ಎಲ್ಲಾ ಸರ್ಕಾರಗಳು ರಾಜ್ಯದಲ್ಲಿ ಸ್ಥಳೀಯ ಸಂಸ್ಥೆಗಳಾದ ಪಂಚಾಯಿತಿಗಳು, ಸುರಸಭೆಗಳು, ನಗರಸಭೆಗಳು, ನಗರಪಾಲಿಕೆಗಳು, ಮಹಾನಗರ ಪಾಲಿಕೆ, ತಾಲ್ಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ ಇವುಗಳ ಚುನಾವಣೆಯನ್ನು ಕಾಲಕಾಲಕ್ಕೆ ಮಾಡಿದ ಉದಾಹರಣೆಗಳೇ ಇಲ್ಲ.
ಅಧಿಕಾರ ವೀಕೇಂದ್ರಿಕರಣ ಮಹಾತ್ಮ ಗಾಂಧೀಜಿಯವರು ಕಂಡಂತಹ ಕನಸು ಜನರ ಕೈಗೆ ಅಧಿಕಾರ ನೀಡುವ ಈ ಹಂತದ ಚುನಾವಣೆಗಳು ಕಾಲಕಾಲಕ್ಕೆ ನಡೆಸಬೇಕೆಂಬ ಆಸಕ್ತಿಯೂ ಯಾರಲ್ಲೂ ಇಲ್ಲ.
ಎಷ್ಟೋ ಪುರಸಭೆಗಳು, ನಗರಸಭೆಗಳು, ಪಂಚಾಯಿತಿಗಳು ಚುನಾವಣೆಗಳನ್ನು ನಡೆಸಿ ಅಧ್ಯಕ್ಷ, ಉಪಾಧ್ಯಾಕ್ಷರ ಮೀಸಲಾತಿ ಪಟ್ಟಿ ಪ್ರಕಟಿಸಿದೆ ಗೆದ್ದವರು ಅಧಿಕಾರವನ್ನು ಹಿಡಿಯಲೇ ಇಲ್ಲ.
ಇನ್ನು ಪ್ರತಿಯೊಂದು ಸಂದರ್ಭದಲ್ಲೂ ಸ್ಥಳೀಯ ಸಂಸ್ಥೆಗಳ ಅಧಿಕಾರದ ಅವಧಿ ಮುಗಿದ ನಂತರ ಕ್ಷೇತ್ರ ಪುನರ್ವಿಂಗಡಣೆ, ಮೀಸಲಾತಿ ಮುಂತಾದಂತಹ ನೆಪಗಳನ್ನು ತೆಗೆದುಕೊಂಡು ಹಲವಾರು ವರ್ಷಗಳ ಕಾಲ ಚುನಾವಣೆಯನ್ನು ಮುಂದೂಡತ್ತಲೇ ಇರುತ್ತಾರೆ. ಪದೇಪದೇ ಈ ವಿಚಾರದಲ್ಲಿ ನ್ಯಾಯಾಲಯಗಳಲ್ಲಿ ಸಾರ್ವಜನಿಕ ಅರ್ಜಿಗಳು ದಾಖಲಾಗುವುದರಿಂದ ವಾದ-ವಿವಾದಗಳೆಂದು ಒಂದಷ್ಟು ವರ್ಷಗಳೇ ಕಳೆಯುತ್ತದೆ.
ಯಾವುದೇ ಸರ್ಕಾರವು ಸಹ ನ್ಯಾಯಾಲಯದ ಆದೇಶಗಳು ಬಾರದೆ ಸ್ವಂತ ಇಚ್ಛೆಯಿಂದ ಸ್ಥಳೀಯ ಸಂಸ್ಥೆಯ ಚುನಾವಣೆಯನ್ನು ನಡೆಸುವುದೇ ಇಲ್ಲ. ಸಂವಿಧಾನದ 73 ಮತ್ತು 74ನೇ ತಿದ್ದುಪಡಿಗಳಾಗಿ ಆರು ತಿಂಗಳ ಅವಧಿಗಿಂತ ಹೆಚ್ಚು ಕಾಲ ಯಾವುದೇ ಸ್ಥಳೀಯ ಸಂಸ್ಥೆಗಳು ಆಡಳಿತಾಧಿಕಾರಿಯನ್ನು ಹೊಂದುವಂತಿಲ್ಲವೆಂಬ ಸ್ಪಷ್ಟವಾದ ಕಾನೂನು ಇದ್ದರೂ ಇದನ್ನು ಯಾರೂ ಪಾಲಿಸುತ್ತಿಲ್ಲ.
ಸರ್ಕಾರ ನಡೆಸುವ ಪ್ರತಿನಿಧಿಗಳಿಗೆ ಕಾಲಕಾಲಕ್ಕೆ ತಮ್ಮ ಚುನಾವಣೆಗಳು ವಿಧಾನಸಭೆ, ಲೋಕಸಭೆ, ವಿಧಾನಪರಿಷತ್ತು, ರಾಜ್ಯಸಭೆ ನಡೆಯಲೇಬೇಕು. ಆದರೆ ತಮ್ಮಂತೆ ಲಕ್ಷಾಂತರ ಮಂದಿ ಚುನಾಯಿತ ಪ್ರತಿನಿಧಿಗಳಾಗಲೂ ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಇದ್ದಾರೆಂಬ ಭಾವನೆಯೇ ತಿಳಿದಿರುವುದಿಲ್ಲ.
ಕೇಂದ್ರ ಸರ್ಕಾರಕ್ಕೆ ನಿಜಕ್ಕೂ ಸ್ಥಳೀಯ ಸಂಸ್ಥೆಗಳ ವಿಚಾರದಲ್ಲಿ ಬದ್ಧತೆ ಇದ್ದರೆ ಸಂಸತ್ತಿನಲ್ಲಿ ಮತ್ತೊಂದು ಮಸೂದೆಯನ್ನು ತಂದು ಕಾಲಕಾಲಕ್ಕೆ ಸ್ಥಳೀಯ ಸಂಸ್ಥೆ ಚುನಾವಣೆಗಳು ನಡೆಸದಿದ್ದರೆ ಅಂತಹ ಸರ್ಕಾರಗಳ ವಿರುದ್ಧ ಕ್ರಮ ಕೈಗೊಳ್ಳಲು ಅವಕಾಶವನ್ನು ನೀಡುವ ರೀತಿಯಲ್ಲಿ ಕಾನೂನನ್ನು ರೂಪಿಸಬೇಕು.
ಜೊತೆಗೆ ದೇಶದ ಸರ್ವೋಚ್ಛ ನ್ಯಾಯಾಲಯ ಎಲ್ಲಾ ರಾಜ್ಯಗಳಿಗೆ ಕಾಲಕಾಲಕ್ಕೆ ಸ್ಥಳೀಯ ಸಂಸ್ಥೆ ಚುನಾವಣೆ ನಡೆಸದಿದ್ದರೆ ಸಂಬಂಧಪಟ್ಟ ಅಧಿಕಾರಿಗಳು ಮತ್ತು ಸಚಿವರುಗಳನ್ನು ವಜಾ ಮಾಡುವ ಇಲ್ಲವೇ ಜೈಲಿಗಟ್ಟುವ ಎಚ್ಚರಿಕೆಯನ್ನು ನೀಡಿ ಸ್ಪಷ್ಟವಾದ ತೀರ್ಪನ್ನು ನೀಡಬೇಕು. ಇಲ್ಲದಿದ್ದರೆ ಸ್ಥಳೀಯ ಸಂಸ್ಥೆಯ ಚುನಾವಣೆಗಳು ಬೇಕಾಬಿಟ್ಟಿಯಾಗಿ ನಡೆಯುತ್ತದೆ, ಇದರ ಮಹತ್ವವು ಇಲ್ಲವಾಗುತ್ತದೆ ನಾಗರಿಕರು ತಮ್ಮ ಸೌಕರ್ಯ, ಸೌಲಭ್ಯಗಳಿಗೆ ಶಾಸಕರು ಮತ್ತು ಸಂಸದರನ್ನು ಅವಲಂಬಿಸಿ ಅವರುಗಳಿಂದ ಪಡೆದುಕೊಳ್ಳಲು ಸಾಧ್ಯವಾಗದೇ ಅವ್ಯವಸ್ಥೆಯ ನಡುವೆ ಬದುಕನ್ನು ಸಾಗಿಸಬೇಕಾಗುತ್ತದೆ.
– ಕೆ.ಎಸ್. ನಾಗರಾಜ್, ಬೆಂಗಳೂರು




