ಬೆಂಗಳೂರು: ಕೃಷ್ಣಾ, ಮಹದಾಯಿ ಕಾವೇರಿ ನದಿ ನೀರಿನ ಹಂಚಿಕೆ ವಿಚಾರವಾಗಿ ಚರ್ಚಿಸಲು ರಾಜ್ಯದ ನಿಯೋಗ ಭೇಟಿಗೆ ಅವಕಾಶ ನೀಡಲು ಕೋರಿ ಪ್ರಧಾನಮಂತ್ರಿಗಳ ಕಚೇರಿಗೆ ಪತ್ರ ಬರೆಯುತ್ತಲೇ ಇದ್ದೇವೆ. ಆದರೆ, ಇದಕ್ಕೆ ಇಲ್ಲಿಯವರೆಗೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಮುಂದಿನ ವಾರ ಅವಕಾಶ ಸಿಗಬಹುದೆಂದು ನಂಬಿದ್ದೇವೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಹದಾಯಿ ಯೋಜನೆ ಕಾಮಗಾರಿ ಆರಂಭಕ್ಕೆ ಎಲ್ಲಾ ಸಿದ್ದತೆ ಮಾಡಿಕೊಂಡಿದ್ದೇವೆ. ಆದರೆ, ಕೇಂದ್ರದ ಅನುಮತಿಯಿಲ್ಲದೆ ಕಾಮಗಾರಿ ಆರಂಭಿಸಲು ಸಾಧ್ಯವಿಲ್ಲ ಎಂದು ವಿಷಾದಿಸಿದರು.
ಅದೇ ರೀತಿಯಲ್ಲಿ ಕೃಷ್ಣಾ ಐತೀರ್ಪಿನ ಅಂತಿಮ ಅಧಿಸೂಚನೆ ಹೊರಡಿಸುವುದು ಬಾಕಿಯಿದೆ. ಅಧಿಸೂಚನೆ ಹೊರಬೀಳದ ಕಾರಣ ರಾಜ್ಯದ ಯೋಜನೆಗಳ ಕಾಮಗಾರಿ ಕೈಗೊಳ್ಳಲು ಸಾಧ್ಯವಿಲ್ಲ. ಕಾವೇರಿ ವಿಚಾರವಾಗಿ ನಮ್ಮ ಬಳಿ ಕೇವಲ ಕುಡಿಯಲು ಮತ್ತು ನಮ್ಮ ರೈತರ ಬೆಳೆಗಳಿಗೆ ಸಾಕಾಗುವಷ್ಟು ಮಾತ್ರ ನೀರಿದೆ. ಕಾವೇರಿ ಅಚ್ಚುಕಟ್ಟು ಪ್ರದೇಶದ ಅಣೆಕಟ್ಟುಗಳಲ್ಲಿ ನೀರಿಲ್ಲ ಎಂದು ಸ್ಪಷ್ಟವಾಗಿ ಕಾವೇರಿ ಪ್ರಾಧಿಕಾರಕ್ಕೆ ಮಾಹಿತಿ ನೀಡಿದ್ದೇವೆ. ಈ ಎಲ್ಲಾ ವಿಚಾರ ಪ್ರಧಾನಿ ಹಾಗೂ ಸಂಬಂಧಿಸಿದ ಸಚಿವರ ಗಮನಕ್ಕೆ ತರಬೇಕಿದೆ. ಇದಕ್ಕಾಗಿ ಸರ್ವಪಕ್ಷ ನಿಯೋಗ ಕೊಂಡೋಯ್ಯಬೇಕು ಆದರೆ ಇದಕ್ಕೆ ಸಮಯವೇ ನೀಡುತ್ತಿಲ್ಲ ಎಂದು ಹೇಳಿದರು.




