ಚಿತ್ರದುರ್ಗ: ದೇಶ ಮಾರಾಟಕ್ಕಿದೆ. ಸರ್ಕಾರವೇ ದಳ್ಳಾಳಿಯಾಗಿದೆ ಎಂದು ರಂಗಕರ್ಮಿ ಸಿ.ಬಸವಲಿಂಗಯ್ಯ ಹೇಳಿದರು.
ಚಿತ್ರದುರ್ಗದ ತರಾಸು ರಂಗಮಂದಿರದಲ್ಲಿ ಮಾನವ ಬಂಧುತ್ವ ವೇದಿಕೆ ವತಿಯಿಂದ ಆಯೋಜಿಸಲಾಗಿದ್ದ ರಾಜ್ಯ ಬಂಧುತ್ವ ಅಧಿವೇಶನದಲ್ಲಿ ಪ್ರಸಕ್ತ ರಾಜಕೀಯ, ಆರ್ಥಿಕ ಮತ್ತು ಸಾಂಸ್ಕೃತಿಕ ದಾಳಿಗಳು ಮತ್ತು ಪ್ರತಿರೋಧ ವಿಷಯದ ಕುರಿತು ಮಾತಾಡಿದ ಅವರು, ಎಲ್ಲ ಪುರಾಣಗಳೂ ಕಟ್ಟುಕತೆಗಳು. ಮೆದುಳಿಗೆ ಕತೆ ಕಟ್ಟಲಾಗಿದೆ. ಯಾರು ಚರಿತ್ರೆಯನ್ನು ಅರ್ಥಮಾಡಿಕೊಳ್ಳುವುದಿಲ್ಲವೋ ಅವರು ಚರಿತ್ರೆಯನ್ನು ಸೃಷ್ಟಿಸಲಾರರು ಎಂದು ಅಂಬೇಡ್ಕರ್ ಹೇಳುತ್ತಾರೆ. ಇವತ್ತು ಪುರಾಣಗಳನ್ನೇ ಚರಿತ್ರೆ ಮಾಡಲಾಗುತ್ತಿದೆ ಎಂದರು.
ಅಮೃತ ಮಂಥನದಲ್ಲಿ ಸುರರು ಒಂದಡೆ, ಅಸುರರು ಒಂದೆಡೆ ಇದ್ದರು. ಆದಿಶೇಷನನ್ನು ಒಂದೆಡೆ ಸುರರು ಮತ್ತೊಂದೆಡೆ ಅಸುರರು ಕಡೆಯುತ್ತಾರೆ. ಅಸುರರು ಬಾಯಿಕಡೆಗೆ ಬಂದರು. ಅಸುರರು ಮಡಿದರು. ಶಿವ ವಿಷವನ್ನು ಕುಡಿದ. ಇಂದು ಪ್ರಜಾಪ್ರಭುತ್ವ ಉಳಿಸಲು ಶಿವ ಬೇಕಾಗಿದ್ದಾನೆ ಎಂದರು.
ಹಿಂದುತ್ವವೆಂದರೆ ಬ್ರಾಹ್ಮಣವಾದ. ಅಂಬೇಡ್ಕರ್ ಬೌದ್ಧ ಮತ್ತು ಬ್ರಾಹ್ಮಣವಾದದ ನಡುವೆ ಬ್ರಾಹ್ಮಣವವಾದ ಗೆಲುವು ಸಾಧಿಸಿದೆ ಎನ್ನುತ್ತಾರೆ. ದೇವರು, ದೇವಾಲಯಗಳನ್ನು ಸಂಸ್ಥೆಗಳನ್ನಾಗಿಸಿಕೊಳ್ಳಲಾಯಿತು ಎಂದರು.
ಕನಕದಾಸ ಕುರಿಕಾಯುತ್ತಿದ್ದ, ಇವನು ದನಕಾಯುವವನನ್ನು ಹುಡುಕಿಕೊಂಡು ಹೋದ. ಇವನನ್ನು ಹೊರಗೆಯೇ ನಿಲ್ಲಿಸುತ್ತಾರೆ. ಅವನು ಬಾಗಿಲನು ತೆರೆದು ಸೇವೆಯನು ಕೊಡೋ ಹರಿಯೇ ಎಂದ. ಇಲ್ಲಿ ಪ್ರವೇಶವನ್ನು ಹಿಂದೆಮುಂದೆ ಮಾಡಲಾಯಿತು. ಇವೆಲ್ಲ ಸಾಂಸ್ಕೃತಿಕ ಪ್ರತಿರೋಧ ಎಂದರು.
ಮನುಷ್ಯರೆಲ್ಲರು ದೇವರ ಮೂಲಕ ಸಮಾನರು. ನಮಗೆ ಸಂವಿಧಾನ ವರ್ಸಸ್ ಭಗವದ್ಗೀತೆ, ಸಂವಿಧಾನ ವರ್ಸಸ್ ಕುರಾನ್, ಸಂವಿಧಾನ ವರ್ಸಸ್ ಬೈಬಲ್ ಆಗಬೇಕಿಲ್ಲ. ನಮಗೆ ಅಂಬೇಡ್ಕರ್ ಹೇಳಿರುವುದು ಮನುಷ್ಯರು ಮನುಷ್ಯರ ಮೂಲಕ ಸಮಾನರು ಎಂದಾಗಬೇಕು ಎಂದರು.
ರಾಜ್ ಕುಮಾರ್ ತೀರಿಹೋದ ಸಮಯದಲ್ಲಿ ರಾಜ್ ಕುಮಾರ್ ಏನು ಕೊಟ್ಟರು ಎಂದು ಪ್ರಶ್ನಿಸಿದರು. ಅವರು ದಿನಕ್ಕೆ 5 ಶೋ ನಡೆಸುವಂತೆ ಮಾಡಿದರಲ್ಲ, ಅಷ್ಟು ಜನಕ್ಕೆ ಕೆಲಸ ಕೊಟ್ಟಿದ್ದಾರಲ್ಲ. ಅದು ಮುಖ್ಯವಲ್ಲವೇ? ಎಂದು ಪ್ರಶ್ನಿಸಿದರು.
ಪುನೀತ್ ರಾಜ್ ಕುಮಾರ್ ಮಡಿದ ಮೇಲೆ ಅವರನ್ನು ದೇವರನ್ನಾಗಿಸಲಾಗುತ್ತಿದೆ. ಪುನೀತ್ ನಿರ್ಗತಿಕ ಮಕ್ಕಳಿಗೆ ಸಲ್ಲಿಸಿದ ಸೇವೆ ಮುಖ್ಯ. ಅನಾಥ ಬಾಲಕಿಯರಿಗಾಗಿ ಅವರ ಹೆಸರಿನಲ್ಲಿ ಶಾಲೆ ಮೈಸೂರಿನಲ್ಲಿ ಶುರುವಾಗಿದೆ. ಅದು ಸಂತೋಷದ ವಿಷಯ ಎಂದರು.
ಹಿಂದೂ ಎಂಬ ಪದವೇ ಕುತೂಹಲಕಾರಿ. ನಾವೆಲ್ಲ ಭಾರತೀಯರು. ಹಿಂದೂ ಎಂಬುದು ವೇದ, ಪುರಾಣಗಳಲ್ಲಿ ಎಲ್ಲಿಯೂ ಇಲ್ಲ. ಮೊಘಲರು ಭಾರತಕ್ಕೆ ಬಂದು 800 ವರ್ಷ ಆಳಿದರು. ಅವರು ಮತಾಂತರ ಮಾಡಿದ್ದರೆ ಇಡೀ ದೇಶ ಮುಸ್ಲಿಂ ದೇಶವಾಗಬೇಕಿತ್ತು ಎಂದರು.
1920ರಲ್ಲಿ ಹಿಂದ್ ಎಂಬ ಪದ ಬಳಕೆಯಾಗಿದೆ. ಬೌದ್ಧ, ಜೈನ, ಸಿಖ್ ಧರ್ಮ ಇದೆ. ಹಿಂದೂ ಧರ್ಮ ಇಲ್ಲ. ವೇದ, ಪುರಾಣಗಳಿವೆ. 12ನೇ ಶತಮಾನದಲ್ಲಿ ಶರಣರು ಇದಕ್ಕೆ ಪ್ರತಿರೋಧ ಒಡ್ಡಿದವರನ್ನು ನಿವಾರಿಸಲಾಗುತ್ತದೆ. ಬುದ್ಧನನ್ನು ಆರಾಧಿಸುವ ದೇಶಗಳು ಭಾರತವನ್ನು ತಮ್ಮದು ಎಂದರೆ ಹೇಗೆ? ಇಂದು ಯುದ್ಧ ಲಾಭದಾಯಕ ಎಂದರು.
ಹಿಂದುತ್ವ ಮೇಲ್ಜಾತಿಯವರ ರಾಜಕಾರಣದ ಭಾಗವಾಗಿದೆ. ಹಿಂದೂ ಧರ್ಮ ಧಾರ್ಮಿಕವಲ್ಲ. ಧಾರ್ಮಿಕ ಮುಖವಾಡವನ್ನು ಹಾಕಿಕೊಂಡಿದೆ. ದೇವಸ್ಥಾನ ಕಟ್ಟಿದರೆ ಯಾರೂ ಬೇಡ ಎನ್ನಲ್ಲ. ದೆವ್ವಸ್ಥಾನ ಕಟ್ಟುತ್ತಾರೆಯೇ? ಅದು ಲಾಭದಾಯಕವಾದರೆ ಕಟ್ಟುತ್ತಾರೆ ಎಂದರು.
ಹಿಂದುತ್ವ ದಲಿತ ಮತ್ತು ಬಹುಸಂಖ್ಯಾತರ ವಿರುದ್ಧವಾಗಿದೆ. ಮಹಿಷ ರಾಕ್ಷಸನಾಗಿಬಿಡುತ್ತಾನೆ. ಈಗ ರಾಮನನ್ನು ಹಿಡಿದುಕೊಂಡಿದ್ದಾರೆ. ಅವರಿಗೆ ಲಾಭದಾಯಕವಾಗಿರುವುದನ್ನು ಅವರು ಬಳಸಿಕೊಳ್ಳುತ್ತಾರೆ. ಸಕಾರಾತ್ಮಕ ರಾಜಕೀಯವನ್ನು ಧ್ವಂಸಗೊಳಿಸಿ ವೈದಿಕ ಸಂಸ್ಕತಿಯನ್ನು ಬೆಳೆಸುತ್ತಾರೆ ಎಂದರು.
ಸ್ವಾತಂತ್ರ್ಯ ಹೋರಾಟದಲ್ಲಿ ಆರ್.ಎಸ್.ಎಸ್. ನವರ ಒಂದೇ ಒಂದು ಹೆಸರು ಸಿಗುವುದಿಲ್ಲ. ಆದರೆ ಅವರನ್ನು ಬ್ಯಾನ್ ಮಾಡಿದ ಪಟೇಲ್ ರನ್ನೇ ಹೈಜಾಕ್ ಮಾಡಿದರು. ಅವರು ನಾಳೆ ಗಾಂಧಿಯನ್ನು ಹೈಜಾಕ್ ಮಾಡುತ್ತಾರೆ. ಈಗಾಗಲೇ ಅವರ ಕನ್ನಡಕವನ್ನು ತೆಗೆದುಕೊಂಡಿದ್ದಾರೆ ಎಂದರು.
1925ರಲ್ಲಿ ಆರ್.ಎಸ್.ಎಸ್. ಸ್ಥಾಪನೆಯಾಯಿತು. 75 ವರ್ಷ ಕೆಲಸ ಮಾಡಿದೆ. ರಾಷ್ಟ್ರೀಯ ಸ್ವಯಂ ಸೇವಕ ಸಂಘವೆಂದರೆ ನಮ್ಮಿಂದ, ನಮಗಾಗಿ, ನಮಗೋಸ್ಕರ ಎಂದರ್ಥ. ಇವರು ಎಂದಾದರೂ ಪ್ರವಾಹ ಬಂದಾಗ ಸೇವೆ ಸಲ್ಲಿಸಿದ್ದಾರೆಯೇ? ಕೊರೊನಾ ಬಂದಾಗ ಮುಸ್ಲಿಮರು ಶವ ಸಂಸ್ಕಾರ ಮಾಡಿದರು. ಇವರು ಮಾಡಿದರೇ ಎಂದು ಅವರು ಪ್ರಶ್ನಿಸಿದರು.




