ಸಚಿವ ಸ್ಥಾನ ತ್ಯಾಗ ಮಾಡಿ ಪಕ್ಷದ ಜವಾಬ್ದಾರಿ ವಹಿಸಿಕೊಳ್ಳಲು ಸಿದ್ಧರಾಗಿ: ಸಿದ್ದರಾಮಯ್ಯ

6 months ago

ಬೆಂಗಳೂರು: ಅಧಿಕಾರ ಹಸ್ತಾಂತರ ಹಾಗೂ ಸಂಪುಟ ಪುನರಚನೆ ವಿಚಾರ ರಾಜ್ಯ ಕಾಂಗ್ರೆಸ್ಸಿನಲ್ಲಿ ವ್ಯಾಪಕ ಚರ್ಚೆಗೆ ಗ್ರಾಸವಾಗಿರುವ ಬೆನ್ನೆಲ್ಲೇ ಸಿಎಂ ಸಿದ್ದರಾಮಯ್ಯ ಸಚಿವ ಸ್ಥಾನ ತ್ಯಾಗ ಮಾಡಬೇಕಾದ ಸಂದರ್ಭ ಬಂದಲ್ಲಿ, ಪಕ್ಷದ ಜವಾಬ್ದಾರಿ ವಹಿಸಿಕೊಳ್ಳಬೇಕಾಗುತ್ತದೆ ಎಂದು ಹೇಳಿದ್ದಾರೆ.

ಕಳೆದ ರಾತ್ರಿ ತಮ್ಮ ನಿವಾಸದಲ್ಲಿ ಮಂತ್ರಿಗಳಿಗೆ ಔತಣಕೂಟ ಏರ್ಪಡಿಸಿದ್ದ ಅವರು, ಮುಂಬರುವ ಸ್ಥಳೀಯ ಸಂಸ್ಥೆ ಚುನಾವಣೆಗಳು ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಹಲವಾರು ವಿಷಯಗಳ ಬಗ್ಗೆ ಚರ್ಚೆ ನಡೆಸಿದ್ದಾರೆ. 

ಉನ್ನತ ಮೂಲಗಳ ಪ್ರಕಾರ, ತಮ್ಮ ಸರ್ಕಾರ ಎರಡೂವರೆ ವರ್ಷ ಅಧಿಕಾರ ಅವಧಿ ಪೂರ್ಣಗೊಳಿಸಿದ ನಂತರ ಪೂರ್ಣ ಪ್ರಮಾಣದಲ್ಲಿ ಸಚಿವ ಸಂಪುಟ ರಚನೆ ಮಾಡಲು ಹೈಕಮಾಂಡ್ ಅನುಮತಿ ನೀಡಲಿದೆ. ಈ ವೇಳೆ ಕೆಲವು ಮಂತ್ರಿಗಳನ್ನು ಸಂಪುಟದಿಂದ ಕೈ ಬಿಡಲಾಗುವುದು. ಅಂತವರಿಗೆ ಪಕ್ಷದಲ್ಲಿ ಜವಾಬ್ದಾರಿ ನೀಡಲಾಗುವುದು ಎಂದು ಹೇಳಿದರು ಎಂದು ಪಕ್ಷದ ಉನ್ನತ ಮೂಲಗಳಿಂದ ತಿಳಿದುಬಂದಿದೆ.

ರಾಜ್ಯ ಸರ್ಕಾರ ಹಲವಾರು ಅಭಿವೃದ್ಧಿ ಯೋಜನೆಗಳನ್ನು ಕೈಗೊಂಡಿದೆ. ಆದರೆ ಅವುಗಳನ್ನು ಜನರಿಗೆ ತಿಳಿಸಿ ಸರ್ಕಾರದ ವರ್ಚಸ್ಸು ವೃದ್ಧಿಸುವ ಕೆಲಸದಲ್ಲಿ ಯಾವುದೇ ಮಂತ್ರಿಗಳು ನಿರತವಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದ ಅವರು, ಇನ್ನು ಮುಂದಾದರು ತಮ್ಮ ಕಾರ್ಯ ಶೈಲಿ ಬದಲಾಯಿಸಿಕೊಳ್ಳಿ ಎಂದು ಸಲಹೆ ಮಾಡಿರುವುದಾಗಿ ಉನ್ನತ ಮೂಲಗಳಿಂದ ತಿಳಿದುಬಂದಿದೆ.

ಕಾಂಗ್ರೆಸ್ ಶಾಸಕರಿರುವ ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ಅಭಿವೃದ್ಧಿ ಯೋಜನೆಗಳಿಗಾಗಿ 50 ಕೋಟಿ ರೂ. ಬಿಡುಗಡೆಯಾದರೂ ವಿವಿಧ ಕಾಮಗಾರಿಗಳ ಸರಿಯಾದ ಕಾರ್ಯಾದೇಶಗಳು ಆಗಿಲ್ಲ ಎಂಬ ದೂರುಗಳಿವೆ. ಶಾಸಕರು ಪದೇಪದೇ ಅಸಮಾಧಾನ ಹೊರಹಾಕುತ್ತಿದ್ದಾರೆ. ಹಾಗಾಗಿ, ಸಚಿವರು ತಮ್ಮ ಕಾರ್ಯವೈಖರಿ ಬದಲಿಸಿಕೊಳ್ಳಬೇಕು ಎಂದು ಸೂಚಿಸಿದರು ಎನ್ನಲಾಗಿದೆ. 

ಎಷ್ಟೋ ಶಾಸಕರು ತಮ್ಮನ್ನು ನೇರವಾಗಿ ಭೇಟಿಯಾಗಿ ನಿಮ್ಮ ನಡೆಯ ಬಗ್ಗೆ ಬೇಸರ ಹೊರಹಾಕುತ್ತಿದ್ದಾರೆ. ಇನ್ನಾದರೂ ನಿಮ್ಮ ನಡೆ ಬದಲಾಯಿಸಿಕೊಳ್ಳಬೇಕು. ಶಾಸಕರಿಗೇ ಸ್ಪಂದಿಸದಿದ್ದರೆ ಹೇಗೆ? ಎಂದು ಖಾರವಾಗಿ ಕೇಳಿದರು ಎಂದು ಮೂಲಗಳು ತಿಳಿಸಿವೆ.

ಡಿಸೆಂಬರ್ ವೇಳೆಗೆ ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಸೇರಿದಂತೆ ಹಲವು ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆಯಲಿದೆ. ಈಗಿನಿಂದಲೇ ಇದಕ್ಕೆ ತಯಾರಿ ನಡೆಸಬೇಕು. ಶಾಸಕರು ಸೇರಿದಂತೆ ಪಕ್ಷದ ಎಲ್ಲ ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಒಗ್ಗಟ್ಟಿನಿಂದ ಮುಂದುವರೆಯಬೇಕು ಎಂದು ಸಲಹೆ ಮಾಡಿರುವುದಾಗಿ ಗೊತ್ತಾಗಿದೆ. 

ವಿಪಕ್ಷಗಳು ಸರ್ಕಾರದ ವಿರುದ್ಧ ಮನಬಂದಂತೆ ಹೇಳಿಕೆ ನೀಡುತ್ತಿವೆ. ಅದಕ್ಕೆ ಯಾವುದೇ ಮಂತ್ರಿಗಳು ತಿರುಗೇಟು ನೀಡುತ್ತಿಲ್ಲ. ಮುಖ್ಯಮಂತ್ರಿ ಸೇರಿದಂತೆ ಕೆಲವೇ ನಾಯಕರು ಮಾತ್ರ ಅವರಿಗೆ ಉತ್ತರ ಹೇಳುವ ಪರಿಸ್ಥಿತಿ ಬಂದೊದಗಿದೆ. ಇನ್ನು ಮುಂದಾದರೂ ವಿಪಕ್ಷಗಳ ಟೀಕೆಗಳನ್ನು ಸಮರ್ಥವಾಗಿ ಎದುರಿಸಬೇಕು ಎಂದು ಸೂಚನೆ ನೀಡಿದರು.

ಬಿಹಾರ ವಿಧಾನಸಭೆ ಚುನಾವಣೆ ಕಾಂಗ್ರೆಸ್ ಪಕ್ಷಕ್ಕೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ಹೀಗಾಗಿ ಹೈಕಮಾಂಡ್ ಸಚಿವರಿಂದ ದೊಡ್ಡ ಜವಾಬ್ದಾರಿ ನಿರೀಕ್ಷಿಸುತ್ತಿದ್ದು, ಕೆಲವರಿಗೆ ಬಿಹಾರದ ಕೆಲವು ಜಿಲ್ಲೆಗಳ ಉಸ್ತುವಾರಿ ನೀಡಲಾಗುವುದು. ಅದನ್ನು ನಿಭಾಯಿಸಬೇಕು ಎಂದು ಹೇಳಿರುವುದಾಗಿ ಗೊತ್ತಾಗಿದೆ.

Leave a Reply