ವಿದ್ಯುತ್ ಖಾಸಗೀಕರಣದ ವಿರುದ್ಧ ಮೆಸ್ಕಾಂ ಪ್ರಧಾನ ಕಚೇರಿಯೆದುರು ಪ್ರತಿಭಟನೆ

2 years ago

#Protest #against #electricity #privatization #Mescom #headquarters #mangalore

ಮಂಗಳೂರು: ಆಧುನಿಕ ನಾಗರಿಕ ಸಮಾಜದ ಕೇಂದ್ರ ನರಮಂಡಲದಂತೆ ಕಾರ್ಯನಿರ್ವಹಿಸುವ ಹಾಗೂ ಎಲ್ಲಾ ಕೈಗಾರಿಕೆಗಳ ತಾಯಿಯಂತಿರುವ ಅತ್ಯಂತ ಪ್ರಮುಖ ಸೇವೆಯಾದ ವಿದ್ಯುತ್ ಕ್ಷೇತ್ರವನ್ನು ಖಾಸಗೀಕರಣ ಮಾಡಲು ಹೊರಟಿರುವ ನರೇಂದ್ರ ಮೋದಿ ಸರಕಾರದ ಕಾರ್ಪೊರೇಟ್ ಪರ ನೀತಿಯನ್ನು ವಿರೋಧಿಸಿ ದೇಶಾದ್ಯಂತ ನಡೆದ ಹೋರಾಟದ ಭಾಗವಾಗಿ ಮಂಗಳೂರಿನ ಬಜ್ಪೆಯಲ್ಲಿರುವ ಮೆಸ್ಕಾಂ ಪ್ರಧಾನ ಕಚೇರಿಯೆದುರು ರೈತ ಕಾರ್ಮಿಕ ಹಾಗೂ ಜನಪರ ಸಂಘಟನೆಗಳ ಜಂಟಿ ನೇತ್ರತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು.

ನೂರಾರು ಸಂಖ್ಯೆಯಲ್ಲಿ ಸೇರಿದ್ದ ಪ್ರತಿಭಟನಾಕಾರರು,ಕೇಂದ್ರ ಸರ್ಕಾರದ ರೈತ ಕಾರ್ಮಿಕ ವಿರೋಧಿ ನೀತಿಗಳ ವಿರುದ್ಧ ಆಕ್ರೋಶಭರಿತರಾಗಿ ಘೋಷಣೆಗಳನ್ನು ಕೂಗಿದರು.

ಪ್ರತಿಭಟನೆಯನ್ನುದ್ದೇಶಿಸಿ ಮಾತಾಡಿದ, CITU ದ.ಕ.ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್, 2014ರಲ್ಲಿ ಅಧಿಕಾರಕ್ಕೆ ಬಂದ ತಕ್ಷಣ ಕೇಂದ್ರ ಸರಕಾರ ಅತ್ಯಂತ ಲಾಭದಾಯಕವಾದ ವಿದ್ಯುತ್ ಕ್ಷೇತ್ರವನ್ನು ಖಾಸಗೀಕರಣಗೊಳಿಸುವಲ್ಲಿ ವಿವಿಧ ಹಂತದ ಸುಧಾರಣಾ ಕ್ರಮಗಳನ್ನು ಕೈಗೊಳ್ಳುತ್ತಾ ಬಂದಿದೆ. ಅದರ ಭಾಗವಾಗಿ ಕೇಂದ್ರ ಸರ್ಕಾರದ ಅಡಿಯಲ್ಲಿರುವ ನೀತಿ ಆಯೋಗವು ವಿದ್ಯುತ್ ಕ್ಷೇತ್ರದಲ್ಲಿನ ಉತ್ಪಾದನೆ, ವಿತರಣೆ ಹಾಗೂ ಕಂದಾಯ ಸಂಗ್ರಹ ಇದ್ಯಾವುದನ್ನೂ ಸರಕಾರ ಮಾಡಬಾರದು. ಅದೆಲ್ಲವನ್ನು ಖಾಸಗಿಯವರಿಗೆ ವಹಿಸಿ ಸರಕಾರ ತನ್ನ ಜವಾಬ್ದಾರಿಯಿಂದ ಮುಕ್ತವಾಗಬೇಕೆಂದು ಹೇಳಿರುವುದು ಕೇಂದ್ರ ಸರ್ಕಾರದ ಕಾರ್ಪೊರೇಟ್ ಪರ ನೀತಿಗಳು ಜಗಜ್ಜಾಹೀರಾಗಿದೆ ಎಂದು ಹೇಳಿದರು.

AITUC ಜಿಲ್ಲಾ ನಾಯಕ ಎಚ್ ವಿ ರಾವ್ ರವರು ಮಾತನಾಡಿ, ಒಂದು ವೇಳೆ ವಿದ್ಯುತ್ ಕ್ಷೇತ್ರ ಖಾಸಗೀಕರಣಗೊಂಡಲ್ಲಿ ಖಾಸಗಿ ಸಂಸ್ಥೆಗಳು ವಿದ್ಯುತ್ ವಿತರಣೆಗಾಗಿ ತಮ್ಮ ಯಾವುದೇ ಮೂಲಭೂತ ವ್ಯವಸ್ಥೆಗಳನ್ನು ಮಾಡಿಕೊಳ್ಳದೆ ಸರಕಾರಿ ಸ್ವಾಮ್ಯದಲ್ಲಿರುವ ಮೂಲಭೂತ ಸೌಲಭ್ಯಗಳನ್ನು ಬಳಸಿಕೊಳ್ಳುತ್ತಾರೆ. ಅದಕ್ಕಾಗಿ ಅವರು ಯಾವುದೇ ಬಂಡವಾಳ ತೊಡಗಿಸಿಕೊಳ್ಳುವುದಿಲ್ಲ ಎಂದು ಹೇಳಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ CITU ಜಿಲ್ಲಾ ನಾಯಕ ಯೋಗೀಶ್ ಜಪ್ಪಿನಮೊಗರು, ವಿದ್ಯುತ್ ಖಾಸಗೀಕರಣವು ದೇಶದ ಸಾರ್ವಜನಿಕ ವಿದ್ಯುತ್ ವಿತರಣಾ ವ್ಯವಸ್ಥೆಯ ಮೇಲಿನ ಅಂತಿಮ ದಾಳಿಯಾಗಿದೆ. ವಿದ್ಯುತ್ ಉತ್ಪಾದನೆ ವಿತರಣಾ ಪ್ರಕ್ರಿಯೆಯಲ್ಲಿ ಇದುವರೆಗೆ ಇದ್ದ ಸೇವಾ ವ್ಯವಸ್ಥೆ ಸರ್ವನಾಶವಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಹೋರಾಟವನ್ನು ಬೆಂಬಲಿಸಿ ಕರ್ನಾಟಕ ಪ್ರಾಂತ ರೈತ ಸಂಘದ ನಾಯಕರಾದ ಕೆ.ಯಾದವ ಶೆಟ್ಟಿ, AITUC ಜಿಲ್ಲಾ ಮುಖಂಡರಾದ ಸೀತಾರಾಮ ಬೇರಿಂಜ, DYFI ನಾಯಕರಾದ ಸಂತೋಷ್ ಬಜಾಲ್, ಹಿರಿಯ ದಲಿತ ನಾಯಕರಾದ ಎಂ.ದೇವದಾಸ್, ಮಹಿಳಾ ಮುಖಂಡರಾದ ಜಯಂತಿ ಶೆಟ್ಟಿ ಮಾತನಾಡಿ ಕೇಂದ್ರ ಸರ್ಕಾರದ ಜನದ್ರೋಹಿ ನೀತಿಗಳನ್ನು ಎಳೆಎಳೆಯಾಗಿ ವಿವರಿಸಿದರು.

ಪ್ರತಿಭಟನೆಯಲ್ಲಿ AITUC ನಾಯಕರಾದ ಬಿ ಶೇಖರ್, ವಿ.ಕುಕ್ಯಾನ್, ಕರುಣಾಕರ್, ಪ್ರಭಾಕರ ರಾವ್, ಸುರೇಶ್ ಕುಮಾರ್, CITU ಮುಖಂಡರಾದ ಜಯಲಕ್ಷ್ಮಿ, ನಾಗೇಶ್ ಕೋಟ್ಯಾನ್, ಅಶೋಕ ಶ್ರೀಯಾನ್, ವಿಲ್ಲಿ ವಿಲ್ಸನ್, ಮೋಹನ್ ಜಲ್ಲಿಗುಡ್ಡ, NSUI ನಾಯಕರಾದ ಸುಹಾನ್ ಆಳ್ವಾ, ದಲಿತ ನಾಯಕರಾದ ರಘು ಎಕ್ಕಾರು, ಮಂಜಪ್ಪ ಪುತ್ರನ್, ರಾಧಾಕೃಷ್ಣ ಬೊಂಡಂತಿಲ, ಆದಿವಾಸಿ ಮುಖಂಡರಾದ ಕರಿಯ ಕೆ,ರಶ್ಮಿ ವಾಮಂಜೂರು, ಶೇಖರ್, ಪುನೀತ್, ಪ್ರಶಾಂತ್ ಕಂಕನಾಡಿ, ಯುವಜನ ನಾಯಕರಾದ ಬಿ.ಕೆ.ಇಮ್ತಿಯಾಜ್, ನವೀನ್ ಕೊಂಚಾಡಿ, ಪುಷ್ಪಾರಾಜ್ ಬೋಳೂರು, ತಯ್ಯುಬ್ ಬೆಂಗರೆ, ನೌ಼ಷಾದ್ ಬೆಂಗರೆ, ಮಹಿಳಾ ಮುಖಂಡರಾದ ಪ್ರಮೀಳಾ ಶಕ್ತಿನಗರ, ಅಸುಂತ ಡಿಸೋಜ, ಆಶಾ ಬೋಳೂರು, ದೀಕ್ಷಾ, ವಿಮಾ ನೌಕರರ ಮುಖಂಡರಾದ ಬಿ.ಎನ್ ದೇವಾಡಿಗ ,ಸಾಮರಸ್ಯದ ವಿದ್ಯಾ ಶೆಣೈ ಮುಂತಾದವರು ಭಾಗವಹಿಸಿದ್ದರು.

Leave a Reply