ಬಡವರ ಪರವಾಗಿರುವ ಗ್ಯಾರಂಟಿ ಯೋಜನೆಗಳನ್ನು ಯಾವುದೇ ಕಾರಣಕ್ಕೂ ನಿಲ್ಲಿಸುವುದಿಲ್ಲ: ಸಿದ್ದರಾಮಯ್ಯ

2 years ago

ಬೆಂಗಳೂರು: ರಾಜ್ಯ ಸರ್ಕಾರದ ಅಧಿಕಾರಿಗಳು ಜಾತ್ಯತೀತತೆ ಮತ್ತು ಸಂವಿಧಾನಕ್ಕೆ ಪೂರ್ತಿ ಬದ್ದರಾಗಿ ಕೆಲಸ ಮಾಡಬೇಕು, ಇಲ್ಲದಿದ್ದರೆ ಅಂಥವರಿಗೆ ಇಲ್ಲಿ ಮುಂದುವರೆಯಲು ಅವಕಾಶವೇ ಇಲ್ಲ ಎಂದು ಸಿಎಂ ಸಿದ್ದರಾಮಯ್ಯ ಸ್ಪಷ್ಟ ಸಂದೇಶ ರವಾನಿಸಿದ್ದಾರೆ.

ರಾಜ್ಯದ ಎಲ್ಲಾ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳ ಸಭೆಯಲ್ಲಿ ಮಾತನಾಡಿದ ಅವರು, ಅಧಿಕಾರಿಗಳು ಯಾವುದೇ ಧರ್ಮ ಅಥವಾ ಜಾತಿಯ ಕಟ್ಟುಪಾಡುಗಳಿಗೆ ಒಳಪಟ್ಟು ಕೆಲಸ ಮಾಡಬಾರದು. ಸಂವಿಧಾನದ ಆಶಯಕ್ಕೆ ಅನುಗುಣವಾಗಿ ಕೆಲಸ ಮಾಡಬೇಕು ಎಂದು ನಿರ್ದೇಶಿಸಿದರು.

ನಿಮ್ಮ ಅನುಭವಗಳು ಜಿಲ್ಲಾಡಳಿತಕ್ಕೆ ನೆರವಾಗಬೇಕು. ಸರ್ಕಾರದ ಯೋಜನೆಗಳು, ಕಾರ್ಯಕ್ರಮಗಳು ಪರಿಣಾಮಕಾರಿಯಾಗಿ ಜನರಿಗೆ ತಲುಪಲು, ಜಿಲ್ಲಾ ಮಟ್ಟದ ಅಧಿಕಾರಿಗಳು ಕ್ಷಿಪ್ರ ತೀರ್ಮಾನ ತೆಗೆದುಕೊಳ್ಳಲು ನೆರವಾಗಬೇಕು ಎನ್ನುವ ಕಾರಣಕ್ಕೆ ನಿಮ್ಮನ್ನು ನೇಮಿಸಲಾಗಿದೆ ಎಂದರು.

ರಾಜ್ಯದಲ್ಲಿ ಹೊಸ ಸರ್ಕಾರ ಬಂದು 8 ತಿಂಗಳಾಗಿದೆ. DC, CEO ಸಭೆ ನಡೆಸಿ ಹಲವು ಸೂಚನೆಗಳನ್ನು ನೀಡಿ 3-4 ತಿಂಗಳಾಗಿದೆ.‌ ನೀವು ಉಸ್ತುವಾರಿ ವಹಿಸಿದ ಮೇಲೆ ಆಡಳಿತಾತ್ಮಕವಾಗಿ ಏನು ಬದಲಾವಣೆ ಆಗಿದೆ ಎಂಬುದನ್ನು ಮನವರಿಕೆ ಮಾಡಿಕೊಡಬೇಕು ಎಂದರು.

ಕೆಲವು ಕಡೆ ಸರ್ಕಾರದ ಗ್ಯಾರಂಟಿ ಯೋಜನೆಗಳು ಕೆಲವೇ ಕೆಲವು ಫಲಾನುಭವಿಗಳಿಗೆ ತಲುಪಿವೆ. ಲಾಭ ತಲುಪದ ಕೆಲವರು ಅಪಪ್ರಚಾರ ಮಾಡಿಕೊಂಡು ತಿರುಗುತ್ತಿದ್ದಾರೆ. ಆದ್ದರಿಂದ ತಾಂತ್ರಿಕ ಸಮಸ್ಯೆ ಮೊದಲು ಬಗೆಹರಿಸಿ, ಅನರ್ಹ ಫಲಾನುಭವಿಗಳಿಗೆ ಮಾಹಿತಿ ನೀಡಿ ಅವರ ಅರ್ಜಿ ತಿರಸ್ಕರಿಸಿ ಎಂದು ಸೂಚಿಸಿದರು.

ಸಾರ್ವಜನಿಕರು ಕಂದಾಯ ಇಲಾಖೆ, ತಹಶೀಲ್ದಾರ್ ಮತ್ತು, ಎಸಿ ಮತ್ತು ಡಿಸಿ ಕಚೇರಿಗಳಿಗೆ ಅಲೆದಾಡುವುದನ್ನು ಕಡಿಮೆ ಮಾಡಬೇಕು. ಜನರ ಸಮಸ್ಯೆಗಳಿಗೆ ಅಕಾರಿಗಳೇ ಖುದ್ದು ಸ್ಪಂದಿಸಬೇಕು. ತಾಲೂಕು ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಪದೇಪದೇ ಪ್ರಗತಿ ಪರಿಶೀಲನೆ ನಡೆಸಿ, ಎಷ್ಟು ಅರ್ಜಿಗಳು ಬಾಕಿ ಉಳಿದಿವೆ, ಎಷ್ಟು ಬಗೆಹರಿದಿವೆ ಎಂಬ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಬೇಕು ಎಂದು ಸೂಚನೆ ನೀಡಿದರು.

ಸರ್ಕಾರಿ ಕಚೇರಿಗಳಿಗೆ, ಹಾಸ್ಟೆಲ್ಗುಳಿಗೆ, ಪೊಲೀಸ್ ಠಾಣೆಗಳಿಗೆ, ಶಾಲೆಗಳಿಗೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಬೇಕು. ಉಸ್ತುವಾರಿ ಕಾರ್ಯದರ್ಶಿಗಳು ಜಿಲ್ಲೆಯ ಅಧಿಕಾರಿಗಳು- ಫಲಾನುಭವಿಗಳ ಜತೆ ಸತತ ಸಂಪರ್ಕದಲ್ಲಿರಬೇಕು. ಜನ ಸಂಪರ್ಕದ ಇಲಾಖೆಗಳಾದ ಕೃಷಿ, ಕಂದಾಯ, ಪೊಲೀಸ್ ಇಲಾಖೆಗಳ ಮೇಲೆ ನಿಗಾ ವಹಿಸಬೇಕು. ನಿಮ್ಮ ಅವಧಿಯಲ್ಲಿ ಆಡಳಿತಾತ್ಮಕವಾಗಿ ಆದ ಬೆಳವಣಿಗೆಗಳ ಬಗ್ಗೆ ಹಾಗೂ ಉತ್ತಮ ಅಭ್ಯಾಸಗಳನ್ನು ಅನುಸರಿಸಿದ ಬಗ್ಗೆ ವರದಿ ನೀಡುವಂತೆ ಸೂಚನೆ ನೀಡಿದರು.

ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗ್ಯಾರಂಟಿ ಯೋಜನೆಗಳು ಬಡವರ ಕಾರ್ಯಕ್ರಮಗಳಾಗಿದ್ದು, ಯಾವುದೇ ಕಾರಣಕ್ಕೂ ನಿಲ್ಲಿಸುವುದಿಲ್ಲ. ಅವುಗಳನ್ನು ಖಂಡಿತ ಮುಂದುವರೆಸಲಾಗುವುದು ಎಂದರು.

ಅಂಗಡಿ ಮುಂಗಟ್ಟುಗಳ ನಾಮಫಲಕಗಳಲ್ಲಿ ಶೇ. 60 ರಷ್ಟು ಕನ್ನಡ ಬಳಕೆ ಕಡ್ಡಾಯ ಮಾಡಲು ಹೊರಡಿಸಿದ್ದ ಸುಗ್ರೀವಾಜ್ಞೆಗೆ ಅಂಕಿತ ಹಾಕಲು ಮಾನ್ಯ ರಾಜ್ಯಪಾಲರಿಗೆ ಕಳಿಸಲಾಗಿತ್ತು. ಆದರೆ ಸುಗ್ರೀವಾಜ್ಞೆಗೆ ರಾಜ್ಯಪಾಲರು ಅಂಕಿತ ಹಾಕುವ ಮುಂಚೆಯೇ ಅಧಿವೇಶನ ಪ್ರಾರಂಭವಾದ ಕಾರಣ ವಾಪಸ್ಸು ಕಳಿಸಿದ್ದಾರೆ. ವಿಧಾನ ಮಂಡಲ ಅಧಿವೇಶನದಲ್ಲಿ ಮಸೂದೆಯನ್ನು ಮಂಡಿಸಲಾಗುವುದು ಎಂದರು.

Leave a Reply