ಬೆಂಗಳೂರು: ನಾನು ಪುನೀತ್ ರಾಜಕುಮಾರ್ ಅವರನ್ನು ಮೊದಲ ಬಾರಿಗೆ ಅಮೇರಿಕಾದ ನ್ಯೂಜರ್ಸಿಯಲ್ಲಿ ಹಮ್ಮಿಕೊಳ್ಳಲಾಗಿದ್ದ ಅಕ್ಕ ಸಮ್ಮೇಳನದಲ್ಲಿ ಭೇಟಿಯಾಗಿದ್ದೆ, ಅಂದು ನಾನು ಮತ್ತು ಪುನೀತ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದೆವು ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಹೇಳಿದ್ದಾರೆ.
ಪುನೀತ್ ಅವರದು ತಂದೆಯಂತೆ ಸರಳ ಸಜ್ಜನಿಕೆಯ ಮೇರು ವ್ಯಕ್ತಿತ್ವ, ಸದಾ ಹಸನ್ಮುಖಿಯಾಗಿದ್ದ ಪ್ರತಿಭಾನ್ವಿತ ನಟರಾದ ಯುವರತ್ನ ಸಾವಿರಾರು ಅಸಹಾಯಕರ ಬಾಳಲ್ಲಿ ಬೆಳಕಾಗಿದ್ದರು. ಅವರ ವ್ಯಕ್ತಿತ್ವ ನಮಗೆ ಮಾದರಿ ಎಂದು ಮೆಲುಕು ಹಾಕಿದ್ದಾರೆ.
ಎರಡು ವರ್ಷಗಳ ಹಿಂದೆ ಹೊನ್ನಾಳಿಯ ಹಿರೇಕಲ್ಮಠದಲ್ಲಿ ಹಮ್ಮಿಕೊಂಡಿದ್ದ ರಾಜ್ಯಮಟ್ಟದ ಕೃಷಿಮೇಳಕ್ಕೆ ಅಪ್ಪು ಅವರನ್ನು ಆಹ್ವಾನಿಸಲು ಹೋದ ಸಂದರ್ಭದಲ್ಲಿ ಮನೆಯಿಂದ ಹೊರಬಂದು ಕೈ ಹಿಡಿದು ಒಳಗೆ ಕರೆದುಕೊಂಡು ಹೋಗಿ ಅವರು ನೀಡಿದ ಸತ್ಕಾರ್ಯವನ್ನು ನನ್ನ ಜೀವನದಲ್ಲಿ ಎಂದೂ ಮರೆಯಲು ಸಾಧ್ಯವಿಲ್ಲ ಎಂದು ಸ್ಮರಿಸಿದ್ದಾರೆ.
ಪುನೀತ್ ರಾಜಕುಮಾರ್ ಅವರ ನಿಧನದ ಸುದ್ದಿ ನನಗೆ ನಂಬಲು ಸಾಧ್ಯವಾಗಲಿಲ್ಲ, ಅಪ್ಪು ಅವರ ಅಗಲಿಕೆ ಚಿತ್ರರಂಗ ಹಾಗೂ ಸಮಾಜಕ್ಕೆ ತುಂಬಲಾರದ ನಷ್ಟವಾಗಿದೆ. ಇಂದು ಪುನೀತ್ ಅವರ ಅಂತಿಮ ದರ್ಶನ ಪಡೆಯಲು ಹೋದ ಸಂದರ್ಭದಲ್ಲಿ ನನ್ನನ್ನು ಶಿವರಾಜ್ ಕುಮಾರ್ ಅವರು ತಬ್ಬಿಕೊಂಡು ಕೈ ಹಿಡಿದು ಕರೆದುಕೊಂಡು ಹೋದಾಗ ದುಃಖವನ್ನು ತಡೆದುಕೊಳ್ಳಲು ಸಾಧ್ಯವಾಗಲಿಲ್ಲ ಎಂದು ಹೇಳಿದ್ದಾರೆ.
ಮರೆಯದ ಮಾಣಿಕ್ಯ ಪುನೀತ್ ರಾಜಕುಮಾರ್ ಅವರ ಪಾರ್ಥಿವ ಶರೀರಕ್ಕೆ ಭಾರದ ಮನಸ್ಸಿನಿಂದ ಅಂತಿಮ ನಮನ ಸಲ್ಲಿಸಿದೆ. ‘ಮತ್ತೆ ಹುಟ್ಟಿ ಬಾ ಅಪ್ಪು’ ಎಂದು ಅವರು ಹರಸಿದ್ದಾರೆ.



