ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನ ವೈಟ್ ಫೀಲ್ಡ್ ಸಮೀಪದ ಕುಂದಲಹಳ್ಳಿಯ ರಾಮೇಶ್ವರಂ ಕೆಫೆ ಸ್ಪೋಟ ಪ್ರಕರಣದ ಬೆನ್ನು ಹತ್ತಿರುವ ವಿಶೇಷ ತನಿಖಾ ತಂಡ ಆರೋಪಿಯ ರೇಖಾಚಿತ್ರ ಸಿದ್ಧಪಡಿಸಿ ಹುಡುಕಾಟ ನಡೆಸಿದೆ. ಇದರ ನಡುವೆ ರಾಷ್ಟ್ರೀಯ ತನಿಖಾ ಆಯೋಗ ಕೂಡ ಪ್ರತ್ಯೇಕವಾಗಿ ತನಿಖೆಗೆ ಚಾಲೆನೆ ನೀಡಿದೆ.
ಕೆಫೆಯಲ್ಲಿ ಸ್ಪೋಟಕ ಇಟ್ಟು ಪರಾರಿಯಾಗಿರುವ ಪಾತಕಿ ಬಿಎಂಟಿಸಿ ಬಸ್ ನಿಲ್ದಾಣದಲ್ಲಿ ಕುಳಿತು ಸ್ಪೋಟಕಕ್ಕೆ ಟೈಮರ್ ಜೋಡಿಸಿದ್ದಾನೆ. ಬಸ್ ನಿಲ್ದಾಣದಲ್ಲಿ ಎಲ್ಲರ ಸಮ್ಮುಖದಲ್ಲೇ ಆತ ಸ್ಪೋಟಕಕ್ಕೆ ಟೈಮರ್ ಜೋಡಿಸುತ್ತಿರುವ ದೃಶ್ಯ ಬಸ್ ನಿಲ್ದಾಣದಲ್ಲಿನ ಸಿಸಿ ಕ್ಯಾಮೆರಾದಲ್ಲಿ ಕರೆಯಾಗಿದೆ.
ಸ್ಪೋಟಕಕ್ಕೆ ಟೈಮರ್ ಜೋಡಣೆ ಮಾಡಿದ ನಂತರ ಆತ ವೈಟ್ ಫೀಲ್ಡ್ ನತ್ತ ತೆರಳುವ ಬಿಎಂಟಿಸಿ ವೋಲ್ವೋ ಬಸ್ ಹತ್ತಿದ್ದಾನೆ. ಈ ದೃಶ್ಯಾವಳಿಗಳನ್ನು ವಶಕ್ಕೆ ಪಡೆದಿರುವ ತನಿಖಾ ತಂಡ ಆರೋಪಿಯ ರೇಖಾಚಿತ್ರ ಸಿದ್ಧಪಡಿಸಿ ಆತನಿಗಾಗಿ ಬಲೆ ಬೀಸಿದೆ.
ಆರೋಪಿ ಸುಮಾರು 25ರಿಂದ 30 ವರ್ಷದವನಂತೆ ಕಾಣುತ್ತಿದ್ದಾನೆ. ನಂಬರ್ 10 ಎಂಬ ಸಂಖ್ಯೆ ಕಾಣುವ ಟೋಪಿ ಹಾಕಿಕೊಂಡು ಕೂಲಿಂಗ್ ಗ್ಲಾಸ್ ಧರಿಸಿ ಬಸ್ ನಿಲ್ದಾಣದಲ್ಲಿ ಓಡಾಟ ನಡೆಸಿದ್ದಾನೆ. ಬಸ್ಸಿನಿಂದ ಇಳಿದು ಆತ ಅತ್ಯಂತ ವೇಗವಾಗಿ ಹೋಟೆಲಿಗೆ ಧಾವಿಸಿದ್ದಾನೆ. ಹೋಟೆಲ್ ಒಳಗಡೆ ಕೆಲ ಕಾಲ ಓಡಾಟ ನಡೆಸಿ, ಕ್ಯಾಮರಗಳನ್ನು ಎಲ್ಲೆಲ್ಲಿ ಅಳವಡಿಸಲಾಗಿದೆ ಎಂದು ಪರಿಶೀಲಿಸಿದ್ದಾನೆ. ಬಳಿಕ ಕೈ ತೊಳೆಯುವ ಬೇಸನ್ ಸಮೀಪದಲ್ಲಿ ಸ್ಪೋಟಕ ಇದ್ದ ಬ್ಯಾಕ್ ಇಟ್ಟು ಹೊರಬಂದಿದ್ದಾನೆ. ಈ ದೃಶ್ಯಗಳನ್ನು ಅವಲೋಕಿಸಿರುವ ತಂಡ ರೇಖಾಚಿತ್ರ ಸಿದ್ಧಪಡಿಸಿದೆ.
ಈ ನಡುವೆ ಸುದ್ದಿಗಾರರೊಂದಿಗೆ ಮಾತನಾಡಿದ ಗೃಹ ಸಚಿವ ಪರಮೇಶ್ವರ್, ರಾಮೇಶ್ವರಂ ಕೆಫೆಯಲ್ಲಿ ಸಂಭವಿಸಿದ ಬಾಂಬ್ ಸ್ಪೋಟ ಪ್ರಕರಣದ ಬಗ್ಗೆ ಎನ್ಐಎ ಹಾಗೂ ಎನ್ಎಸ್ಜಿ ತಂಡಗಳು ಆಗಮಿಸಿ ತನಿಖೆ ನಡೆಸುತ್ತಿವೆ. ನಮ್ಮ ಪೊಲೀಸರು ತನಿಖೆ ಮುಂದುವರೆಸಿದ್ದಾರೆ ಎಂದರು.
ಬಾಂಬ್ ಸ್ಪೋಟ ಪ್ರಕರಣಕ್ಕೆ ಸಂಬಂಧಿಸಿದ ಹಿರಿಯ ಪೊಲೀಸ್ ಅಧಿಕಾರಿಗಳ ಸಭೆ ನಡೆಸಿ, ಸಲಹೆ, ಸೂಚನೆಗಳನ್ನು ನೀಡಲಾಗಿದೆ. ಪ್ರಕರಣ ತನಿಖೆ ನಡೆಯುತ್ತಿರುವುದರಿಂದ ಕೆಲವು ವಿಚಾರಗಳನ್ನು ಬಹಿರಂಗವಾಗಿ ಹಂಚಿಕೊಳ್ಳಲಾಗುವುದಿಲ್ಲ ಎಂದರು.
ಸ್ಪೋಟ ಪ್ರಕರಣದ ಮೂಲ ಪತ್ತೆ ಹಚ್ಚಬೇಕಾಗಿದೆ. ವೈಯಕ್ತಿಕ ವಿಚಾರಕ್ಕೆ ಬಾಂಬ್ ಸ್ಪೋಟ ಮಾಡಲಾಗಿದೆಯೇ? ಯಾವುದಾದರೂ ಸಂಘಟನೆ ಕೈವಾಡ ಅದರ ಹಿಂದೆ ಇದೆಯೇ? ಎಂಬುದು ತನಿಖೆ ಪೂರ್ಣಗೊಂಡ ನಂತರ ಗೊತ್ತಾಗಲಿದೆ ಎಂದರು.




