ನಮ್ಮ ದೇಶದ ದೃಶ್ಯ ಮಾಧ್ಯಮಗಳು, ಪತ್ರಿಕೆಗಳು, ಸಾಮಾಜಿಕ ಜಾಲತಾಣಗಳು, ವಾಟ್ಸಪ್ಗಳು, ಫೇಸ್‌ಬುಕ್‌ಗಳು ಮುಂತಾದಂತಹ ಎಲ್ಲಾ ಪ್ರಚಾರ ವಿಭಾಗದವರು ನಮ್ಮ ದೇಶದ ಪ್ರಧಾನ ಮಂತ್ರಿಗಳು ಮತ್ತು ಅವರ ಸರ್ಕಾರ ಮಾಡಿರುವ ಸಾಧನೆಗಳನ್ನು ಒಂದು ಕ್ಷಣವೂ ತೋರಿಸದೆ ಅದಕ್ಕೆ ಪ್ರಚಾರ ಕೊಡದೇ ಇರುವ ಕಾರಣದಿಂದ ಸ್ವತಃ ಪ್ರಧಾನ ಮಂತ್ರಿಗಳೇ ಬೆಂಗಳೂರಿನ 10ರಷ್ಟು ದೊಡ್ಡದಾಗಿರುವ ಪಾಂಡಿಚೇರಿಯ 30 ವಿಧಾನಸಭಾ ಕ್ಷೇತ್ರಗಳ ಪ್ರಚಾರಕ್ಕೆ ಹಲವಾರು ಬಾರಿ ಅವರೇ ಹೋಗಿ ಹಲವಾರು ತಾಸುಗಳ ಭಾಷಣವನ್ನು ಮಾಡಿ ಜನತೆಗೆ ಸಾಧನೆಯನ್ನು ನೇರವಾಗಿ ಮುಟ್ಟಿಸಬೇಕಾಗಿದೆ.
ಇವರೊಂದಿಗೆ ಗೃಹ ಸಚಿವರು ಸಹ ಅಷ್ಟೇ ಪ್ರಮಾಣದಲ್ಲಿ ಬೆವರು ಸುರಿಸುತ್ತಿದ್ದಾರೆ. ಇನ್ನು 294 ಸ್ಥಾನಗಳಿರುವ ಪಶ್ಚಿಮ ಬಂಗಾಳದಲ್ಲಿ ಇವರು ಹೆಚ್ಚು ಪ್ರಚಾರವನ್ನು ಮಾಡಿ ಸಾಧನೆಯನ್ನು ತಿಳಿಸಿಕೊಡುವ ಸಲುವಾಗಿ 8 ಹಂತದ ಚುನಾವಣೆಯನ್ನು ನಡೆಸುತ್ತಿದ್ದಾರೆ. ಇದು ಸಾಧ್ಯವಾಗುವುದಿಲ್ಲ. ಕನಿಷ್ಠ 20 ಹಂತ ಚುನಾವಣೆ ಮಾಡಿದರೆ ನಮ್ಮ ಪ್ರಧಾನಿಗಳಿಗೆ ಸಮಯ ಸಾಕಾಗುತ್ತಿತ್ತು.
ಕೇರಳದಲ್ಲಿ ಮತ್ತು ತಮಿಳುನಾಡಿನಲ್ಲಿ ಇವರ ಸಾಧನೆಗಳನ್ನು ಸರಿಯಾಗಿ ಜನ ಅರ್ಥ ಮಾಡಿಕೊಳ್ಳುವುದಿಲ್ಲ ಎಂದು ಹೆಚ್ಚು ಆಸಕ್ತಿಯನ್ನು ವಹಿಸುತ್ತಿಲ್ಲ. ಅಸ್ಸಾಂನಲ್ಲಿ ಸಹ ಇವರ ಪ್ರಚಾರಕ್ಕೆ 3 ಹಂತದ ಚುನಾವಣೆ ಸಾಲುವುದಿಲ್ಲ. ಕನಿಷ್ಠ ಅಲ್ಲಿ 10 ಹಂತವನ್ನಾದರೂ ಮಾಡಿದರೆ ಚೆನ್ನಾಗಿರುತ್ತಿತ್ತು. ದುರಂತವೆಂದರೆ ಇವರು ಪ್ರತಿವರ್ಷ ಕೊಟ್ಟಿರುವ ಕೋಟಿ ಕೋಟಿ ಉದ್ಯೋಗಗಳನ್ನು ಪಡೆದುಕೊಂಡಿರುವ ಯುವಕರು ಜನತೆಗೆ ಸರಿಯಾಗಿ ತಿಳಿಸುತ್ತಲೇ ಇಲ್ಲ.
ಇನ್ನೂ ಜಿ.ಎಸ್.ಟಿ, ನಿರ್ಧಾರದಿಂದ ಅಪಾರ ಪ್ರಮಾಣದಲ್ಲಿ ಅನುಕೂಲ ಪಡೆದಿರುವ ನಮ್ಮ ಉದ್ಯಮಿಗಳು ಪ್ರಚಾರವನ್ನೇ ಮಾಡುತ್ತಿಲ್ಲ. ಅದೇ ರೀತಿಯಲ್ಲಿ ಆಹಾರ ಪದಾರ್ಥಗಳ ಬೆಲೆ ಅತ್ಯಂತ ಕಡಿಮೆ ಬೆಲೆ ಸಿಗುವಂತೆ ಮಾಡಿರುವ ವಿಚಾರವನ್ನು ಮಹಿಳೆಯರು ಅರ್ಥವೇ ಮಾಡಿಕೊಂಡಿಲ್ಲ. ಅದೇ ರೀತಿಯಲ್ಲಿ ಸಣ್ಣ ಪುಟ್ಟ ಕೈಗಾರಿಕೆಗಳು, ಗುಡಿಕೈಗಾರಿಕೆಗಳು ನಾಗಾಲೋಟದತ್ತ ಓಡುತ್ತಿರುವುದನ್ನು ಯಾರೂ ಹೇಳುತ್ತಲೇ ಇಲ್ಲ.
ಅಡುಗೆ ಅನಿಲ, ಪೆಟ್ರೋಲ್, ಡೀಸಲ್ ಇವುಗಳನ್ನು ಕೆಲವೆ ಕೆಲವು ರೂಪಾಯಿಗಳಿಗೆ ಕೊಡುತ್ತಿರುವುದನ್ನು ಯಾರು ಹೇಳುತ್ತಿಲ್ಲ. ಅದೇ ರೀತಿಯಲ್ಲಿ ಲಾಕ್‌ಡೌನ್ ಅವಧಿಯಲ್ಲಿ ಒಬ್ಬರೇ ಒಬ್ಬರು ಸಾಯದಂತೆ ದೇಶದ ಎಲ್ಲಾ ಆಸ್ಪತ್ರೆಗಳಲ್ಲಿ ಅದರಲ್ಲೂ ಖಾಸಗಿ ಆಸ್ಪತ್ರೆಗಳಲ್ಲಿ ನಯಾಪೈಸಾ ಖರ್ಚು ಆಗದಂತೆ ಚಿಕಿತ್ಸೆ ಕೊಡಿಸಿದ್ದು ಯಾರೂ ಹೇಳುತ್ತಿಲ್ಲ.
ಇನ್ನು ವಲಸೆ ಕಾರ್ಮಿಕರು ಸುರಕ್ಷಿತವಾಗಿ ಅಂತರರಾಷ್ಟ್ರೀಯ ವಿಮಾನಗಳಲ್ಲಿ ಹವಾನಿಯಂತ್ರಿತ ಬಸ್ಸುಗಳಲ್ಲಿ ಒಬ್ಬರೂ ಸಾಯದಂತೆ ರಸ್ತೆಯ ಮೇಲೆ ನಡೆದು ಹೋಗದಂತೆ, ರೈಲು ಹಳಿಗಳ ಮೇಲೆ ಬಿದ್ದು ಸಾಯದಂತೆ ಸುರಕ್ಷಿತವಾಗಿ ಅವರ ಊರುಗಳಿಗೆ ತಲುಪಿಸಿದ್ದು ಯಾರೂ ಹೇಳುತ್ತಿಲ್ಲ. ಅದಕ್ಕೆ ನಮ್ಮ ಪ್ರಧಾನಿಗಳು ಸ್ವತಃ ಅವರೇ ಯಾವುದೇ ರಾಜ್ಯದ ಚುನಾವಣೆ ಬಂದರು ಸಹ ತಮ್ಮ ಸಾಧನೆಯನ್ನು ತಮ್ಮ ಬಾಯಿಂದಲೇ ಮತದಾರರಿಗೆ ಹೇಳಿ ಸಂತೃಪ್ತರಾಗುತ್ತಿದ್ದಾರೆ.
ಇನ್ನು ಸರ್ಕಾರಿ ವ್ಯವಸ್ಥೆಗಳ ಅವ್ಯವಸ್ಥೆಯನ್ನು ಕಂಡು ನೊಂದಿರುವ ನಮ್ಮ ಪ್ರಧಾನಿಗಳು ರೈಲ್ವೆನಿಲ್ದಾಣಗಳನ್ನು, ರೈಲುಮಾರ್ಗಗಳನ್ನು, ವಿಮಾನ ನಿಲ್ದಾಣಗಳನ್ನು ಹಲವಾರು ಕಂಪನಿಗಳನ್ನು, ಎಲ್.ಐ.ಸಿ. ಶೇರುಗಳನ್ನು ಮಾರಾಟ ಮಾಡುತ್ತಿರುವ ವಿಚಾರವನ್ನು ಯಾರೂ ಹೇಳುತ್ತಿಲ್ಲ.
ಇನ್ನು ಈ ದೇಶದಲ್ಲಿ ನೋಟು ಅಮಾನ್ಯೀಕರಣದ ನಂತರ ವಿಶ್ವದಲ್ಲಿಯೇ ಆರ್ಥಿಕ ಕ್ಷೇತ್ರದಲ್ಲಿ ಮೊದಲ ಸ್ಥಾನವನ್ನು ತಲುಪಿ జి.ಡಿ.జి. ದರ ವಿಶ್ವದಲ್ಲಿಯೇ ಎಲ್ಲಾ ರಾಷ್ಟ್ರಗಳಿಗಿಂತ ಮೇಲಿನ ಸ್ಥಾನದಲ್ಲಿರುವುದನ್ನು ಯಾರೂ ಪ್ರಚಾರ ಮಾಡುತ್ತಿಲ್ಲ. ಅದಕ್ಕಾಗಿ ಅವರು ಗೃಹ ಸಚಿವರ ಜೊತೆ ಸೇರಿ ಪ್ರತಿಯೊಂದು ರಾಜ್ಯದ ಚುನಾವಣೆಯಲ್ಲಿಯೂ ಗಲ್ಲಿಗಲ್ಲಿಗಳಲ್ಲಿ, ಹಳ್ಳಿಹಳ್ಳಿಗಳಲ್ಲಿ ಊರೂರು ಸುತ್ತುತ್ತಾ ಬಹಿರಂಗ ಸಭೆಗಳನ್ನು ಮಾಡಿ ತಮ್ಮ ಸಾಧನೆಯನ್ನು ತಮ್ಮ ಗಂಟಲು ಹರಿಯುವಷ್ಟು ಸಾರುತ್ತಿದ್ದಾರೆ.
ಇನ್ನಾದರೂ ಇವರ ಸಾಧನೆಯನ್ನು ನಮ್ಮ ದೇಶದ ದೃಶ್ಯ ಮಾಧ್ಯಮದವರು, ಪತ್ರಿಕೆಯವರು, ಸಾಮಾಜಿಕ ಜಾಲತಾಣದವರು ತೋರಿಸಿ ಪ್ರಧಾನ ಮಂತ್ರಿಗಳು ವಿಶ್ರಾಂತಿ ಇಲ್ಲದೆ ಚುನಾವಣೆ ಪ್ರಚಾರ ಮಾಡುವ ಒತ್ತಡವನ್ನು ಕಡಿಮೆ ಮಾಡಲಿ.
- ಕೆ.ಎಸ್.ನಾಗರಾಜ್, ಬೆಂಗಳೂರು




