ದಕ್ಷಿಣ ಕನ್ನಡ: ಶಾಲಾ ಮಕ್ಕಳ ವಾಹನ ಚಾಲಕರ ಸಂಘ(ರಿ)ದ ಆಶ್ರಯದಲ್ಲಿ ಪ್ರಾದೇಶಿಕ ಸಾರಿಗೆ ಇಲಾಖೆ ಹಾಗೂ ಮಂಗಳೂರು ನಗರ ಸಂಚಾರಿ ಪೋಲಿಸ್ ಇವರ ಸಹಯೋಗದೊಂದಿಗೆ ಶಾಲಾ ಮಕ್ಕಳ ವಾಹನ ಚಾಲಕರಿಗೆ ಜಾಗೃತಿ ಶಿಬಿರವು ಸಂಘದ ಅಧ್ಯಕ್ಷರಾದ ಮೋಹನ್ ಕುಮಾರ್ ಅತ್ತಾವರ ಅವರ ಅಧ್ಯಕ್ಷತೆಯಲ್ಲಿ ಅತ್ತಾವರ ಉಮಾಮಹೇಶ್ವರಿ ದೇವಸ್ಥಾನದ ಸಭಾಂಗಣದಲ್ಲಿ ಆಯೋಜಿಸಲಾಯಿತು.
ಶಿಬಿರದಲ್ಲಿ ಮಂಗಳೂರು ನಗರ ಸಹಾಯಕ ಪೋಲಿಸ್ ಅಯುಕ್ತರಾದ ಗೀತಾ.ಟಿ.ಕುಲಕರ್ಣಿ ಮಾತನಾಡಿ ಸಮಾಜದಲ್ಲಿ ಚಾಲಕರ ಪಾತ್ರ ಭಾರೀ ಮಹತ್ವದ್ದು. ವಾಹನ ಚಲಾವಣೆಯ ಸಂದರ್ಭದಲ್ಲಿ ಸಾರಿಗೆ ನಿಯಮಗಳನ್ನು ಪಾಲನೆ ಮಾಡುವುದು ಮಹತ್ವಪೂರ್ಣ ಸಂಗತಿ ಎಂದು ಹೇಳಿದರು.
ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿ ಎನ್.ವಿಶ್ವನಾಥ ನಾಯ್ಕ್ ಅವರು ಚಾಲಕ ವರ್ಗದ ಜವಾಬ್ದಾರಿಯನ್ನು ಹೇಳುತ್ತಾ, ತನ್ನ ಹಾಗೂ ಇತರರ ಪ್ರಾಣಗಳನ್ನು ಉಳಿಸುವಲ್ಲಿ ಚಾಲಕರು ಕಟ್ಟುನಿಟ್ಟಿನ ಶಿಸ್ತನ್ನು ಪಾಲಿಸುವ ಮೂಲಕ ಸಾರಿಗೆ ಸಂಚಾರದ ನಿಯಮಗಳನ್ನು ಪಾಲಿಸಬೇಕಾಗಿದೆ.ಶಾಲಾ ಮಕ್ಕಳನ್ನು ಸಾಗಿಸಲು ಟೂರಿಸ್ಟ್ ವಾಹನಗಳನ್ನು ಬಳಸಬೇಕೇ ಹೊರತು ಖಾಸಗೀ ವಾಹನಗಳನ್ನು ಬಳಸಬಾರದು.ಒಂದು ವೇಳೆ ಅನಾಹುತಗಳು ಸಂಭವಿಸಿದರೆ ಭಾರೀ ಪರಿಣಾಮವನ್ನು ಎದುರಿಸಬೇಕಾಗುತ್ತದೆ ಎಂಬ ಎಚ್ಚರಿಕೆಯನ್ನು ನೀಡಿದರು.
ಪ್ರಾಸ್ತಾವಿಕವಾಗಿ ನುಡಿಗಳನ್ನಾಡಿದ ಸಂಘದ ಅಧ್ಯಕ್ಷರಾದ ಸುನಿಲ್ ಕುಮಾರ್ ಬಜಾಲ್ ಅವರು, ಕಳೆದ 7 ವರ್ಷಗಳಲ್ಲಿ ಬೆಳೆದು ಬಂದ ಶಾಲಾ ಮಕ್ಕಳ ವಾಹನ ಚಾಲಕರ ಸಂಘವು ನಿರಂತರವಾಗಿ ಚಾಲಕರಲ್ಲಿ ಕಾನೂನುಗಳ ಬಗ್ಗೆ ಅರಿವು ಮೂಡಿಸುವಲ್ಲಿ ಅವಿರತವಾಗಿ ಶ್ರಮವಹಿಸಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಮಂಗಳೂರು ನಗರ ಪೂರ್ವ ಸಂಚಾರಿ ಪೋಲೀಸ್ ಠಾಣಾ ನಿರೀಕ್ಷಕರಾದ ಗೋಪಾಲ್ ಕೃಷ್ಣ ಭಟ್, ಸಂಘದ ಮುಖಂಡರಾದ ರೆಹಮಾನ್ ಖಾನ್ ಕುಂಜತ್ತಬೈಲ್,ಸ್ಟೇನಿ ಮಿನೇಜಸ್,ಗಂಗಾಧರ ರೈ, ಕಿರಣ್ ಲೇಡಿಹಿಲ್ ಮುಂತಾದವರು ಉಪಸ್ಥಿತರಿದ್ದರು.




