ಅನ್ಯಧರ್ಮೀಯರನ್ನು ಕೊಲ್ಲು ಎನ್ನುವುದು ಧರ್ಮವೇ?
ಹಿಂದೂ ಧರ್ಮ ಮತ್ತು ಹಿಂದುತ್ವದ ನಡುವಿನ ವ್ಯತ್ಯಾಸ ವಿವರಣೆ
ದೆಹಲಿ: ಬಿಜೆಪಿ ರಾಜಕೀಯ ದುರುದ್ದೇಶಕ್ಕಾಗಿ ಧರ್ಮದ ಹೆಸರನ್ನು ಬಳಸುತ್ತದೆ. ಇದು ರಾಜಕೀಯದಲ್ಲಿ ಧರ್ಮದ ದುರುಪಯೋಗ. ಈ ಬಗ್ಗೆ ಜನರನ್ನು ಎಚ್ಚರಿಸುವ ಕಾರ್ಯ ಮಾಡಬೇಕಾಗಿದೆ ಎಂದು ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ.
ಮಹಾರಾಷ್ಟ್ರದ ವರ್ದಾದಲ್ಲಿ ನಡೆಯುತ್ತಿರುವ ಕಾಂಗ್ರೆಸ್ ಕಾರ್ಯಕರ್ತರ ತರಬೇತಿ ಶಿಬಿರ ಉದ್ದೇಶಿಸಿ ಮಾತಾಡಿದ ಅವರು, ಕಾಂಗ್ರೆಸ್ ಅನುಸರಿಸುವ ಧರ್ಮ ಮತ್ತು ಬಿಜೆಪಿಯ ಹಿಂದುತ್ವದ ನಡುವಿನ ವ್ಯತ್ಯಾಸದ ಬಗ್ಗೆ ಸ್ಪಷ್ಟ ಮಾತುಗಳಲ್ಲಿ ಹೇಳಿದರು.
ಕಾಂಗ್ರೆಸ್ ಅನುಸರಿಸುವ ಹಿಂದೂ ಧರ್ಮ ಮಹಾತ್ಮ ಗಾಂಧೀಜಿಯವರು ಅನುಸರಿಸುವ ಧರ್ಮವಾಗಿದೆ. ಇದು ಬಿಜೆಪಿ ಅನುಸರಿಸುವ ಹಿಂದುತ್ವಕ್ಕಿಂತ ಭಿನ್ನವಾದುದು. ಗುರುನಾನಕ್, ಸಂತ ಕಬೀರ ಹೇಳಿರುವ ವಿಚಾರಧಾರೆಗಳು ಮತ್ತು ಹಿಂದುತ್ವ ವಿಚಾರಧಾರೆಗಳಲ್ಲಿ ಏನಾದರೂ ಸಮಾನ ಅಂಶಗಳಿವೆಯೇ? ಎಂದು ಅವರು ಪ್ರಶ್ನಿಸಿದರು.
ಗಾಂಧೀಜಿಯವರು ಹೇಳಿದ ವಿಚಾರಧಾರೆ ಹಾಗೂ ರಾಜ ಅಶೋಕನು ಹೇಳಿದ ವಿಚಾರ ಧಾರೆಗಳಲ್ಲಿ ಏನಾದರೂ ಸಮಾನ ಅಂಶಗಳಿವೆಯೇ? ನಮಗೆ ತಿಳಿದಿರುವಂತೆ ಹಿಂದೂವಾದ ಮತ್ತು ಹಿಂದುತ್ವ ವಿಚಾರಧಾರೆಗಳಲ್ಲಿ ಇರುವ ವ್ಯತ್ಯಾಸವೇನು? ಅವೆರಡೂ ಒಂದೇ ಆಗಿದೆಯೇ? ಅವೆರಡು ಒಂದೇ ಆಗಲು ಸಾಧ್ಯವೇ? ಅವೆರಡು ಒಂದೇ ಆಗಿದ್ದರೆ ಅವೆರಡಕ್ಕೂ ಒಂದೇ ಹೆಸರು ಏಕಿಲ್ಲ? ಏಕೆ ಬರೀ ಹಿಂದೂವಾದ ಎಂದೇ ಕರೆಯುವುದಿಲ್ಲ? ಹಿಂದುತ್ವ ಎಂದು ಯಾಕೆ ಕರೆಯುತ್ತೇವೆ? ಇಂಥ ವಿಷಯಗಳ ಬಗ್ಗೆ ನಾವು ಸಂಶೋಧಿಸಬೇಕು. ಈ ಎರಡು ವಿಷಯಗಳ ಬಗ್ಗೆ ಆಳವಾಗಿ ಅಧ್ಯಯನ ಮಾಡುವ ಮತ್ತು ಅರ್ಥೈಸಿಕೊಳ್ಳುವ ಸಾಮರ್ಥ್ಯವಿರುವ ನೂರು ಇನ್ನೂರು ಐನೂರು ಮಂದಿಯ ತಂಡವನ್ನು ರಚಿಸಬೇಕಾಗಿದೆ ಎಂದು ಅವರು ಕರೆ ನೀಡಿದರು.
ಹಿಂದೂ ಧರ್ಮ ಸಿಖ್ಖರನ್ನು ಮುಸಲ್ಮಾನರನ್ನು ಹೊಡೆಯಲು ಹೇಳುವುದಿಲ್ಲ. ಆದರೆ ಹಿಂದುತ್ವ ಈ ರೀತಿ ಮಾಡುತ್ತದೆ. ಹಿಂದೂ ಧರ್ಮ ಅಖ್ಲಾಖನನ್ನು ಕೊಲ್ಲಲು ಹೇಳುವುದಿಲ್ಲ. ನಾನು ಉಪನಿಷತ್ತು ಓದಿದ್ದೇನೆ. ಬೇರೆ ಯಾವ ಧರ್ಮದ ಪುಸ್ತಕದಲ್ಲಿ ಕೊಲ್ಲಬೇಕೆಂದು ಹೇಳುತ್ತದೆ? ನಾನು ನೋಡಿಲ್ಲ, ಓದಿಲ್ಲ. ಮುಗ್ಧರನ್ನು ಕೊಲ್ಲಬೇಕೆಂದು ಎಲ್ಲಿ ಬರೆದಿದೆ? ಹಿಂದೂ ಗ್ರಂಥಗಳಲ್ಲಿ ಇಸ್ಲಾಂ ಗ್ರಂಥಗಳಲ್ಲಿ ಸಿಖ್ಖ ಗ್ರಂಥಗಳಲ್ಲಿ ಎಲ್ಲಿದೆ? ಆದರೆ ಹಿಂದುತ್ವದಲ್ಲಿ ಇದನ್ನು ನಾವು ಕಾಣುತ್ತಿದ್ದೇವೆ. ಈ ಅಂಶವನ್ನು ನಾವು ಜನರಿಗೆ ತಲುಪಿಸಬೇಕಾಗಿದೆ ಎಂದರು.
ಒಮ್ಮೆ ನಾವು ಪರಿಣಾಮಕಾರಿಯಾಗಿ ಈ ಅಂಶವನ್ನು ಜನರಿಗೆ ತಿಳಿಸಿದಲ್ಲಿ ಸ್ವಾಭಾವಿಕವಾಗಿ ಎಲ್ಲಾ ಜನರನ್ನು ತಲುಪಲು ಈ ಗುರಿಯನ್ನು ಸಾಧಿಸಲು ನಮಗೆ ಸಾಧ್ಯ. ಇದು ಕಾಂಗ್ರೆಸ್ಸಿನ ವೈಚಾರಿಕ ತಳಹದಿ ಎಂದರು.



