ದೆಹಲಿ: ಮಾರ್ಚ್ 15 ಅನ್ನು “ಖಾಸಗೀಕರಣ ಮತ್ತು ಕಾರ್ಪೊರೇಟೀಕರಣ ವಿರೋಧಿ ದಿವಸ” ವನ್ನಾಗಿ ಆಚರಿಸಿ ಎಂದು ಸಂಯುಕ್ತ ಕಿಸಾನ್ ಮೋರ್ಚಾ ದೇಶದ ಜನತೆಗೆ ಕರೆ ನೀಡಿದೆ.
ನಿಮಗೆ ತಿಳಿದಂತೆ ಹಲವಾರು ಸಾರ್ವಜನಿಕ ವಲಯದ ಉದ್ದಿಮೆಗಳನ್ನು ಖಾಸಗಿ ಕಂಪನಿಯವರಿಗೆ ಲಾಭದಾಯಕವಾಗುವಂತೆ ಹಸ್ತಾಂತರಿಸಲಾಗುತ್ತಿದೆ ಹಾಗೂ ಇತರ ವಲಯಗಳಲ್ಲಿ ಇರುವ ಸಣ್ಣ ಸಣ್ಣ ಉದ್ದಿಮೆಗಳನ್ನು ದೊಡ್ಡ ಬಂಡವಾಳಶಾಹಿಗಳಿಗೆ ಅನುಕೂಲವಾಗುವಂತೆ ಕಾರ್ಪೊರೇಟೀಕರಣ ಮಾಡಲಾಗುತ್ತಿದೆ. ಇಂತಹ ನೀತಿಗಳನ್ನು ವಿರೋಧಿಸಲು ಎಸ್.ಕೆ.ಎಂ. ಇತರ ಕಾರ್ಮಿಕ ಸಂಘಟನೆಗಳೊಂದಿಗೆ ಸೇರಿ ಮಾರ್ಚ್ 15, 2021ನ್ನು ಖಾಸಗೀಕರಣ ಮತ್ತು ಕಾರ್ಪೊರೇಟೀಕರಣ ವಿರೋಧಿ ದಿವಸವನ್ನಾಗಿ ಆಚರಿಸಲು ಕೈ ಜೋಡಿಸುತ್ತಿದೆ ಎಂದು ಸಂಯುಕ್ತ ಕಿಸಾನ್ ಮೋರ್ಚಾದ ನಾಯಕ ಡಾ. ದರ್ಶನ್ ಪಾಲ್ ಹೇಳಿದ್ದಾರೆ.
ಮಾರ್ಚ್ 15ರಂದು ತಾವು ದೇಶದಾದ್ಯಂತ ಪ್ರತಿಭಟನೆ ಮತ್ತು ಪ್ರದರ್ಶನ ಕಾರ್ಯಕ್ರಮಗಳನ್ನು ಹಮ್ಮಿಕೊಂಡು, ಜಿಲ್ಲಾಧಿಕಾರಿಗಳಿಗೆ ಮನವಿಪತ್ರ ಸಲ್ಲಿಸಿ, ದಿನೇ ದಿನೇ ಹೆಚ್ಚುತ್ತಿರುವ ಪೆಟ್ರೋಲ್/ಡೀಜಲ್/ಅಡುಗೆ ಅನಿಲ ಬೆಲೆಯ ಬಗ್ಗೆ ಪ್ರಧಾನಮಂತ್ರಿಗಳ ಗಮನ ಸೆಳೆಯಬೇಕೆಂದು ಮನವಿ ಮಾಡಿದ್ದಾರೆ.
ಅದೇ ದಿನದಂದು ಕಾರ್ಮಿಕ ಸಂಘಟನೆಗಳು ದೇಶದ ಎಲ್ಲೆಡೆ ರೈಲ್ವೇ ನಿಲ್ದಾಣದಲ್ಲಿ ಪ್ರತಿಭಟನೆ ನಡೆಸಲಿದ್ದಾರೆ. ಈ ಪ್ರತಿಭಟನೆಯನ್ನು ಕೆಲಸಗಾರರು ಕಾರ್ಮಿಕರು, ರೈತರು ಮತ್ತು ಶ್ರಮಜೀವಿಗಳು ಒಟ್ಟಾಗಿ ನಡೆಸುವುದೆಂದು ತೀರ್ಮಾನಿಸಲಾಗಿದೆ. ನೀವೂ ಸಹ ಇದರಲ್ಲಿ ಭಾಗಿಯಾಗಬೇಕೆಂದು ಮತ್ತು ಸ್ಥಳೀಯ ಕೇಂದ್ರ ಕಾರ್ಮಿಕ ಸಂಘಟನೆಯ ಪ್ರತಿನಿಧಿಗಳೊಂದಿಗೆ ಸಂಯೋಜಿಸಿಕೊಳ್ಳಬೇಕೆಂದು ಎಸ್.ಕೆ.ಎಂ. ವಿನಂತಿಸುತ್ತದೆ ಎಂದಿದ್ದಾರೆ.




