ಬೆಂಗಳೂರು: ರಾಜ್ಯದಲ್ಲಿ ಮತ್ತೆ ಅಧಿಕಾರ ಚುಕ್ಕಾಣಿ ಹಿಡಿಯಬೇಕೆಂದು ರಣತಂತ್ರ ರೂಪಿಸುತ್ತಿರುವ ಬಿಜೆಪಿ ಇದೀಗ ಲಿಂಗಾಯತ ಕಾರ್ಡ್ ಪ್ಲೇ ಮಾಡಲು ತೀರ್ಮಾನಿಸಿದೆ.
ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಮಾಜಿ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ, ಕಾಂಗ್ರೆಸ್ ಸೇರಿದ ಹಿನ್ನೆಲೆಯಲ್ಲಿ ಕಾಂಗ್ರೆಸ್ ನಾಯಕರು, ವೀರಶೈವ ಮತ ಬ್ಯಾಂಕ್ ದೃಷ್ಟಿಯಲ್ಲಿ ಇಟ್ಟುಕೊಂಡು ತಂತ್ರ ರೂಪಿಸಿದ ದೊಡ ಬೆನ್ನಲ್ಲೇ ಬಿಜೆಪಿ ಹೊಸ ಯೋಜನೆ ರೂಪಿಸಿದೆ.
ಕಳೆದ ರಾತ್ರಿ ಮಾಜಿ ಸಿಎಂ ಯಡಿಯೂರಪ್ಪ ನಿವಾಸದಲ್ಲಿ ಸಭೆ ಸೇರಿದ ವೀರಶೈವ ಲಿಂಗಾಯತ ಸಮುದಾಯದ ಮುಖಂಡರು ಈ ಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸಿದರೆ ಲಿಂಗಾಯತ ಸಮುದಾಯದ ಮುಖ್ಯಮಂತ್ರಿ ಯಾಗಲಿದ್ದಾರೆ ಎಂದು ಘೋಷಿಸುವಂತೆ ಹೈಕಮಾಂಡನ್ನು ಒತ್ತಾಯಿಸಲು ತೀರ್ಮಾನಿಸಿದ್ದಾರೆ.
ಚುನಾವಣೆಗೂ ಮುನ್ನವೇ ಮುಖ್ಯಮಂತ್ರಿ ಅಭ್ಯರ್ಥಿಯ ಹೆಸರು ಪೋಷಿಸುವ ಬದಲಿಗೆ ಲಿಂಗಾಯತ ಸಮುದಾಯದವರಿಗೆ ಸಿಎಂ ಹುದ್ದೆ ನೀಡುವುದಾಗಿ ಘೋಷಣೆ ಮಾಡಬೇಕು ಎಂದು ವರಿಷ್ಠರ ಮನವೊಲಿಸಲು ನಿರ್ಧರಿಸಲಾಗಿದೆ.
ಬಿಜೆಪಿ ಈ ರೀತಿಯ ಘೋಷಣೆ ಮಾಡಿದಲ್ಲಿ ರಾಜ್ಯದ ಅತಿ ದೊಡ್ಡ ಸಮುದಾಯವಾದ ವೀರಶೈವ ಸಮುದಾಯ ಬಿಜೆಪಿ ಪರ ನಿಲ್ಲಲಿದೆ ಎನ್ನುವುದು ಈ ನಾಯಕರ ಲೆಕ್ಕಾಚಾರವಾಗಿದೆ.
ಈ ಮೂಲಕ ಕಾಂಗ್ರೆಸ್ ಮಂಡಿಸುತ್ತಿರುವ ಲಿಂಗಾಯತ ಕಾರ್ಡನ್ನು ಯಶಸ್ವಿಯಾಗಿ ಹತ್ತಿಕ್ಕಬಹುದು. ಇಲ್ಲವಾದರೆ ಕಾಂಗ್ರೆಸ್ ಆರೋಪಿಸುತ್ತಿರುವಂತೆ ಬಿಜೆಪಿ ಲಿಂಗಾಯತ ವಿರೋಧಿ ಎಂಬ ಹಣೆಪಟ್ಟಿ ಕಟ್ಟಿಕೊಳ್ಳಬೇಕಾಗುತ್ತದೆ. ಇದು ಚುನಾವಣೆಯಲ್ಲಿ ಗಂಭೀರ ಪರಿಣಾಮ ಬೀರಲಿದೆ ಪಕ್ಷದ ಗೆಲುವಿಗೆ ದೊಡ್ಡ ಹೊಡೆತ ಬೀಳಲಿದೆ ಎಂದು ಸಭೆ ಅಭಿಪ್ರಾಯ ಪಟ್ಟಿದೆ.
ಎಲ್ಲಾ ಅಂಶವನ್ನು ಮಾಜಿ ಸಿಎಂ ಯಡಿಯೂರಪ್ಪ ಅವರು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಮತ್ತು ಹಿರಿಯ ನಾಯಕ ಅಮಿತ್ ಶಾ ಅವರ ಗಮನಕ್ಕೆ ತರಬೇಕು ಎಂದು ತೀರ್ಮಾನಿಸಲಾಗಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.




