ಕೋವಿಡ್ ಲಸಿಕೆಗೂ ಹೃದಯಾಘಾತ ಪ್ರಕರಣಗಳಿಗೂ ಯಾವುದೇ ಸಂಬಂಧವಿಲ್ಲ: ಶರಣ ಪ್ರಕಾಶ್ ಪಾಟೀಲ್

11 months ago

ಬೆಂಗಳೂರು: ರಾಜ್ಯದಲ್ಲಿ ಈಗ ಹೆಚ್ಚಾಗುತ್ತಿರುವ ಹೃದಯಾಘಾತ ಪ್ರಕರಣಗಳ ಕುರಿತು ಜನ ಆತಂಕ ಪಡುವ ಅಗತ್ಯವಿಲ್ಲ. ವರ್ಷಕ್ಕೊಮ್ಮೆ ಆರೋಗ್ಯ ತಪಾಸಣೆ ಮಾಡಿಕೊಂಡು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವುದರಿಂದ ಇದನ್ನು ತಡೆಗಟ್ಟಬಹುದಾಗಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಶರಣಪ್ರಕಾಶ್ ಪಾಟೀಲ್ ತಿಳಿಸಿದ್ದಾರೆ.

ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರೊಂದಿಗೆ ಜಂಟಿ ಸುದ್ದಿಗೋಷ್ಠಿ ನಡೆಸಿದ ಅವರು, ಬದಲಾದ ಜೀವನ ಶೈಲಿ ಸೇರಿದಂತೆ ಹಲವು ಕಾರಣಗಳಿಂದ ಹೃದಯಘಾತ ಪ್ರಕರಣಗಳು ಹೆಚ್ಚುತ್ತಿವೆ. ಸರ್ಕಾರ ಈ ವಿಷಯದಲ್ಲಿ ಸೂಕ್ತ ಕ್ರಮಗಳನ್ನು ಕೈಗೊಳ್ಳುತ್ತಿದೆ. ಜನರು ಆತಂಕಪಡಬಾರದು ಎಂದರು.

ರಾಜ್ಯದಲ್ಲಿ ಏಕಾಏಕಿ ಹೃದಯಘಾತ ಪ್ರಕರಣಗಳು ಹೆಚ್ಚಳವಾಗಿಲ್ಲ.ಸರಾಸರಿ ಹೃದಯಾಘಾತದ ಪ್ರಕರಣಗಳು ಕಳೆದ ವರ್ಷದಷ್ಟೇ ಇದೆ ಎಂದರು. 

ಹಾಸನದಲ್ಲಿ ಹೃದಯಾಘಾತ ಪ್ರಕರಣ ಹೆಚ್ಚುತ್ತಿವೆ ಎನ್ನುವ ಸುದ್ದಿ ಕೇಳಿ ಜಯದೇವ ಆಸ್ಫತ್ರೆ ಸೇರಿದಂತೆ ಆನೇಕ ಆಸ್ಫತ್ರೆಗಳಲ್ಲಿ ರೋಗಿಗಳ ಸಂಖ್ಯೆ ಮತ್ತು ಮುಂಜಾಗ್ರತೆ ಕ್ರಮ ತೆಗೆದುಕೊಳ್ಳುವವರ ಸಂಖ್ಯೆಯೂ ಗಣನೀಯವಾಗಿ ಏರಿಕೆಯಾಗಿದೆ. ಇದರಿಂದ ವಿಚಿತ್ರ ಸನ್ನಿವೇಶ ಎದುರಾಗುತ್ತಿದೆ ಎಂದರು.

ಕೋವಿಡ್ ಲಸಿಕೆಗೂ ಹಾಸನದಲ್ಲಿ ಸಂಭವಿಸಿದ ಹೃದಯಾಘಾತ ಪ್ರಕರಣಗಳಿಗೂ ಯಾವುದೇ ಸಂಬಂಧವಿಲ್ಲ. ವ್ಯಾಕ್ಸಿನ್ ಬಗ್ಗೆ ಅನುಮಾನ ಬೇಡ.  ಹಾಸನ ಜಿಲ್ಲೆಯಲ್ಲಿ ಮಾತ್ರ ಪ್ರಕರಣ ಬೇರೆ ಆಗಿದೆ ಅನ್ನೋದು ತಪ್ಪು ಎಂದರು.

ಹೃದಯಾಘಾತದ ಆತಂಕ ಕೈಬಿಟ್ಟು ಉತ್ತಮ ಜೀವನಶೈಲಿ, ಅಗತ್ಯ ನಿದ್ರೆ ಮತ್ತು ದೈಹಿಕ ವ್ಯಾಯಾಮ ಮಾಡುವುದು ಅಗತ್ಯ. ಹೃದಯಾಘಾತದ ರೋಗ ಲಕ್ಷಣಗಳು ಇದ್ದರೆ ಮಾತ್ರ ಆಸ್ಪತ್ರೆಗೆ ಹೋಗಿ ತಪಾಸಣೆ ಮಾಡಿಸಿಕೊಳ್ಳಿ. ಸುಖಾಸುಮ್ಮನೆ ಹೋಗಬೇಡಿ ಎಂದರು.

ಕೋವಿಡ್‌ ನಂತರದ ಜೀವನ ಶೈಲಿಯಿಂದ ಡಯಾಬಿಟಿಸ್ , ಬಿಪಿ ಹೆಚ್ಚಾಗಿದೆ. ಆಹಾರ ಪದ್ದತಿ ಬದಲಾಗಿದೆ, ಒತ್ತಡ ಜಾಸ್ತಿ ಆಗಿದೆ. ಈ ಮಧ್ಯೆ ಯುವಕರಲ್ಲಿ ಯಾಕೆ ಸಾವು ಆಗ್ತಿದೆ ಅಂತ ಅಧ್ಯಯನ ಮಾಡುತ್ತಿದ್ದೇವೆ ಎಂದರು.

ಜನವರಿಯಲ್ಲಿ 178 ಜನ ಅಡ್ಮಿಟ್ ಆಗಿದ್ದರು. 11 ಜನ ಮೃತಪಟ್ಟಿದ್ದಾರೆ. ಫೆಬ್ರವರಿಯಲ್ಲಿ 181 ಜನರ ಪೈಕಿ 10 ಜನ, ಮಾರ್ಚ್‌ನಲ್ಲಿ 200 ಜನರಲ್ಲಿ 9 ಜನ ಹಾಗೂ ಬೆಂಗಳೂರಲ್ಲಿ 2165ರು ಆಸ್ಪತ್ರೆಯಲ್ಲಿ ದಾಖಲಾಗಿದ್ದು, ಈ ಪೈಕಿ 101  ಜನ ಮೃತಪಟ್ಟಿದ್ದಾರೆ ಎಂದರು.

ವರ್ಷಕ್ಕೆ ಒಂದು ಬಾರಿ ಹೃದಯ ತಪಾಸಣೆ  ಮಾಡಿಸಿದರೆ ಸಾಕು. ಆತಂಕದಿಂದ ಆಸ್ಪತ್ರೆಗೆ ಹೋಗೋದು ಬೇಡ ಎಂದು ಧೈರ್ಯ ಹೇಳಿದರು.

ಅರೋಗ್ಯ ಸಚಿವ ದಿನೇಶ್ ಗುಂಡೂರಾವ್ ಮಾತನಾಡಿ, ಮಕ್ಕಳಲ್ಲಿ ಸ್ಕ್ರೀನಿಂಗ್ ಮಾಡುವ ಆಗತ್ಯವಿಲ್ಲ. ಜನರಿಗೆ ಜಯದೇವ ಆಸ್ಪತ್ರೆಯಿಂದ ಅರಿವು ಮೂಡಿಸುವ ಕಾರ್ಯಕ್ರಮ ಆಯೋಜಿಸುತ್ತೇವೆ. ರಸ್ತೆ ಬದಿ ಆಹಾರ ಮತ್ತು ಆಹಾರ ತಯಾರಿಸುವ ವಿಧಾನದ ಬಗ್ಗೆ ಕಟ್ಟುನಿಟ್ಟಿನ ಕ್ರಮವಹಿಸುತ್ತಿದ್ದೇವೆ ಎಂದರು.

ಈ ಹಿಂದಿನ ಆಹಾರ ಪದ್ದತಿ ಮುಂದುವರಿಸಿ. ಯೋಗ ಅಭ್ಯಾಸ ಮಾಡಿದರೆ ತುಂಬಾ ಉತ್ತಮ ಎಂದರು.

Leave a Reply