ಬೆಳಗಾವಿ: ದೇಶದ ಸ್ವಾತಂತ್ರ್ಯ, ಸಾಮಾಜಿಕ ಮತ್ತು ಧಾರ್ಮಿಕ ಚಳವಳಿಗಳು, ರಾಷ್ಟ್ರ ನಿರ್ಮಾಣದಲ್ಲಿ ಪಾಲ್ಗೊಂಡ ಮಹಾನ್ ವ್ಯಕ್ತಿಗಳ ಭಾವಚಿತ್ರಗಳು ನಮ್ಮ ಕಣ್ಣ ಮುಂದಿದ್ದು, ಅವರ ಜೀವನಾದರ್ಶಗಳು ನಿತ್ಯವೂ ನಮ್ಮನ್ನು ಜಾಗೃತಿಗೊಳಿಸುತ್ತಿರಬೇಕು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ಬೆಳಗಾವಿ ವಿಧಾನಸೌಧದಲ್ಲಿ ಸ್ವಾತಂತ್ರ್ಯ ಹೋರಾಟಗಾರರ ಭಾವಚಿತ್ರದ ಜೊತೆಗೆ ವಿ.ಡಿ.ಸಾವರ್ಕರ್ ಭಾವಚಿತ್ರ ಅಳವಡಿಕೆ ಹಿನ್ನೆಲೆಯಲ್ಲಿ ಇಂದು ವಿಧಾನಸೌಧದ ಹೊರಭಾಗದಲ್ಲಿ ಕಾಂಗ್ರೆಸ್ ಪ್ರತಿಭಟನೆ ನಡೆಸಿತು. ಜೊತೆಗೆ ವಿಧಾನಸಭೆಯಲ್ಲಿ ಮಹರ್ಷಿ ವಾಲ್ಮೀಕಿ, ಬಸವಣ್ಣ, ಸಂತ ಶಿಶುನಾಳ ಶರೀಫ, ಕನಕದಾಸ, ನಾರಾಯಣಗುರು, ಅಂಬೇಡ್ಕರ್, ನೆಹರೂ, ಜಗಜೀವನ ರಾಮ್, ಸರದಾರ ವಲ್ಲಭಬಾಯ್ ಪಟೇಲ್, ಕುವೆಂಪು ಮತ್ತಿತರ ಮಹನೀಯರ ಭಾವಚಿತ್ರ ಹಾಕಬೇಕೆಂದು ಒತ್ತಾಯಿಸಿ, ಈ ಮಹನೀಯರ ಭಿತ್ತಿಚಿತ್ರಗಳನ್ನು ಹಿಡಿದು ಬೆಳಗಾವಿ ಸುವರ್ಣಸೌಧದ ಪ್ರವೇಶ ದ್ವಾರದಲ್ಲಿ ಪ್ರದರ್ಶನ ನಡೆಸಿತು.
ಈ ಕುರಿತು ವಿಧಾನಸಭೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೆ ಪತ್ರ ಬರೆದಿರುವ ಸಿದ್ದರಾಮಯ್ಯ, ಬೆಳಗಾವಿಯ ಸುವರ್ಣಸೌಧದ ಅಸೆಂಬ್ಲಿ ಹಾಲಿನಲ್ಲಿ ಹಲವು ಮಹನೀಯರ ಭಾವಚಿತ್ರಗಳನ್ನು ಅಳವಡಿಸಿ ಅವರ ಆದರ್ಶಗಳನ್ನು, ವಿಚಾರ ಸಂಪತ್ತನ್ನು ಜೀವಂತವಾಗಿ ಇಡಬೇಕಾಗಿದೆ. ಈ ಹಿನ್ನೆಲೆಯಲ್ಲಿ, ಮಹರ್ಷಿ ವಾಲ್ಮೀಕಿ, ಬಸವಣ್ಣ, ಕನಕದಾಸ, ಶರೀಫ, ನಾರಾಯಣಗುರು, ಶಿಶುನಾಳ ಷರೀಫ ಸಾಹೇಬ್ ಅಂಬೇಡ್ಕರ್, ಜವಾಹರಲಾಲ್ ನೆಹರೂ, ಜಗಜೀವನ್‌ರಾಮ್, ಕುವೆಂಪು, ವಲ್ಲಭಬಾಯಿ ಪಟೇಲ್ ಮುಂತಾದ ದಾರ್ಶನಿಕರು, ವಿಚಾರವಂತರು ಹಾಗೂ ರಾಷ್ಟ್ರ ನಾಯಕರುಗಳು ಭಾರತದ ಸಂಸ್ಕೃತಿ, ಪರಂಪರೆ ಮತ್ತು ಅಭಿವೃದ್ಧಿಗೆ ಅಪಾರವಾದ ಕೊಡುಗೆ ನೀಡಿದ್ದಾರೆ. ಅವರುಗಳ ವಿಚಾರಧಾರೆ, ಆದರ್ಶಗಳು ಸಾರ್ವಕಾಲಿಕ ಸತ್ಯ ಮತ್ತು ಅನುಕರಣೀಯ. ಆ ಕಾರಣದಿಂದಾಗಿ ಈ ಎಲ್ಲಾ ಮಹನೀಯರ ಭಾವಚಿತ್ರಗಳನ್ನು ಬೆಳಗಾವಿಯ ಸುವರ್ಣಸೌಧದ ಅಸೆಂಬ್ಲಿ ಹಾಲಿನಲ್ಲಿ ಅಳವಡಿಸಿ, ಅವರುಗಳ ಆದರ್ಶಗಳಿಗೆ ಮೆರಗು ನೀಡಬೇಕೆಂದು ಒತ್ತಾಯಿಸಿದ್ದಾರೆ.
ಇದಕ್ಕೂ ಮುನ್ನ ನಡೆದ ಪ್ರತಿಭಟನೆಯಲ್ಲಿ ಕೆಪಿಸಿಸಿ ಅಧ್ಯಕ್ಷ DK Shivakumar, ವಿಧಾನಸಭೆ ವಿರೋಧ ಪಕ್ಷದ ನಾಯಕ Siddaramaiah, ಕೆಪಿಸಿಸಿ ಕಾರ್ಯಾಧ್ಯಕ್ಷರಾದ Saleem Ahmed, Satish Jarkiholi, ಮಾಜಿ ಸಚಿವರಾದ H.K.Patil, R V Deshpande, KJ George ಸೇರಿದಂತೆ ಹಲವರು ಹಾಜರಿದ್ದರು.



