ಪರಿಹಾರದ ಹಣ ಸಂತ್ರಸ್ತ ಬಡಜನರನ್ನು ತಲುಪೋದು ಯಾವಾಗ?: ಸಿದ್ದರಾಮಯ್ಯ

4 years ago

ಬೆಳಗಾವಿ: 2019 ರಲ್ಲಿ ಬಂದ ಭಾರಿ ಪ್ರವಾಹದಿಂದಾಗಿ ಸುಮಾರು 2 ಲಕ್ಷ 47 ಸಾವಿರ ಮನೆಗಳು ಬಿದ್ದುಹೋಗಿವೆ ಎಂದು ರಾಜ್ಯ ಸರ್ಕಾರ ಕೇಂದ್ರಕ್ಕೆ ಪರಿಹಾರಕ್ಕಾಗಿ ಮನವಿ ನೀಡಿತ್ತು. ಅದರಲ್ಲಿ 1 ಲಕ್ಷದ 33 ಸಾವಿರ ಮನೆಗಳಿಗೆ ಈ ವರೆಗೆ ಪರಿಹಾರ ನೀಡಲಾಗಿದೆ, ಇನ್ನುಳಿದ 1 ಲಕ್ಷದ 14 ಸಾವಿರ ಮನೆಗಳಿಗೆ ಪರಿಹಾರದ ಹಣ ತಲುಪಿಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದರು.

ಬೆಳಗಾವಿಯಲ್ಲಿ ನಡೆಯುತ್ತಿರುವ ಅಧಿವೇಶನದಲ್ಲಿ ಮಾತಾಡಿದ ಅವರು, ಕಳೆದ ಕೆಲವು ದಿನಗಳ ಹಿಂದೆ ಪರಿಷತ್ ಚುನಾವಣೆ ಸಂಬಂಧ ನಾನು ಗೋಕಾಕ್, ರಾಯಭಾಗ, ರಾಮದುರ್ಗಾಕ್ಕೆ ಭೇಟಿನೀಡಿದಾಗ ನೂರಾರು ಮಹಿಳೆಯರು ಮನವಿ ಪತ್ರದ ಜೊತೆಗೆ ಬಂದು, 2019 ರ ಪ್ರವಾಹದಲ್ಲಿ ನಾವು ಮನೆ ಕಳೆದುಕೊಂಡಿದ್ದೇವೆ, ನಮಗಿನ್ನು ಪರಿಹಾರ ಸಿಕ್ಕಿಲ್ಲ ಅಂತ ಕಣ್ಣೀರು ಹಾಕಿದರು ಎಂದರು.

ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿಯ ನಿಯಮಗಳನ್ವಯ 33% ಬೆಳೆ ಹಾನಿಯಾದವರಿಗೆ ಪರಿಹಾರ ನೀಡಲ್ಲ. ಎರಡನೆಯದು ಹೊಲ, ಗದ್ದೆಗಳಲ್ಲಿ ಬೆಳೆದು ನಿಂತ ಬೆಳೆಗಳು ಹಾನಿಯಾದಾಗ ಮಾತ್ರ ಪರಿಹಾರ ನೀಡಲಾಗುತ್ತೆ. ಒಂದು ವೇಳೆ ಬೆಳೆ ಕಟಾವು ಆಗಿ, ಕಣ ಸೇರಿದ ಮೇಲೆ ಮಳೆಯಿಂದ ಹಾನಿಯಾದರೆ ಅದಕ್ಕೆ ಪರಿಹಾರ ಸಿಗಲ್ಲ. ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿಯ ನಿಯಮಗಳು 2015 ರಲ್ಲಿ ಕಡೇ ಬಾರಿ ಪರಿಷ್ಕರಣೆಗೊಂಡಿದ್ದು, ನಿಯಮಗಳಲ್ಲಿ ಕೆಲವು ಲೋಪದೋಷಗಳಿವೆ. ಇನ್ನಾದರೂ ಹಳೆಯ ನಿಯಮಗಳಿಗೆ ಬದಲಾವಣೆ ತಂದು ನಷ್ಟದಲ್ಲಿರುವ ಎಲ್ಲ ರೈತರಿಗೆ ಪರಿಹಾರ ನೀಡುವಂತೆ ಪರಿಷ್ಕರಿಸಬೇಕು ಎಂದು ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು.

ಕೊಬ್ಬರಿಯ ಪ್ರೋತ್ಸಾಹ ಧನವನ್ನು ರೂ. 700 ರಿಂದ ರೂ. 1000 ಕ್ಕೆ ಹೆಚ್ಚು ಮಾಡಿದ್ದು ನಮ್ಮ ಸರ್ಕಾರ. ನಾವು 2017-18 ರಲ್ಲಿ 2 ಲಕ್ಷದ 96 ಸಾವಿರ ಕ್ವಿಂಟಾಲ್ ಕೊಬ್ಬರಿ ಖರೀದಿ ಮಾಡಿದ್ದೆವು. ತಾವು ರೈತ ಪರ ಎಂದು ಹೇಳಿಕೊಳ್ಳುವ ಬಿಜೆಪಿ ಸರ್ಕಾರ ಖರೀದಿ ಮಾಡಿದ್ದು ಕೇವಲ 50,400 ಕ್ವಿಂಟಾಲ್ ಮಾತ್ರ ಎಂದರು.

ನಮ್ಮ ಸರ್ಕಾರ ತೊಗರಿ ಬೆಳೆಗೆ ಕನಿಷ್ಠ ಬೆಂಬಲ ಬೆಲೆ ಮೇಲೆ ಮೊದಲು ರೂ. 450, ನಂತರ ರೂ. 550 ಅನ್ನು ಹೆಚ್ಚುವರಿಯಾಗಿ ನೀಡಿತ್ತು. ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಇದನ್ನು ರೂ. 300 ಕ್ಕೆ ಇಳಿಸಿತು. ಇದೇನಾ ರೈತ ಪರ ಸರ್ಕಾರದ ಧೋರಣೆ? ಎಂದು ಪ್ರಶ್ನಿಸಿದರು.

2014 ರ ಮಾರ್ಚ್ ತಿಂಗಳಲ್ಲಿ ರಾಯಚೂರು, ಸಿಂಧಗಿ, ಕೊಪ್ಪಳ, ಗಂಗಾವತಿ ಮುಂತಾದೆಡೆ ಆಲಿಕಲ್ಲು ಮಳೆ ಸುರಿದ ಪರಿಣಾಮ ಭತ್ತದ ಬೆಳೆ ನಾಶವಾಗಿತ್ತು, ಆಗ ನಮ್ಮ ಸರ್ಕಾರ ಪ್ರತೀ ಹೆಕ್ಟೇರ್ ಗೆ ರೂ. 25,000 ಪರಿಹಾರ ಧನ ನೀಡಿತ್ತು ಎಂದರು.

ರೈತರಿಗೆ ನ್ಯಾಯಸಮ್ಮತ ಪರಿಹಾರ ನೀಡಲು ರಾಜ್ಯ ಸರ್ಕಾರ ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿಯ ನಿಯಮಗಳಿಗೆ ಅಂಟಿಕೊಂಡಿರಬೇಕಾದ ಅಗತ್ಯವಿಲ್ಲ, ಸರ್ಕಾರಕ್ಕೆ ರೈತರ ಬಗ್ಗೆ ಬದ್ಧತೆಯಿದ್ದರೆ ನಿಯಮಗಳಿಗಿಂತ ಹೆಚ್ಚು ಪರಿಹಾರ ನೀಡಲು ಸಾಧ್ಯ ಎಂಬುದಕ್ಕೆ ನಮ್ಮ ಸರ್ಕಾರವೇ ಸಾಕ್ಷಿ ಎಂದರು.

ಎನ್.ಡಿ.ಆರ್.ಎಫ್ ನಿಯಮದ ಪ್ರಕಾರ ಕುಷ್ಕಿ ಜಮೀನಿಗೆ ರೂ. 6,800 ಮತ್ತು ತರಿ ಜಮೀಮಿಗೆ ರೂ. 13,500 ಮತ್ತು ತೋಟಗಾರಿಕಾ ಬೆಳೆಗಳಿಗೆ ರೂ. 18,000 ಪರಿಹಾರ ನೀಡಬೇಕು ಮತ್ತು ಗರಿಷ್ಠ ಎರಡು ಹೆಕ್ಟೇರ್ ಬೆಳೆಹಾನಿಗೆ ಮಾತ್ರ ಪರಿಹಾರ ನೀಡಬೇಕೆಂದಿದೆ. ಈಗ ನೀಡುತ್ತಿರುವ ಪರಿಹಾರದ ಹಣ ರೈತರು ಬಿತ್ತನೆ ಬೀಜ ಖರೀದಿ ಮಾಡಲು ಹೂಡುವ ಹಣಕ್ಕಿಂತ ಕಡಿಮೆಯಿದ್ದು ಇದನ್ನು ಕನಿಷ್ಠ ಮೂರು ಪಟ್ಟು ಹೆಚ್ಚಿಸಬೇಕು ಎಂದು ಒತ್ತಾಯಿಸಿದರು.

ಈ ಬಾರಿ ರಾಜ್ಯದಲ್ಲಿ 6.9 ಲಕ್ಷ ಹೆಕ್ಟೇರ್ ಜಮೀನಿನಲ್ಲಿ ರಾಗಿ ಬಿತ್ತನೆ ಮಾಡಿದ್ದು, 13 ಲಕ್ಷ ಟನ್ ಬೆಳೆ ನಿರೀಕ್ಷೆ ಮಾಡಲಾಗಿತ್ತು. 10 ಲಕ್ಷದ 21 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಭತ್ತದ ಬೀಜ ಬಿತ್ತನೆ ಮಾಡಲಾಗಿತ್ತು, ಸುಮಾರು 25 – 30 ಲಕ್ಷ ಟನ್ ಬೆಳೆ ನಿರೀಕ್ಷೆಯಿತ್ತು. ಇದರಲ್ಲಿ ಶೇ. 75 ಬೆಳೆ ನಾಶವಾಗಿದೆ. 14 ಲಕ್ಷ ಹೆಕ್ಟೇರ್ ನಲ್ಲಿ ಮುಸುಕಿನ ಜೋಳ ಬಿತ್ತನೆಯಾಗಿದ್ದು, ಸುಮಾರು 51 ಲಕ್ಷ ಟನ್ ಬೆಳೆ ನಿರೀಕ್ಷೆ ಇತ್ತು. 4.9 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಶೇಂಗಾ ಬಿತ್ತನೆ ಆಗಿತ್ತು. ಹೀಗೆ ಹತ್ತಿ, ರಾಗಿ, ಮೆಕ್ಕೆಜೋಳ, ಈರುಳ್ಳಿ, ಅಡಿಕೆ, ತೆಂಗು ಮುಂತಾದ ಬೆಳೆಗಳ ಫಸಲು ಕೈಗೆ ಬರುವ ವೇಳೆ ಮಳೆಗೆ ಸಿಲುಕಿ ನಷ್ಟವಾಗಿದೆ ಎಂದರು.

ಪ್ರಸಕ್ತ ವರ್ಷ 39,000 ಮನೆಗಳು ಮಳೆಯಿಂದಾಗಿ ಹಾನಿಗೀಡಾಗಿದೆ. ಈ ವರೆಗೆ ಒಂದೇ ಒಂದು ಮನೆಗೆ ಪರಿಹಾರದ ಹಣ ನೀಡಿಲ್ಲ. 12 ಲಕ್ಷ ಎಕರೆ ಪ್ರದೇಶಕ್ಕೆ ರೂ. 782 ಕೋಟಿ ಬೆಳೆ ಪರಿಹಾರದ ಹಣ ಮಾತ್ರ ನೀಡಲಾಗಿದೆ. ಜೊತೆಗೆ ಬೆಳೆ ನಷ್ಟ ನಮೂದು ಮಾಡುವುದನ್ನು ಈ ತಿಂಗಳ 8ನೇ ತಾರೀಖಿಗೆ ಕೊನೆಗೊಳಿಸಲಾಗಿದೆ. ಹಲವು ರೈತರ ಬೆಳೆನಷ್ಟದ ಮಾಹಿತಿ ಇನ್ನೂ ನಮೂದಾಗದೆ ಬಾಕಿ ಉಳಿದಿರುವುದರಿಂದ ಸಮೀಕ್ಷೆ ಮುಂದುವರೆಸಿ, ಬೆಳೆ ನಷ್ಟ ನಮೂದು ಮಾಡುವಂತೆ ಸರ್ಕಾರ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳಿಗೆ ಆದೇಶ ನೀಡಬೇಕು ಎಂದು ಆಗ್ರಹಿಸಿದರು.

ಹಿಂದಿನ ಯು.ಪಿ.ಎ ಸರ್ಕಾರದ ಅವಧಿಯ ಬಜೆಟ್ ಗಾತ್ರ 16 ಲಕ್ಷದ 65 ಸಾವಿರ ಕೋಟಿ ಇತ್ತು, ಕೇಂದ್ರದ ಈಗಿನ ಬಜೆಟ್ ಗಾತ್ರ ರೂ. 34 ಲಕ್ಷದ 83 ಸಾವಿರ ಕೋಟಿ ಆಗಿದೆ. ಬಜೆಟ್ ಗಾತ್ರ ಹೆಚ್ಚಾದಂತೆ ಎನ್.ಡಿ.ಆರ್.ಎಫ್ ಹಣ, ರಾಜ್ಯಗಳಿಗೆ ನೀಡುವ ಪರಿಹಾರದ ಹಣ ಹೆಚ್ಚಾಗಬೇಕಲ್ಲವೇ? ಎಂದು ಪ್ರಶ್ನಿಸಿದರು.

2019 ರಲ್ಲಿ ರಾಜ್ಯ ಸರ್ಕಾರ ನೀಡಿದ್ದು ರೂ. 1652 ಕೋಟಿ. ರಾಜ್ಯ ವಿಪತ್ತು ಪರಿಹಾರ ನಿಧಿ ನಿಯಮಗಳ ಅನ್ವಯ ನೀಡಬೇಕಾದುದ್ದು ರೂ. 3,891 ಕೋಟಿ. 2020 ರಲ್ಲಿ ರೂ. 1,318 ಕೋಟಿ ಪರಿಹಾರ ನೀಡಲಾಗಿದೆ. ಕಳೆದ ಎರಡು ವರ್ಷದಲ್ಲಿ ಒಟ್ಟು ರೂ. 2,971 ಕೋಟಿ ಪರಿಹಾರ ನೀಡಲಾಗಿದೆ. ಇನ್ನುಳಿದ ಪರಿಹಾರದ ಹಣ ಸಂತ್ರಸ್ತ ಬಡಜನರನ್ನು ತಲುಪೋದು ಯಾವಾಗ? ಎಂದು ಪ್ರಶ್ನಿಸಿದರು.

Leave a Reply