ಮಂಗಳೂರು: ಬೆಳ್ಳಾರೆಯಲ್ಲಿ ನಡೆದ ಮಸೂದ್ ಹತ್ಯೆಗೆ ಪ್ರತೀಕಾರವಾಗಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್ಐ) ಸಂಚು ನಡೆಸಿ ಪ್ರವೀಣ್ ನೆಟ್ಟಾರು ಅವರ ಕೊಲೆ ನಡೆಸಿರುವುದು ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ತನಿಖೆಯಲ್ಲಿ ಸ್ಪಷ್ಟವಾಗಿದೆ.
ಮಸೂದ್ ಹತ್ಯೆ ಬಳಿಕ ಅದಕ್ಕೆ ಪ್ರತೀಕಾರವಾಗಿ ಮತ್ತೊಂದು ಕೊಲೆ ನಡೆಸಿ ಸಮಾಜದಲ್ಲಿ ಭಯ ಹುಟ್ಟಿಸುವ ಉದ್ದೇಶವನ್ನು ಪಿಎಫ್‌ಐ ಹೊಂದಿತ್ತು. ಕೆಲವೇ ದಿನಗಳಲ್ಲಿ ಪಿಎಫ್‌ಐ ನಾಯಕರು ಮತ್ತು ಕಾರ್ಯಕರ್ತರು ಸಂಚು ರೂಪಿಸಿ ಪ್ರವೀಣ್ ನೆಟ್ಟಾರು ಅವರನ್ನು ಗುರಿಯಾಗಿಸಿಕೊಂಡು ಈ ಸಂಬಂಧ ಎರಡು ದಿನಗಳ ಹಿಂದೆ ಬಂಧನಕ್ಕೀಡಾದ ಶಹೀದ್‌ನ ಮನೆಯಲ್ಲಿ ಸಭೆ ನಡೆಸಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಸಭೆಯಲ್ಲಿ ಪ್ರವೀಣ್ ನೆಟ್ಟಾರು ಅವರನ್ನು ಸಂಚು ರೂಪಿಸಿ ಕೊಲೆಗೈದು ಪ್ರತೀಕಾರ ತೀರಿಸಿಕೊಳ್ಳಲು ನಿರ್ಧಾರ ಮಾಡಿರುವುದು ತನಿಖೆಯಲ್ಲಿ ಕಂಡುಬಂದಿದೆ ಎಂದು ಮೂಲಗಳು ತಿಳಿಸಿವೆ.
ಈ ಮಧ್ಯೆ ಪ್ರವೀಣ್ ನೆಟ್ಟಾರು ಕೊಲೆ ಸಂಬಂಧಿಸಿದಂತೆ ಶಹೀದ್ ಬೆಳ್ಳಾರೆ ಬಂಧನದೊಂದಿಗೆ ಪ್ರಕರಣದಲ್ಲಿ ಬಂಧಿತರ ಸಂಖ್ಯೆ 14ಕ್ಕೇರಿದೆ. ಈತನ ಮೇಲೆ ಐಪಿಸಿ ಸೆಕ್ಷನ್ 120ಬಿ, 302, 34 ಮತ್ತು ಯುಎ (ಪಿ) ಕಲಂ 16 ಮತ್ತು 18ರ ಪ್ರಕಾರ ಪ್ರಕರಣ ದಾಖಲಿಸಲಾಗಿದೆ.
ಶಹೀದ್‌ನ ಮನೆಯಿಂದ ಪ್ರಕರಣಕ್ಕೆ ಪೂರಕವಾದ ದಾಖಲೆಗಳು, ಸಾಕ್ಷ್ಯಗಳನ್ನು ಎನ್‌ಐಎ ಅಧಿಕಾರಿಗಳು ಸಂಗ್ರಹಿಸಿದ್ದಾರೆ.
ಕಳೆದ ಜು.26ರಂದು ನಡೆದ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣವನ್ನು ಎನ್‌ಐಎಗೆ ವಹಿಸಿದ ಆರಂಭದಲ್ಲೇ 10 ಮಂದಿಯನ್ನು ಬಂಧಿಸಲಾಗಿತ್ತು. ಬಳಿಕ ಐವರು ಆರೋಪಿಗಳನ್ನು ಬಂಧಿಸಿದೆ. ಪ್ರಕರಣದ ತನಿಖೆ ಇನ್ನೂ ಮುಂದುವರಿದಿದ್ದು, ಇನ್ನಷ್ಟು ಮಂದಿಯನ್ನು ಬಂಧಿಸುವ ಸಾಧ್ಯತೆಯಿದೆ.




