ಮೈಸೂರು: ಮೈಸೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಯಾವುದೇ ಸುರಕ್ಷಿತ ಕ್ರಮವನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ತೆಗೆದುಕೊಂಡಿಲ್ಲ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ಹೇಳಿದ್ದಾರೆ.
ಮೈಸೂರಿನಲ್ಲಿ ಮಾತನಾಡಿದ ಅವರು, ಹೆದ್ದಾರಿಯಲ್ಲಿ ಯಾವುದೇ ಸೂಚನಾ ಫಲಕ ಅಳವಡಿಕೆ ಮಾಡಿಲ್ಲ, ಇದರಿಂದ ಅಪಘಾತಗಳು ಸಂಭವಿಸುತ್ತಿದ್ದು, ಈ ಸಂಬಂಧ ಎಡಿಜಿಪಿ ಮೌಖಿಕ ವರದಿ ನೀಡಿದ್ದಾರೆ. ಇದರ ಆಧಾರದ ಮೇಲೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಪತ್ರ ಬರೆಯಲಾಗುವುದು ಎಂದು ಹೇಳಿದರು.
ರಾಷ್ಟ್ರೀಯ ಹೆದ್ದಾರಿಯಲ್ಲಿ ದರೋಡೆ ಕೂಡ ನಡೆಯುತ್ತಿವೆ. ಇದನ್ನು ತಡೆಯಲು ಕ್ರಮವಹಿಸಿದ್ದೇವೆ. ಹೆದ್ದಾರಿ ಪ್ರಾಧಿಕಾರಕ್ಕೆ ಟೋಲ್ ವಸೂಲಿ ಬೇಡ ಅಂತಾ ಸೂಚನೆ ಕೊಟ್ಟಿದ್ದೆವು. ಆದರೂ ಟೋಲ್ ವಸೂಲಿ ಶುರು ಮಾಡಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಹೆದ್ದಾರಿ ಪ್ರಾಧಿಕಾರ ಕೇಂದ್ರ ಸರಕಾರದ ನಿಯಂತ್ರಣದಲ್ಲಿದೆ. ಅವಸರವಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರನ್ನು ಕರೆದು ಉದ್ಘಾಟನೆ ಮಾಡಿದರು. ರಾಜಕೀಯ ದುರುದ್ದೇಶದಿಂದ ತರಾತುರಿಯಲ್ಲಿ ಉದ್ಘಾಟನೆ ಮಾಡಿದರು. ಹೀಗಾಗಿ ಇಷ್ಟೆಲ್ಲ ಸಮಸ್ಯೆ ಆಗುತ್ತಿದೆ. ಎಕ್ಸ್‌ಪ್ರೆಸ್ ಹೆದ್ದಾರಿಯಲ್ಲಿ ಇಷ್ಟು ಬೇಗ ಅಷ್ಟು ಜನ ಸಾಯುತ್ತಾರೆ ಎಂದರೆ ಅದರ ಅರ್ಥ ಬಹಳ ಲೋಪವಾಗಿದೆ ಎಂದು. ಹೈವೆಯಲ್ಲಿ ಡ್ರಿಂಕ್ ಆಂಡ್ ಡ್ರೈವ್ ವಿಚಾರ ಕ್ರಮ ವಹಿಸಲಾಗುತ್ತದೆ. ಜನರಿಗೆ ತೊಂದರೆ ಆಗದಂತೆ ಜನರ ಸುರಕ್ಷತೆಗೆ ಬೇಕಾದ ಕ್ರಮ ಜರುಗಿಸುತ್ತೇವೆ ಎಂದು ಹೇಳಿದರು.




