ಬೆಳಗಾವಿ: ಬೆಳಗಾವಿ ಲೋಕಸಭೆ ಕ್ಷೇತ್ರದ ಉಪ ಚುನಾವಣೆಯ ನಂತರ ಬೆಳಗಾವಿ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಗ್ರಾಮಗಳಿಗೆ ಭೇಟಿ ನೀಡಿ ಜನರಿಗೆ ಹಾಗೂ ಕಾರ್ಯಕರ್ತರಿಗೆ ಅಭಿನಂದನೆ ಸಲ್ಲಿಸುವ ವಿಚಾರ ಇತ್ತು. ಹೀಗಾಗಿ, ಇಂದು ಸವದತ್ತಿ ತಾಲೂಕಿನ 5 ಗ್ರಾಮಗಳಿಗೆ ಭೇಟಿ ನೀಡುತ್ತಿದ್ದೇನೆ. ಮುಂದಿನ ದಿನಗಳಲ್ಲಿ ಪ್ರತಿ ಬಾರಿ 5 ಗ್ರಾಮಗಳಿಗೆ ಭೇಟಿ ನೀಡಿ, ಕಾರ್ಯಕರ್ತರು ಹಾಗೂ ಜನರಿಗೆ ಧನ್ಯವಾದ ಸಲ್ಲಿಸಲಿದ್ದೇನೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಹೇಳಿದರು.
ಬೆಳಗಾವಿ ಲೋಕಸಭೆ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ, ಕೂದಲೆಳೆಯ ಅಂತರದಲ್ಲಿ ಪರಾಭವಗೊಂಡ ನಂತರ ತಮಗೆ ಮತ ನೀಡಿದ ಕ್ಷೇತ್ರದ ಮತದಾರರಿಗೆ ಧನ್ಯವಾದ ಅರ್ಪಿಸಲು ಮುಂದಾಗಿರುವ ಅವರು, ಸವದತ್ತಿ ತಾಲೂಕಿನ ಮಾಡಮಗೇರಿ, ಯರಝರ್ವಿ, ಕಡಬಿ, ತಲ್ಲೂರ ಮತ್ತು ಯರಗಟ್ಟಿ ಗ್ರಾಮಗಳಲ್ಲಿ ಕಾಂಗ್ರೆಸ್ ಕಾರ್ಯಕರ್ತರಿಗೆ ಇಂದು ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭ ಹಾಗೂ ಕುಂದುಕೊರತೆಗಳ ಅಹವಾಲು ಸ್ವೀಕಾರ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತಾಡಿದರು.
ಜಿಲ್ಲೆಯ ಯಾವುದೇ ಗ್ರಾಮಗಳ ಜನರ ಸಮಸ್ಯೆಯಿದ್ದರೂ ನಿಮ್ಮ ನೆರವಿಗೆ ನಾವಿದ್ದೇವೆ. ಚುನಾವಣೆಯಲ್ಲಿ ಸೋತರೂ ಕೂಡ ನಿಮ್ಮ ಸಹಕಾರಕ್ಕೆ ನಾವು ಸದಾ ಸಿದ್ಧ. ಜನ ತಮ್ಮ ಯಾವುದೇ ಸಮಸ್ಯೆಯಿದ್ದರೂ ನೇರವಾಗಿ ನಮ್ಮನ್ನು ಭೇಟಿ ಮಾಡಬಹುದು ಎಂದರು.
ಖಾಸಗಿ ಕಾರ್ಯಕ್ರಮ ಹಾಗೂ ಧಾರ್ಮಿಕ ಕಾರ್ಯಕ್ರಮಗಳಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಸತೀಶ್ ಫೌಂಡೇಶನ್ ವತಿಯಿಂದ ಬೆಳಗಾವಿ ಲೋಕಸಭಾ ಕ್ಷೇತ್ರದ ಗ್ರಾಮಗಳಲ್ಲಿರುವ ಸಮುದಾಯ ಭವನಗಳಿಗೆ ಶೀಘ್ರ ಕುರ್ಚಿ ಹಾಗೂ ಮೈಕ್ ಸೆಟ್ ವಿತರಿಸಲಾಗುವುದು ಎಂದರು.




