ಬಸ್ ದರ ಇಳಿಸಲು ಐಕ್ಯ ಪ್ರತಿಭಟನೆ

5 years ago

ಮಂಗಳೂರು: ಏರಿಸಿದ ಬಸ್ ಪ್ರಯಾಣ ದರವನ್ನು ಕೂಡಲೇ ತಡೆಹಿಡಿದು, ಸಾರಿಗೆ ಪ್ರಾಧಿಕಾರದ ಸಭೆ ಕರೆಯಲು ಒತ್ತಾಯಿಸಿ ಐಕ್ಯ ಪ್ರತಿಭಟನೆ ನಡೆಯಿತು.

ಖಾಸಗೀ ಬಸ್ ಪ್ರಯಾಣ ದರದ ವಿಪರೀತ ಏರಿಕೆಯನ್ನು ವಿರೋಧಿಸಿ, ಜಿಲ್ಲಾಡಳಿತದ ಏಕಪಕ್ಷೀಯ ನಿರ್ಧಾರ ಖಂಡಿಸಿ, ಏರಿಸಿದ ಬಸ್ ಪ್ರಯಾಣ ದರವನ್ನು ಕೂಡಲೇ ತಡೆಹಿಡಿದು, ಸಾರಿಗೆ ಪ್ರಾಧಿಕಾರದ ಸಭೆ ಕರೆಯಲು ಒತ್ತಾಯಿಸಿ ದ.ಕ.ಜಿಲ್ಲೆಯ ಜಾತ್ಯತೀತ ಪಕ್ಷಗಳ ಹಾಗೂ ಸಮಾನ ಮನಸ್ಕ ಸಂಘಟನೆಗಳ ಒಕ್ಕೂಟದ ನೇತೃತ್ವದಲ್ಲಿ ಮಂಗಳೂರು ನಗರದ ಕ್ಲಾಕ್ ಟವರ್ ಬಳಿ ಪ್ರತಿಭಟನೆ ನಡೆಸಲಾಯಿತು.

ನೂರಾರು ಸಂಖ್ಯೆಯಲ್ಲಿ ಸೇರಿದ್ದ ವಿವಿಧ ಪಕ್ಷಗಳ ಹಾಗೂ ಸಂಘಟನೆಗಳ ಕಾರ್ಯಕರ್ತರು, ಬಸ್ ಮಾಲೀಕರ ವರ್ತನೆ ಹಾಗೂ ಜನವಿರೋಧಿಯಾಗಿ ವರ್ತಿಸುತ್ತಿರುವ ಜಿಲ್ಲಾಡಳಿತದ ಹಾಗೂ ಜನಪ್ರತಿನಿಧಿಗಳ ವಿರುದ್ಧ ಘೋಷಣೆಗಳನ್ನು ಕೂಗುತ್ತಾ ಆಕ್ರೋಶವನ್ನು ವ್ಯಕ್ತಪಡಿಸಿದರು.

CPIM ದ.ಕ.ಜಿಲ್ಲಾ ಕಾರ್ಯದರ್ಶಿ ವಸಂತ ಆಚಾರಿ ಮಾತನಾಡಿ, ಪೆಟ್ರೋಲಿಯಂ ಉತ್ಪನ್ನಗಳ ಹಾಗೂ ಜೀವನಾವಶ್ಯಕ ವಸ್ತುಗಳ ವಿಪರೀತ ಬೆಲೆಯೇರಿಕೆಯಿಂದಾಗಿ ಕಂಗೆಟ್ಟ ಜನಸಾಮಾನ್ಯರ ಬದುಕಿಗೆ ಬಸ್ ಪ್ರಯಾಣ ದರ ಏರಿಕೆಯು ಗಾಯದ ಮೇಲೆ ಬರೆ ಎಳೆದಂತಾಗಿದೆ. ಕೊರೋನಾ ಸಂಕಷ್ಟದ ಕಾಲಘಟ್ಟದಲ್ಲಿ ಉದ್ಯೋಗವಿಲ್ಲದೆ, ಆದಾಯವಿಲ್ಲದೆ ಪರಿತಪಿಸುತ್ತಿರುವ ದುಡಿಯುವ ಜನತೆಗೆ ಈ ಬಾರಿಯ ಪ್ರಯಾಣ ದರವನ್ನು ಅರಗಿಸಿಕೊಳ್ಳಲು ಸಾಧ್ಯವೇ ಇಲ್ಲ. ಇಂತಹ ಸಂದರ್ಭದಲ್ಲಿ ಜನಪರವಾಗಿ ಯೋಚಿಸಬೇಕಾದ ಜಿಲ್ಲಾಡಳಿತ ಬಸ್ ಮಾಲೀಕರ ಏಜೆಂಟರಂತೆ ವರ್ತಿಸಿರುವುದು ತೀರಾ ಖಂಡನೀಯ ಎಂದು ಜಿಲ್ಲಾಡಳಿತವನ್ನು ತರಾಟೆಗೆ ತೆಗೆದುಕೊಂಡರು.

ಕಾಂಗ್ರೆಸ್ ಜಿಲ್ಲಾ ವಕ್ತಾರ ಅಭಿಷೇಕ್ ಉಳ್ಳಾಲ್ ಮಾತನಾಡಿ, ಅವಿಭಜಿತ ದ.ಕ.ಜಿಲ್ಲೆಯ ಸಂಪ್ರದಾಯದಂತೆ ಸಾರಿಗೆ ಪ್ರಾಧಿಕಾರದ ಸಭೆ ಕರೆದು ಬಸ್ ಮಾಲೀಕರ ಹಾಗೂ ಸಾರ್ವಜನಿಕರ ಅಹವಾಲನ್ನು ಸ್ವೀಕರಿಸಿ ಬಳಿಕ ಬಸ್ ಪ್ರಯಾಣ ದರವನ್ನು ನಿಗದಿಪಡಿಸಬೇಕಾಗಿದ್ದ ಜಿಲ್ಲಾಡಳಿತ ಸಂಪೂರ್ಣವಾಗಿ ಬಸ್ ಮಾಲೀಕರ ಕೈವಶವಾಗಿದ್ದು, ತನ್ನ ಮನ ಬಂದಂತೆ ಜನರನ್ನು ದೋಚಲು ಅವಕಾಶ ಮಾಡಿಕೊಟ್ಟಿದೆ ಎಂದು ಆರೋಪಿಸಿದರು.

CPI ಜಿಲ್ಲಾ ನಾಯಕ ಸೀತಾರಾಮ ಬೇರಿಂಜ ಮಾತನಾಡಿ, ಈ ಹಿಂದೆ ಇದ್ದ ನಗರ ಹಾಗೂ ಗ್ರಾಮಾಂತರ ಸಾರಿಗೆಯನ್ನು ವಿಲೀನಗೊಳಿಸಿರುವುದು ಮಾತ್ರವಲ್ಲದೆ ಕನಿಷ್ಠ ದರ ನಿಗದಿಯಲ್ಲಿ, ಎರಡನೆಯ ಸ್ಟೇಜ್ ಅನ್ನು ತೆಗೆಯುವಲ್ಲಿ ಹಾಗೂ ಕಿ.ಮೀ.ನಲ್ಲೂ ಜನತೆಗೆ ಭಾರೀ ದೊಡ್ಡ ಮೋಸ ಎಸಗಲಾಗಿದೆ. ಪೆಟ್ರೋಲ್ – ಡೀಸೆಲ್‌ ಬೆಲೆ ಏರಿಕೆ ವಿರುದ್ಧ ಕನಿಷ್ಠ ತನ್ನ ಪ್ರತಿಭಟನೆಯನ್ನು ವ್ಯಕ್ತಪಡಿಸದ ಬಸ್ ಮಾಲೀಕರು ತಮ್ಮ ಸಂಕಷ್ಟವನ್ನು ಜನತೆಯ ಮೇಲೆ ಹೊರಿಸುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ CPIM ನಾಯಕ ಸುನಿಲ್ ಕುಮಾರ್ ಬಜಾಲ್, ಇಂತಹ ತೀವ್ರ ಸಂಕಷ್ಟದ ಕಾಲದಲ್ಲಿ ಸಂಸದರು, ಶಾಸಕರು ಸೇರಿದಂತೆ ಎಲ್ಲಾ ಜನಪ್ರತಿನಿಧಿಗಳು ದಿವ್ಯ ಮೌನ ವಹಿಸಿರುವುದು ತೀರಾ ಖಂಡನೀಯ ಎಂದು ಹೇಳುತ್ತಾ, ಬಸ್ ಪ್ರಯಾಣ ದರ ಇಳಿಕೆಯಾಗದಿದ್ದಲ್ಲಿ ಜಿಲ್ಲೆಯಾದ್ಯಂತ ತೀವ್ರ ರೀತಿಯ ಐಕ್ಯ ಹೋರಾಟ ನಡೆಸಬೇಕಾದೀತು ಎಂದು ಎಚ್ಚರಿಸಿದರು.

DYFI ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್, ದಲಿತ ಸಂಘಟನೆಯ ಹಿರಿಯ ನಾಯಕರಾದ ಎಂ.ದೇವದಾಸ್, JDS ನಾಯಕರಾದ ಸುಮತಿ ಎಸ್ ಹೆಗ್ಡೆ ಮಾತನಾಡಿ, ಏರಿಸಿದ ದರವನ್ನು ಕೂಡಲೇ ತಡೆಹಿಡಿದು, ಸಾರಿಗೆ ಪ್ರಾಧಿಕಾರದ ಸಭೆಯನ್ನು ಕರೆಯಬೇಕೆಂದು ಒತ್ತಾಯಿಸಿದರು.

Leave a Reply