ನಟರಾಜ್ ಹುಳಿಯಾರ್ ಅವರಿಗೆ 2022ನೇ ಸಾಲಿನ ಪ್ರೊ.ಕಿ.ರಂ.ನಾಗರಾಜ ಸಂಸ್ಕೃತಿ ಪ್ರಶಸ್ತಿ

3 years ago

ಬೆಂಗಳೂರು: ಪ್ರಜ್ಞಾ ಪ್ರತಿಷ್ಠಾನ ವತಿಯಿಂದ ನೀಡಲಾಗುವ ಪ್ರತಿಷ್ಠಿತ ಪ್ರೊ.ಕಿ.ರಂ.ನಾಗರಾಜ ಸಂಸ್ಕೃತಿ ಪ್ರಶಸ್ತಿಯನ್ನು ಈ ಬಾರಿ ಅನುವಾದಕ, ಕತೆಗಾರ, ಕಾದಂಬರಿಕಾರ, ವಿಮರ್ಶಕ, ಸಂಶೋಧಕ, ಸಂಪಾದಕ ಪ್ರೊ.ನಟರಾಜ್ ಹುಳಿಯಾರ್ ಭಾಜನರಾಗಿದ್ದಾರೆ.

ನಟರಾಜ್ ಹುಳಿಯಾರ್ ಅವರು ಕವನ, ಕತೆ, ಕಾದಂಬರಿ, ಪತ್ರಿಕೋದ್ಯಮ, ಸಂಪಾದನೆ, ಸಂಶೋಧನೆ, ವಿಮರ್ಶೆ ಮತ್ತು ಅಧ್ಯಾಪನ ಮೊದಲಾದ ಕ್ಷೇತ್ರಗಳಲ್ಲಿ ಸಮರ್ಥ ಕೆಲಸ ನಿರ್ವಹಿಸಿದ ಬಹುಮುಖಿ ಪ್ರತಿಭೆ. ಲಂಕೇಶ್, ಪ್ರೊ.ಕಿ.ರಂ.ನಾಗರಾಜ ಮತ್ತು ಡಿ.ಆರ್.ನಾಗರಾಜ್ ಅವರ ಗರಡಿಯಲ್ಲಿ ಪಳಗಿದ ಇವರು ಅನೇಕ ಜ್ಞಾನಶಿಸ್ತುಗಳ ಕುರಿತು ಅಪಾರ ಜ್ಞಾನ ಸಂಪಾದಿಸಿದ್ದಾರೆ. ಕನ್ನಡ ಸೇರಿದಂತೆ ಸಮಕಾಲೀನ  ಸಾಹಿತ್ಯ, ಗಾಂಧಿ, ಅಂಬೇಡ್ಕರ್,ಲೋಹಿಯಾ ಚಿಂತನೆಗಳ ಕೊಂಡಿಗಳನ್ನು ಬೆಸೆಯುವ ಮಹತ್ವದ ಚಿಂತಕರು. ಭಾರತೀಯ ಕಪ್ಪು ಸಾಹಿತ್ಯ, ಜಗತ್ತಿನ ಕಪ್ಪು ಸಾಹಿತ್ಯ, ಸಮಾಜ, ರಾಜಕಾರಣ ಮತ್ತು ಸಂಸ್ಕೃತಿ ವಿಮರ್ಶೆ ಇವರ ಕೆಲವು ಆಸಕ್ತ ಕ್ಷೇತ್ರಗಳು. ಎಂ.ಎ., ಎಂ.ಫಿಲ್., ಮತ್ತು ಪಿ.ಎಚ್.ಡಿ., ವಿದ್ಯಾರ್ಥಿಗಳಿಗೆ ಇವರ ಅಧ್ಯಯನ ಅಪಾರ ಶಿಸ್ತನ್ನು ಒದಗಿಸಿದೆ. ಪುಸ್ತಕಗಳ ಜೊತೆಗೆ ಜೀತ ಮಾಡದೆ ಸಂವಾದ ಮಾಡುವುದು ಹೇಗೆ ಎಂಬುದನ್ನು ಇವರ ಮಾತು, ಬರಹ, ಅಧ್ಯಾಪನ ಕಲಿಸಿಕೊಡುತ್ತವೆ. ಸಮಾಜವಾದಿ ಚಿಂತನೆಯನ್ನು ಮೈಗೂಡಿಸಿಕೊಂಡಿರುವ ಇವರ ವಿಶಿಷ್ಟ ಆಲೋಚನಾ ಕ್ರಮ ಅವರ ಕವಿತೆ, ಕತೆ, ಕಾದಂಬರಿ, ನಾಟಕ, ವಿಮರ್ಶಾ ಲೇಖನಗಳು, ಅಂಕಣ ಬರಹಗಳು ಮತ್ತು ಭಾಷಣಗಳಲ್ಲಿ ವ್ಯಕ್ತವಾಗುತ್ತವೆ. ಅವರು ಸಾಹಿತ್ಯ, ಪತ್ರಿಕೋದ್ಯಮ, ಸಂಪಾದನೆ, ವಿಮರ್ಶೆ, ಸಂಶೋಧನೆ ಕ್ಷೇತ್ರದಲ್ಲಿ ಸಲ್ಲಿಸಿರುವ ಸೇವೆಯನ್ನು ಗುರುತಿಸಿ 2022ನೇ ಸಾಲಿನ ಪ್ರೊ.ಕಿ.ರಂ.ನಾಗರಾಜ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುತ್ತಿದೆ ಎಂದು ಸಂಘಟಕರು ಹೇಳಿದ್ದಾರೆ.

ಈ ಸಾಲಿನ ಪ್ರಶಸ್ತಿ ಪ್ರಧಾನ ಕಾರ್ಯಕ್ರಮ ಡಿ. 25, 2022ರಂದು ಕಿ.ರಂ.ನಾಗರಾಜ ಅವರ ಜನ್ಮದಿನದಂದು ನಡೆಯಲಿದೆ.

Leave a Reply