ಮಹಾಭಾರತದ ಮಹಾ ಭಾನಗಡಿಗಳು; ಸರಸ್ವತಿ ಮತ್ತು ಮಾಧವಿಯ ಕತೆ

5 years ago

ಸೃಷ್ಟಿಕರ್ತ ಬ್ರಹ್ಮ ದೇವರು ತಮ್ಮ ಬಾಯಿಂದ ಸರಸ್ವತಿ ಎಂಬ ಸಕಲ ವಿದ್ಯಾ ಪಾರಂಗತ ಹೆಣ್ಣುಮಗಳಿಗೆ ಜನ್ಮ ಕೊಟ್ಟು ಆಕೆಯ ಮೇಲೆಯೇ ಕಾಮ ಉಕ್ಕಿದ್ದು ಗೊತ್ತಲ್ಲ? ಬ್ರಹ್ಮ ದೇವರ ಈ ವಿಕೃತ ನಜರಿನಿಂದ ಪಾರಾಗಲು ಸರಸ್ವತಿ ತನ್ನ ಯಾವಾಗಲೂ ತಂದೆ ಕುಳಿತ ಅಥವಾ ನಿಂತ ವಿರುದ್ಧ ದಿಕ್ಕಿನಲ್ಲಿ ಇರಲು ಪ್ರಯತ್ನಿಸುತ್ತಿರುತ್ತಾಳೆ. ಆಕೆಯನ್ನು ಎಲ್ಲಿದ್ದರೂ ನೋಡಲೇಬೇಕು ಎಂಬ ಹಟಕ್ಕೆ ಬಿದ್ದ ಬ್ರಹ್ಮ ದೇವರು ನಾಲಕ್ಕೂ ದಿಕ್ಕಿನಲ್ಲಿ ತಲೆಗಳನ್ನು ಸೃಷ್ಟಿಸಿಕೊಳ್ಳುತ್ತಾರೆ. ತನ್ನ ಸ್ವಂತ ತಂದೆಯ ಕಾಮ ಪಿಪಾಸು ನಡವಳಿಕೆಯಿಂದ ಬೇಸತ್ತು ಮಗಳು ಮೇಲೆ ಸ್ವರ್ಗದತ್ತ ಹೊರಟು ಬಿಡುತ್ತಾಳೆ. ಹೋಗುತ್ತಾ `ಮೂರೂ ಲೋಕಗಳಲ್ಲಿ ನಿನ್ನನ್ನು ಯಾರೂ ಪೂಜಿಸದಂತಾಗಲಿ’ ಅಂತ ತಂದೆಗೆ ಶಾಪ ಕೊಡುತ್ತಾಳೆ.

ಬ್ರಹ್ಮ ಸೃಷ್ಟಿಕರ್ತ ಅಲ್ಲವೇ. ಅದರಲ್ಲೂ ಗಂಡಸು. ಕಾಮ ಪಿಪಾಸು ಪವರ್ ಫುಲ್ ಸೃಷ್ಟಿಕರ್ತ ಗಂಡಸು! ಅಹಂಕಾರ ಮತ್ತು ಆಸೆ ಎಷ್ಟಿರಬೇಡ!! ಸ್ವರ್ಗದಲ್ಲಿ ಎಲ್ಲಿದ್ದರೂ ನೋಡಬಹುದಾದ ಇನ್ನೊಂದು ಮುಖವನ್ನು ತನ್ನ ತಲೆಯ ಮೇಲ್ಭಾಗದಿಂದ ಹುಟ್ಟಿಸಿಕೊಂಡು ಮಗಳು ಎಲ್ಲಿದ್ದರೂ ಬಿಡದಂತೆ ಬೆನ್ನು ಬೀಳುತ್ತಾರೆ.

ಈ ಸಮಾಚಾರ ತಿಳಿದ ಶಿವ ಪರಮಾತ್ಮರು ನೀಚ ಬ್ರಹ್ಮನಿಗೆ ತಲೆ ಹೆಚ್ಚಾದವು ಅಂತ ಕೋಪಿಸಿಕೊಂಡು ಮೇಲೆ ಆಕಾಶದ ಕಡೆಗೆ ಬೆಳೆದ ತಲೆಯನ್ನು ಕಡಿದು ಹಾಕುತ್ತಾರೆ. ತಲೆ ಹೋದೊಡನೆ ಬ್ರಹ್ಮ ದೇವರಿಗೆ ಬುದ್ಧಿ ಬಂದು (ಅಥವಾ ಶಾಣ್ಯಾತನ ಹೆಚ್ಚಾಗಿ) ಪಶ್ಚಾತಾಪ ಪಡುತ್ತಾರೆ. ಮಗಳ ಮೇಲೆ ಆಸೆ ಪಟ್ಟ ಪಾಪ ತೊಳೆದುಕೊಳ್ಳಲು ಯಜ್ಞ ಯಾಗಗಳನ್ನು ಮಾಡಲು ಮುಂದಾಗುತ್ತಾರೆ. ಆದರೆ ಸಮಸ್ಯೆ ಏನೆಂದರೆ ಯಜ್ಞ ಯಾಗಗಳನ್ನು ದಂಪತಿಗಳು ಮಾತ್ರ ಮಾಡಬಹುದು ಆದರೆ ಬ್ರಹ್ಮ ದೇವರು ಬ್ರಹ್ಮಚಾರಿ! ಈ ಪಾಯಿಂಟ್ ಮುಂದೆ ಮಾಡಿಕೊಂಡು ಆಗಿನ ಏಕೈಕ ಮಹಿಳೆ ಸರಸ್ವತಿ ಬ್ರಹ್ಮ ದೇವರನ್ನು ಮದುವೆ ಆಗಲೇ ಬೇಕು ಅಂತ ಫಾರ್ಮಾನು ಹೊರಡಿಸುತ್ತಾರೆ. ಈ ಧರ್ಮ ಸೂಕ್ಷ್ಮದ ಬ್ಲ್ಯಾಕ್ ಮೇಲಿಗೆ ಬಲಿಯಾಗಿ ಸರಸ್ವತಿ ಬ್ರಹ್ಮ ದೇವರ ಜೊತೆ ಮದುವೆ ಆಗುತ್ತಾಳೆ. ಯಾವ ಮಗಳ ಮೇಲಿನ ಕಾಮವಾಂಛೆಯ ಪಾಪ ಪ್ರಾಯಶ್ಚಿತ್ತ ಮಾಡಿಕೊಳ್ಳಲು ಯಜ್ಞ ಮಾಡಿದರೋ ಬ್ರಹ್ಮ ದೇವರು, ಅದೇ ಯಜ್ಞದ ನೆಪದಲ್ಲಿ ಅದೇ ಮಗಳನ್ನು ಮದುವೆ ಆಗುತ್ತಾರೆ. ಹೆಂಗಿದೆ ಧರ್ಮ ಸೂಕ್ಷ್ಮ?

ಸರಸ್ವತಿ ಮತ್ತು ಬ್ರಹ್ಮ ದೇವರಿಗೆ ಹೆಚ್ಚೂ ಕಡಿಮೆ ಇಪ್ಪತ್ತು ಮಕ್ಕಳು. ಸ್ವಯಂಭು, ಅತ್ರಿ, ದಕ್ಷ ಮತ್ತು ಚಂದ್ರ ಇವರಲ್ಲಿ ಮುಖ್ಯರು. ಸ್ವಯಂಭು ಮನುಸ್ಮೃತಿಯ ಕಾರಕ (ಸ್ವಯಂಭು ಮನು), ಅತ್ರಿಯ ಮೊಮ್ಮಗ ಇಕ್ಷ್ವಾಕು ಸುರ್ಯವಂಶದ ಸಂಸ್ಥಾಪಕ. ಚಂದ್ರನ ಮಗ ಬುಧ, ಚಂದ್ರ ವಂಶದ ಸಂಸ್ಥಾಪಕ. ದಕ್ಷನ ಮಗ ಕಶ್ಯಪ, ಪ್ರಜಾಪತಿ (ಕಾಶ್ಮೀರ ಎಂಬ ಹೆಸರಿಗೆ ಮೂಲ ಈ ಕಶ್ಯಪ) . ಹಾಗೆಯೇ ನಾರದ, ವಶಿಷ್ಠ, ಮಾರೀಚಿ, ಪುಲಸ್ತ್ಯ ಇತ್ಯಾದಿಗಳೂ ಬ್ರಹ್ಮ ಸರಸ್ವತಿಯ ಮಕ್ಕಳೇ.

ಸದರಿ ಚಂದ್ರ ವಂಶದ ರಾಜ ಬ್ರಹ್ಮ ದೇವರ ಮಗ ಬುಧ ಅಂದೆವಲ್ಲ, ಈ ಬುಧನ ಮಗ ಪುರೂರವ. ಪುರೂರವನಿಗೆ ಇಬ್ಬರು ಮಕ್ಕಳು; ಅಯಸು ಮತ್ತು ಜಯ. ಜಯನ ಮಗ ವಿಶ್ವಾಮಿತ್ರ (ಕೌಶಿಕ). ಅಯಸುವಿನ ಮೊಮ್ಮಗ ಯಯಾತಿ. ಅಲ್ಲಿಗೆ ವಿಶ್ವಾಮಿತ್ರ ಯಯಾತಿಗೆ ತಂದೆ ಸಮಾನ.

ಯಯಾತಿ ಮತ್ತು ದೇವಯಾನಿಯ ಕತೆ, ಯಯಾತಿ ದೇವಯಾನಿಯನ್ನು ಪ್ರೀತಿಸಿ ಮದುವೆಯಾಗಿದ್ದು ಜೊತೆಗೆ ಆಕೆಯ ಗೆಳತಿ ಶರ್ಮಿಷ್ಠೆಯ ಜೊತೆಯೂ ಸಂತಾನೋತ್ಪತ್ತಿ ಮಾಡಿದ್ದೂ ಎಲ್ಲ ಗೊತ್ತಿದೆ ಅಂದುಕೊಳ್ಳುತ್ತೇನೆ. ಹಾಗೆಯೇ ಯಯಾತಿ ತನ್ನ ಮಗ ಪುರುವಿನ ಯವ್ವನವನ್ನೂ ಪಡೆದದ್ದು, ಮತ್ತೆ ಹಿಂತಿರುಗಿಸಿದ್ದು ಇತ್ಯಾದಿ ಕೂಡ ಗೊತ್ತಿದೆ ಅಂದುಕೊಳ್ಳುತ್ತೇನೆ. ಪುರುವಿನ ನಂತರದ ಹೆಚ್ಚೂ ಕಡಿಮೆ ನಲವತ್ತನೇ ತಲೆಮಾರಿನ ಕತೆ ರಾಮಾಯಣ. ರಾಮಾಯಣದ ನಂತರದ ಸುಮಾರು ಇಪ್ಪತ್ತನೇ ತಲೆಮಾರು ಕೌರವ-ಪಾಂಡವರದು. ಇರಲಿ, ನಾನೀಗ ಮಾಧವಿಯ ಕತೆ ಹೇಳಬೇಕು ಅಂತ ಹೊರಟಿದ್ದು.

ಯಯಾತಿ ಚಿರ ಯವ್ವನ ಸಾಧಿಸಿದಾಗ ದೇವಯಾನಿಯೊಡನೆ ಸೇರಿ ಜನ್ಮ ಕೊಟ್ಟ ಮಗಳು ಮಾಧವಿ. ಈ ಮಾಧವಿ ಕೂಡ ಒಂದು ವಿಶಿಷ್ಠ ವರ (ಅಥವಾ ಗುಣವಿಶೇಷ ಅನ್ನಿ) ಪಡೆದುಕೊಂಡೇ ಹುಟ್ಟುತ್ತಾಳೆ. ಅದೇನೆಂದರೆ ಈಕೆ ಎಷ್ಟೇ ಸಾರಿ ಲೈಂಗಿಕ ಕ್ರಿಯೆ ನಡೆಸಲಿ, ಎಷ್ಟೇ ಮಕ್ಕಳನ್ನು ಹೆರಲಿ ಪ್ರತಿ ಸಾರಿಯೂ ಈಕೆಯ ಕನ್ಯತ್ವ ಮತ್ತೆ ಮತ್ತೆ ಮರು ಹುಟ್ಟು ಪಡೆಯಬಲ್ಲುದು.

ಸದರೀ ಯಯಾತಿಯ ಸರೀಕ ಗಾಲವ. ಗಾಲವ ವಿಶ್ವಾಮಿತ್ರನ ಮಗ. ಅಂದರೆ ಯಯಾತಿಯ ಕಸಿನ್ ಬ್ರದರ್. ಗಾಲವ ವಿಶ್ವಾಮಿತ್ರನ ಶಿಷ್ಯ ಕೂಡ. ಹಾಗೆಯೇ ರಾಮ ದೇವರ ಗುರುವೂ ವಿಶ್ವಾಮಿತ್ರರೇ! ಸರಿ ಈ ಗಾಲವ ಸಕಲ ವಿದ್ಯೆಗಳನ್ನು ಕಲಿತಾದ ಮೇಲೆ ಗುರುದಕ್ಷಿಣೆಯಾಗಿ ಏನು ಕೊಡಲಿ ಅಂತ ತನ್ನ ಗುರು ಮತ್ತು ತಂದೆಯಾದ ವಿಶ್ವಾಮಿತ್ರರನ್ನು ಕೇಳುತ್ತಾನೆ. ಹೇ ಏನೂ ಬೇಡ ಇರಲಿ ಹೋಗಯ್ಯಾ ಅಂತಾರೆ ಗುರು. ಆದರೂ ಗಾಲವ ಏನಾದರೂ ಕೊಡಲೇ ಬೇಕಲ್ಲ ಏನೂ ಬೇಡ ಅಂದು ಬಿಟ್ಟರೆ ಹೆಂಗೆ ಅಂತೆಲ್ಲ ಹಠ ಮಾಡುತ್ತಾನೆ. ಆಗ ಗುರುಗಳು ಇವನ ಕಿರಿ ಕಿರಿ ತಾಳಲಾಗದೇ `ಸರಿ, ಎಂಟು ನೂರು ಕುದುರೆಗಳನ್ನು ತಂದು ಕೊಡು ಸಾಕು’ ಅಂತಾರೆ. `ಆದರೆ ಒಂದು ಕಂಡೀಶನ್. ಆ ಎಲ್ಲಾ ಕುದುರೆಗಳು ಶುಭ್ರ ಬಿಳಿ ಬಣ್ಣದ್ದೇ ಇರಬೇಕು ಅಷ್ಟೇ ಅಲ್ಲ ಆ ಎಲ್ಲಾ ಕುದುರೆಗಳ ಕಿವಿಗಳು ಮಾತ್ರ ಅಮಾವಾಸ್ಯೆ ರಾತ್ರಿಯಷ್ಟು ಕಪ್ಪಾಗಿರಬೇಕು,’ ಅಂತ ಕೇಳುತ್ತಾರೆ.

ಮೊದಲೇ ಕೋಪಿಷ್ಠ ತಂದೆ. ಯಾಕಾದರೂ ಕೇಳಿದೆನೋ ಅನಿಸಿರಬೇಕು ಗಾಲವನಿಗೆ. ಆದರೆ ಈಗ ಹಿಂದೇಟು ಹಾಕುವಂತಿಲ್ಲ.

ಅದೇ ಕಾಲದಲ್ಲಿ ತನ್ನ ಕಸಿನ್ ಬ್ರದರ್ ಯಯಾತಿ ತನ್ನ ಮಗನ ಯವ್ವನವನ್ನು ಪಡೆದುಕೊಂಡಿದ್ದು ಮಹಾ ಪ್ರಮಾದ ಅನಿಸಿ, ಮಗ ಪುರುವಿಗೆ ಯವ್ವನ ಹಿಂದಿರುಗಿಸಿ, ಪಟ್ಟ ಕಟ್ಟಿ ತನ್ನ ಪಾಪ ಪ್ರಾಯಶ್ಚಿತ್ತಕ್ಕೆ ದಾನ ಧರ್ಮ ಕಾರ್ಯಗಳಲ್ಲಿ ನಿರತನಾಗಿದ್ದು, ಬೇಡಿ ಬಂದ ಯಾರನ್ನು ಬರಿಗೈಯಲ್ಲಿ ಕಳಿಸಲಾರ ಎಂಬ ಸಮಾಚಾರ ಗಾಲವನಿಗೆ ತಿಳಿಯುತ್ತದೆ.

ಯಯಾತಿಯ ಬಳಿ ಬಂದ ಗಾಲವ ತನ್ನ ಕಷ್ಟವನ್ನು ಹೇಳಿಕೊಳ್ಳುತ್ತಾನೆ. ಆದರೆ ಯಯಾತಿಯ ಬಳಿಯೂ ಈ ತರದ ಕುದುರೆಗಳು ಇರುವದಿಲ್ಲ. ಬೇಡಿ ಬಂದವರನ್ನು ಬರೀ ಕೈಯಲ್ಲಿ ಕಳಿಸಬಾರದು ಅಲ್ಲವೇ. ಆದ್ದರಿಂದ ಯಯಾತಿ ತನ್ನ ಮಗಳಾದ ಮಾಧವಿಯನ್ನು ಗಾಲವನಿಗೆ ದಾನ ಮಾಡುತ್ತಾನೆ. ಯಾರ ಹತ್ತಿರ ಎಂಟುನೂರು ಸದರೀ ಕುದುರೆಗಳು ಇವೆಯೋ ಅವನಿಗೆ ಆಕೆಯನ್ನು ಕೊಟ್ಟು ಕುದುರೆಗಳನ್ನು ಪಡೆಯಲು ಸೂಚಿಸುತ್ತಾನೆ. ನೆನಪಿರಲಿ ಗಾಲವನಿಗೂ ಮಾಧವಿ ಮಗಳ ಸಮಾನ.

ಗಾಲವ ಮತ್ತು ಮಾಧವಿ ಅಂದಿನ ಅಯೋಧ್ಯೆಯ ರಾಜ ಹರ್ಯಶ್ವನ ಹತ್ತಿರ ಬಂದು ಕುದುರೆ ಫಾರ್ ಮಾಧವಿ ಅಂತ ಒಂದು ಆಫರ್ ಇಡುತ್ತಾರೆ. ಹರ್ಯಶ್ವ ತನ್ನ ಹತ್ತಿರ ಅದೇ ತರದ ಕುದುರೆಗಳು ಇವೆ. ಆದರೆ ಎಂಟು ನೂರಿಲ್ಲ, ಇನ್ನೂರು ಮಾತ್ರ ಇರೋದು ಅಂತಾನೆ. ಇದನ್ನ ಕೇಳಿ ಪೆಚ್ಚಾದ ಗಾಲವನಿಗೆ ಸಮಾಧಾನ ಮಾಡಿದ ಮಾಧವಿ `ಡೋಂಟ್ ವರಿ. ನನಗೊಂದು ಈ ತರದ ವರ ಇದೆ. ಇನ್ನೂರು ಕುದುರೆ ತಗೋ ಮತ್ತು ಈತನೊಂದಿಗೆ ನನ್ನನ್ನು ಒಂದು ಮಗು ಆಗುವ ವರೆಗೆ ಮಾತ್ರ ಹಂಡತಿ ಅಂತ ಕರಾರಿನ ಮೇಲೆ ಕಳಿಸು. ಮಗುವಾದ ಮೇಲೆ ಮತ್ತೆ ನಾನು ನನ್ನ ಕನ್ಯತ್ವ ಸಮೇತ ಮರಳಿ ಬರುತ್ತೇನೆ. ಆಮೇಲೆ ಮತ್ತೆ ಯಾರೋ ಬೇರೆ ರಾಜನನ್ನು ಹುಡುಕಿದರಾಯಿತು,’ ಅಂತಾಳೆ.

ಹರ್ಯಶ್ವನಿಗೆ ಒಂದು ಮಗುವನ್ನು ಹೆತ್ತು ಮತ್ತೆ ಮರಳಿದ ಮಾಧವಿಯನ್ನು ಕಾಶಿಯ ರಾಜ ದಿವೋದಶನ ಬಳಿ ಕರೆದುಕೊಂಡು ಹೋಗುತ್ತಾನೆ ಗಾಲವ. ಅಲ್ಲಿಯೂ ಇದೆ ತರದ ಸೀನ್. ಮತ್ತೆ ಇನ್ನೂರು ಕುದುರೆಗಾಗಿ ಕರಾರುಬದ್ಧ ಮದುವೆ. ಹೀಗೆಯೇ ಭೋಜರಾಜ ಉಷಿನಾರನ ಜೊತೆಗೂ ಸಂಸಾರ ಮಾಡಿ ಮಾಧವಿ ಮತ್ತೆ ಮರಳಿದಾಗ ಗಾಲವನ ಹತ್ತಿರ ಆರುನೂರು ಕುದುರೆಗಳು ಮತ್ತು ಚಿರ ಕನ್ಯೆ ಮಾಧವಿ. ಇದೆಲ್ಲವನ್ನು ತಂದೆಯ ಬಳಿ ಕೊಂಡೊಯ್ದ ಗಾಲವ ಖೋತಾ ಇರುವ ಇನ್ನೂರು ಕುದುರೆಗಳ ಬದಲಾಗಿ ಮಾಧವಿಯನ್ನು ಸ್ವೀಕರಿಸಿ ಅಂತಾನೆ. ಅದೂ ಕೂಡ ಸೇಮ್ ಕಂಡೀಶನ್. ಒಂದು ಮಗು ಆಗುವವರೆಗೆ ಮಾತ್ರ.

ಸಂಬಂಧದಲ್ಲಿ ಮಾಧವಿ ವಿಶ್ವಾಮಿತ್ರರ ಮೊಮ್ಮಗಳ ಸಮಾನ. ಕರೆದುಕೊಂಡು ಬಂದವ ಸ್ವತಃ ಮಗ. ಆದರೂ ವಿಶ್ವಾಮಿತ್ರರು ಆರುನೂರು ಕುದುರೆ ಜೊತೆಗೆ ಮಾಧವಿಯನ್ನು ಸ್ವೀಕರಿಸಿ ಗಾಲವನನ್ನು ಋಣಮುಕ್ತನನ್ನಾಗಿಸುತ್ತಾರೆ. ವಿಶ್ವಾಮಿತ್ರ ಮತ್ತು ಮಾಧವಿಗೆ ಅಷ್ಟಕ ಎಂಬ ಮಗ ಹುಟ್ಟುತ್ತಾನೆ. ಮಗುವಿಗೆ ಜನ್ಮ ಕೊಟ್ಟ ಮಾಧವಿ ಮರಳಿ ತಂದೆ ಯಯಾತಿಯ ಬಳಿ ಹೋಗುತ್ತಾಳೆ. ಮಗಳಿಗೆ ಮತ್ತೆ ಮದುವೆ ಮಾಡಲು ಯಯಾತಿ ಪ್ರಯತ್ನಿಸುತ್ತಾನೆ. ಆದರೆ ಇದೆಲ್ಲದರಿಂದ ಜಿಗುಪ್ಸೆಗೊಂಡ ಮಾಧವಿ ಅರಣ್ಯ ಸೇರಿ ಸನ್ಯಾಸಿನಿ ಆಗುತ್ತಾಳೆ.

ಅಂದ ಹಾಗೆ ನಮ್ಮಲ್ಲಿ ಅನೇಕರು ದಿನಾ ಬೆಳಿಗ್ಗೆ ಜಪ ಮಾಡುವ ಗಾಯತ್ರಿ ಮಂತ್ರವನ್ನು ರಚಸಿದ್ದು ಇದೇ ವಿಶ್ವಾಮಿತ್ರ.

ತಂದೆಯೊಬ್ಬ ಮಗಳನ್ನು ಪಶುಗಳಿಗೆ ಬದಲಾಗಿ ದಾನ ಮಾಡಬಹುದು ಎಂಬ ಸಮೀಕರಣ ಒಪ್ಪಿದ್ದಾನೆ. ಸಹೋದರನೊಬ್ಬ ಪಶುಗಳಿಗೆ ಬದಲಾಗಿ ಸಹೋದರಿಯನ್ನು ಬಾಡಿಗೆ ಹೆಂಡತಿಯನ್ನಾಗಿ ಕೊಡಬಹುದು ಎಂಬುದನ್ನು ಒಪ್ಪಿದ್ದಾನೆ. ತಾತನ  ಸಮಾನ ಇನ್ನೊಬ್ಬ, ಮೊಮ್ಮಗಳ ಸಮಾನ ಮಹಿಳೆಯೊಡನೆ ಸಂತಾನ ಪಡೆಯಲು ಮುಂದಾಗುತ್ತಾನೆ.

ಇವರೆಲ್ಲರ ಮೂಲ ಪುರುಷ ಬ್ರಹ್ಮ ತನ್ನ ಮಗಳನ್ನೇ ಅಟ್ಟಾಡಿಸಿ ಕಾಡಿ ತನ್ನೊಡನೆ ವಿವಾಹ ಆಗಲೇಬೇಕೆಂಬ ಅನಿವಾರ್ಯತೆ ಸೃಷ್ಟಿಸುತ್ತಾನೆ. ಇದೆಲ್ಲ ನಮ್ಮ ಮಹಿಳಾ ಚಿಂತಕರಿಗೆ ಕೂಡ ಅವಮಾನಕರ ಅನಿಸುವುದಿಲ್ಲ!

ತನ್ನ ಪೂರ್ವಜರ ಹೆಣ್ಣುಬಾಕತನ ಅಷ್ಟೇ ಅಲ್ಲ ಕೈಕೇಯಿ ಎಂಬ ಒಬ್ಬ ಹೆಣ್ಣಿನ ಮೋಹಕ್ಕೆ ಒಳಗಾಗಿ ತನ್ನ ತಂದೆ ತಂದುಕೊಂಡ ಅವಾಂತರಗಳನ್ನು ಕಂಡು ಬೆದರಿ ಏಕ ಪತ್ನಿವ್ರತಸ್ಥ ಆಗಲು ತೀರ್ಮಾನಿಸಿ, ಕೊನೆಗೆ ಆಕೆಯನ್ನೂ ವಿಶ್ವಾಸದಿಂದ ನಡೆಸಿಕೊಳ್ಳಲು ಆಗದೇ, ಶೂರ್ಪನಖಿ ಎಂಬ ಸುಂದರಿಯ ಪ್ರೇಮ ನಿವೇದನೆಯನ್ನು ಹೀಯಾಳಿಸಿ ಜೊತೆಗೆ ಆಕೆಯ ವ್ಯಕ್ತಿತ್ವವನ್ನೂ ಹಾಳು ಗೆಡವಿ ರಾವಣನೊಡನೆ ಯುದ್ಧ ಮಾಡಿದರೂ ಕೂಡ ತನ್ನೊಳಗಿನ ಸ್ತ್ರೀ ಭಯವನ್ನು ಮೀರಲಾಗದೇ ಮಕ್ಕಳನ್ನೂ ಸಹ ಕಳೆದುಕೊಂಡ ವಿಕ್ಷಿಪ್ತ ಮನಸಿನ ದುರಂತ ನಾಯಕ ರಾಮ.

ಶತಮಾನಗಳ ನಂತರ ಕುರುವಂಶದ ಶಂತನು ರಾಜ ಮತ್ತು ಸತ್ಯವತಿಯ ಕತೆ,  ಭೀಷ್ಮ ಮತ್ತು ವಿಚಿತ್ರ ವೀರ್ಯ, ಅಂಬೆ ಮತ್ತು ಅಂಬಾಲಿಕೆಯ ಮೇಲಾದ ಅತ್ಯಾಚಾರಗಳು. ಕುಂತಿ ಮತ್ತು ಗಾಂಧಾರಿಯ ವ್ಯಥೆ, ದ್ರೌಪದಿಯ ಮೇಲಿನ ದಬ್ಬಾಳಿಕೆ ಇತ್ಯಾದಿಗಳನ್ನು ನಾವು ಕೇವಲ ಮಾನವ ಸಹಜ ವ್ಯಕ್ತಿ ಚಿತ್ರಣಗಳಾಗಿ ನೋಡಿದರೆ ಮಾತ್ರ ಸಾವಿರಾರು ವರ್ಷಗಳ ನಮ್ಮ ನಾಗರೀಕತೆಗೆ ಒಂದು ಅರ್ಥ ಬಂದೀತು. ಒಂದು ವಿಕಸಿತ ಸಮಾಜವನ್ನು ಕಂಡೇವು. ಇಂತಹ ಅನೇಕ ಭಾನಗಡಿಗಳು ಕ್ರೈಸ್ತ, ಇಸ್ಲಾಂ, ಯಹೂದಿ, ಬೌಧ್ದ ಮೊದಲಾಗಿ ಎಲ್ಲಾ ಧರ್ಮಗಳಲ್ಲಿಯೂ ಇವೆ. ಎಲ್ಲರೂ ತಮ್ಮ ತಮ್ಮ ಧರ್ಮದ ನಶೆಯಿಂದ, ಕುರುಡು ಆರಾಧನೆಯ ಸನ್ನಿಯಿಂದ ಹೊರ ಬರದೇ ಮನುಷ್ಯರಾಗಲು ಸಾಧ್ಯವೇ ಇಲ್ಲ.ಡಾ.

  • ಡಾ. ಬಸವರಾಜ ಇಟ್ನಾಳ್, ಹಿರಿಯ ಪತ್ರಕರ್ತರು

Leave a Reply