ಬೆಂಗಳೂರು: ಮುಂದಿನ 25 ವರ್ಷಗಳ ಅಭಿವೃದ್ಧಿಯನ್ನು ಗಮನದಲ್ಲಿ ಇಟ್ಟುಕೊಂಡು ಕಾಂಗ್ರೆಸ್ ಚುನಾವಣಾ ಪ್ರಣಾಳಿಕೆಯನ್ನು ರೂಪಿಸಿದೆ. ಎಲ್ಲವನ್ನೂ ಸುದೀರ್ಘವಾಗಿ ಚರ್ಚಿಸಿ, ಪ್ರಜ್ಞಾಪೂರ್ವಕವಾಗಿ ಅನುಷ್ಠಾನ ಯೋಗ್ಯ ಕಾರ್ಯಕ್ರಮಗಳನ್ನು ಮಾತ್ರ ಘೋಷಿಸಲಾಗಿದೆ ಎಂದು ಪ್ರಣಾಳಿಕೆ ಸಮಿತಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಸ್ಪಷ್ಟ ಪಡಿಸಿದ್ದಾರೆ.
ಪ್ರಣಾಳಿಕೆ ಬಿಡುಗಡೆ ಸಂದರ್ಭದಲ್ಲಿ ಅದರಲ್ಲಿನ ಪ್ರಮುಖ ಅಂಶಗಳ ಕುರಿತು ಮಾಹಿತಿ ನೀಡಿದ ಅವರು, ಕಾಂಗ್ರೆಸ್ ಪಕ್ಷದ ಬದ್ಧತೆ, ಧ್ಯೇಯೋದ್ದೇಶಗಳ ಚೌಕಟ್ಟಿನಲ್ಲಿ ಜನರ ಸಮಸ್ಯೆ ಅರ್ಥ ಮಾಡಿಕೊಳ್ಳಲು ರಾಜ್ಯ ಪ್ರವಾಸ ಮಾಡಿ ಎಲ್ಲಾ ಜನಸಮುದಾಯ ಭೇಟಿ ಮಾಡಿ ಚರ್ಚೆ ಮಾಡಿದ್ದೇವೆ. ಇದರ ಆಧಾರದ ಮೇಲೆ ಪ್ರಣಾಳಿಕೆ ತಯಾರು ಮಾಡಿದ್ದೇವೆ ಎಂದರು.
ನಮ್ಮ ಸಮಾಜದಲ್ಲಿದ್ದ ಕೆಳಸ್ತರದ ಸಮುದಾಯದ ಸಂಘ ಸಂಸ್ಥೆಗಳನ್ನು, ವಿಶೇಷವಾಗಿ ಪೌರಕಾರ್ಮಿಕ, ಕೃಷಿ ಕಾರ್ಮಿಕರು, ಚಾಲಕ ವರ್ಗ, ವಕೀಲರು, ವೈದ್ಯರು, ಪ್ರಗತಿ ಪರ ಹೋರಾಟಗಾರರು, ಸರ್ಕಾರಿ ನೌಕರರು, ಕಾರ್ಮಿಕ ಸಂಘಟನೆಗಳು, ರೈತ ಸಂಘಟನೆಗಳು, ಅಸಂಘಟಿತ ಕಾರ್ಮಿಕರು, ಧಾರ್ಮಿಕ ಸಂಘಟನೆ, ಅಲ್ಪಸಂಖ್ಯಾತರು, ಲೇಖಕರು, ಸಿಐಐ ಪ್ರತಿನಿಧಿಗಳ ಜತೆ ಚರ್ಚೆ ಮಾಡಿ ಅಭಿಪ್ರಾಯ ಸಂಗ್ರಹಿಸಿದ್ದೇವೆ ಎಂದರು.
ಬೆಂಗಳೂರಿನಲ್ಲಿನ ಸಮಸ್ಯೆ ಗುರುತಿಸಲು ಅನೇಕ ಸಂಘ ಸಂಸ್ಥೆಗಳನ್ನು ಭೇಟಿ ಮಾಡಿ ಸಲಹೆ ಪಡೆದಿದ್ದೇವೆ. ಇದೆಲ್ಲದರ ಜತೆಗೆ ರಾಜಸ್ಥಾನ, ಹಿಮಾಚಲ ಪ್ರದೇಶ, ಛತ್ತೀಸ್ ಗಡ ಗಳಲ್ಲಿ ಕಾಂಗ್ರೆಸ್ ಸರ್ಕಾರ ನೀಡಿರುವ ಯೋಜನೆಗಳನ್ನು ಹಿನ್ನೆಲೆಯಾಗಿಟ್ಟುಕೊಂಡು ಕೆಪಿಸಿಸಿ ಅಧ್ಯಕ್ಷರು, ವಿರೋಧ ಪಕ್ಷದ ನಾಯಕರು, ಪಕ್ಷದ ಹಿರಿಯ ನಾಯಕರ ಜತೆ ಚರ್ಚಿಸಿ ನಾವು ಈ ಪ್ರಣಾಳಿಕೆಯನ್ನು ತಯಾರು ಮಾಡಿದ್ದೇವೆ. ರಾಜ್ಯದ ಜ್ವಲಂತ ಸಮಸ್ಯೆ ಅರಿತು, ನಮ್ಮ ಸರ್ಕಾರ ಕೊಟ್ಟ ಅನೇಕ ಯೋಜನೆಗಳ ಹಿನ್ನೆಲೆಯಲ್ಲಿ ಸಾಮಾಜಿಕ ನ್ಯಾಯ ಒದಗಿಸಿ, ಅಭಿವೃದ್ಧಿ, ಶಾಂತಿ ಸ್ಥಾಪಿಸಲು ಈ ಪ್ರಣಾಳಿಕೆ ತಯಾರು ಮಾಡಿದ್ದೇವೆ ಎಂದರು.
ಈ ಪ್ರಣಾಳಿಕೆ ಜಾರಿಗೆ ಉನ್ನತ ಸಮಿತಿ ರಚಿಸಲಾಗುವುದು. ರಾಜ್ಯದಲ್ಲಿನ ಭ್ರಷ್ಟಾಚಾರದ ಬಗ್ಗೆ ದೇಶಕ್ಕೆ ತಿಳಿದಿದೆ. ಇದಕ್ಕಾಗಿ ಇರುವ ಕಾನೂನು ಜತೆಗೆ ಹೊಸ ಕಾನೂನು ಜಾರಿ ಮಾಡಿ ಲೋಕಾಯುಕ್ತಕ್ಕೆ ಹೆಚ್ಚಿನ ಶಕ್ತಿ ನೀಡುವ ಮೂಲಕ ಭ್ರಷ್ಟಾಚಾರ ನಿಯಂತ್ರಣ ಮಾಡಲಾಗುವುದು ಎಂದರು.
ತಮಗೆಲ್ಲ ಗೊತ್ತಿರುವಂತೆ, ಹೊಸ ಪಿಂಚಣಿ ವ್ಯವಸ್ಥೆಯಿಂದ ತೊಂದರೆಯಾಗಿದೆ ಎಂದು 6.80 ಲಕ್ಷ ನೌಕರರು ಮನವಿ ನೀಡಿದ್ದರು. ಇದರ ಜತೆಗೆ ರಾಜಸ್ಥಾನ ಹಾಗೂ ಹಿಮಾಚಲ ಪ್ರದೇಶದಲ್ಲಿ ಜಾರಿ ಮಾಡಿರುವುದನ್ನು ಗಮನದಲ್ಲಿಟ್ಟುಕೊಂಡು 2006 ರಿಂದ ನೇಮಕಗೊಂಡಿರುವ ಎಲ್ಲಾ ಸರ್ಕಾರಿ, ಅನುದಾನಿತ ನೌಕರರನ್ನು ಹಳೆಯ ಪಿಂಚಣಿ ಯೋಜನೆಯಡಿ ತರಲು ಸಹನುಭೂತಿ ನಿರ್ಧಾರ ಮಾಡಲಾಗುವುದು ಎಂದರು.




