ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆಯ ಮತದಾನಕ್ಕೆ ಕೆಲವೇ ದಿನಗಳು ಬಾಕಿ ಇರುವಂತೆ ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಘೋಷಿಸಿರುವ ಧಾರ್ಮಿಕ ದ್ವೇಷ ಬಿತ್ತುವ ಸಂಘಟನೆಗಳ ನಿಷೇಧ ವಿಷಯಕ್ಕೆ ಬಿಜೆಪಿ ವಿವಾಹ ಸ್ವರೂಪ ನೀಡಿದೆ.
ಪ್ರಣಾಳಿಕೆಯಲ್ಲಿ ಉಲ್ಲೇಖಿಸಿರುವ ಭರವಸೆಯನ್ನು ಸಮರ್ಥಿಸುವ ನಿಟ್ಟಿನಲ್ಲಿ ಕಾಂಗ್ರೆಸ್ ನಾಯಕರು ಪ್ರಯತ್ನ ನಡೆಸುತ್ತಿದ್ದರೆ ಬಿಜೆಪಿ ಮತ್ತು ಸಂಘ ಪರಿವಾರ ಈ ವಿಷಯವನ್ನು ಮುಂದಿಟ್ಟುಕೊಂಡು ಕಾಂಗ್ರೆಸ್ ವಿರುದ್ಧ ಸಮರಸಾರಿದೆ. ಈ ವಿಷಯವಾಗಿ ಪ್ರಚಾರದ ಅಖಾಡದಲ್ಲಿ ಉಭಯ ಪಕ್ಷಗಳ ನಾಯಕರ ನಡುವಿನ ವಾಕ್ಸಮರ ತಾರಕಕ್ಕೇರಿದೆ.
ಪ್ರಣಾಳಿಕೆಗೆ ಬೆಂಕಿ: ಕಲ್ಬುರ್ಗಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಬಿಜೆಪಿ ಕಿರಿಯ ನಾಯಕ ಕೆಎಸ್ ಈಶ್ವರಪ್ಪ ಕಾಂಗ್ರೆಸ್ ಪ್ರಣಾಳಿಕೆಯನ್ನು ಸುಟ್ಟು ತಮ್ಮ ಆಕ್ರೋಶ ಹೊರ ಹಾಕಿದರು.
ಬಜರಂಗದಳ ನಿಷೇಧ ಮಾಡುತ್ತೇವೆ ಎಂದಿದ್ದಕ್ಕೆ ಹಿಂದೂಗಳಿಗೆ ನೋವಾಗಿದೆ. ಕಾಂಗ್ರೆಸಿಗರ ಮನಸ್ಥಿತಿ ರಾಜ್ಯದ ಜನರಿಗೆ ಗೊತ್ತಾಗಿದೆ. ಎಲ್ಲಾ ರಾಷ್ಟ್ರಭಕ್ತ ನಾಗರಿಕರು ರಾಷ್ಟ್ರದ್ರೋಹಿ ಕಾಂಗ್ರೆಸ್ ಪ್ರಣಾಳಿಕೆಯನ್ನು ಬಹಿಷ್ಕರಿಸಬೇಕು ಎಂದರು.
ಎಲ್ಲ ಮುಸ್ಲಿಮರು ಒಂದೇ ತರಹ ಇರುವುದಿಲ್ಲ. ಕೆಲವು ಮುಸ್ಲಿಮರು ಕಾಂಗ್ರೆಸ್ ವಿರುದ್ಧವಾಗಿದ್ದಾರೆ. ಇದು ಮುಸ್ಲಿಂ ಲೀಗ್‌ನ ಪ್ರಣಾಳಿಕೆ, ಮುಹಮ್ಮದ್ ಅಲಿ ಜಿನ್ನಾರ ಪ್ರಣಾಳಿಕೆ. ಬಜರಂಗದಳ ನಿಷೇಧಿಸುವ ಮೂಲಕ ಕಾಂಗ್ರೆಸ್ ಮುಸ್ಲಿಮರ ತುಷ್ಟೀಕರಣ ಮಾಡಲು ಹೊರಟಿದೆ ಎಂದು ಆರೋಪಿಸಿದರು.
ಪ್ರಜಾತಂತ್ರಕ್ಕೆ ಅಪಮಾನ: ಬಿಜೆಪಿ ನಾಯಕ ಈಶ್ವರಪ್ಪ ಅವರ ಈ ನಡೆಯನ್ನು ಬಲವಾಗಿ ಖಂಡಿಸಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಒಂದು ಪಕ್ಷದ ಪ್ರಣಾಳಿಕೆಯನ್ನು ಸುಡುವ ಮೂಲಕ ಬಿಜೆಪಿ ನಾಯಕ ಈಶ್ವರಪ್ಪ ಪ್ರಜಾತಂತ್ರಕ್ಕೆ ಅಪಮಾನ ವೆಸಗಿದ್ದಾರೆ ಎಂದು ಆಪಾದಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಣಾಳಿಕೆ ಸುಟ್ಟು ಹಾಕಿರುವುದು ಸರಿಯಲ್ಲ. ಯಾವುದೆ ಪ್ರಣಾಳಿಕೆ ಇಷ್ಟ ಇರಬಹುದು. ಇರದೆ ಇರಬಹುದು ಅದನ್ನು ಸುಡಬಾರದು. ಜನರಿಗೆ ಕೊಟ್ಟ ಗ್ಯಾರಂಟಿ ಯೋಜನೆಗಳನ್ನ ಸುಟ್ಟು ಹಾಕಿದ್ದಾರೆ.
ಪ್ರಣಾಳಿಕೆಯನ್ನ ಸುಟ್ಟು ಅವಮಾನ ಮಾಡಿದ್ದಾರೆ.
ಈ ಮೂಲಕ ಈಶ್ವರಪ್ಪ ಅವರು ಜನರಿಗೆ ಪ್ರಚೋದನೆ ಮಾಡುತ್ತಿದ್ದಾರೆ. ಪ್ರಜಾಪ್ರಭುತ್ವದಲ್ಲಿ ಸ್ವಾತಂತ್ರ್ಯ, ಸಮಾನತೆ ಮತ್ತು ಸಹಿಷ್ಣುತೆ ಪ್ರಮುಖವಾಗಿದೆ. ಈ ಕೃತ್ಯಕ್ಕೆ ತಕ್ಕ ಉತ್ತರವನ್ನು ಕೆಪಿಸಿಸಿ ಅಧ್ಯಕ್ಷರು ಮತ್ತು ಪ್ರಣಾಳಿಕೆ ಕಮಿಟಿಯ ಪರಮೇಶ್ವರ ಹಾಗೂ ತಂಡದವರು ಉತ್ತರ ಕೊಡುತ್ತಾರೆ ಎಂದರು.
ಇನ್ನೂ ಸಾಮಾಜಿಕ ಜಾಲತಾಣಗಳಲ್ಲಿ ಈ ವಿಷಯದ ಕುರಿತು ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಬಹುತೇಕ ಸಾಮಾಜಿಕ ಜಾಲತಾಣಿಗರು, ಪತ್ರಕರ್ತರು, ಚಿಂತಕರು, ಸಾಹಿತಿಗಳು, ಹೋರಾಟಗಾರರು ಬಜರಂಗದಳ ನಿಷೇಧ ಪ್ರಸ್ತಾವವನ್ನು ಸಮರ್ಥಿಸಿದ್ದಾರೆ. ಅಲ್ಲದೆ ಬಿಜೆಪಿ ನಡೆಸುತ್ತಿರುವ ಹನುಮಾನ್ ಊದಿಸಿದ ನಾಡು ಕರುನಾಡು ಅಭಿಯಾನಕ್ಕೆ ಪರ್ಯಾಯವಾಗಿ ಬಸವಣ್ಣ, ಕನಕದಾಸ, ಟಿಪ್ಪು ಸುಲ್ತಾನ್, ನಾಲ್ವಡಿ ಕೃಷ್ಣರಾಜ ಒಡೆಯರ್, ಮದಕರಿ ನಾಯಕ, ಕೆಂಪೇಗೌಡ ಮೊದಲಾದವರು ಜನಿಸಿದ ನಾಡು ಕರ್ನಾಟಕ ಎಂಬ ಅಭಿಪ್ರಾಯಗಳು ವ್ಯಕ್ತವಾಗಿವೆ.




