ಮನೋಚರಿತ್ರೆ: ಆತ್ಮಜ್ಞಾನ
ಆತ್ಮ ಎಂದರೆ ತಾನು ಅಥವಾ ತನ್ನತನ ಮತ್ತು ಜ್ಞಾನ ಎಂದರೆ ತಿಳುವಳಿಕೆ. ತನ್ನ ಬಗ್ಗೆ ತಾನು ತಿಳುವಳಿಕೆಯನ್ನು ಹೊಂದುವುದಕ್ಕೆ ಆತ್ಮಜ್ಞಾನ ಎನ್ನುವುದು. ವ್ಯಕ್ತಿ ಎಂದರೆ ಅವನ ಆಲೋಚನೆ, ವರ್ತನೆ, ಚಿಂತನೆ, ತಿಳುವಳಿಕೆ, ನಡವಳಿಕೆ, ಕ್ರಿಯೆ, ಪ್ರತಿಕ್ರಿಯೆ, ಗುಣ, ಅವಗುಣ, ಸ್ವಭಾವ, ದೈಹಿಕ, ಮಾನಸಿಕ ಮತ್ತು ಭಾವನಾತ್ಮಕವಾದ ಅಸ್ತಿತ್ವ, ಅಧ್ಯಯನ, ಅರಿವು, ಅನುಭವ, ಅಭಿವ್ಯಕ್ತಿ; ಹೀಗೆ ಹಲವಾರು ವಿಷಯಗಳ ಒಟ್ಟು ಮೊತ್ತದ ಪ್ರಕಟಣೆ. ಇದೆಲ್ಲದಕ್ಕೂ ಕಾರಣ ಮನಸ್ಸು.
ಒಟ್ಟಾರೆ ಮನಸ್ಸು ಎಂದರೂ ಅದರದ್ದೇ ವಿವಿಧ ಆಯಾಮಗಳಾದ ಪ್ರಜ್ಞೆ, ವಿವೇಕ, ಚಿತ್ತ, ಅಹಂ, ಬುದ್ಧಿ ಇತ್ಯಾದಿಗಳ ಮೂಲಕ ಮೂಲ ಮನಸ್ಸೇನು ಎಂದು ತಿಳಿಯುವ ಪ್ರಯತ್ನ ಹಿಂದೆ ಮಾಡಲಾಯಿತು. ಇವೆಲ್ಲಾ ಬೇರೆಯೇ, ಬೇರೆ ಬೇರೆಯಾಗಿದ್ದು ಮನಸ್ಸೆಂಬ ಒಂದು ವಸ್ತುವಿನ ಮೇಲೆ ಪ್ರಭಾವ ಬೀರುತ್ತಿವೆಯೇ? ಅಥವಾ ಮನಸ್ಸೆಂಬ ಒಂದೇ ಚೈತನ್ಯದ ಮೂಲವಸ್ತುವಾಗಿದ್ದು ವಿವಿಧ ಸ್ತರಗಳ ಮೂಲಕ ಅಭಿವ್ಯಕ್ತಗೊಳ್ಳುತ್ತದೆಯೇ? ಅದೇನೇ ಆಗಿದ್ದರೂ ಮನಸ್ಸು ಎಂಬುದೇ ಎಲ್ಲದರ ಮೂಲ ಈ ಅಂತಃಕರಣ ಎಂದು ನಿಸ್ಸಂದೇಹವಾಗಿ ಸಾಬೀತಾಯಿತು. ಆಧ್ಯಾತ್ಮಿಕವಾಗಿ, ತಾತ್ವಿಕವಾಗಿ, ವೈಚಾರಿಕವಾಗಿ, ವೈಜ್ಞಾನಿಕವಾಗಿಯೂ ಕೂಡಾ ಮನುಷ್ಯನ ಆಗುಹೋಗುಗಳ ಕಾರಣ ಮತ್ತು ಪರಿಣಾಮಗಳನ್ನು ಅಧ್ಯಯನ ಮಾಡಲು ಮನಸ್ಸಿನ ಕಡೆಗೇ ಬೊಟ್ಟು ಮಾಡಿದರು.
ಆಧುನಿಕ ಮನಶಾಸ್ತ್ರವು ವೈಜ್ಞಾನಿಕವಾಗಿ ಮಂಡಿತವಾಗುವುದಕ್ಕಿಂತ ಮುಂಚೆಯೇ ಸಾವಿರಾರು ವರ್ಷಗಳಿಂದ, ಪ್ರಪಂಚದ ವಿವಿಧ ಮೂಲೆಮೂಲೆಗಳಲ್ಲಿ, ಎಲ್ಲಾ ಸಮಯಗಳಲ್ಲಿ ಮನುಷ್ಯ ತನ್ನ ಬಗ್ಗೆ ತಾನು ತಿಳಿದುಕೊಳ್ಳುವುದಕ್ಕೆ ಸದಾ ತುಡಿಯುತ್ತಲೇ ಇದ್ದ, ದುಡಿಯುತ್ತಲೇ ಇದ್ದ. ತತ್ವಶಾಸ್ತ್ರ, ಆಧ್ಯಾತ್ಮ, ವಿಜ್ಞಾನ, ಮಾನವಶಾಸ್ತ್ರದ ಅಧ್ಯಯನದ ಮೂಲಕ, ಅಷ್ಟೇಕೆ ಪುರಾಣಗಳಲ್ಲಿ ರೂಪಕಗಳ, ಕತೆ, ಕಾವ್ಯವೇ ಮೊದಲಾದ ಸೃಜನಶೀಲ ಸಾಹಿತ್ಯಗಳ ಮೂಲಕವೂ ಈ ಪ್ರಯತ್ನಗಳು ಆದವು.
ಅತ್ಯಂತ ಆಶ್ಚರ್ಯದ ಸಂಗತಿ ಎಂದರೆ ಮನುಷ್ಯ ತನ್ನ ಬಗ್ಗೆ ತಾನು ಈಗಾಗಲೇ ತಿಳಿದುಕೊಂಡಿದ್ದಾನೆ. ತನ್ನ ಮನಸ್ಸಿನ ಬಗ್ಗೆ ಇನ್ನು ತಿಳಿಯುವುದು ಏನೂ ಇಲ್ಲ ಎನ್ನುವಷ್ಟರ ಮಟ್ಟಿಗೆ ತಿಳುವಳಿಕೆಯು ಹರಳುಗಟ್ಟಿದ್ದರೂ ಕೂಡಾ ತನಗೆ ತಿಳಿದಿಲ್ಲ ಎನ್ನುವಂತೆ ನಟಿಸುತ್ತಾನೆ. ತನ್ನದೇ ಆದ ಹುಸಿ ವ್ಯಾಖ್ಯಾನಗಳಿಂದ ತಾನೂ ದಾರಿ ತಪ್ಪುವ ಮತ್ತು ಇತರರಿಗೂ ದಾರಿ ತಪ್ಪಿಸುವ ರೂಢಿ ಮಾಡಿಕೊಂಡಿದ್ದಾನೆ. ತನ್ನ ಅಹಂಕಾರ, ತನ್ನ ಜಿದ್ದುಗೇಡಿತನ ಮತ್ತು ಮುಖೇಡಿತನದಿಂದ ತನ್ನ ಆಗುಹೋಗುಗಳ ಜವಾಬ್ದಾರಿಯನ್ನು ತಾನು ಹೊತ್ತುಕೊಳ್ಳಲಾಗದೇ ಕರ್ಮ, ಹಣೆಬರಹ, ವಿಧಿ, ಪೂರ್ವಸಂಚಯವೇ ಮೊದಲಾದ ಅನೇಕ ಅಮೂರ್ತ ಸಂಗತಿಗಳ ಮೇಲೆ ಹೊರಿಸಿಬಿಟ್ಟ.
ವಿಧಿ, ಹಣೆಬರಹ, ಪೂರ್ವಸಂಚಯ ಫಲಗಳ ಮೇಲೆ ಆಗುಹೋಗುಗಳ ಕಾರಣ ಪರಿಣಾಮವನ್ನು ಹೊರಿಸುವುದರ ಕಾರಣಗಳಲ್ಲಿ ಪ್ರಾಯಶಃ ನಾಲ್ಕು ಎಂದು ವಿಭಾಗಿಸಬಹುದು. ಒಂದು, ಅಜ್ಞಾನ ಮತ್ತು ತಿಳುವಳಿಕೆಯ ಇತಿಮಿತಿಯ ಕಾರಣದ ಅಪ್ರಬುದ್ಧತೆ. ಎರಡು, ಅಮೂರ್ತ ಮತ್ತು ಅಗೋಚರ ಸಂಗತಿಗಳ ಪ್ರಭಾವಗಳ ಬಗ್ಗೆ ಇದ್ದಂತಹ ಊಹಾತ್ಮಕ ಗ್ರಹಿಕೆ. ಮೂರು, ತನ್ನ ಹೊಣೆಗಾರಿಕೆಯನ್ನು ನಿರಾಕರಿಸುವಂತಹ ಪಲಾಯನ ಮನಸ್ಥಿತಿಯು ರೂಪಿಸಿಕೊಂಡು ಸಮರ್ಥಿಸಿಕೊಳ್ಳುವ ಭ್ರಾಮಕ ಆಲೋಚನೆಗಳು. ನಾಲ್ಕು, ವಿಷಯ ತಿಳಿದಿದ್ದರೂ ತನ್ನ ಲೌಕಿಕ ಲಾಭಕ್ಕಾಗಿ ಹಳೆಯ ಅಪ್ರಬುದ್ಧ ವಿಷಯಗಳನ್ನು ಸತ್ಯವೆಂದು ನಂಬಿಸುತ್ತಾ ಹೋಗುವಂತಹ ವಂಚಕತನ ಅಥವಾ ಕಪಟತನ.
ವ್ಯಕ್ತಿ ತಾನು ಇರುವ ಮತ್ತು ಎದುರಿಸುವ ಯಾವುದೇ ಸಂಗತಿಯಲ್ಲಿ ಆಲೋಚನೆಗಳು, ವರ್ತನೆಗಳು, ನಿರ್ಧಾರಗಳು, ಕ್ರಿಯೆ ಮತ್ತು ಪ್ರತಿಕ್ರಿಯೆಗಳು ಇದ್ದೇ ಇರುತ್ತವೆ. ಅದರಿಂದ ವ್ಯಕ್ತಿಯ ಉದ್ದೇಶ ಸಫಲವೋ ಅಥವಾ ವಿಫಲವೋ ಆಗುತ್ತದೆ. ಸಫಲತೆ, ವಿಫಲತೆಗಳ ಆಧಾರದಲ್ಲಿ ವ್ಯಕ್ತಿಯ ಮನೋಭಾವ ಮೂಡುತ್ತದೆ. ಆದರೆ ಆ ಮನೋಭಾವವು ಮತ್ತು ಅಭಿಪ್ರಾಯಗಳು ವ್ಯಕ್ತಿಯ ಹೊರಗಿನ ಸಂಗತಿ ಮತ್ತು ಪ್ರಭಾವಗಳಿಂದ ಆಗುತ್ತವೆ ಎಂದೇ ಮನುಷ್ಯ ಸಾವಿರಾರು ವರ್ಷಗಳ ಕಾಲ ತಿಳಿದಿದ್ದನು. ಆದರೆ ಅದು ಹಾಗಿರಲಾರದು ಅಥವಾ ಸ್ವಲ್ಪ ಮಟ್ಟಿಗೆ ಹಾಗಿದ್ದರೂ ವ್ಯಕ್ತಿಯ ಒಳಗಿನ ಯಾವುದೋ ಒಂದು ಅಥವಾ ಹಲವು ವಿಷಯಗಳು ಪ್ರಭಾವಿಸುತ್ತವೆ, ವ್ಯಕ್ತಿಯ ಆಲೋಚನೆ, ಕ್ರಿಯೆ, ಪ್ರತಿಕ್ರಿಯೆ, ವರ್ತನೆಗಳನ್ನು ಸೃಷ್ಟಿಸುತ್ತವೆ ಮತ್ತು ನಿಯಂತ್ರಿಸುತ್ತವೆ ಎಂಬುದನ್ನು ತಿಳಿದನು. ಮನುಕುಲದ ಇತಿಹಾಸದಲ್ಲೇ ಇದೊಂದು ಬಹುದೊಡ್ಡ ಆವಿಷ್ಕಾರ. ತನ್ನ ಆಗುಹೋಗುಗಳಿಗೆ, ಕಾರಣ ಪ್ರೇರಣೆಗಳಿಗೆ ಹೊರಗೆ ನೋಡುತ್ತಿದ್ದವನು ತನ್ನ ಒಳಗೆ ನೋಡಲು ಪ್ರಾರಂಭಿಸಿದ. ಮನುಷ್ಯನ ದೃಷ್ಟಿಕೋನದಲ್ಲೇ ಇದು ಮಹತ್ತರ ಕ್ರಾಂತಿ. ಈ ಕ್ರಾಂತಿಯೂ ಎಲ್ಲೋ ಒಂದು ಕಡೆ, ಯಾರೋ ಒಬ್ಬರೋ ಅಥವಾ ಒಂದು ಗುಂಪೋ ಮಾಡಿದ್ದೇನಲ್ಲ. ನೆಪಕ್ಕೆ ಹೆಸರಿಸುವುದಾದರೆ ಇಂಡಿಯನ್, ಆಫ್ರಿಕನ್, ಗ್ರೀಸ್, ರೋಮನ್, ಈಜಿಪ್ತಿಯನ್, ಬ್ಯಾಬಿಲೋನಿಯನ್ಸ್, ಅರೇಬಿಯನ್; ಹೀಗೆ ಎಲ್ಲಾ ಕಡೆಯೂ ವಿವಿಧ ಸಮಯಗಳಲ್ಲಿ ಆವಿಷ್ಕಾರಗಳಾದವು. ಯಾವುದೇ ಮೂಲ ಮಾದರಿ ಅಥವಾ ಕಲ್ಪನೆ (ಐಡಿಯಾ) ಅಥವಾ ಪರಿಕಲ್ಪನೆಗಲು ಸಾರ್ವತ್ರಿಕವಾದವು (ಯೂನಿವರ್ಸಲ್) ಅಥವಾ ವಿಶ್ವತ್ರಿಕವಾದವು. ಕೆಲವು ಇವರದ್ದೆಂದು ದಾಖಲಾಗಿದ್ದು, ಆ ದಾಖಲೆಗಳು ನಮಗೆ ಸಿಗುತ್ತವೆ. ಮತ್ತೆ ಕೆಲವು ನಮ್ಮ ಗಮನದ ಮಿತಿಗೆ ದಕ್ಕಿರುವುದಿಲ್ಲ. ಜಗತ್ತಿಗೆ ನಾವು ಈ ಮಾದರಿಯನ್ನು ಕಾಣ್ಕೆಯಾಗಿ ಕೊಟ್ಟಿದ್ದೇವೆ ಅಥವಾ ನಾವೇ ಮೊದಲು ಅಥವಾ ನಮ್ಮಿಂದಲೇ ಜಗತ್ತಿಗೆ ಈ ತಿಳುವಳಿಕೆ ಬಂದಿದ್ದು ಎನ್ನುವುದು ಶುದ್ಧಾಂಗ ಸುಳ್ಳು. ಅದು ಆತ್ಮರತಿಯ, ಅಹಂಕಾರದ ಶುಷ್ಕ ಪ್ರದರ್ಶನ. ತಿಳಿಗೇಡಿತನದ ಒಂದು ಮಾಪನ.
ಇರಲಿ, ತನ್ನ ಒಳಗೆ ನೋಡಿಕೊಳ್ಳುವ ವಿದ್ಯಮಾನಗಳು ಆರಂಭವಾದಾಗಲೇ ಜಗತ್ತಿನಲ್ಲಿ ಮನಶಾಸ್ತ್ರ ಹುಟ್ಟಿತು. ತನ್ನ ಆಲೋಚನೆಗಳಿಗೆ, ವರ್ತನೆಗಳಿಗೆ, ಒಲವು ನಿಲುವುಗಳಿಗೆ, ಕ್ರಿಯೆ ಪ್ರತಿಕ್ರಿಯೆಗಳಿಗೆ, ಸಾಧನೆ ವೈಫಲ್ಯಗಳಿಗೆ ಕಾರಣಗಳೇನು ಎಂದು ತಿಳಿಯುತ್ತಲೇ ಆಗಿನ ಸಂಶೋಧನಾ ನಿರತ ಮನಸುಗಳು ವಿಧಿಯನ್ನು ಮತ್ತು ಆಡಿಸುವಾತನನ್ನು ಪಕ್ಕಕ್ಕೆ ಸರಿಸಿದ ಕುತೂಹಲಿಗಳು ಮತ್ತು ಅಭ್ಯಾಸಿಗರು ಅದನ್ನು ಆತ್ಮಾವಲೋಕನವೆಂದರು, ಆತ್ಮಜ್ಞಾನವೆಂದರು, ಆತ್ಮಸಾಕ್ಷಾತ್ಕಾರವಾಯಿತೆಂದರು.
ಈಗಲೂ ನವೀನ ಮನಶಾಸ್ತ್ರದಲ್ಲಿ ಮನೋವಿಶ್ಲೇಷಣಾ ಕ್ರಮದಲ್ಲಿ ಅಥವಾ ಇತರ ಮನಸ್ಸು, ವರ್ತನೆಗಳನ್ನು ವಿಶ್ಲೇಷಿಸುವ ಶಿಸ್ತಿನಲ್ಲಿ ತನ್ನ ಮನಸ್ಸನ್ನು ಪರೀಕ್ಷಿಸಿಕೊಳ್ಳುವುದೇ, ಪರಿಶೀಲಿಸಿಕೊಳ್ಳುವುದೇ ಮೊದಲ ಹೆಜ್ಜೆ. ಆತನ ಬಗ್ಗೆ, ಆಕೆಯ ಬಗ್ಗೆ, ಅವರಿವರ ಬಗ್ಗೆ ಎಂದು ಯಾರೇ ಹೇಳುತ್ತಿದ್ದರೂ ಅವರಿಗೆ ತಮ್ಮ ಬಗ್ಗೆ ತಿಳಿದಿಲ್ಲವೆಂದರೆ ಅವರು ಇತರರ ಬಗ್ಗೆ ಹೇಳುವುದೆಲ್ಲವೂ ಸುಳ್ಳು ಅಥವಾ ಊಹಾತ್ಮಕವಾದವು. ಇತರರನ್ನು ಅರಿಯಲು ಪಡೆದಿರಲೇ ಬೇಕಾದ ಮೊಟ್ಟಮೊದಲ ಅರ್ಹತೆ ತನ್ನ ಮನಸ್ಸನ್ನು ತಾನು ಅರಿತಿರುವುದು. ತನ್ನ ಆಲೋಚನೆಗಳನ್ನು ಗಮನಿಸುವುದು, ತನ್ನ ವರ್ತನೆಗಳನ್ನು ತಾನೇ ಸಾಕ್ಷೀಕರಿಸುವುದು, ತನ್ನ ಪ್ರತಿಕ್ರಿಯೆಗೆ ಕಾರಣಗಳನ್ನು ಕಂಡುಕೊಳ್ಳುವುದು, ತನ್ನ ಚಿಂತನಾಕ್ರಮಕ್ಕೆ ಇರುವ ಪ್ರಭಾವಗಳನ್ನು ಗುರುತಿಸುವುದು, ಒಟ್ಟಾರೆ ತನ್ನ ಸಮಗ್ರ ವ್ಯಕ್ತಿತ್ವಕ್ಕೆ ತಾನೇ ವಿಮರ್ಶಕ ಮತ್ತು ಸಂಶೋಧಕನಾಗಿ ನಿಲ್ಲಲು ಸಾಧ್ಯವಾದರೆ ಮಾತ್ರವೇ ಇತರ ವ್ಯಕ್ತಿಗಳ ಕಡೆಗೆ ನೋಡಲು ಸಾಧ್ಯ. ತನ್ನ ಬಗ್ಗೆ ತಾನು ಹೊಂದಿರುವ ತಿಳುವಳಿಕೆಯೇ ಆತ್ಮಜ್ಞಾನ.
- ಯೋಗೇಶ್ ಮಾಸ್ಟರ್, ಬರೆಹಗಾರರು



