ದೆಹಲಿ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳೆದ ಕೆಲವು ತಿಂಗಳುಗಳ ಹಿಂದೆ ನಡೆದಿದ್ದ ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣದ ತನಿಖೆ ಪೂರ್ಣಗೊಳಿಸಿರುವ ರಾಷ್ಟ್ರೀಯ ತನಿಖಾ ಆಯೋಗ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ವಿರುದ್ಧ ಆರೋಪ ಪಟ್ಟಿ ಸಲ್ಲಿಸಿದೆ.
ದೆಹಲಿಯ ವಿಶೇಷ ಎನ್ಐಎ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿರುವ ಎನ್ಐಎ ಇದರಲ್ಲಿ ಇಬ್ಬರು ಪಿಎಫ್‌ಐ ಕಾರ್ಯಕರ್ತರ ಹೆಸರನ್ನು ಉಲ್ಲೇಖಿಸಿದೆ.
ಪಿ ಎಫ್ ಐ ಕಾರ್ಯಕರ್ತರಾದ ಎಂ.ಎಚ್. ತುಫೈಲ್ ಹಾಗೂ ಮೊಹಮ್ಮದ್ ಜುಬೇರ್ ಎಂಬುವರ ವಿರುದ್ಧ ಭಾರತೀಯ ದಂಡ ಸಂಹಿತೆಯ ವಿವಿಧ ಸೆಕ್ಷನ್‌ಗಳು ಹಾಗೂ ಅಕ್ರಮ ಚಟುವಟಿಕೆಗಳ ತಡೆ ಕಾಯ್ದೆಯ ಪ್ರಕಾರ ವಿಶೇಷ ಕೋರ್ಟ್‌ನಲ್ಲಿ ಆರೋಪಪಟ್ಟಿ ದಾಖಲಿಸಲಾಗಿದೆ.
ಹತ್ಯೆ ನಡೆದ ನಂತರ ಪರಾರಿಯಾಗಿದ್ದ ತುಫೈಲ್‌ನನ್ನು ಇತ್ತೀಚೆಗೆ ಬೆಂಗಳೂರಿನಲ್ಲಿ ಬಂಧಿಸಲಾಗಿತ್ತು. ಈ ಪ್ರಕರಣದಲ್ಲಿ ಇದರೊಂದಿಗೆ ಈವರೆಗೆ 21 ಜನರ ವಿರುದ್ಧ ಆರೋಪಪಟ್ಟಿದಾಖಲಿಸಿದಂತಾಗಿದೆ ಎಂದು ಎನ್‌ಐಎ ವಕ್ತಾರರು ಹೇಳಿದ್ದಾರೆ.
ಕಳೆದ ವರ್ಷ ಜು.26ರಂದು ಸುಳ್ಯ ತಾಲೂಕಿನ ಬೆಳ್ಳಾರೆಯಲ್ಲಿ ನೆಟ್ಟಾರು ಹತ್ಯೆ ನಡೆದಿತ್ತು. ಇದು ಪಿಎಫ್‌ಐ ನ ಉಗ್ರವಾದಿ ಅಜೆಂಡಾದ ಭಾಗವಾಗಿತ್ತು ಎಂದು ಆರೋಪಿಸಲಾಗಿತ್ತು. ಈ ಹಿನ್ನಲೆಯಲ್ಲಿ ಪ್ರಕರಣವನ್ನು ರಾಷ್ಟ್ರೀಯ ತನಿಖಾ ದಳಕ್ಕೆ ವಹಿಸಲಾಗಿತ್ತು ತನಿಖೆ ಕೈಗೊಂಡ ಎನ್ಐಎ ತಂಡ ಹಲವು ಆಘಾತಕಾರಿ ಅಂಶಗಳನ್ನು ತನಿಖೆಯಲ್ಲಿ ಬಯಲಿಗೆಳದಿತ್ತು.
ಇದೀಗ ಕೋರ್ಟ್ ಗೆ ಸಲ್ಲಿಸಿರುವ ಆರೋಪ ಪಟ್ಟಿಯಲ್ಲಿ ಕೊಡಗು ಜಿಲ್ಲೆಯ ತುಫೈಲ್, ತನ್ನ ಜಿಲ್ಲೆಯ ಪಿಎಫ್‌ಐನ ‘ಸೇವಾ ತಂಡ’ದ ಉಸ್ತುವಾರಿ ಆಗಿದ್ದ ಹಾಗೂ ಸಶಸ್ತ್ರ ತರಬೇತಿ ನೀಡುವ ‘ಪಿಎಫ್‌ಐ ಮಾಸ್ಟರ್ ಟ್ರೇನರ್’ ಆಗಿದ್ದ. ದಕ್ಷಿಣ ಕನ್ನಡ ಜಿಲ್ಲೆಯ ಫ್ರೀಡಂ ಸಮುದಾಯ ಕೇಂದ್ರದಲ್ಲಿ ತರಬೇತಿ ಕೈಗೊಂಡಿದ್ದ ಎಂದು ಅವರು ಹೇಳಿದ್ದಾರೆ.
ಅಲ್ಲದೆ, ನೆಟ್ಟಾರು ಹತ್ಯೆ ಮಾಡಿದ 3 ಹಂತಕರಿಗೆ ಕೊಡಗು, ಮೈಸೂರು ಹಾಗೂ ತಮಿಳುನಾಡಿನ ಈರೋಡ್‌ನಲ್ಲಿ ಆಶ್ರಯ ನೀಡಿದ್ದ ಎಂದು ಉಲ್ಲೇಖಿಸಿದೆ.
ಜುಬೇರ್ ಪಾತ್ರವೇನು: ಇನ್ನು ಜುಬೇರ್ ಪುತ್ತೂರು ಘಟಕದ ಪಿಎಫ್‌ಐ ಅಧ್ಯಕ್ಷನಾಗಿದ್ದ. ನೆಟ್ಟಾರು ಹತ್ಯೆಗೆ ಸಂಚು ರೂಪಿಸಿದ ಸಭೆಯಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದ. ಮಸೂದ್ ಎಂಬ ಇದೇ ಊರಿನ ಬಾಲಕನೊಬ್ಬನ ಹತ್ಯೆಗೆ ಪ್ರತೀಕಾರ ತೀರಿಸಿಕೊಳ್ಳುವ ಪ್ರಚೋದನಕಾರಿ ಭಾಷಣ ಮಾಡಿದ್ದ ಎಂದು ಆರೋಪ ಪಟ್ಟಿಯಲ್ಲಿ ವಿವರಿಸಿದೆ.




