್ನು ಆಯೋಜಿಸಲು ನಿರ್ಧರಿಸಲಾಗಿದೆ. ಆ.29 ರಂದು ಬೆಳಿಗ್ಗೆ 8 ರಿಂದ ಸಂಜೆ 5 ಗಂಟೆಯವರೆಗೂ ಕ್ರೀಡಾಕೂಟಗಳು ನಡೆಯಲಿವೆ. ಅದರಲ್ಲಿ ಹಾಕಿ, ಫುಟ್ಬಾಲ್, ಹಗ್ಗ ಜಗ್ಗಾಟ, ಮತ್ತಿಸುತ್ತಿ ಸೇರಿದಂತೆ ಹಲವು ಕ್ರೀಡಾಕೂಟಗಳು ನಡೆಯಲಿವೆ. ಇದಕ್ಕೆ ಮುಕ್ತ ಪ್ರವೇಶವಿದೆ, ಯಾರು ಬೇಕಾದರೂ ಬಂದು ಭಾಗವಹಿಸಬಹುದು. ಅದೇ ದಿನ ಶಾಲೆಗಳಲ್ಲಿ ದೈಹಿಕ ಶಿಕ್ಷಕರನ್ನು ಸನ್ಮಾನಿಸಲಾಗುವುದು. ಈ ಮೂಲಕ ಕ್ರೀಡೆಗೆ ಪ್ರೋತ್ಸಾಹಿಸಲು ಕ್ರಮ ಕೈಗೊಳ್ಳಲಾಗಿದೆ ಎಂದರು.




