ಯಾವ ತನಿಖೆಯೂ ಪರಿಣಾಮಕಾರಿಯಾದ ಅಂತ್ಯ ಕಾಣಲೇ ಇಲ್ಲ

3 years ago

ಕಳೆದ 4 ವರ್ಷಗಳ ಅವಧಿಯಲ್ಲಿ ಬಿ.ಜೆ.ಪಿ.ಯ ಆಡಳಿತದ ಈ ಸರ್ಕಾರದ ಈ ಅಡಿಯಲ್ಲಿ ಅನೇಕ ಆರೋಪಗಳು ಬಂದಿವೆ. ಇವುಗಳ ಬಗ್ಗೆ ತನಿಖೆಯನ್ನು ಆರಂಭಿಸಿದ ಸಂದರ್ಭದಲ್ಲಿ ಇದ್ದಂತಹ ಉತ್ಸಾಹ ಮತ್ತು ವೇಗ ದಿನ ಕಳೆದಂತೆ ಎಲ್ಲವೂ ಮಾಯವಾಗಿ ಜನರ ಮನಸ್ಸಿಂದ ಮರೆಯಾಗುತ್ತಿದ್ದಂತೆ ತನಿಖೆಯೂ ಹಳ್ಳ ಹಿಡಿದಿರುವುದಕ್ಕೆ ಸಾಕಷ್ಟು ಉದಾಹರಣೆಗಳಿವೆ.
ಡ್ರಗ್ಸ್ ವಿಚಾರದಲ್ಲಿ ನಟಿಯರಿಬ್ಬರ ಬಂಧನವಾಗಿ ಸೆರೆಮನೆ ವಾಸವನ್ನೂ ಅನುಭವಿಸಿ ಜಾಮೀನಿನ ಮೇಲೆ ಬಿಡುಗಡೆಯಾದರು. ಈ ಪ್ರಕರಣದಲ್ಲಿ ತನಿಖೆಯ ಸಂದರ್ಭದಲ್ಲಿ ಬರುತ್ತಿದ್ದಂತಹ ಹೇಳಿಕೆಗಳು ಮತ್ತು ಬಹಿರಂಗವಾಗುತ್ತಿದ್ದಂತಹ ಸುದ್ದಿಗಳನ್ನು ಗಮನಿಸಿದಾಗ ಸರ್ಕಾರ ರಾಜ್ಯದಲ್ಲಿ ಡಗ್ಸ್ ಮಾಫಿಯಾವನ್ನು ಸಂಪೂರ್ಣ ತೊಡೆದುಹಾಕುತ್ತದೇನೋ ಎನ್ನುವ ಭರವಸೆಯೂ ಮೂಡಿತ್ತು. ಆದರೆ, ದಿನ ಕಳೆದಂತೆ ಪ್ರಭಾವಿ ವ್ಯಕ್ತಿಗಳು ಮಧ್ಯ ಪವೇಶ ಮಾಡಿ ಅವರ ಕುಟುಂಬದ ಸದಸ್ಯರನ್ನು ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಸರ್ಕಾರದ ಮೇಲೆ ಒತ್ತಡವನ್ನು ತಂದ ಕಾರಣದಿಂದ ಪರಿಣಾಮಕಾರಿಯಾದ ಅಂತ್ಯ ಕಾಣಲೇ ಇಲ್ಲ.
ಅನೇಕ ಜನ ರಾಜಕಾರಣದ ಕುಟುಂಬದ ಸದಸ್ಯರು, ಶ್ರೀಮಂತರ ಮನೆಯ ಮಕ್ಕಳು, ಸಾರ್ವಜನಿಕ ಕ್ಷೇತ್ರದಲ್ಲಿರುವ ಹಲವಾರು ಮನೆಯ ಮಂದಿಯ ಹೆಸರುಗಳು ಸಣ್ಣದಾಗಿ ಕಾಣಲಾರಂಭಿಸುತ್ತಿದ್ದಂತೆ ತನಿಖೆಯ ವೇಗವೂ ಸಂಪೂರ್ಣವಾಗಿ ಕಡಿಮೆಯಾಯಿತು. ಇದ್ದಂತಹ ಉತ್ಸಾಹ ಕಡಿಮೆಯಾಯಿತು. ಮತ್ತೆ ರಾಜ್ಯದಲ್ಲಿ ಡ್ರಗ್ ಮಾಫಿಯಾ ನಿಂತಿಲ್ಲವೆಂಬುದು ಅಲ್ಲಲ್ಲಿ ಕೇಳಿಬರುತ್ತಿರುವ ಮಾತಾಗಿದೆ.
ಬಿಟ್ ಕಾಯಿನ್ ವಿಚಾರದಲ್ಲೂ ಸಹ ದೊಡ್ಡದಾದಂತಹ ಸುದ್ದಿಯಾಯಿತು. ಈ ವಿಚಾರ ತನಿಖೆಯಾದರೆ ರಾಜಕೀಯ ರಂಗದಲ್ಲಿ ಅಲ್ಲೋಲಕಲ್ಲೋಲವಾಗುತ್ತದೆ ಎಂದು ಮಾಧ್ಯಮಗಳಲ್ಲಿ ಅಬ್ಬರಿಸಿದರು. ಆದರೆ, ಈ ವಿಚಾರದಲ್ಲಿ ತನಿಖೆ ಏನಾಯಿತೋ, ಯಾರಿಗೆ ಶಿಕ್ಷೆಯಾಯಿತೋ, ಒಂದೂ ಬಹಿರಂಗವಾಗಲಿಲ್ಲ. ಸದನದಲ್ಲಿ ಕೆಲವು ಬಾರಿ ಪ್ರಸ್ತಾಪವಾದರೂ ಸಹ ಇಲ್ಲ ಗಂಭೀರತೆ ಇರಲಿಲ್ಲ.
ಪಿ.ಎಸ್.ಐ. ಹಗರಣ ಇಡೀ ದೇಶದಾದ್ಯಂತ ಸುದ್ದಿ ಮಾಡಿದಂತಹ ದೊಡ್ಡದಾಗಿ ಪ್ರಚಾರವಾಗಿತ್ತು. ಸಾವಿರಾರು ಜನ ಯುವಕರ ಮತ್ತು ಯುವತಿಯರ ಬದುಕಿನ ಪ್ರಶ್ನೆಯಾಗಿತ್ತು. ಪರೀಕ್ಷೆಯನ್ನು ಬರೆದು ಉದ್ಯೋಗದ ಕನಸಿನೊಂದಿಗೆ ಕಾಯುತ್ತಿದ್ದ ಸಹಸ್ರಾರು ಮಂದಿಯ ಕನಸುಗಳು ಸತ್ತುಹೋದವು. ಹಗರಣದ ತನಿಖೆಯನ್ನು ಸಿ.ಬಿ.ಐ. ಅಥವಾ ಹೈಕೋರ್ಟ್ ನ್ಯಾಯಾಧೀಶರ ಮೂಲಕ ಮಾಡಿಸದೇ ಸರ್ಕಾರವೇ ಮಾಡುತ್ತಾ ಇಲಾಖೆಯಲ್ಲಿನ ಕೆಲವರನ್ನು ಬಂಧಿಸಿದ ಒಂದಷ್ಟು ದಿನ ಸುದ್ದಿ ಮಾಡಿದ್ದು ಬಿಟ್ಟರೆ ಮತ್ತಿನ್ನೇನೂ ಆಗಿಲ್ಲ. ಬಹುತೇಕ ಅಪರಾಧಿಗಳೆಲ್ಲ ಜಾಮೀನು ಪಡೆದುಕೊಂಡು ಜಾಮೂನು ಅನ್ನುತ್ತಿದ್ದಾರೆ. ಉದ್ಯೋಗದ ಕನಸು ಹೊತ್ತ ಯುವ ಜನಾಂಗ ಮತ್ತೆ ಮತ್ತೆ ಅಲ್ಲಲ್ಲಿ ಹೋರಾಟಗಳನ್ನು ಮಾಡಿ ಯಾವುದೇ ಪ್ರತಿಫಲವಿಲ್ಲದೆ, ತಮ್ಮ ಧ್ವನಿಯನ್ನು ಕಳೆದುಕೊಂಡಿದ್ದಾರೆ. ಉದ್ಯೋಗಕ್ಕಾಗಿ ಲಕ್ಷಾಂತರ ರೂಪಾಯಿಗಳನ್ನು ಕೊಟ್ಟವರು ಹಣವನ್ನೂ ಕಳೆದುಕೊಂಡರು, ಉದ್ಯೋಗವನ್ನೂ ಸಹ ಪಡೆದುಕೊಳ್ಳಲಲ್ಲ. ಲಂಚವನ್ನು ಪಡೆದವರು ಸೆರೆಮನೆಗೆ ಹೋಗಿ ಜಾಮೀನು ಪಡೆದು ಜಾಮೀನಿಗಾಗಿ ಸನ್ಮಾನಿಸಿಕೊಂಡು ಸಂಭ್ರಮಿಸಿದ್ದೇ ದೊಡ್ಡ ಸಾಧನೆಯಾಗಿದೆ.
ಬೆಂಗಳೂರು ನಗರದಲ್ಲಿ ಹತ್ತಾರು ಸಾವಿರ ಜನರ ಸರಿಸುಮಾರು ಎರಡೂವರೆ ಸಾವಿರ ಕೋಟಿ ರೂಪಾಯಿಗಳ ಠೇವಣಿ ಮೊತ್ತದ ಎರಡು ಪ್ರಮುಖ ಬ್ಯಾಂಕುಗಳಾದ ಶ್ರೀ ಗುರುರಾಘವೇಂದ್ರ ಮತ್ತು ವಸಿಷ್ಠ ಕೋ ಆಪರೇಟಿವ್ ಸೊಸೈಟಿಯ ಹಗರಣದ ವಿಚಾರದಲ್ಲೂ ತನಿಖೆಯನ್ನು ಸಿ.ಬಿ.ಐಗೆ ಕೊಡದೇ ಕೇವಲ ಇಲಾಖೆಯ ಅಧಿಕಾರಿ ಮಟ್ಟದಲ್ಲಿಯೇ ಮಾಡಿಸುತ್ತಾ ಸಹಸ್ರಾರು ಜನರ ಕಣ್ಣೀರು ಒರೆಸುವವರಿಲ್ಲದೆ ಹಾಗೇ ಉಳೆದುಕೊಂಡಿದೆ. ಠೇವಣಿ ಇಟ್ಟು ನೊಂದಂತಹ ನೂರಾರು ಜೀವಗಳು ಸ್ಮಶಾನದಲ್ಲಿ ಸುಟ್ಟು ಬೂದಿಯಾಗಿದ್ದಾರೆ. ನೂರಾರು ಮಂದಿ ಆಸ್ಪತ್ರೆಗಳಲ್ಲಿ, ಹಾಸಿಗೆ ಮೇಲೆ ನರಳುತ್ತಿದ್ದಾರೆ. ಸಹಸ್ರಾರು ಮಂದಿ ಔಷಧಿಗೆ ಕಾಸಿಲ್ಲದೇ ತಮ್ಮ ಮನೆಯವರ ಆರೈಕೆಯೂ ಇಲ್ಲದೆ ಪ್ರತಿದಿನವೂ ಬ್ಯಾಂಕಿನ ಮುಂದೆ ಬಂದು ನಿಂತು ಕಣ್ಣೀರಿಡುತ್ತಾ ತಮ್ಮ ಹಣಕ್ಕಾಗಿ ಚಾತಕಪಕ್ಷಿಯಂತೆ ಕಾಯುತ್ತಿದ್ದಾರೆ. ಇಷ್ಟು ದೊಡ್ಡ ಮಟ್ಟದ ಹಗರಣ ವಿಧಾನಸಭೆ ಮತ್ತು ವಿಧಾನ ಪರಿಷತ್ತಿನಲ್ಲಿ ಗಂಭೀರವಾಗಿ ಚರ್ಚೆ ಆಗಲೇ ಇಲ್ಲ. ಕೇವಲ ಚುಕ್ಕೆ ಪ್ರಶ್ನೆಗೆ ಮಾತ್ರವೇ ಸೀಮಿತವಾಯಿತು. ಸರ್ಕಾರಕ್ಕೆ ಈ ಪ್ರಕರಣವನ್ನು ಸಿ.ಬಿ.ಐಗೆ ವಹಿಸಲು ಅದ್ಯಾವ ಕಾಣದ ಶಕ್ತಿಗಳು ಕೈಕಟ್ಟಿ ಹಾಕಿದೆಯೋ ಅರ್ಥವಾಗುತ್ತಿಲ್ಲ. ಸರ್ಕಾರಕ್ಕೆ ಇಂತಹ ದೊಡ್ಡ ಮೋಸದ ವಿಚಾರದಲ್ಲಿ ಯಾವುದೇ ರೀತಿಯ ಆಸಕ್ತಿಯೇ ಇಲ್ಲ. ಆದರೆ, ಈ ಹಿಂದೆ ಬೇರೆ ಜಾತಿಯ ಬೇರೆ ಧರ್ಮದ ಬ್ಯಾಂಕುಗಳಲ್ಲಿ ಇಂತಹದೇ ಭ್ರಷ್ಟಾಚಾರಗಳು, ಹಗರಣಗಳು ಆದಾಗ, ಕೂಡಲೆ ಸಿ.ಬಿ.ಐಗೆ ಒಪ್ಪಿಸಿದ್ದೆಷ್ಟೋ, ಅಪರಾಧಿಗಳ ವಿಚಾರದಲ್ಲಿ ಪ್ರಚಾರ ಮಾಡಿದ್ದೆಷ್ಟೋ, ಮಾಧ್ಯಮದವರು ಅಬ್ಬರಿಸಿದ್ದು ಎಷ್ಟೋ? ಆದರೆ ಇಂತಹ ಅಬ್ಬರ, ಆಕ್ರೋಶ, ಸಿಟ್ಟು, ಕಾಳಜಿ ಈ ಶ್ರೀ ಗುರುರಾಘವೇಂದ್ರ ಮತ್ತು ವಸಿಷ್ಠ ಕೋ- ಆಪರೇಟಿವ್ ಸೊಸೈಟಿ ಇವುಗಳ ವಿಚಾರದಲ್ಲಿ ಕಾಣಲೇ ಇಲ್ಲ. ಒಟ್ಟಾರೆಯಾಗಿ ಕಳೆದ ನಾಲ್ಕು ವರ್ಷದ ಅವಧಿಯಲ್ಲಿ ಯಾವ ಪ್ರಕರಣವೂ ಪರಿಣಾಮಕಾರಿಯಾಗಿ ತನಿಖೆಯಾಗಲಿಲ್ಲ. ಎಲ್ಲ ಪ್ರಕರಣಗಳಲ್ಲೂ ಹಾರಿಕೆಯ, ಜಾರಿಕೆಯ ಉತ್ತರಗಳು, ರಾಜಕೀಯ ಪ್ರೇರಿತವಾದಂತಹ ಸಮರ್ಥನೆಗಳಿಗೆ ಮಾತ್ರವೇ ಸೀಮಿತವಾಯಿತು.

– ಕೆ.ಎಸ್.ನಾಗರಾಜ್, ಬೆಂಗಳೂರು

Leave a Reply