ಉತ್ತಮ ಕೆಲಸ ಮಾಡಲು ದೇವಿ ಇನ್ನೊಂದು ವರ್ಷವಾದರೂ ಆಶೀರ್ವದಿಸಲಿ: ಸಿದ್ದರಾಮಯ್ಯ

2 years ago

ಬೆಂಗಳೂರು: ನಾಡಹಬ್ಬ ವಿಶ್ವ ವಿಖ್ಯಾತ ಮೈಸೂರು ದಸರಾ ಉದ್ಘಾಟನೆ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಅಧಿಕಾರಾವಧಿಯ ಕುರಿತಾಗಿ ಆಶ್ಚರ್ಯಕರ ಹೇಳಿಕೆ ನೀಡುವ ಮೂಲಕ ರಾಜಕೀಯ ವಲಯದಲ್ಲಿ ವ್ಯಾಪಕ ಚರ್ಚೆಗೆ ಗ್ರಾಸ ಒದಗಿಸಿದ್ದಾರೆ.

ದಸರಾ ಉದ್ಘಾಟನೆ ಸಮಾರಂಭದಲ್ಲಿ ಮಾತನಾಡಿದ ಅವರು, ಇನ್ನೊಂದು ವರ್ಷ ದೇವಿ ನನಗೆ ಅಧಿಕಾರ ನಡೆಸಲು ಆರ್ಶೀವಾದ ಮಾಡಲಿ. ಉತ್ತಮ ಕೆಲಸ ಮಾಡಲು ದೇವಿ ಇನ್ನೊಂದು ವರ್ಷವಾದರೂ ಆಶೀರ್ವದಿಸಲಿ. ಜನರ ಸೇವೆ ಮಾಡಲು ಆ ತಾಯಿ ಚಾಮುಂಡಿ ಶಕ್ತಿ ಕೊಡಲಿ ಎಂದು ಬೇಡಿಕೊಳ್ಳುವೆ ಎಂದಿದ್ದಾರೆ.

ಅಧಿಕಾರದ ಹಂಚಿಕೆ ಬಗ್ಗೆಯೇ ಸಿಎಂ ಈ ರೀತಿಯ ಮಾತುಗಳನ್ನು ಹೇಳಿದ್ದಾರೆ. ಹೀಗಾಗಿ ಇನ್ನೊಂದು ವರ್ಷ ಸಿಎಂ ಸ್ಥಾನದಲ್ಲಿ ಸಿದ್ದರಾಮಯ್ಯ ಅವರು ಮುಂದುವರಿದರೆ ಎರಡೂವರೆ ವರ್ಷ ಪೂರೈಸಿದಂತಾಗುತ್ತದೆ. ಒಂದು ವರ್ಷದ ನಂತರ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆ ಎಂಬ ಚರ್ಚೆ, ಕುತೂಹಲ ಇದೀಗ ಈ ಭಾಷಣ ಮೂಡಿಸಿದೆ.

ಇದರ ನಡುವೆ ನಿವೇಶನ ಹಂಚಿಕೆ ಹಗರಣದಲ್ಲಿ ಸಿಲುಕಿರುವ ಸಿದ್ದರಾಮಯ್ಯ ವಿರುದ್ಧ ಜಾರಿ ನಿರ್ದೇಶನಾಲಯ ಪ್ರಕರಣ ದಾಖಲಿಸಿದ್ದು, ಅವರನ್ನು ಯಾವುದೇ ಕ್ಷಣದಲ್ಲಿ ಬಂಧಿಸುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜಿನಾಮೆ ನೀಡಬೇಕಾದ ಅನಿವಾರ್ಯತೆ ಉಂಟಾಗಲಿದೆ. ಹೀಗಾಗಿಯೇ ಸಿದ್ದರಾಮಯ್ಯ ಅವರು ಅಧಿಕಾರ ತ್ಯಾಗದ ಮಾತನಾಡಿದ್ದಾರೆ ಎನ್ನಲಾಗುತ್ತಿದೆ.

ನಂತರ ಚಲನಚಿತ್ರೋತ್ಸವ ಉದ್ಘಾಟಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ದೇವರಾಜ ಅರಸು ಬಿಟ್ಟರೆ 5 ವರ್ಷ ಸಿಎಂ ಆಗಿದ್ದು ನಾನೇ. ಮುಂದಿನ 5 ವರ್ಷಗಳಲ್ಲೂ ಕೂಡ ನಾನೇ ಸಿಎಂ, ಈಗಲೂ ಎಷ್ಟೇ ತೊಡಕು ಬಂದರೂ ತಾಯಿ ಚಾಮುಂಡೇಶ್ವರಿಯ ಆಶೀರ್ವಾದ ನನಗೆ ಇದೆ ಎಂದರು.

ವೇದಿಕೆಯಲ್ಲಿದ್ದ ಜೆಡಿಎಸ್ ನಾಯಕ ಜಿ.ಟಿ.ದೇವೇಗೌಡ ಉಲ್ಲೇಖಿಸಿ, ನೀನೇ ಒಂದು ಸಲ ಸೋಲಿಸಿಬಿಟ್ಟೇ. ನಾನು ಮಂತ್ರಿಯಾಗಿ 40 ವರ್ಷಗಳಾಯಿತು. ನಾನು ಯಾವ ತಪ್ಪೂ ಮಾಡಿಲ್ಲ. ಮಾಡಿದ್ದರೆ ಸುದೀರ್ಘ ರಾಜಕೀಯದಲ್ಲಿ ಇರುತ್ತಿರಲಿಲ್ಲ. ನಾವು ಜಿ.ಟಿ.ದೇವೇಗೌಡರು ಒಂದೇ ತಾಲ್ಲೂಕಿನವರು. ಜಿ.ಟಿ .ದೇವೇಗೌಡ ಸತ್ಯಕ್ಕೆ ಜಯ ಸಿಗಬೇಕು ಎಂದಿರುವುದು ನನಗೆ ಮತ್ತಷ್ಟು ಬಲ ತಂದಿದೆ ಎಂದರು.

ನಾನು ಡಿಕೆ ಇಬ್ಬರೂ ಒಟ್ಟಿಗೆ ಬೆಟ್ಟಕ್ಕೆ ಬಂದು ಚಾಮುಂಡಿ ತಾಯಿಯ ಪೂಜೆ ಮಾಡಿ 5 ಗ್ಯಾರಂಟಿಗೆ ಶಕ್ತಿ ಕೊಡಮ್ಮ ಎಂದು ಕೇಳಿಕೊಂಡಿದ್ದೆವು. ಅಧಿಕಾರಕ್ಕೆ ಬಂದ 8 ತಿಂಗಳಲ್ಲಿ ಎಲ್ಲಾ ಗ್ಯಾರಂಟಿ ಜಾರಿ ಮಾಡಿದ್ದೇವೆ. ಇದು ಚಾಮುಂಡಿಯ ಆಶೀರ್ವಾದ ಎಂದರು.

ದೇವರ ಹಾಗೂ ಜನರ ಆಶೀರ್ವಾದ ಇರುವವರೆಗೂ ನನ್ನನ್ನು ಯಾರಿಂದಲೂ ಏನು ಮಾಡಲು ಸಾಧ್ಯವಿಲ್ಲ. ಏನಪ್ಪಾ ಜಿಟಿ, ನೀನೇ ನನ್ನ ಒಂದು ಬಾರಿ ಸೋಲಿಸಿದ್ದೆ ಎಂದು ನಗೆ ಚಾಟಿಕೆ ಹಾರಿಸಿದರು.

ಒಟ್ಟು 9 ಚುನಾವಣೆ ಗೆದ್ದಿದ್ದೇನೆ. 40 ವರ್ಷ ಮಂತ್ರಿಯೇ ಆಗಿದ್ದೇನೆ. ಚಾಮುಂಡಿ ಕೃಪೆಯಿಂದ ಇಲ್ಲಿವರೆಗೂ ತಪ್ಪು ಮಾಡಿಲ್ಲ. ತಪ್ಪು ಮಾಡಿದರೆ ಇಷ್ಟು ವರ್ಷ ದೀರ್ಘ ರಾಜಕಾರಣ ಮಾಡಲು ಆಗುತ್ತಿರಲಿಲ್ಲ. ನಾನು ಜಿ.ಟಿ.ದೇವೇಗೌಡರು ಒಂದೇ ತಾಲ್ಲೂಕಿನವರು, ಒಟ್ಟಿಗೆ ರಾಜಕಾರಣ ಮಾಡಿದ್ದೇವೆ, ಸತ್ಯಕ್ಕೆ ಜಯ ಸಿಕ್ಕೇ ಸಿಗುತ್ತದೆ. ಹಾಗಾಗಿ ಜಿ.ಟಿ.ದೇವೇಗೌಡರಿಗೆ ಧನ್ಯವಾದ ಹೇಳುತ್ತೇನೆ ಎಂದರು.

Leave a Reply