ಖಾಸಗಿ ಎಫ್ ಎಸ್ ಎಲ್ ವರದಿ ಪರಿಗಣಿಸುವುದಿಲ್ಲ: ಡಾ.ಜಿ.ಪರಮೇಶ್ವರ್

2 years ago

ಬೆಂಗಳೂರು: ರಾಜ್ಯಸಭೆ ಚುನಾವಣೆಯ ಫಲಿತಾಂಶ ಪ್ರಕಟವಾದ ನಂತರ ವಿಧಾನಸೌಧದಲ್ಲಿ ನಡೆದ ವಿಜಯೋತ್ಸವ ಸಮಯದಲ್ಲಿ ಕೇಳಿ ಬಂದ ಪಾಕಿಸ್ತಾನ ಜಿಂದಾಬಾದ್ ಕುರಿತ ವಿಧಿ ವಿಜ್ಞಾನ ಪ್ರಯೋಗಾಲಯ (ಎಫ್ಎಸ್ಎಲ್) ವರದಿಯನ್ನು ಗಣನೆಗೆ ತೆಗೆದುಕೊಳ್ಳುವುದಿಲ್ಲ ಎಂದು ಗೃಹ ಸಚಿವ ಡಾ.ಜಿ. ಪರಮೇಶ್ವರ್ ಹೇಳಿದರು.

ಈ ವಿಷಯದ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸದ್ಯ ಸಾರ್ವಜನಿಕ ವಲಯದಲ್ಲಿ ಚರ್ಚೆಯಾಗುತ್ತಿರುವ ಎಫ್ ಎಸ್ ಎಲ್ ವರದಿ ಖಾಸಗಿ ಸಂಸ್ಥೆಯವರು ನೀಡಿರುವ ವರದಿಯಾಗಿದೆ. ಹೀಗಾಗಿ ಅದನ್ನು ಪರಿಗಣಿಸಲು ಸಾಧ್ಯವಿಲ್ಲ ಎಂದರು.

ಸರ್ಕಾರದ ಎಫ್ಎಸ್ಎಲ್, ಗೃಹ ಇಲಾಖೆಯ ಫಾರೆನ್ಸಿಕ್ ವರದಿಯಲ್ಲಿ ಪಾಕಿಸ್ತಾನ ಪರ ಘೋಷಣೆ ಕೂಗಿರುವುದು ಧೃಡವಾಗಿದ್ದರೆ ಅವರ ಮೇಲೆ ಕ್ರಮ ತೆಗೆದುಕೊಳ್ಳುತ್ತೇವೆ ಎಂದರು.

ಇನ್ನು ಎಫ್ಎಸ್ಎಲ್ ವರದಿ ಘಟನೆ ನಡೆದ ಮರುದಿನವೇ ಬಂದಿದೆ ಎಂಬ ಸಚಿವ ಪ್ರಿಯಾಂಕ್ ಖರ್ಗೆ ಹೇಳಿಕೆ ವಿಚಾರವಾಗಿ ಸ್ಪಷ್ಟನೆ ನೀಡಿದ ಅವರು, ಪ್ರಿಯಾಂಕ್ ಖರ್ಗೆ ಅವರು ಯಾವ ಆಧಾರದ ಮೇಲೆ ಹೇಳಿದ್ದಾರೆ ಎನ್ನುವುದು ಗೊತ್ತಿಲ್ಲ. ಇದು ನಮ್ಮ ಇಲಾಖೆಗೆ ಸಂಬಂಧಿಸಿದ್ದು. ನಮ್ಮ ವರದಿ ಬಂದ ಮೇಲೆ ಹೇಳುತ್ತೇನೆ. ಖಾಸಗಿಯವರಿಗೆ ಈ ರೀತಿ ವರದಿ ಕೊಡಲು ಅನುಮತಿ ಇದೆಯಾ? ಅವರಿಗೆ ಎನ್ಒಸಿ ಯಾರು ಕೊಟ್ಟಿದ್ದಾರೆ. ಎಲ್ಲವನ್ನು ಪರಿಶೀಲನೆ ಮಾಡುತ್ತೇನೆ ಎಂದರು.

ಪಾಕಿಸ್ತಾನ ಜಿಂದಾಬಾದ್ ಘೋಷಣೆ ಸಂಬಂಧ ಕೆಲವು ಖಾಸಗಿ ವಾಹಿನಿಗಳ ದೃಶ್ಯಾವಳಿಗಳು ವಿಧಾನಸೌಧದಲ್ಲಿ ಅಳವಡಿಸಿರುವ ಸಿಸಿ ಕ್ಯಾಮರಾಗಳ ದೃಶ್ಯಾವಳಿಗಳನ್ನು ಪಡೆದು ಬೆಂಗಳೂರು ಮತ್ತು ಪೂನಾದಲ್ಲಿರುವ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ರವಾನಿಸಿದ್ದೇವೆ. ಅವರಿಂದ ವಿಶ್ಲೇಷಣಾತ್ಮಕ ವರದಿ ಬಂದ ಕೂಡಲೇ ಸರ್ಕಾರ ತನ್ನ ಕ್ರಮ ಜರುಗಿಸಲಿದೆ ಎಂದರು.

ಎಫ್ಎಸ್ಎಲ್ನಿಂದ ಸಂಪೂರ್ಣ ವರದಿ ಬಂದ ನಂತರ ಬಹಿರಂಗಪಡಿಸಲಾಗುವುದು. ಆ ಬಗ್ಗೆ ಅನುಮಾನ ಬೇಡ. ವಿಡಿಯೋ ಪರಿಶೀಲಿಸಲು ಖಾಸಗಿ ಲ್ಯಾಬೊರೋಟರಿ ಇದೆಯೇ? ಖಾಸಗಿಯಾಗಿ ವಿಡಿಯೋ ಪರಿಶೀಲಿಸಲು ಯಾವ ಅನುಮತಿ ಇತ್ತೆ? ಖಾಸಗಿಯಾಗಿ ಪರಿಶೀಲನೆಗೆ ಒಳಪಡಿಸಬಹುದೇ? ಯಾರು ಎನ್ಓಸಿ ಕೊಟ್ಟಿದ್ದರು? ಆರೋಪಿತ ವಿಡಿಯೋಗೆ ಸಂಬಂಧಿಸಿದ ವಿಚಾರ ಬಹಿರಂಗಗೊಳಿಸಲು ಅಧಿಕಾರವಿದೆಯೇ? ಎಂಬ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದರು.

Leave a Reply