ಸಂವಿಧಾನದ ದ್ಯೇಯೋದ್ಧೇಶಗಳನ್ನು ಈಡೇರಿಸುವ ನಿಟ್ಟಿನಲ್ಲಿ ಕೆಲಸ ಮಾಡಬೇಕು: ಸಿದ್ದರಾಮಯ್ಯ

3 years ago

#Must #work #towards #fulfilling #objectives #Constitution #Siddaramaiah

ಬೆಂಗಳೂರು: ಸರ್ಕಾರದ ಅಧಿಕಾರಿಗಳು ಪ್ರಾಮಾಣಿಕವಾಗಿ ಜನರ ಪರ ಕೆಲಸ ಮಾಡಿದರೆ ಸರ್ಕಾರಕ್ಕೆ ಒಳ್ಳೆಯ ಹೆಸರು ಬರುತ್ತದೆ. ಆದರೆ ಕೆಲ ಅಧಿಕಾರಿಗಳು ಸರ್ಕಾರದ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡುತ್ತಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಬೇಸರ ವ್ಯಕ್ತಪಡಿಸಿದ್ದಾರೆ.

ಕರ್ನಾಟಕ ಆಡಳಿತ ಸೇವೆ ಅಧಿಕಾರಿಗಳ ಸಂಘದ ಶತಮಾನೋತ್ಸವ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಅಧಿಕಾರಿಗಳು ಧರ್ಮಕಾರ್ಯದಲ್ಲಿ ತೊಡಗಿಕೊಳ್ಳುವ ಕೆಲಸ ಮಾಡಬಾರದು. ಧರ್ಮಕ್ಕೂ ಆಡಳಿತಕ್ಕೂ ಸಂಬಂಧವಿಲ್ಲ. ಅಧಿಕಾರಿಗಳು ಧರ್ಮಕಲಹದಲ್ಲಿ ತೊಡಗಿಸಿಕೊಳ್ಳಬಾರದು, ಸಂವಿಧಾನದ ಚೌಕಟ್ಟಿನಲ್ಲಿ ಕೆಲಸ ಮಾಡಬೇಕು ಎಂದರು

ನನಗೆ ಸಮಾಜ ಏನು ಮಾಡಿದೆ ಅನ್ನುವುದಕ್ಕಿಂತ ನಾವು ಸಮಾಜಕ್ಕೆ ಏನು ಮಾಡಿದ್ದೇವೆ ಎನ್ನುವುದು ಬಹಳ ಮುಖ್ಯ. ನಮಗೆಲ್ಲಾ ಸಮಾಜವನ್ನು ಸುಧಾರಣೆ ಮಾಡುವ ಜವಾಬ್ದಾರಿ ಇದೆ. ಸಮಾಜದಲ್ಲಿ ಇನ್ನೂ ಕೂಡ ಅಸಮಾನತೆ ಇದೆ ಎಂದು ಹೇಳಿದರು.

ಜನರು ಮತ್ತು ಸರ್ಕಾರದ ನಡುವೆ ಅಧಿಕಾರಿ ವರ್ಗ ಸೇತುವೆಯಾಗಿ ಜನಪ್ರಿಯ ಕಾಳಜಿಯಿಂದ ಕೆಲಸ ಮಾಡಿದರೆ ಸರ್ಕಾರಕ್ಕೂ ಒಳ್ಳೆ ಹೆಸರು ಬರಲಿದೆ. ಪ್ರತಿಯೊಬ್ಬರೂ ಬದ್ಧತೆಯಿಂದ ಕೆಲಸ ಮಾಡಿ ಸಂವಿಧಾನದ ದ್ಯೇಯೋದ್ಧೇಶಗಳನ್ನು ಈಡೇರಿಸುವ ನಿಟ್ಟಿನಲ್ಲಿ ಕೆಲಸ ಮಾಡಬೇಕು. ರಾಜ್ಯ ಸರ್ಕಾರ ಈಗಾಗಲೇ 3 ಗ್ಯಾರಂಟಿಗಳನ್ನು ಜಾರಿ ಮಾಡಿದೆ. ಆಗಸ್ಟ್ 20ರಂದು ಗೃಹಲಕ್ಷ್ಮೀ ಯೋಜನೆ ಜಾರಿಯಾಗಲಿದೆ. 5ನೇ ಗ್ಯಾರಂಟಿ ವಿದ್ಯಾನಿಧಿಯನ್ನು ಡಿಸೆಂಬರ್ ಅಥವಾ ಜನವರಿಯಲ್ಲಿ ಜಾರಿ ಮಾಡುತ್ತೇವೆ ಎಂದರು.

ಸರ್ಕಾರದ ಯೋಜನೆ ಕಾರ್ಯಕ್ರಮಗಳ ಫಲ ಜನರಿಗೆ ತಲುಪಿಸುವ ಜವಾಬ್ದಾರಿ ಅಧಿಕಾರಿಗಳದ್ದು, ವಿದ್ಯಾವಂತರು ಜಾತ್ಯಾತೀತ ವ್ಯಕ್ತಿಗಳಾಗಿ ರೂಪುಗೊಳ್ಳಬೇಕು. ರಾಷ್ಟ್ರೀಯತೆ ಬಡವರ ಬಗ್ಗೆ ಕಾಳಜಿ ಬೆಳೆಸಿಕೊಂಡಾಗ ಸಮಾಜದಲ್ಲಿ ಬದಲಾವಣೆ ತರಲು ಸಾಧ್ಯವಾಗುತ್ತದೆ ಎಂದು ಹೇಳಿದರು.

ಸ್ವಾತಂತ್ರ್ಯ ಬಂದು 75 ವರ್ಷಗಳಾದರೂ ಬಡವ, ಶ್ರೀಮಂತ, ಮೇಲ್ಜಾತಿ, ಕೆಳಜಾತಿಯವರು ಇದ್ದಾರೆ. ಸಮ ಸಮಾಜ ನಿರ್ಮಾಣ ಮಾಡಲು ಎಲ್ಲರೂ ಪ್ರಯತ್ನಿಸಬೇಕು. ಮಹಾತ್ಮಾಗಾಂಧಿ ಅವರು ಬ್ರಿಟಿಷರನ್ನು ಭಾರತ ಬಿಟ್ಟು ತೊಲಗಿ ಎಂದು ಕರೆ ಕೊಟ್ಟ ದಿನ. ಸಮಾಜ ನಮಗೆ ಏನು ಮಾಡಿದೆ ಎಂಬುದಕ್ಕಿಂತ ಸಮಾಜಕ್ಕೆ ನಾನೇನು ಮಾಡಿದೆ ಎಂಬುದು ಮುಖ್ಯ ಎಂದರು.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಐಎಎಸ್-ಕೆಎಎಸ್ ಅಧಿಕಾರಿಗಳು ಕಣ್ಣು-ಕಿವಿಗಳಿದ್ದಂತೆ. ನಮ್ಮೆಲ್ಲರ ಮೋಲೂ ಬದಲಾವಣೆ ಸುಧಾರಣೆ ಮಾಡುವ ಜವಾಬ್ದಾರಿಯಿದೆ ಎಂದು ಹೇಳಿದರು.

ದಾರ್ಶನಿಕರಾದ ಬುದ್ಧ, ಬಸವ, ಗಾಂಧಿ, ಅಂಬೇಡ್ಕರ್, ಕುವೆಂಪು, ಶಿಶುನಾಳ ಷರೀಫರಂತವರು ಸಮಾಜ ಸುಧಾರಣೆ ಬಗ್ಗೆ ಮಾತನಾಡಿದ್ದಾರೆ. ಅಸಮಾನತೆ ಹೊಗಲಾಡಿಸುವುದು ಸ್ವಚ್ಛ ಭಾರತದ ಕರ್ತವ್ಯ. ಸ್ವಾತಂತ್ರ್ಯಕ್ಕಾಗಿ ಹೋರಾಡಿದವರು ನಮಗೆ ಆದರ್ಶವಾಗಬೇಕು ಎಂದು ಕರೆ ನೀಡಿದರು.

ಮೈಸೂರು ರಾಜರ ಆಡಳಿತಾವಧಿಯಲ್ಲಿ ಪ್ರಾರಂಭವಾದ ಕರ್ನಾಟಕ ಆಡಳಿತ ಸೇವೆಯ ಸಂಘಕ್ಕೆ 100 ವರ್ಷ ತುಂಬಿರುವುದು ಸಾಮಾನ್ಯ ವಿಷಯವಲ್ಲ, ಅವಿಸ್ಮರಣೀಯ. ಸಂಘದ ನ್ಯಾಯಯುತ ಬೇಡಿಕೆ ಈಡೇರಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು. ಜನರ ಮತ್ತು ನಮ್ಮ ನಿರೀಕ್ಷೆಗೆ ತಕ್ಕಂತೆ ಅಧಿಕಾರಿಗಳು ಕಾರ್ಯ ನಿರ್ವಹಿಸಬೇಕೆಂದು ಅವರು ಸಲಹೆ ನೀಡಿದರು.

Leave a Reply