ಬೆಂಗಳೂರು: ಬದಲಾದ ಜೀವನ ಶೈಲಿ ಸೇರಿದಂತೆ ಹಲವು ಕಾರಣದಿಂದ ಹಠಾತ್ ಹೃದಯಾಘಾತದ ಪ್ರಕರಣಗಳು ಹೆಚ್ಚುತ್ತಿವೆ. ಇವುಗಳನ್ನು ತಡೆಗಟ್ಟಲು ನಟ ದಿವಂಗತ ಪುನೀತ್ ರಾಜ್ಕುಮಾರ್ ಹೆಸರಿನಲ್ಲಿ ವಿಶೇಷ ಆರೋಗ್ಯ ಯೋಜನೆಯನ್ನು ಶೀಘ್ರವೇ ಜಾರಿಗೊಳಿಸುವುದಾಗಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.
ಬೃಹತ್ ಉಚಿತ ಆರೋಗ್ಯ ಶಿಬಿರ ಉದ್ಘಾಟಿಸಿದ ಬಳಿಕ ಮಾತನಾಡಿದ ಅವರು, ಈ ಯೋಜನೆಯಡಿಯಲ್ಲಿ ಕೇವಲ ಆಸ್ಪತ್ರೆಗಳಲ್ಲಿ ಮಾತ್ರವಲ್ಲದೇ ಸಾರ್ವಜನಿಕ ಸ್ಥಳದಲ್ಲಿಯೂ ಆಟೋಮೇಟೆಡ್ ಎಕ್ಸ್ಟ್ರನಲ್ ಡಿಫಿಬ್ರಿಲೇಟರ್ (ಎಐಡಿ) ಯಂತ್ರಗಳನ್ನು ಅಳವಡಿಸಲಾಗುವುದು ಎಂದರು.
ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ, ಮಾಲ್, ಏರ್ಪೋರ್ಟ್ ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ಎಐಡಿ ಗಳನ್ನು ಅಳವಡಿಕೆ ಮಾಡಲಾಗುವುದು. ಹೃದಯ ಸಂಬಂಧಿ ಸಮಸ್ಯೆಗಳು ಕಂಡುಬಂದಲ್ಲಿ ತಕ್ಷಣವೇ ತುರ್ತು ಚಿಕಿತ್ಸೆ ನೀಡಲಾಗುವುದು. ಇದರಿಂದ ಆರಂಭದಲ್ಲಿ ಜೀವ ರಕ್ಷಣೆಗೆ ಸಹಾಯ ಮಾಡುವ ಗೋಲ್ಡನ್ ಟೈಂನಲ್ಲಿ ಪ್ರಾಥಮಿಕ ಚಿಕಿತ್ಸೆ ದೊರೆತು ನಂತರ ಹೃದಯ ಸಮಸ್ಯೆಗೊಳಗಾದವರನ್ನು ಆಸ್ಪತ್ರೆಗೆ ಸಾಗಿಸಲಾಗುವುದು ಎಂದು ತಿಳಿಸಿದರು.
ರಾಜ್ಯದ ಬಜೆಟ್ನಲ್ಲಿ ಪುನೀತ್ ರಾಜ್ಕುಮಾರ್ ಹೆಸರಿನ ಯೋಜನೆಯನ್ನು ಘೋಷಣೆ ಮಾಡಲಾಗಿತ್ತು. ಜಯದೇವ ಹೃದ್ರೋಗ ಸಂಸ್ಥೆಯ ಸಹಯೋಗದಲ್ಲಿ ಇದು ಜಾರಿಯಾಗುತ್ತಿದ್ದು, ಎರಡು ವಾರಗಳಲ್ಲಿ ಟೆಂಡರ್ ಕರೆಯಲಾಗುವುದು ಎಂದು ತಿಳಿಸಿದರು.




