ಬೆಂಗಳೂರು: ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ, ಕನ್ನಡ ಸಂಘವು 67ನೇ ಕನ್ನಡ ರಾಜ್ಯೋತ್ಸವ ಅಂಗವಾಗಿ ಕಾವೇರಿಭವನ ಸಂಭಾಗಣದಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ನಾಡಿನ ಪ್ರತಿಭೆಗಳು ಮತ್ತು ನಿಗಮದ ಪ್ರತಿಭೆಗಳ ಪುರಸ್ಕಾರವನ್ನು ಆಯೋಜಿಸಿತ್ತು.
ಅಂತರ ರಾಷ್ಟ್ರೀಯ ಮಕ್ಕಳ ತಜ್ಞೆ ಡಾ|| ವಿಜಯಲಕ್ಷ್ಮಿ ಬಾಳೆಕುಂದ್ರಿ ಅವರನ್ನು ಕ.ವಿ.ಪ್ರ.ನಿ.ನಿ ಯ ವ್ಯವಸ್ಥಾಪಕ ನಿರ್ದೇಶಕರು ಹಾಗೂ ಕನ್ನಡ ಸಂಸ್ಕೃತಿ ಇಲಾಖೆಯ ಕಾರ್ಯದರ್ಶಿ ಡಾ|| ಎನ್. ಮಂಜುಳ ಗೌರವಿಸಿದರು.
ಸಮಾರಂಭದಲ್ಲಿ ಕ.ವಿ.ಪ್ರ.ನಿ.ನಿಯ ಮಹೇಶ್ ಕರ್ಜಗಿ, ನಿರ್ದೇಶಕರು (ಆ ಮತ್ತು ಮಾ.ಸಂ). ಜಿ.ಆರ್. ಚಂದ್ರಶೇಖರಯ್ಯ, ನಿರ್ದೇಶಕರು (ಪ್ರಸರಣ), ಸಿದ್ದಲಿಂಗಪ್ಪ ತೇಲಿ, ನಿರ್ದೇಶಕರು (ಹಣಕಾಸು), ಕನ್ನಡ ಸಂಘ ಕಾರ್ಯದರ್ಶಿ ಹಾಗೂ ರಂಗತಜ್ಞ ಡಾ.ಎ.ಆರ್.ಗೋವಿಂದಸ್ವಾಮಿ ಹಾಗೂ ಕೆ. ಶಿವಣ್ಣ, ಅಧ್ಯಕ್ಷರು, ಕವಿಮಂ ಇಂಜಿನಿಯರುಗಳ ಸಂಘ ಹಾಗೂ ನಿರ್ದೇಶಕರು, ಆರ್.ಹೆಚ್.ಲಕ್ಷ್ಮಿಪತಿ ಅಧ್ಯಕ್ಷರು, ಕವಿಪ್ರನಿ ನೌಕರರ ಸಂಘ ಹಾಗೂ ನಿರ್ದೇಶಕರು, ಮುಂತಾದವರು ಭಾಗವಹಿಸಿದ್ದರು.
ಇದೇ ಸಂದರ್ಭದಲ್ಲಿ ಹಾಸ್ಯ ಕಲಾವಿದ ರಿಚರ್ಡ್ ಲೂಯಿಸ್ ಮತ್ತು ತಂಡದವರಿಂದ “ನಗೆ ಹಬ್ಬ” ಹಾಗೂ ಕವಿಪ್ರನಿನಿ ಕನ್ನಡ ಸಂಘದ ಕಲಾವಿದರಿಂದ ರಂಗತಜ್ಞ ಡಾ. ಎ.ಆರ್. ಗೋವಿಂದಸ್ವಾಮಿ ನಿರ್ದೇಶನದಲ್ಲಿ “ಕೃಷ್ಣ ಸಂಧಾನ” ನಾಟಕ ಪ್ರಯೋಗಿಸಲಾಯಿತು.

ರಾಜ್ಯೋತ್ಸವ ಸಂದೇಶದಲ್ಲಿ ಡಾ||ಎನ್. ಮಂಜುಳ ಮಾತನಾಡಿ, ಕ.ವಿ.ಪ್ರ.ನಿ.ನಿ. ಕನ್ನಡ ಸಂಘಕ್ಕೆ ಸುಮಾರು 4 ದಶಕಗಳ ಇತಿಹಾಸವಿದ್ದು, ಈ ವೇದಿಕೆಗೆ ರಾಷ್ಟ್ರ ಕವಿಗಳಾದ ಕುವೆಂಪು, ಜಿ.ಎಸ್.ಶಿವರುದ್ರಪ್ಪ, ಡಾ.ಬೇಂದ್ರೆ ಮುಂತಾದ ಸಾಹಿತಿಗಳ ಜೊತೆಗೆ ಇತ್ತೀಚಿನ ಬಿ. ಜಯಶ್ರೀ, ಹೃದಯ ತಜ್ಞೆ ಡಾ|| ವಿಜಯಲಕ್ಷ್ಮಿ ಬಾಳೆಕುಂದ್ರಿ ಯವರಂತಹ ನೂರಾರು ಸಾಹಿತಿಗಳು, ಕಲಾವಿದರು, ತಜ್ಞರು, ಕ್ರೀಡಾಪಟುಗಳು, ಚಿಂತಕರು ಮುಂತಾದವರು ಭಾಗವಹಿಸಿರುವುದು ವಿಶೇಷ ಎಂದರು.
ನಾನು ಪ್ರಸ್ತುತ ಬೇರೆ ಬೇರೆ ಇಲಾಖೆಯಲ್ಲಿ ಕೆಲಸ ನಿರ್ವಹಿಸುವಾಗ ಗಮನಿಸಿದಂತೆ, ಹೇಳಿದ ಕೆಲಸವನ್ನು ಆ ಕ್ಷಣಕೆ ನಿರ್ವಹಿಸುವ, ಅತ್ಯಂತ ಕ್ರಿಯಾತ್ಮಾಕವಾಗಿ ಮಾಡುವ ಕ.ವಿ.ಪ್ರ.ನಿ.ನಿ ಯ ಉದ್ಯೋಗಿಗಳು ಇತರೆ ಇಲಾಖೆಗಳಿಗೆ ಸದಾ ಮಾದರಿ ಎನ್ನುತ್ತೇನೆ. ಕನ್ನಡ ಸಂಘವು ಪ್ರತಿ ವರ್ಷ ಕ್ರೀಯಾತ್ಮಕವಾದ ಸಾಂಸ್ಕೃತಿಕ, ಸಾಹಿತ್ಯಿಕ ಕಾರ್ಯಕ್ರಮಗಳನ್ನು ಗುಣತ್ಮಾಕವಾಗಿ ಆಯೋಜಿಸುತ್ತಿರುವುದು ಹೆಮ್ಮ ಎನಿಸುತ್ತದೆ ಎಂದರು.
ಡಾ|| ವಿಜಯಲಕ್ಷ್ಮಿ ಬಾಳೆಕುಂದ್ರಿ ಸನ್ಮಾನ ಸ್ವೀಕರಿಸಿ, ಮಾತನಾಡಿ ಕನ್ನಡ ನಾಡಿನ ಇತಿಹಾಸದಲ್ಲಿ ರಾಜ ಮಹಾರಾಜರೇ ಕನ್ನಡಕ್ಕೆ ಒತ್ತು ನೀಡಿದ್ದರು. ಆದರೆ ಇಂದಿನ ಆಡಳಿತದಲ್ಲಿ ಅದು ಕಂಡು ಬರುವುದಿಲ್ಲ, ನಾನು ವೈದ್ಯಕೀಯ ಪಠ್ಯವನ್ನು ಕನ್ನಡಕ್ಕೆ ತರ್ಜುಮೆ ಮಾಡಿ ಬೋಧಿಸುತ್ತೇನೆ. ಜೊತೆಗೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಸಹ ಕೆಲಸವನ್ನು ನಿರ್ವಹಿಸುತ್ತೇನೆ. ಇದು ಕನ್ನಡ ಕೊಟ್ಟ ಪಾಂಡಿತ್ಯ. ಪೋಷಕರು ತಮ್ಮ ಮಕ್ಕಳಿಗೆ ಕನ್ನಡ ಕಲಿಸುವುದು ಅಧ್ಯತೆ ಆಗಬೇಕೆಂದು ಎಂದರು.




