ಅಗತ್ಯ ಬಿದ್ದರೆ ಮಾಡಾಳ್ ವಿರೂಪಾಕ್ಷಪ್ಪ ವಿಚಾರಣೆ: ಬಿ.ಎಸ್.ಪಾಟೀಲ್

3 years ago

ಬೆಂಗಳೂರು: ಗುತ್ತಿಗೆ ಪಡೆಯಲು ಲಂಚ ಪಡೆಯುತ್ತಿದ್ದ ವೇಳೆ ತಮ್ಮ ಪುತ್ರ ಲೋಕಾಯುಕ್ತ ಪೊಲೀಸರಿಗೆ ಸಿಕ್ಕಿಬಿದ್ದಿರುವ ಬೆನ್ನಲ್ಲೇ ‌ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಬಂಧನಕ್ಕೆ ಬಲೆ ಬೀಸಲಾಗಿದೆ.

ಈ ನಡುವೆ ಬೆಳವಣಿಗೆಗಳ ಬಗ್ಗೆ ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಯಾರೇ ತಪ್ಪು ಮಾಡಿದ್ದರೂ ಕಾನೂನಿನ ಪ್ರಕಾರವೇ ಶಿಕ್ಷೆಯಾಗಲಿದೆ ಎಂದು ಹೇಳಿದರು.

ಲೋಕಾಯುಕ್ತ ಸರ್ವ ಸ್ವತಂತ್ರವಾಗಿ ಕೆಲಸ ಮಾಡಲಿ. ನಾವು ಯಾರನ್ನೂ ಕೂಡ ರಕ್ಷಣೆ ಮಾಡುವ ಪ್ರಶ್ನೆಯೇ ಇಲ್ಲ. ತಪ್ಪು ಮಾಡಿದವರಿಗೆ ಶಿಕ್ಷೆಯಾಗುವಂತೆ ತನಿಖೆಯಾಗಲಿ ಲೋಕಾಯುಕ್ತ ಇರುವುದೇ ಅದಕ್ಕಾಗಿ ಎಂದರು.

ಪೊಲೀಸರು ದಾಳಿ ನಡೆಸಿದ್ದಾರೆ. ನಾವು ಲೋಕಾಯುಕ್ತಕ್ಕೆ ಸಂಪೂರ್ಣ ಅಧಿಕಾರ ನೀಡಿದ್ದೇವೆ.
ಮುಕ್ತವಾಗಿ ತನಿಖೆ ನಡೆದು ಹಣ ಯಾರಿಗೆ ಸೇರಿದೆ ಎನ್ನುವ ಮಾಹಿತಿ ಹೊರಗೆ ಬರಲಿ. ಸತ್ಯ ಜನರಿಗೆ ತಿಳಿದು ತಪ್ಪು ಮಾಡಿದವರಿಗೆ ಶಿಕ್ಷೆಯಾಗಲಿ ಎಂದರು.

ಹಿಂದೆ ಕಾಂಗ್ರೆಸ್ ಸರ್ಕಾರದ ಅಧಿಕಾರವಧಿಯಲ್ಲಿ ಇಂತಹ ಹತ್ತಾರು ಪ್ರಕರಣಗಳು ನಡೆದಿವೆ ಮತ್ತು ಅಲ್ಲಲ್ಲೇ ಮುಚ್ಚಿಹೋಗಿವೆ. ಎಸಿಬಿ ರಚಿಸಿ ಲೋಕಾಯುಕ್ತದ ಹಲ್ಲು ಕೀಳುವ ಪ್ರಯತ್ನ ನಾವು ಮಾಡಿಲ್ಲ, ಅದನ್ನು ಮಾಡಿರುವುದು ಕಾಂಗ್ರೆಸ್ ಎಂದು ದೂರಿದರು.

ಇಂದು ಬಿಜೆಪಿ ವಿರುದ್ಧ ಇನ್ನಿಲ್ಲದ ಆರೋಪವನ್ನು ಕಾಂಗ್ರೆಸ್ ನಾಯಕರು ಮಾಡುತ್ತಿದ್ದಾರೆ. ಅಂದು ಎಸಿಬಿ ರಚಿಸಿ ಇಂತಹ ಪ್ರಕರಣಗಳನ್ನು ಮುಚ್ಚಿಹಾಕಲು ಪ್ರಯತ್ನಿಸಿದ್ದೇ ಕಾಂಗ್ರೆಸ್‍ನವರು. ಹೀಗಾಗಿ ಇಂದು ಬಿಜೆಪಿ ಬಗ್ಗೆ ಮಾತನಾಡುವ ನೈತಿಕ ಹಕ್ಕು ಅವರಿಗೆಲ್ಲಿದೆ ಎಂದು ಕೇಳಿದರು.

ಅಗತ್ಯ ಕ್ರಮ: ಈ ನಡುವೆ, ಲಂಚ ಸ್ವೀಕಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಅಗತ್ಯ ಬಿದ್ದರೆ ಚನ್ನಗಿರಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಅವರನ್ನು ವಿಚಾರಣೆಗೊಳಪಡಿಸಲಾಗುವುದು ಎಂದು ಲೋಕಾಯುಕ್ತ ಬಿ.ಎಸ್.ಪಾಟೀಲ್ ಇಂದಿಲ್ಲಿ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಾಸಕರ ಪುತ್ರರಾಗಿರುವ ಜಲಮಂಡಳಿ ಲೆಕ್ಕಾಧಿಕಾರಿ ಪ್ರಶಾಂತ್ ಮಾಡಾಳ್ ಅವರ ಕಚೇರಿ ಮತ್ತು ನಿವಾಸದ ಮೇಲೆ ನಮ್ಮ ಪೊಲೀಸರು ದಾಳಿ ನಡೆಸಿ ಇದುವರೆಗೂ 8.12 ಕೋಟಿ ರೂ.ನಗದು ವಶಪಡಿಸಿಕೊಂಡಿದ್ದಾರೆ ಎಂದು ಅವರು ಮಾಹಿತಿ ನೀಡಿದರು.

ಪ್ರಕರಣಕ್ಕೆ ಸಂಬಂಧಿಸಿದಂತೆ ನಾವು ಇದುವರೆಗೂ 5 ಮಂದಿಯನ್ನು ವಶಕ್ಕೆ ಪಡೆದಿದ್ದು, ಅವರ ವಿರುದ್ಧ ಕಾನೂನು ಪ್ರಕಾರ ಕ್ರಮ ಜರುಗಿಸಲಾಗುವುದು.
ಘಟನೆ ಕುರಿತಂತೆ ಲೋಕಾಯುಕ್ತ ಪೊಲೀಸರು ತನಿಖೆ ನಡೆಸುತ್ತಿದ್ದು, ಪ್ರಕರಣದಲ್ಲಿ ಯಾರ್ಯಾರು ಭಾಗಿಯಾಗಿದ್ದಾರೋ ಅವರೆಲ್ಲರ ವಿರುದ್ಧವೂ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದರು.

Leave a Reply