ಬೆಂಗಳೂರು: ಸರ್ವೇ ಇಲಾಖೆಯಲ್ಲಿ ಕೆಲವು ಗೊಂದಲಗಳ ಕಾರಣಕ್ಕೆ ರೈತರು ಸಾಕಷ್ಟು ಸಮಸ್ಯೆಗಳಿಗೆ ಒಳಗಾಗುತ್ತಿದ್ದಾರೆ. ಪಹಣಿ 3 ಮತ್ತು 9 ಹಾಗೂ ಆಕಾರಬಂದು ಆರ್ ಟಿಸಿ ವ್ಯತ್ಯಾಸದ ಪ್ರಕರಣಗಳ ಕಾರಣಕ್ಕೆ ರೈತರು ದಿನಂಪ್ರತಿ ಸರ್ಕಾರಿ ಕಚೇರಿಗೆ ಅಲೆಯುವಂತಾಗಿದೆ. ಈ ಪ್ರಕರಣಗಳಿಗೆ ಅಧಿಕಾರಿಗಳು ಶೀಘ್ರ ಮುಕ್ತಿ ನೀಡಿ ರೈತರಿಗೆ ತುಸು ನೆಮ್ಮದಿ ನೀಡಿ ಎಂದು ಅಧಿಕಾರಿಗಳಿಗೆ ಸಚಿವ ಕೃಷ್ಣ ಬೈರೇಗೌಡ ಸೂಚಿಸಿದರು.
ಸರ್ವೇ ಇಲಾಖೆಯಲ್ಲಿನ ಸಮಸ್ಯೆಗಳು ಹಾಗೂ ಪಹಣಿ 3 ಮತ್ತು 9 ವ್ಯತ್ಯಾಸ (RTC Mismatch)ಗಳ ಬಗ್ಗೆ ಚರ್ಚಿಸುವ ಸಲುವಾಗಿ ವಿಕಾಸಸೌಧದ ಸಚಿವರ ಕಚೇರಿಯಲ್ಲಿ ಬುಧವಾರ ಇಲಾಖೆಯ ಹಿರಿಯ ಅಧಿಕಾರಿಗಳ ಸಭೆ ಕರೆಯಲಾಗಿತ್ತು.
ಸಭೆಯಲ್ಲಿ ಅಧಿಕಾರಿಗಳಿಗೆ ಹಲವು ಸೂಚನೆಗಳನ್ನು ನೀಡಿದ ಅವರು, ರಾಜ್ಯದಲ್ಲಿ ಪಹಣಿ 3 ಮತ್ತು 9 ವ್ಯತ್ಯಾಸವಿರುವ 54,175 ಪ್ರಕರಣಗಳು ದಾಖಲಾಗಿವೆ. ಇನ್ನೂ ಆಕಾರಬಂದು ಮತ್ತು ಆರ್ ಟಿಸಿ ವ್ಯತ್ಯಾಸಕ್ಕೆ ಸಂಬಂಧಿಸಿದಂತೆ ಒಟ್ಟು 1,12,865 ಪ್ರಕರಣಗಳು ದಾಖಲಾಗಿವೆ. ಈ ಪ್ರಕರಣಗಳ ಇತ್ಯರ್ಥಕ್ಕಾಗಿ ರೈತರು ಸರ್ಕಾರಿ ಕಚೇರಿಗೆ ಅಲೆದು ಸಾಕಾಗಿದ್ದಾರೆ. ಈ ಸಮಸ್ಯೆಗಳಿಗೆ ಮುಕ್ತಿಯೇ ಇಲ್ಲವೇ? ಜನರಿಗೆ ಪ್ರತಿನಿಧಿಗಳಾಗಿ ನಾವು ಅವರಿಗೆ ಏನೆಂದು ಉತ್ತರಿಸಬೇಕು? ಎಂದು ಅಧಿಕಾರಿಗಳನ್ನು ಎಂದು ಪ್ರಶ್ನಿಸಿದರು.
ಈ ಎಲ್ಲಾ ತಿದ್ದುಪಡಿ ಪ್ರಕರಣಗಳಿಗೆ ಅಳತೆಯ ಅವಶ್ಯಕತೆ ಇದೆಯಾ? ಎಂಬುದನ್ನು ಅಧಿಕಾರಿಗಳು ಖಾತ್ರಿಪಡಿಸಿಕೊಳ್ಳಬೇಕು ಮತ್ತು ಸರ್ವೇ ಇಲಾಖೆ ತಹಶೀಲ್ದಾರ್ ಗ್ರೇಡ್ ಅಧಿಕಾರಿಗಳಿಗೆ ತಿಂಗಳು ಅಥವಾ ವಾರಕ್ಕೆ ಇಂತಿಷ್ಟು ಪ್ರಕರಣ ಎಂದು ಗುರಿ ನಿಗದಿಪಡಿಸಿ ರೈತರ ಸಮಸ್ಯೆಗಳನ್ನು ಪರಿಹರಿಸಬೇಕು ಎಂದು ಸೂಚಿಸಿದರು.
ಸಭೆಯಲ್ಲಿ ಪೋಡಿ ಮುಕ್ತ ಗ್ರಾಮದ ಬಗ್ಗೆಯೂ ಚರ್ಚಿಸಲಾಯಿತು. ಈ ಬಗ್ಗೆ ಅಧಿಕಾರಿಗಳಿಗೆ ಸೂಚನೆ ನೀಡಿದ ಅವರು, “ರಾಜ್ಯದಲ್ಲಿ ಈಗಾಗಲೇ 17,000 ಗ್ರಾಮಗಳನ್ನು ಪೋಡಿ ಮುಕ್ತ ಗ್ರಾಮಗಳು ಎಂದು ಘೋಷಿಸಲಾಗಿದೆ. 14,000 ಗ್ರಾಮಗಳನ್ನು ಪೋಡಿ ಮುಕ್ತ ಗ್ರಾಮ ಎಂದು ಘೋಷಿಸುವುದು ಬಾಕಿ ಇದೆ. ಈಗಾಗಲೇ ರಾಮನಗರ ಜಿಲ್ಲೆಯಲ್ಲಿ “ಡ್ರೋನ್ ತಂತ್ರಜ್ಞಾನ” ಆಧಾರಿತ ಭೂ ಮರು-ಮಾಪನಕ್ಕೆ (ರೀ ಸರ್ವೇ) ಪ್ರಾಯೋಗಿಕವಾಗಿ ಚಾಲನೆ ನೀಡಲಾಗಿತ್ತು. ಈ ಪ್ರಯೋಗ ಯಶಸ್ವಿಯಾಗಿದ್ದು, ಇದನ್ನೇ ಆಧರಿಸಿ ರಾಜ್ಯಾದ್ಯಂತ ಮತ್ತೊಮ್ಮೆ ಭೂ ಮರು-ಮಾಪನ ಮಾಡಿ ಪೋಡಿ ಮರು ಅಭಿಯಾನಕ್ಕೆ ಚಾಲನೆ ನೀಡಿ” ಎಂದರು.
ನಮೂನೆ 57ರ ಅಡಿಯಲ್ಲಿ ಸಾಗುವಳಿ ಭೂಮಿ ಮಂಜೂರು ಮಾಡಲು ರಾಜ್ಯಾದ್ಯಂತ ಲಕ್ಷಾಂತರ ಅರ್ಜಿಗಳು ಸಲ್ಲಿಕೆಯಾಗಿವೆ. ಈ ಎಲ್ಲಾ ಅರ್ಜಿಗಳನ್ನೂ ಕಾನೂನಿನ ಮಿತಿಯೊಳಗೆ ಯಾರ ಪ್ರಭಾವಕ್ಕೂ ಒಳಗಾಗದೆ, ಶೀಘ್ರವಾಗಿ ಅರ್ಹ ಫಲಾನುಭವಿಗಳಿಗೆ ಸಾಗುವಳಿ ಚೀಟಿ ಎಂದು ಅವರು ಅಧಿಕಾರಿಗಳಿಗೆ ಸೂಚಿಸಿದರು.
ಅಲ್ಲದೆ, ಈ ನಮೂನೆ 57ರ ಅರ್ಜಿಯ ಅಡಿಯಲ್ಲಿ ಈ ಹಿಂದೆಯೇ ಭೂಮಿ ಮಂಜೂರಾಗಿದ್ದರೆ ಅಧಿಕಾರಿಗಳು ಪೋಡಿ ಮುಕ್ತ ಮಾಡುವ ಅಥವಾ ಏಕ ವ್ಯಕ್ತಿ ಅಡಿಯಲ್ಲಿ ಪೋಡಿ ನೀಡುವ ಬಗ್ಗೆ ಕ್ರಮಕೈಗೊಳ್ಳಿ, ಮುಂದಿನ ದಿನಗಳಲ್ಲಿ ಫಾರಂ 57ರ ಅರ್ಜಿಗಳನ್ನು ಮಂಜೂರು ಮಾಡುವ ಮುನ್ನ ಭೂಮಿಯನ್ನು ಅಳತೆ ಮಾಡಿ ಮಂಜೂರು ನಕ್ಷೆ ತಯಾರಿಸಿದ ನಂತರ ಸಾಗುವಳಿ ಚೀಟಿ ನೀಡಿ ಪೋಡಿ ಪ್ರಕ್ರಿಯೆ ನಡೆಸಿ ನೋಂದಾಯಿಸಿ ಹಕ್ಕು ದಾಖಲೆಗಳನ್ನು ತಯಾರಿಸಿ ಎಂಬ ಸೂಚನೆಯನ್ನೂ ಅಧಿಕಾರಿಗಳಿಗೆ ರವಾನಿಸಿದರು.
ಕಂದಾಯ ಹಾಗೂ ಅರಣ್ಯ ಜಮೀನುಗಳ ನಡುವಿನ ಗಡಿಯ ಬಗ್ಗೆ ಸಾಕಷ್ಟು ಸ್ಪಷ್ಟತೆ ಇಲ್ಲದ ಕಾರಣಕ್ಕೂ ಜನ ಸಾಕಷ್ಟು ತೊಂದರೆಗೆ ಒಳಗಾಗುತ್ತಿದ್ದಾರೆ. ಇಲಾಖೆಗೂ ಇದರಿಂದ ಸಾಕಷ್ಟು ನಷ್ಟ ಉಂಟಾಗುತ್ತಿದೆ. ಹೀಗಾಗಿ ಅಧಿಕಾರಿಗಳು ಶೀಘ್ರವಾಗಿ ಹಲವಾರು ಸರ್ವೇ ನಂಬರುಗಳಲ್ಲಿ ಹಂಚಿಹೋಗಿರುವ ಅರಣ್ಯ ಹಾಗೂ ಕಂದಾಯ ಭೂಮಿಗಳನ್ನು ಗುರುತಿಸಿ, ಸರ್ವೇ ನಂಬರುಗಳನ್ನು ಶೀಘ್ರವಾಗಿ ಅಳತೆ ಕೈಗೊಂಡು ಗಡಿ ಗುರುತಿಸಿ ದಾಖಲೆಗಳನ್ನು ತಯಾರಿಸಿ ಎಂದರು.
ಅಲ್ಲದೆ, ರಾಜ್ಯದಲ್ಲಿ ಹಲವು ಸ್ವರೂಪಗಳಲ್ಲಿ ಸರ್ಕಾರಿ ಜಮೀನುಗಳು ಇದ್ದು, ಎಲ್ಲಾ ಸರ್ಕಾರಿ ಸರ್ವೇ ನಂಬರುಗಳನ್ನೂ ಒಂದು ಬಾರಿ ಅಳತೆ ಮಾಡಿ ಸಂರಕ್ಷಿಸಿ ಎಂದು ಸಚಿವ ಕೃಷ್ಣ ಬೈರೇಗೌಡ ಅಧಿಕಾರಿಗಳಿಗೆ ಸೂಚಿಸಿದರು.
ಆರು ತಿಂಗಳು 20 ಜಿಲ್ಲೆಗಳಿಗೆ ಪ್ರವಾಸ: ಸಚಿವ ಕೃಷ್ಣ ಬೈರೇಗೌಡ ಅವರು ಕಳೆದ ಆರು ತಿಂಗಳಲ್ಲಿ 20 ಜಿಲ್ಲೆಗಳಿಗೆ ಪ್ರವಾಸ ಕೈಗೊಂಡಿದ್ದಾರೆ. ಎಲ್ಲಾ ಜಿಲ್ಲೆಗಳಲ್ಲೂ ಜನರ ಸಮಸ್ಯೆಗಳನ್ನು ಖುದ್ದು ಆಲಿಸಿದ್ದಾರೆ. ಅಲ್ಲದೆ, ಎಲ್ಲಾ ಜಿಲ್ಲೆಗಳಲ್ಲೂ ಕಂದಾಯ ಇಲಾಖೆ ಪ್ರಗತಿ ಪರಿಶೀಲನಾ ಸಭೆ ನಡೆಸಿದ್ದಾರೆ.
ಎಲ್ಲಾ ಸಭೆಯಲ್ಲೂ ಪಹಣಿ 3 ಮತ್ತು 9 ಹಾಗೂ ಆಕಾರಬಂದು ಆರ್ ಟಿಸಿ ವ್ಯತ್ಯಾಸದ ಪ್ರಕರಣಗಳು ಮತ್ತು ನಮೂನೆ 50, 53, 57 ಅರ್ಜಿಗಳ ಅತ್ಯರ್ಥದ ಬಗ್ಗೆಯೇ ಹೆಚ್ಚು ಗಮನ ಸೆಳೆದಿದ್ದ ಸಚಿವರು ಈ ಎಲ್ಲಾ ಸಮಸ್ಯೆಗಳಿಗೂ ಶಾಶ್ವತ ಪರಿಹಾರ ನೀಡುವ ಸಲುವಾಗಿ ಇದೀಗ ರಾಜ್ಯಾದ್ಯಂತ ರೀ ಸರ್ವೇ ನಡೆಸಲು ಆಲೋಚಿಸಿದ್ದಾರೆ. ಇಂದಿನ ಸಭೆಯಲ್ಲೂ ಆ ಬಗ್ಗೆಯೇ ಹೆಚ್ಚು ಒತ್ತು ನೀಡಲಾಗಿತ್ತು. ರಾಜ್ಯದಲ್ಲಿ 1920ರಲ್ಲಿ ಬ್ರಿಟೀಷರ ಕಾಲದಲ್ಲಿ ಕೊನೆಯ ಬಾರಿ ಸರ್ವೇ ನಡೆಸಲಾಗಿತ್ತು.
ಸಭೆಯಲ್ಲಿ ನಿವೃತ್ತ ಅಪರ ಮುಖ್ಯಕಾರ್ಯದರ್ಶಿ ರಾಜೀವ್ ಚಾವ್ಲಾ, ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿಗಳಾದ ರಾಜೇಂದ್ರ ಕುಮಾರ್ ಕಟಾರಿಯಾ, ಕಂದಾಯ ಆಯುಕ್ತರಾದ ಸುನೀಲ್ ಕುಮಾರ್, ಭೂ ಮಾಪನ ಮತ್ತು ಭೂ ದಾಖಲಾತಿಗಳ ಇಲಾಖೆ ಆಯುಕ್ತರಾದ ಮಂಜುನಾಥ್ ಹಾಗೂ ಇತರೆ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.




