ಬೆಂಗಳೂರು: ನನ್ನ ಹುಟ್ಟುಹಬ್ಬಕ್ಕೆ ನಿಮ್ಮೆಲ್ಲರ ಪ್ರೀತಿ, ಅಭಿಮಾನಗಳೇ ಸಾಕು! ಅನವಶ್ಯಕ ಖರ್ಚು ವೆಚ್ಚ ಮಾಡಿ ಹಾರ, ಉಡುಗೊರೆ, ಕೇಕ್, ಪೇಟಗಳನ್ನು ತರಬೇಡಿ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಅಭಿಮಾನಿಗಳಲ್ಲಿ ಮನವಿ ಮಾಡಿದ್ದಾರೆ.
ತಾವು ಐವತ್ತನೇ ವಸಂತಕ್ಕೆ ಕಾಲಿಡುವ ಕ್ಷಣದ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿಕ್ರಿಯೆ ನೀಡಿರುವ ಅವರು, ಹಾರ, ಉಡುಗೊರೆ, ಕೇಕ್, ಪೇಟಗಳ ಬದಲಾಗಿ ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಒಂದೊಳ್ಳೆ ಕನ್ನಡ ಪುಸ್ತಕ ಕೊಡಿಸಿ, ಅವರ ಶಿಕ್ಷಣಕ್ಕೆ ನೆರವಾಗಿ, ಬಡ ರೋಗಿಗಳಿಗೆ ಆಸರೆಯಾಗಿ ಎಂದು ಮನವಿ ಮಾಡಿದ್ದಾರೆ.
ಬದುಕು ನನಗೆ ಎಲ್ಲವನ್ನೂ ಕೊಟ್ಟಿದೆ. ಎಡವಿದಾಗ ಬುದ್ಧಿ ಹೇಳಿದೆ, ಸರಿ ದಾರಿಯಲ್ಲಿದ್ದಾಗ ಬೆನ್ನು ತಟ್ಟಿದೆ. ನಿಮ್ಮೆಲ್ಲರ ಪ್ರೀತಿ ಗಳಿಸುವ ವಿಚಾರದಲ್ಲಂತೂ ನಾನು ತುಂಬ ಅದೃಷ್ಟವಂತ. ಸಂಕಟವಾಗಲಿ, ಖುಷಿಯ ವಿಚಾರವಾಗಲಿ ನಿಮ್ಮ ಜೊತೆ ಹಂಚಿಕೊಂಡರೆ ಏನೋ ಸಮಾಧಾನ ಎಂದಿದ್ದಾರೆ.
ನನ್ನ ಬದುಕಿನ ಫರ್ಸ್ಟ್ ಹಾಫ್ ನ ಕೊನೆ ವರ್ಷಕ್ಕೆ ಕಾಲಿಡಲು ಇನ್ನೇನು ಕೆಲವೇ ಗಂಟೆಗಳು ಬಾಕಿ ಉಳಿದಿವೆ. ಈ ಹೊತ್ತಿನಲ್ಲೂ ನಿಮ್ಮ ವಿಶ್ವಾಸ, ಪ್ರೀತಿ, ಆಶೀರ್ವಾದಗಳೇ ನನ್ನನ್ನು ಕಾಪಾಡುತ್ತಿವೆ. ನನ್ನ ಎಲ್ಲ ಸಾಧನೆ-ಶ್ರೇಯಸ್ಸುಗಳಿಗೆ ನೀವೇ ಸ್ಫೂರ್ತಿ ಎಂದು ಹೇಳಿದ್ದಾರೆ.
ನನ್ನ ಈ ಹುಟ್ಟುಹಬ್ಬದ ಸಂಭ್ರಮದ ದಿನದಂದು ನಿಮ್ಮ ಪ್ರೀತಿ-ಆಶೀರ್ವಾದಗಳೇ ನನಗೆ ಸಾಕು. ಹಾರ, ಉಡುಗೊರೆ, ಕೇಕ್, ಶಾಲು, ಪೇಟಗಳಿಗೆ ಅನವಶ್ಯಕ ಖರ್ಚು ಮಾಡುವ ಬದಲು ಅವಶ್ಯಕತೆ ಇರುವ ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸಹಾಯ ಮಾಡಿದರೆ ನನಗೆ ಅದೇ ಸಂತೋಷ, ಬಡ ರೋಗಿಗೆ ಔಷಧಿ ಕೊಡಿಸಿದರೆ ನನಗೆ ಅದೇ ಸಾರ್ಥಕತೆ. ಜೊತೆಯಾಗೇ ಸಾಗೋಣ ಸಾಮರಸ್ಯದೀ ಬದುಕೋಣ ಎಂದು ಕರೆ ನೀಡಿದ್ದಾರೆ.
ನಿಮ್ಮ ನಲ್ಮೆಯ ಆಶೀರ್ವಾದ ಮಾತ್ರ ನನಗೆ ಬೇಕು! ನೆನಪಿರಲಿ. ಬದುಕಿನ ಮತ್ತೊಂದು ಹುಟ್ಟುಹಬ್ಬಕ್ಕೆ ಚಿಯರ್ಸ್! ಹೇಳಿದ್ದಾರೆ.




