ನಾಡು – ನುಡಿ ಮೂಲಕ‌ ಪಾಪು ಸ್ಮರಣೆ

5 years ago

ನಾಡು – ನುಡಿ, ಗಡಿ – ಜಲ, ಭಾಷೆ – ಸಂಸ್ಕೃತಿ ಬಗ್ಗೆ ನಾಡೋಜ ಪಾಟೀಲ ಪುಟ್ಟಪ್ಪನವರು ಆಲೋಚಿಸಿದಂತೆ, ಬರೆದಂತೆ, ಭಾಷಣ ಮಾಡಿದಂತೆ ಮತ್ತೊಬ್ಬರು ಮಾಡಿದ್ದು ಕಡಿಮೆ. ಮಾತು ಖಡಕ್. ಅವರ ಒಂದು ಭಾಷಣ ಕೇಳಿದರೆ ಸಾಕು ನಾಡಿನ ಬಗ್ಗೆ, ಕನ್ನಡದ ಬಗ್ಗೆ ಹೆಮ್ಮೆ ಮೂಡುತ್ತಿತ್ತು.

ತಮ್ಮ “ಪ್ರಪಂಚ” ಪತ್ರಿಕೆಯಲ್ಲಿ ಅರ್ಧದಷ್ಟು ಬರಹ ಪ್ರತಿವಾರ ಒಬ್ಬರೆ ಬರೆದು ಆಲೋಚನೆಗೆ ಹಚ್ಚುತ್ತಿದ್ದರು. “ಅನುಭವದಲ್ಲಿ ಅಮೃತತ್ವ ಇದೆ” ಎಂಬ ಮಾತನ್ನು ಮತ್ತೆಮತ್ತೆ ತಮ್ಮದೇ ಅನುಭವಜನ್ಯ ಆಲೋಚನೆಯಿಂದ‌ ಹೇಳುತ್ತಿದ್ದರು.

ಅವರು ಅಪಾರ ನೆನಪಿನ ಗಣಿ. ದೇಶ ವಿದೇಶಗಳ ಅನೇಕ ವ್ಯಕ್ತಿ, ಘಟನೆಗಳನ್ನು ಹೀಗೆ ತಮ್ಮ ನೆನಪಿನಿಂದಲೇ ಹೇಳುತ್ತಿದ್ದರು. ವಿಶ್ವದ ಅನೇಕ ಸಂವಿಧಾನ ಓದಿಕೊಂಡಿದ್ದರು. ತಮ್ಮ ಕಾಯಕದ ಮೂಲಕ  ಬಸವತತ್ವದ ನಿಜ ಪ್ರಚಾರಕರಾಗಿದ್ದರು. ಪ್ರಾಮಾಣಿಕ ಹಾಗೂ ಆದರ್ಶ ವ್ಯಕ್ತಿಗಳನ್ನು ಸಮಾಜಕ್ಕೆ ಮಾದರಿಯಾಗಿ ತೋರಿಸುತ್ತಿದ್ದರು.

ಪಾಪು ಅವರು ಕಾಸರಗೋಡು, ಆದೋನಿ, ಊಟಿ, ಸೊಲ್ಲಾಪುರ ಮೊದಲಾದ ಭಾಗಗಳು ಕರ್ನಾಟಕದ ಭಾಗ ಎಂದು ಸಮರ್ಥವಾಗಿ ವಾದ ಮಂಡಿಸುತ್ತಿದ್ದರು. ಅವರ ವಾದದಲ್ಲಿ ಸತ್ಯಾಂಶ ಇತ್ತು. ಬೆಳಗಾವಿಯ ಎಂಇಎಸ್ ಪುಂಡರು ಇವರನ್ನು ಕಂಡರೆ ಭಯಪಡುತ್ತಿದ್ದರು.

ಅದಕ್ಕೆ ಪುಷ್ಟಿ ಬಂದಂತೆ ಅವರು ಬೆಳಗಾವಿಯಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರಾದಾಗ ಮಹಾರಾಷ್ಟ್ರದ ಠಾಕ್ರೆ ಬಗ್ಗೆ ಅಕ್ಷರಶಹ ಗುಡುಗಿದ್ದರು. ಬೆಳಗಾವಿ ಜಿಲ್ಲೆಯಲ್ಲಿ ಎಂ ಇ ಎಸ್ ಕ್ಷೀಣವಾಗಲು ಪಾಪುಕೂಡ ಕಾರಣ.

ಗೋಕಾಕ್ ಚಳವಳಿ ರಾಜ್ಯದಲ್ಲಿ ಪ್ರವರ್ಧಮಾನಕ್ಕೆ ಬರಲು ಹಾಗೂ ನಟ ಡಾ. ರಾಜಕುಮಾರ ಅವರು ಆ ಚಳವಳಿಯಲ್ಲಿ ಭಾಗವಹಿಸಲು ಪಾಪು ಅವರೇ ಮುಖ್ಯ ಕಾರಣ. ಅವರು “ಕನ್ನಡ ಕಾವಲು ಸಮಿತಿ” (ನಂತರ “ಕನ್ನಡ ಅಭಿವೃದ್ಧಿ ಪ್ರಾಧಿಕಾರ”) ಅಧ್ಯಕ್ಷರಾಗಿದ್ದಾಗ ಅಂದಿನ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ, ರಾಜ್ಯ ಮುಖ್ಯ ಕಾರ್ಯದರ್ಶಿ ಅವರನ್ನು ಹಲವುಬಾರಿ ತರಾಟೆಗೆ ತೆಗೆದುಕೊಂಡಿದ್ದರು. ಅವರುಗಳಿಗೆ ದೀರ್ಘ ಪತ್ರ ಬರೆಯುವ ಮೂಲಕ ಎಚ್ಚರಿಸುತ್ತಿದ್ದರು. ಹಾಗೆ ಅವರುಗಳಿಗೆ  ಬರೆದ ಪತ್ರಗಳ ಪುಸ್ತಕವೇ ಪ್ರಕಟವಾಗಿದೆ.

ಪಾಪು, ಸದಾ ಜಾಗೃತ ಮನಸ್ಸಿನ ಸ್ಥಿತಪ್ರಜ್ಞ. ಹಠ ಹಾಗೂ ಛಲದಿಂದ ಭ್ರಷ್ಟ ರಾಜಕಾರಣಿಗಳು, ಅಧಿಕಾರಿಗಳಿಗೆ ಸಿಂಹಸ್ವಪ್ನವಾಗಿದ್ದರು. ಅವರ ನಾಡು – ನುಡಿ ಕೃತಿಯನ್ನು ಈಗ‌ ಮತ್ತೆ ಓದುತ್ತಿದ್ದೇನೆ. ಈ ಕೃತಿಯಲ್ಲಿ ಮತ್ತಷ್ಟು ಮಹತ್ವದ ಮಾಹಿತಿಗಳಿವೆ. ಮುಖ್ಯವಾಗಿ ಸ್ಪರ್ಧಾತ್ಮಕ ಪರೀಕ್ಷೆಗೆ ಸಿದ್ಧವಾಗುವ ವಿದ್ಯಾರ್ಥಿಗಳು, ಪಾಠ ಮಾಡುವ ಮೇಷ್ಟ್ರುಗಳು, ಪತ್ರಕರ್ತರು, ಜನ ಸಾಮಾನ್ಯರೂ ಓದಿ, ಓದಿಸುವ ಕೃತಿ ಇದು.

ತಮಗೆ ಹಂಪಿ ವಿವಿ ಪ್ರಕಟಣೆಯ ಈ ಕೃತಿ ಸಿಕ್ಕರೆ ದಯವಿಟ್ಟು ಓದಿ. ಜ್ಞಾನದ ಅಕ್ಷಯಪಾತ್ರೆ ಅಂಗೈಯಲ್ಲೇ ಸಿಕ್ಕುತ್ತದೆ.

ಆರ್.ಜಿ.ಹಳ್ಳಿ ನಾಗರಾಜ್, ಹಿರಿಯ ಪತ್ರಕರ್ತರು

Leave a Reply