ನ್ಯಾ.ಸದಾಶಿವ ವರದಿ ಜಾರಿಗೆ ವಿರೋಧ

3 years ago

ಬೆಂಗಳೂರು: ಪರಿಶಿಷ್ಟ ಜಾತಿಗಳಲ್ಲಿ ಒಳ ಮೀಸಲಾತಿ ಕಲ್ಪಿಸುವ ನ್ಯಾಯಮೂರ್ತಿ ಸದಾಶಿವ ಆಯೋಗದ ವರದಿ ವಿರೋಧಿಸಿ, ಮೀಸಲಾತಿ ರಕ್ಷಣಾ ಒಕ್ಕೂಟ ಬೃಹತ್ ಪ್ರತಿಭಟನೆ ನಡೆಸಿತು.

ಸದಾಶಿವ ಆಯೋಗದ ವರದಿ ಬಡಜನರ ಮೀಸಲಾತಿಗೆ ವಿರೋಧಿ ಮಾತ್ರವಲ್ಲದೆ, ಅವೈಜ್ಞಾನಿಕವಾಗಿದೆ. ಹೀಗಾಗಿ, ಕೇಂದ್ರ ಹಾಗೂ ರಾಜ್ಯ ಸರಕಾರ ಯಾವುದೇ ಕಾರಣಕ್ಕೂ ವರದಿಯನ್ನು ಜಾರಿಗೊಳಿಸದೆ, ಈ ಕೂಡಲೇ ವರದಿಯನ್ನು ತಿರಸ್ಕಾರ ಮಾಡುವಂತೆ ಪ್ರತಿಭಟನಾಕಾರರು ಆಗ್ರಹಿಸಿದರು.

ಭೋವಿ ಮಠಾಧೀಶ ಇಮ್ಮಡಿ ಸಿದ್ಧರಾಮ ಸ್ವಾಮೀಜಿ, ಬಂಜಾರ ಸಮಾಜದ ಮಠಾಧೀಶರು, ಒಕ್ಕೂಟದ ಗೌರವಾಧ್ಯಕ್ಷ ಚಂದ್ರಣ್ಣ, ರಾಜ್ಯ ಪ್ರಧಾನ ಕಾರ್ಯ ಕಾರ್ಯದರ್ಶಿ ಆನಂದ ನೇತೃತ್ವದಲ್ಲಿ ವಿವಿಧ ಸಮದಾಯದ ಮುಖಂಡರು ಬೃಹತ್ ಕಾಲ್ನಡಿಗೆ ಜಾಥಾ ನಡೆಸಿದರು.

ಮೆಜೆಸ್ಟಿಕ್ ಬಳಿ ಜಮಾಯಿಸಿದ ಸಾವಿರಾರು ಮಂದಿ ಕಾಲ್ನಡಿಗೆ ಮೂಲಕ ಜಾಥಾ ನಡೆಸಿ ಫ್ರೀಡಂಪಾರ್ಕ್ ಮೈದಾನದಲ್ಲಿ ಸಮಾವೇಶಗೊಂಡರು. ಈ ವೇಳೆ ಮಾತನಾಡಿದ ಅಖಿಲ ಕರ್ನಾಟಕ ಕುಳುವ ಮಹಾಸಂಘ (ಕೊರಮ ಕೊರಚ ಕೊರವ ಸಮುದಾಯಗಳ ಒಕ್ಕೂಟ) ಅಧ್ಯಕ್ಷ ಶಿವಾನಂದ ಎಂ.ಭಜಂತ್ರಿ, ಸ್ವಾತಂತ್ರ್ಯ ಪೂರ್ವ ಮತ್ತು ಸ್ವಾತಂತ್ರೋತ್ತರದ ಮೊದಲ ಪರಿಶಿಷ್ಟ ಜಾತಿ ಮೀಸಲಾತಿ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ಕೆಲವು ಪರಿಶಿಷ್ಟ ಜಾತಿಗಳನ್ನು ಪಟ್ಟಿಯಿಂದ ಕೈಬಿಡುತ್ತಿರುವುದು ಕಾನೂನು ಬಾಹಿರ. ಈ ಕೂಡಲೇ ಸರ್ಕಾರ ತನ್ನ ನಿಲುವಿನಿಂದ ಹಿಂದೆ ಸರಿಯಬೇಕೆಂದು ಒತ್ತಾಯಿಸಿದರು.

ಅಲೆಮಾರಿ ಕೊರಮ ಕೊರಚ ಸೇರಿದಂತೆ ಹಲವಾರು ಜಾತಿಗಳ ಜನತೆ ತೀವ್ರ ಆತಂಕಕ್ಕೆ ಒಳಗಾಗಿದ್ದಾರೆ. ಹೀಗಾಗಿ ಸರ್ಕಾರ ಮೊದಲು ಪರಿಶಿಷ್ಟರ ಔದ್ಯೋಗಿಕ ಸ್ಥಿತಿಗತಿ ಮತ್ತು ಜನಾಂಗದ ವಸ್ತುನಿಷ್ಠ ಸ್ಥಿತಿಗತಿ ಕುರಿತು ಅಧ್ಯಯನ ಕೈಗೊಳ್ಳಬೇಕು. ಇನ್ನೂ, ಕೊರಮ, ಕೊರಚ ಹಾಗೂ ಬೋವಿ ಮತ್ತು ಲಂಬಾಣಿ ಸಮುದಾಯಗಳು ಆಯೋಗದ ವರದಿಯಿಂದ ಸಂಕಷ್ಟಕ್ಕೆ ಸಿಲುಕಲಿವೆ ಎಂದರು.

ಸರ್ಕಾರ ಆರ್ಥಿಕ, ಸಾಮಾಜಿಕ ಮತ್ತು ರಾಜಕೀಯವಾಗಿ ಬಲಾಢ್ಯರಾಗಿರುವವರನ್ನು ಓಲೈಸಲು ಮುಂದಾಗಿದೆ. ನಿಜವಾಗಿ ದೊರೆಯಬೇಕಾದ ಸಮುದಾಯಗಳಿಗೆ ಮೀಸಲಾತಿ ವಂಚಿಸುತ್ತಿದೆ. ಇದು ಸರಿಯಲ್ಲ ಎಂದರು.

ನ್ಯಾ.ಸದಾಶಿವ ಆಯೋಗದ ವರದಿ ಸಂವಿಧಾನದ ಆಶಯಗಳನ್ನು ಗಾಳಿಗೆ ತೂರಿರುವುದು ಸ್ಪಷ್ಟವಾಗಿದೆ. ಈ ಬಗ್ಗೆ ಸಾರ್ವಜನಿಕ ಚರ್ಚೆಗೆ ಅವಕಾಶ ನೀಡದೇ ಬಿಜೆಪಿ ಸರ್ಕಾರ ಏಕಪಕ್ಷೀಯವಾಗಿ ಕೇಂದ್ರಕ್ಕೆ ಶಿಫಾರಸ್ಸು ಮಾಡುವ ಪ್ರಯತ್ನದಲ್ಲಿ ತೊಡಗಿರುವುದು ಸರಿಯಲ್ಲ. ಪರಿಶಿಷ್ಟರಲ್ಲಿ ಒಳಮೀಸಲಿಗೆ ಕೇಂದ್ರ, ರಾಜ್ಯ ಸರ್ಕಾರ ಅಥವಾ ನ್ಯಾಯಾಲಯಕ್ಕಾಗಲೀ ಅವಕಾಶ ಇಲ್ಲ ಎಂದು ಉಲ್ಲೇಖಿಸಿದರು.

Leave a Reply