ಎನ್ ಡಿ ಎ ಒಕ್ಕೂಟವನ್ನು ಲೋಕಸಭಾ ಚುನಾವಣೆಯಲ್ಲಿ ಸೋಲಿಸಲು ಎಸ್ ಎಫ್ ಐ ಕರೆ

2 years ago

ಶಿಕ್ಷಣರಂಗವನ್ನು ಕಾರ್ಪೋರೇಟೀಕರಣ, ಕೋಮುವಾದಿಕರಣ ಹಾಗೂ ಕೇಂದ್ರೀಕರಣಗೊಳಿಸುತ್ತಿರುವ ಬಿಜೆಪಿ: ಎಸ್ ಎಫ್ ಐ ಆರೋಪ

ಪತ್ರಿಕಾ ಪ್ರಕಟಣೆಯ ಮೂಲಕ ರಾಜ್ಯದ ವಿದ್ಯಾರ್ಥಿ ಸಮುದಾಯದ ಗಮನಕ್ಕೆ ತರಲು ಬಯಸುವುದೇನೆಂದರೆ, 2014 ರಿಂದ 2024 ರಲ್ಲಿನ ಮೋದಿ ಆಡಳಿತದ ಒಂದು ದಶಕದಲ್ಲಿ ಕೇಂದ್ರ ಸರ್ಕಾರವು ಶಿಕ್ಷಣಕ್ಕೆ ವೆಚ್ಚ ಮಾಡುತ್ತಿರುವ ವಾರ್ಷಿಕ ಸರಾಸರಿಯು ಜಿಡಿಪಿಯ ಕೇವಲ ಶೇಕಡಾ ೦.೪೧ ಮಾತ್ರವೇ ಆಗಿದೆ; ಇದು ಹಿಂದಿನ 2004-2014 ಯುಪಿಎ ಸರ್ಕಾರವು ಒಂದು ದಶಕದಲ್ಲಿ ಶಿಕ್ಷಣಕ್ಕೆ ವೆಚ್ಚ ಮಾಡಿದ ಶೇಕಡಾ ೦.66 ಕ್ಕಿಂತಲೂ ಬಹಳ ಕಡಿಮೆ ಇದೆ. ಹೊಸ ಶಿಕ್ಷಣ ನೀತಿಯನ್ನು ಅಳವಡಿಸಿಕೊಳ್ಳದ ರಾಜ್ಯಗಳಿಗೆ ಅನುದಾನವನ್ನು ನಿಲ್ಲಿಸಲಾಗುವುದು ಎಂದು ಮೋದಿ ಸರ್ಕಾರವು ಬೆದರಿಕೆ ಹಾಕಿದೆ. ಇತ್ತೀಚೆಗೆ, ಅಂತಹ ಎಂಟು ರಾಜ್ಯಗಳಿಗೆ ಸಮಗ್ರ ಶಿಕ್ಷಾ ಅಭಿಯಾನದ ಅಡಿಯಲ್ಲಿನ ಅನುದಾನವನ್ನು ಕೇಂದ್ರ ಸರ್ಕಾರ ನಿಲ್ಲಿಸಿದೆ ಎಂಬ ವರದಿಗಳಿವೆ.

ಸರ್ಕಾರಿ ಶಾಲೆಗಳನ್ನು ಮುಚ್ಚುವ ಅಥವಾ ಇತರ ಶಾಲೆಗಳೊಂದಿಗೆ ವಿಲೀನಗೊಳಿಸುವ ಮೂಲಕ, ವಿದ್ಯಾರ್ಥಿಗಳು ಬಲವಂತವಾಗಿ ಖಾಸಗೀ ಶಾಲೆಗಳನ್ನು ಸೇರಿಕೊಳ್ಳಬೇಕಾದ ಅನಿವಾರ್ಯ ಪರಿಸ್ಥಿತಿ ಉಂಟಾಗಿದೆ.
ಬಿಜೆಪಿ ಆಳ್ವಿಕೆಯ ರಾಜ್ಯಗಳಲ್ಲಿ ವಿದ್ಯಾರ್ಥಿಗಳಿಗೆ ‘ಚಿರಾಗ್’ ಕಾರ‍್ಯಕ್ರಮದ ಅಡಿಯಲ್ಲಿ ಪ್ರವೇಶ ಶುಲ್ಕವನ್ನು ವಸೂಲಿ ಮಾಡಲಾಗುತ್ತಿದೆ, ಆದರೆ ಅದೇ ರಾಜ್ಯಗಳಲ್ಲಿನ ಖಾಸಗಿ ಶಾಲೆಗಳಗೆ ಸಹಾಯಧನ (ಸಬ್ಸಿಡಿ) ನೀಡಲಾಗುತ್ತಿದೆ. ದೊಡ್ಡ ಪ್ರಮಾಣದಲ್ಲಿ ವಿದ್ಯಾರ್ಥಿಗಳು ಹೀಗೆ ಸ್ಥಳಾಂತರವಾದಾಗ ಬಡ ವಿದ್ಯಾರ್ಥಿಗಳು ಶಾಲೆ ಬಿಡುತ್ತಾರೆ, ಆಗ ಈ ಸಬ್ಸಿಡಿ ನಿಲ್ಲಿಸುವ ಹುನ್ನಾರವಿದೆ.

ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಖಾಸಗಿ ಸಂಸ್ಥೆಗಳು ಪ್ರತೀ ವರ್ಷ ಹೆಚ್ಚಾಗುತ್ತಲೇ ಬಂದಿವೆ ಮತ್ತು ಹೊಸ ಉನ್ನತ ಶಿಕ್ಷಣ ಸಂಸ್ಥೆಗಳು ಬಹುಮಟ್ಟಿಗೆ ಖಾಸಗಿಯವರಿಂದಲೇ ನಿರ್ವಹಿಸಲ್ಪಡುತ್ತಿವೆ. ಸಾರ್ವಜನಿಕ ಅನುದಾನಿತ ವಿಶ್ವವಿದ್ಯಾಲಯಗಳಲ್ಲಿ ಶುಲ್ಕವನ್ನು ವಿಪರೀತವಾಗಿ ಏರಿಸಿರುವುದು ಹಾಗೂ ಮೂಲ ಸೌಲಭ್ಯಗಳು ಮರೀಚಿಕೆಯಾಗಿರುವ ಕಾರಣ ವಿದ್ಯಾರ್ಥಿಗಳು ದೊಡ್ಡ ಸಂಖ್ಯೆಯಲ್ಲಿ ಖಾಸಗಿ ವಿಶ್ವವಿದ್ಯಾಲಯಗಳತ್ತ ಅನಿವಾರ್ಯವಾಗಿ ಹೋಗುವಂತಾಗಿದೆ.

ಶಾಲೆ ಹಾಗೂ ಉನ್ನತ ಶಿಕ್ಷಣ ಮಟ್ಟದಲ್ಲಿ ಎರಡೂ ಕಡೆಗಳಲ್ಲಿ ೧೦ ಲಕ್ಷಕ್ಕೂ ಹೆಚ್ಚು ಶಿಕ್ಷಕರ ಹುದ್ದೆಗಳು ಖಾಲಿ ಇವೆ. ಈಗ ಆನ್‌ಲೈನಲ್ಲಿ ಶಿಕ್ಷಣ ಮತ್ತು ತರಬೇತಿ ಹಾಗೂ ಡಿಜಿಟಲೈಜೇಶನ್ ‌ಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ಇದು ಸಮಾಜದ ವಂಚಿತರ ಸಮುದಾಯಗಳ ವಿದ್ಯಾರ್ಥಿಗಳು ಶಿಕ್ಷಣದ ಹಕ್ಕನ್ನು ಪಡೆಯುವುದನ್ನು ವಂಚಿಸುವ ಪಿತೂರಿಯಲ್ಲದೇ ಬೇರೇನೂ ಅಲ್ಲ.

ಬಹುಪಾಲು ಬಿಜೆಪಿ ಆಳ್ವಿಕೆಯ ರಾಜ್ಯಗಳಲ್ಲಿ ಎಸ್.ಸಿ./ಎಸ್.ಟಿ.ಯವರಿಗೆ ಹಾಗೂ ಇತರ ಮೀಸಲಾತಿ ಹೊಂದಿರುವ ವಿಭಾಗದವರಿಗೆ ಸ್ಕಾಲರ್‌ಶಿಪ್‌ಗಳನ್ನು ನಿಲ್ಲಿಸಲಾಗುತ್ತಿದೆ ಅಥವಾ ಕಾರಣವೇ ಇಲ್ಲದೇ ಹಣಸಂದಾಯವನ್ನು ತಡೆ ಹಿಡಿಯಲಾಗುತ್ತಿರುವುದು ಶಿಕ್ಷಣದಿಂದ ದೂರ ಮಾಡುವ ಷಡ್ಯಂತರವಾಗಿದೆ.

ಅಲ್ಪಸಂಖ್ಯಾತ ಸಮುದಾಯದ ಸಂಸ್ಥೆಗಳು ನಡೆಸುತ್ತಿರುವ ಮದರಸಾಗಳಲ್ಲಿ ನಿರಂತರ ಹಸ್ತಕ್ಷೇಪಗಳ ಮೂಲಕ ಅವುಗಳನ್ನು ಹಾಳುಗೆಡವಲಾಗುತ್ತಿದೆ. ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯದ ಅಲ್ಪಸಂಖ್ಯಾತ ಮಾನ್ಯತೆಯನ್ನು ಕೂಡ ಪ್ರಶ್ನಿಸಲಾಗುತ್ತಿದೆ. ಸಮುದಾಯದ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣದಲ್ಲಿ ನೀಡಲಾಗುತ್ತಿರುವ ಫೆಲೋಶಿಪ್ ಹಣವನ್ನು ಕಡಿತ ಮಾಡುವ ಹುನ್ನಾರ ನಡೆಯುತ್ತಿದೆ.

‘ವೃತ್ತಿಜೀವನ ನಿರ್ಮಾಣ’ (ಕೆರಿಯರ್ ಬಿಲ್ಡಿಂಗ್) ದ ಹೆಸರಿನಲ್ಲಿ ದುಬಾರಿ ಖಾಸಗಿ ಕೇಂದ್ರಗಳು ಹುಲುಸಾಗಿ ಬೆಳೆಯುತ್ತಿವೆ ಮತ್ತು ಅವು ವಿದ್ಯಾರ್ಥಿಗಳ ಮೇಲೆ ಒತ್ತಡ ಹೇರುತ್ತಿವೆ. ಅದರ ಪರಿಣಾಮವಾಗಿ ಮಾನಸಿಕ ಒತ್ತಡಕ್ಕೊಳಗಾದ ಮಕ್ಕಳು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ.

ಸಾಕಷ್ಟು ಸಂಪನ್ಮೂಲಗಳನ್ನು ನೀಡದಿರುವ ಕಾರಣ ಉನ್ನತ ಶಿಕ್ಷಣ ಸಂಸ್ಥೆಗಳು ಅನಿವಾರ್ಯವಾಗಿ ‘ಸ್ವಯಂ-ವರಮಾನ ಸೃಷ್ಟಿ’ (ಸೆಲ್ಫ್ ಫೈನಾನ್ಸಿಂಗ್) ಮಾದರಿಯನ್ನು ಅಳವಡಿಸಿಕೊಳ್ಳುತ್ತಿವೆ. ಇದರಿಂದಾಗಿ ವೈದ್ಯಕೀಯ (ಮೆಡಿಕಲ್), ವಾಣಿಜ್ಯ (ಕಾಮರ್ಸ್), ಇಂಜನೀರಿಂಗ್ ಮುಂತಾದ ಕ್ಷೇತ್ರಗಳಲ್ಲಿನ ತಾಂತ್ರಿಕ ಶಿಕ್ಷಣವನ್ನು ಹುಡುಕಿಕೊಂಡು ಶಿಕ್ಷಣ ತುಲನಾತ್ಮಕವಾಗಿ ಅಗ್ಗವಾಗಿರುವ ವಿದೇಶಿ ಸಂಸ್ಥೆಗಳತ್ತ ದೇಶಾಂತರ ಹೋಗುವಂತಾಗಿದೆ. ಕೇಂದ್ರದ ಬಿಜೆಪಿ ಸರ್ಕಾರ ಕಳಪೆ ಗುಣಮಟ್ಟದ ವಿದೇಶಿ ಶಿಕ್ಷಣ ಸಂಸ್ಥೆಗಳನ್ನು ಆರಂಭಿಸಲು ಆಹ್ವಾನ ನೀಡುತ್ತಿರುವುದರಿಂದ ಪರಿಸ್ಥಿತಿಯು ಇನ್ನೂ ಹದಗೆಡುತ್ತದೆ.

ರಾಷ್ಟ್ರೀಯ ಶಿಕ್ಷಣ ನೀತಿ-೨೦೨೦ ಖಾಸಗೀಕರಣವನ್ನು ಉತ್ತೇಜಿಸುತ್ತದೆ ಮಾತ್ರವಲ್ಲದೇ ಇಡೀ ಶಿಕ್ಷಣ ವ್ಯವಸ್ಥೆಯನ್ನು ಕಳಚಿಹಾಕುವ ಉದ್ದೇಶ ಹೊಂದಿದೆ. ಪದವಿ ಶಿಕ್ಷಣದ ಮಧ್ಯದಲ್ಲೇ ಬಿಟ್ಟುಹೋಗುವ ಹಾಗೂ ಡಿಪ್ಲೊಮಾ ಪಡೆಯುವ ಅವಕಾಶವು ಬಡಕುಟುಂಬಗಳಿಂದ ಹಣ ಕೀಳುವ ಪ್ರಯತ್ನವಷ್ಟೆ. ಶಿಕ್ಷಣವನ್ನು ಹೆಚ್ಚು ಉದ್ಯೋಗ ಆಧಾರಿತ ಯೋಜನೆಯನ್ನಾಗಿ ಮಾಡುವ ಎಲ್ಲಾ ಭರವಸೆಗಳೂ ಟೊಳ್ಳಾಗಿ ಪರಿಣಮಿಸಿವೆ.

ಚರಿತ್ರೆಯ ಪುನರ್ ರಚನೆ ಮತ್ತು ಸಮಾಜ ವಿಜ್ಞಾನದ ಕೇಸರೀಕರಣದ ಮೂಲಕ ಈ ವಿಷಯಗಳು ಊಳಿಗಮಾನ್ಯ, ಪುರುಷಪ್ರಧಾನ ಹಾಗೂ ಗೊಡ್ಡು ಸಂಪ್ರದಾಯ ಚಿಂತನೆಗಳು ಹಾಗೂ ಮೂಢನಂಬಿಕೆಗಳಲ್ಲಿ ಮುಳುಗಿ ಹೋಗುತ್ತಿವೆ. ಜ್ಯೋತಿಷ್ಯ, ವೇದ ಗಣಿತ ಹಾಗೂ ನೈತಿಕ ಶಿಕ್ಷಣಗಳ ಹೆಸರಿನಲ್ಲಿ ಇಡೀ ಪಠ್ಯಗಳನ್ನು ಅವೈಚಾರಿಕ ಹಾಗೂ ಅವೈಜ್ಞಾನಿಕ ವಿಷಯಗಳಿಂದ ತುಂಬಿಸಲಾಗುತ್ತಿದೆ.

‘ಕರ್ಮಯೋಗಿ’ ಪ್ರಾಜೆಕ್ಟಿನಡಿಯಲ್ಲಿ, ಭಗವದ್ಗೀತೆ, ರಾಮಾಯಣ, ಮಹಾಭಾರತ ಇತ್ಯಾದಿಗಳಲ್ಲದೇ ಆರ್.ಎಸ್.ಎಸ್./ಬಿಜೆಪಿ ಮುಖಂಡರುಗಳ ಪ್ರತಿಗಾಮಿ ಹಾಗೂ ಜನರ ಶೋಚನೀಯ ಪರಿಸ್ಥಿತಿಗೆ ಜನರೇ ಕಾರಣ ಎಂದು ದೂಷಿಸುವ ಮುದ್ರಿತ ಭಾಷಣಗಳನ್ನು ಶಾಲೆಗಳಲ್ಲಿ ಬಿತ್ತರಿಸಲಾಗುತ್ತಿದೆ. ಆರ್.ಎಸ್.ಎಸ್. ನ ಕೋಮುವಾದಿ ಹಾಗೂ ಪಂಥೀಯವಾದಿ ಸಿದ್ಧಾಂತಗಳನ್ನು ಬೆಂಬಲಿಸುವ ಮತ್ತು ಶೈಕ್ಷಣಿಕವಾಗಿ ಕಳಪೆ ಜ್ಞಾನಮಟ್ಟ ಹೊಂದಿರುವ ವ್ಯಕ್ತಿಗಳನ್ನು ವಿಶ್ವವಿದ್ಯಾಲಯಗಳ ಉಪಕುಲಪತಿಗಳನ್ನಾಗಿ, ವಿಶ್ವವಿದ್ಯಾಲಯ ಅನುದಾನ ಆಯೋಗದ ಉನ್ನತ ಅಧಿಕಾರಿಗಳನ್ನಾಗಿ ಹಾಗೂ ಇನ್ನಿತರ ಶೈಕ್ಷಣಿಕ ಸಂಸ್ಥೆಗಳಿಗೆ ನೇಮಕ ಮಾಡಲಾಗುತ್ತಿದೆ.

ಬಿಜೆಪಿ/ಆರ್.ಎಸ್.ಎಸ್.ನ ಮನುವಾದಿ ಕಾರ್ಯಸೂಚಿಯನ್ನು ಹಲವಾರು ಕೇಂದ್ರೀಯ ವಿಶ್ವವಿದ್ಯಾಲಯಗಳಲ್ಲಿ 2014ರಿಂದಲೂ ಉತ್ಸಾಹಪೂರ್ಣವಾಗಿ ಜಾರಿಮಾಡಲಾಗುತ್ತಿದೆ ಮತ್ತು ಆ ಮೂಲಕ ಎಲ್ಲಾ ಸ್ವರೂಪಗಳ ಚರ್ಚೆ, ಸಂವಾದ ಹಾಗೂ ಭಿನ್ನಾಭಿಪ್ರಾಯಗಳನ್ನು ಮೊಟಕು ಮಾಡಲಾಗುತ್ತಿದೆ ಮತ್ತು ತಡೆಹಿಡಿಯಲಾಗುತ್ತಿದೆ. ಪ್ರಶ್ನೆ ಮಾಡುವವರ ಬಾಯಿ ಮುಚ್ಚಿಸಲಾಗುತ್ತಿದೆ, ಪ್ರತಿಭಟಿಸುವವರನ್ನು ಜೈಲಿಗೆ ಕಳಿಸಲಾಗುತ್ತಿದೆ ಮತ್ತು ರೋಹಿತ್ ವೇಮುಲನಂಥವರಿಗೆ ಆದಂತೆ ಸಾಂಸ್ಥಿಕ ಹತ್ಯೆಗಳಿಗೆ ಒಳಪಡಿಸಲಾಗುತ್ತಿದೆ. ಸರ್ಕಾರದ ಸಿದ್ಧಾಂತವನ್ನು ವಿಮರ್ಶೆ/ಟೀಕೆ ಮಾಡುವಂತಹ ಪ್ರಾದ್ಯಾಪಕರನ್ನು ಕಠಿಣ ನಿರ್ಬಂಧಕ್ಕೆ ಒಳಪಡಿಸಲಾಗಿದೆ ಮತ್ತು ಎಬಿವಿಪಿ ಗೂಂಡಾಗಳಿಂದ ಹಿಂಸಾತ್ಮಕ ದಾಳಿಗಳಿಗೂ ಒಳಪಡುವಂತೆ ಮಾಡಲಾಗುತ್ತಿದೆ.

ಬಿಜೆಪಿಯೇತರ ಆಳ್ವಿಕೆಯ ರಾಜ್ಯಗಳಲ್ಲಿ ಬಿಜೆಪಿಯಿಂದ ನೇಮಕವಾದ ರಾಜ್ಯಪಾಲರುಗಳು ವಿಶ್ವವಿದ್ಯಾಲಯಗಳ ಕಾರ್ಯನಿರ್ವಹಣೆಯಲ್ಲಿ ಬಹಿರಂಗವಾಗಿ ಹಸ್ತಕ್ಷೇಪ ಮಾಡುತ್ತಿದ್ದಾರೆ. ಮದ್ರಾಸ್ ವಿಶ್ವವಿದ್ಯಾಲಯದ ಹಾಗೂ ಪುದುಚೇರಿ ವಿಶ್ವವಿದ್ಯಾಲಯದ ಉಪಕುಲಪತಿಗಳ ನೇಮಕಾತಿಯನ್ನು ತಮಿಳುನಾಡಿನ ರಾಜ್ಯಪಾಲರು ನಿರಾಕರಿಸುತ್ತಿರುವುದು ಅದಕ್ಕೊಂದು ದೊಡ್ಡ ಉದಾಹರಣೆಯಾಗಿದೆ.

ನ್ಯಾಯಕ್ಕಾಗಿ ಹೋರಾಡುತ್ತಿರುವ ಸಂಘಟನೆಗಳ ಕಾರ್ಯಕರ್ತರ ಮೇಲೆ ಪೋಲಿಸರು ಹಾಗೂ ಪುಂಡಪೋಕರಿಗಳು ಹಿಂಸಾತ್ಮಕ ದಾಳಿಗಳನ್ನು ಮಾಡುತ್ತಿದ್ದಾರೆ ಮತ್ತು ಆ ಮೂಲಕ ಚುನಾಯಿತ ವಿದ್ಯಾರ್ಥಿ ಸಂಘಗಳು ಹಾಗೂ ಸಂಘಟನೆಗಳ ಪಾತ್ರವನ್ನು ಹಾಳುಗೆಡಹುತ್ತಿದ್ದಾರೆ. ಅಧ್ಯಾಪಕರು ಹಾಗೂ ವಿದ್ಯಾರ್ಥಿಗಳನ್ನು ನಿಗ್ರಹಿಸುವ ಯಾವ ಅವಕಾಶಗಳನ್ನೂ ವಿಶ್ವವಿದ್ಯಾಲಯದ ಆಡಳಿತ ಮಂಡಳಿಗಳು ಬಿಟ್ಟುಕೊಡುವುದಿಲ್ಲ. ಜವಾಹರ್ ಲಾಲ್ ನೆಹರೂ ವಿಶ್ವವಿದ್ಯಾಲಯ (ಜೆಎನ್‌ಯು), ಬನಾರಸ್ ಹಿಂದೂ ವಿಶ್ವವಿದ್ಯಾಲಯ(ಬಿಹೆಚ್‌ಯು), ಜಾಮಿಯಾ ಮಿಲಿಯಾ, ಹೈದರಾಬಾದ್ ಸೆಂಟ್ರಲ್ ವಿವಿ ಸೇರಿದಂತೆ ಮುಂತಾದವುಗಳು ಇಂತಹ ಪ್ರಕರಣಗಳ ತಾಣಗಳಾಗಿವೆ.

ಕೇರಳ ಸರ್ಕಾರವು ಕರ್ನಾಟಕ, ತಮಿಳುನಾಡು ಹಾಗೂ ಪಶ್ಚಿಮ ಬಂಗಾಳ ಸರ್ಕಾರಗಳ ಜತೆ ಸೇರಿಕೊಂಡು ಎನ್.ಇ.ಪಿ. ೨೦೨೦ ರ ನೀತಿಯನ್ನು ಜಾರಿ ಮಾಡಲು ಹಾಗೂ ಪಠ್ಯಗಳನ್ನು ಬದಲಾಯಿಸಲು ನಿರಾಕರಿಸಿದೆ. ನಮ್ಮ ಸಂವಿಧಾನದಲ್ಲಿ ಪ್ರತಿಷ್ಠಾಪಿಸಿರುವ ಒಕ್ಕೂಟ ಸ್ವರೂಪವನ್ನು ಉಲ್ಲಂಘಿಸಿರುವ ಕೇಂದ್ರ ಸರ್ಕಾರವು ಈ ರಾಜ್ಯಗಳಿಗೆ ಶಿಕ್ಷಣದ ಅಡಿಯಲ್ಲಿನ ಅನುದಾನ ನೀಡದಿರುವ ಉದ್ದೇಶವನ್ನು ಪ್ರಕಟಿಸಿದೆ.

ಮೋದಿ ಸರ್ಕಾರವು ದೇಶದ ಶಿಕ್ಷಣ ರಂಗವನ್ನು ವಿನಾಶದ ಅಂಚಿಗೆ ತಂದು ನಿಲ್ಲಿಸಿದೆ. ೨೦೦೯ ರ ಶಿಕ್ಷಣ ಹಕ್ಕು ಕಾಯಿದೆಯನ್ನು ಬಹುಮಟ್ಟಿಗೆ ಅನೂರ್ಜಿತಗೊಳಿಸಿದೆ ಮತ್ತು ಶಿಕ್ಷಣ ರಂಗವನ್ನು ಕಾರ್ಪೊರೇಟೀಕರಣ ಕೋಮುವಾದೀಕರಣ ಮತ್ತು ಕೇಂದ್ರೀಕರಣಗೊಳಿಸುವ ಮೂಲಕ ಈ ಶಿಕ್ಷಣ ವ್ಯೆವಸ್ಥೆಯನ್ನು ದುರ್ಬಲಗೊಳಿಸಿ ದೇಶದ ಭವಿಷ್ಯವನ್ನು ಹಾಳುಮಾಡಲು ಯತ್ನಿಸುತ್ತಿರುವ ಬಿಜೆಪಿ ನೇತೃತ್ವದ ಎನ್ ಡಿ ಎ ಒಕ್ಕೂಟವನ್ನು ಈ ಬಾರಿಯ ಲೋಕಸಭಾ ಚುಣಾವಣೆಯಲ್ಲಿ ವಿದ್ಯಾರ್ಥಿ ಯುವಜನರು ಸೋಲಿಸುವ ಮೂಲಕ ತಕ್ಕಪಾಠ ಕಲಿಸಿ ದೇಶದ ಶಿಕ್ಷಣ ವ್ಯೆವಸ್ಥೆಯನ್ನು ಉಳಿಸಿಕೊಳ್ಳಬೇಕೆಂದು ಎಸ್ ಎಫ್ ಐ ಕರ್ನಾಟಕ ರಾಜ್ಯ ಸಮಿತಿಯು ಈ ಪತ್ರಿಕಾ ಪ್ರಕಟಣೆಯ ಮೂಲಕ ರಾಜ್ಯದ ವಿದ್ಯಾರ್ಥಿಗಳಲ್ಲಿ ಮನವಿ ಮಾಡಿಕೊಳ್ಳುತ್ತದೆ.

ವಂದನೆಗಳೊಂದಿಗೆ,

ಅಮರೇಶ ಕಡಗದ
ರಾಜ್ಯ ಅಧ್ಯಕ್ಷರು 9902447319

ಭೀಮನಗೌಡ ಸುಂಕೇಶ್ವರಹಾಳ
ರಾಜ್ಯ ಕಾರ್ಯದರ್ಶಿ 8123111230

ಭಾರತ ವಿದ್ಯಾರ್ಥಿ ಫೆಡರೇಷನ್
ಕರ್ನಾಟಕ ರಾಜ್ಯ ಸಮಿತಿ

Leave a Reply