ಸರ್ಕಾರದಲ್ಲಿ ದರೋಡೆಕೋರರಿಗೆ ರಕ್ಷಣೆಯಾಗುತ್ತಿದೆ: ಎಚ್.ಡಿ.ಕುಮಾರಸ್ವಾಮಿ

2 years ago

ಬೆಂಗಳೂರು: ಡಿ.ಕೆ.ಶಿವಕುಮಾರ್ ಪ್ರಕರಣ ಕುರಿತು ಸರ್ಕಾರದ ನಿರ್ಧಾರದ ವಿರುದ್ಧ ಕೆಂಡಾಮಂಡಲರಾಗಿರುವ ಜೆಡಿಎಸ್ ನಾಯಕ ಎಚ್.ಡಿ.ಕುಮಾರಸ್ವಾಮಿ, ಸರ್ಕಾರದಲ್ಲಿ ದರೋಡೆಕೋರರಿಗೆ ರಕ್ಷಣೆಯಾಗುತ್ತಿದೆ. ಯಾರನ್ನು ಹೇಗೆ ರಕ್ಷಣೆ ಮಾಡುತ್ತಿದೆ ಎಂಬುದು ಸಚಿವ ಸಂಪುಟ ಸಭೆಯಲ್ಲಿ ಕೈಗೊಂಡ ತೀರ್ಮಾನದಿಂದ ಗೊತ್ತಾಗುತ್ತದೆ ಎಂದು ವಾಗ್ದಾಳಿ ನಡೆಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದು ಸ್ವಜನ ಪಕ್ಷಪಾತವಲ್ಲ. ಇಂತಹದನ್ನು ಮಾಡಲು ಮಾನ ಮರ್ಯಾದೆ ಇದ್ದವರು ಹೆದರುತ್ತಾರೆ. ಕೋರ್ಟಿನಲ್ಲಿದ್ದರೇನು? ಬೇರೆ ಯಾವುದೇ ಬೇಕಾದರೂ ಇರಲಿ ಕೊಂಡುಕೊಳ್ಳುತ್ತೇನೆ ಎಂಬ ದುರಹಂಕಾರದಲ್ಲಿರುವವರಿಗೆ ಏನು ಮಾಡುವುದು. ಈ ವಿಚಾರ ನ್ಯಾಯಾಲಯದಲ್ಲಿ ಇರುವುದರಿಂದ ಹೆಚ್ಚಿಗೆ ಮಾತನಾಡುವುದಿಲ್ಲ ಎಂದು ಹೇಳಿದರು.

ಈ ವಿಷಯದಲ್ಲಿ ಡಿಸಿಎಂ ತುಂಬಾ ದೊಡ್ಡತನ ತೋರಿದ್ದಾರೆ. ಸಂಪುಟ ಸಭೆಯಲ್ಲಿ ಈ ವಿಷಯ ಚರ್ಚೆಗೆ ಬರುತ್ತದೆ ಎಂದು ಸಭೆಗೆ ಹೋಗಿಲ್ಲ. ಅವರ ಸಹಕಾರಕ್ಕೆ ನಿಜಕ್ಕೂ ಅಭಿನಂದಿಸಲೇಬೇಕು ಎಂದು ವ್ಯಂಗ್ಯವಾಡಿದರು.

ಅನುಮತಿ ಹಿಂಪಡೆಯುವುದಕ್ಕಾಗಿ ಮೂರು ದಿನಗಳ ಹಿಂದೆ ಹಿರಿಯ ವಕೀಲರನ್ನು ಕರೆದು, ಮುಂದೆ ಯಾವ ರೀತಿ ರಕ್ಷಣೆ ಪಡೆಯಬೇಕು ಎಂಬುದನ್ನು ದಿನವಿಡೀ ಚರ್ಚಿಸಲಾಗಿದೆ. ಈ ವಿಚಾರ ಆಗಲೇ ನನ್ನ ಗಮನಕ್ಕೆ ಬಂದಿದೆ. ಸರ್ಕಾರದ ತೀರ್ಮಾನ ರಾಷ್ಟ್ರಮಟ್ಟದಲ್ಲಿ ಕಾನೂನು ತಜ್ಞರ ಮಟ್ಟದಲ್ಲಿ ಚರ್ಚೆಯಾಗಲಿದೆ ಎಂದರು.

ಪ್ರಕರಣ ಹಿಂಪಡೆಯಲು ಶಿವಕುಮಾರ್ ಒತ್ತಡ ಹಾಕಿದ್ದರೇ, ಇಲ್ಲವೇ ಎಂಬ ಪ್ರಶ್ನೆ ಇಲ್ಲಿ ಉದ್ಭವಿಸುವುದಿಲ್ಲ. ಸರ್ಕಾರ ಇರುವುದೇ ಕಾನೂನು ವ್ಯಾಪ್ತಿಯಲ್ಲಿ ಕೆಲಸ ಮಾಡಲು. ತಿಳಿವಳಿಕೆ ಇರುವವರೇ ಇಂತಹ ನಿರ್ಧಾರ ಕೈಗೊಂಡಿರುವುದು ಸರಿಯಲ್ಲ. ಒಂದು ಬಾರಿ ಆದೇಶ ಮಾಡಿದ ಮೇಲೆ ಬದಲಾವಣೆ ಮಾಡಲು ಅವಕಾಶವಿಲ್ಲ. ಸಿಬಿಐಬಿಂದ ವಾಪಸ್ಸು ಪಡೆದು ಲೋಕಾಯುಕ್ತ ಅಥವಾ ಸ್ಥಳೀಯ ಪೊಲೀಸರಿಂದ ಇದನ್ನ ತನಿಖೆ ಮಾಡಲು ಆಗುತ್ತದೆಯೇ ಎಂದರು.

Leave a Reply