ಬೆಂಗಳೂರು: ರಾಜ್ಯದಲ್ಲಿ ಕಾಣಿಸಿಕೊಂಡಿರುವ ತೀವ್ರ ಸ್ವರೂಪದ ಬರಗಾಲದಿಂದ ಜನತೆ ತತ್ತರಿಸಿದ್ದಾರೆ. ಸರ್ಕಾರ ಇವರ ನೆರವಿಗೆ ಧಾವಿಸಬೇಕು. ಈ ನಿಟ್ಟಿನಲ್ಲಿ ಜಿಲ್ಲಾಧಿಕಾರಿಗಳು ಕಚೇರಿಯಲ್ಲಿ ಕುಳಿತುಕೊಳ್ಳದೆ ಕ್ಷೇತ್ರಗಳಿಗೆ ಭೇಟಿ ನೀಡಿ ಕೆಲಸ ಮಾಡಬೇಕು ಎಂದು ಕಂದಾಯ ಸಚಿವ ಕೃಷ್ಣಭೈರೇಗೌಡ ತಾಕೀತು ಮಾಡಿದರು.
ಎಲ್ಲಾ ಜಿಲ್ಲಾಧಿಕಾರಿಗಳು ಹಾಗೂ ಹಿರಿಯ ಅಧಿಕಾರಿಗಳೊಂದಿಗೆ ವಿಡಿಯೋ ಸಂವಾದ ಸಭೆ ನಡೆಸಿದ ಅವರು, ಕಂದಾಯ ಇಲಾಖೆ ಬೇರೆಲ್ಲಾ ಇಲಾಖೆಗಳಿಗಿಂತಲೂ ಹೆಚ್ಚಿನ ಕೆಲಸ ಮಾಡಬೇಕೆಂದು ಸಲಹೆ ನೀಡಿದರು.
ಫೆಬ್ರವರಿ ಮೊದಲ ವಾರದೊಳಗೆ ಎಲ್ಲಾ ತಾಲೂಕುಗಳಲ್ಲೂ ತಹಸೀಲ್ದಾರರು ಬರನಿರ್ವಹಣೆ ಸೇರಿದಂತೆ ಇತರೆ ವಿಚಾರಗಳ ಕುರಿತು ಕಾರ್ಯಪಡೆಯ ಸಭೆಗಳನ್ನು ನಡೆಸಬೇಕು. ಅರ್ಹ ಗ್ರಾಮಗಳನ್ನು ಕಂದಾಯ ಗ್ರಾಮಗಳೆಂದು ಘೋಷಣೆ ಮಾಡಬೇಕೆಂದು ಸೂಚಿಸಿದರು.
ಜಿಲ್ಲಾಧಿಕಾರಿಗಳು ಸೇರಿದಂತೆ ಕಂದಾಯ ಇಲಾಖೆಯ ಎಲ್ಲಾ ಅಧಿಕಾರಿಗಳು ಜನರ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡಬೇಕು. ನಕಾಶೆ ರಸ್ತೆ ನೀಡಲು ವಿಳಂಬ ಮಾಡುವುದನ್ನು ಸಹಿಸಲು ಸಾಧ್ಯವಿಲ್ಲ. ತಾವು ಜಿಲ್ಲೆಗಳಿಗೆ ಭೇಟಿ ನೀಡಿದಾಗ ಈ ರೀತಿಯ ಸಮಸ್ಯೆಗಳು ಹೆಚ್ಚು ಕೇಳಿಬರುತ್ತಿವೆ ಎಂದರು.
ಕಂದಾಯ ಇಲಾಖೆ ಡಿಜಿಟಲೀಕರಣಕ್ಕೆ ಕೇಂದ್ರ ಸರ್ಕಾರದಿಂದ 500 ಕೋಟಿ ರೂ. ಹಣ ಅನುದಾನ ದೊರೆತಿದೆ. ಇದನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು. ತಹಸೀಲ್ದಾರ್, ನೋಂದಣಾಧಿಕಾರಿಗಳು ಹಾಗೂ ನಾಡ ಕಚೇರಿಗಳಲ್ಲಿನ ದಾಖಲಾತಿಗಳನ್ನು ಸಂಪೂರ್ಣವಾಗಿ ಡಿಜಿಟಲೀಕರಣಗೊಳಿಸಬೇಕು ಎಂದು ಸೂಚಿಸಿದರು.




