ಬೆಂಗಳೂರು: ತಂತ್ರಜ್ಞಾನದ ನೆರವು ಪಡೆದುಕೊಂಡು ವಂಚಿಸುವ ಪ್ರಕರಣಗಳು ಹೆಚ್ಚುತ್ತಿದ್ದು, ವಂಚಕರು ನಾನಾ ಹೆಸರುಗಳಿಂದ ಜನ ಸಾಮಾನ್ಯರನ್ನು ಹೆದರಿಸಿ ಹಣ ಲಪಟಾಯಿಸುತ್ತಿದ್ದಾರೆ.
- ವರ್ಷದ ಬಳಿಕ ಸೆರೆಮನೆಯಿಂದ ಹೊರಬಂದ ನಟಿ ರನ್ಯಾ ರಾವ್!
- ಪ್ರೊ. ಎಸ್. ಬಿಳಿಗಿರಿ ವಾಸನ್ ಅವರಿಗೆ ಅಭಿನಂದನಾ ಸಮಾರಂಭ
- ಬಸವಣ್ಣನವರ ವಚನಗಳು ವಿಶ್ವವಿದ್ಯಾಲಯಗಳು ಹೇಳಿಕೊಡುವ ಪಾಠಕ್ಕಿಂತ ಕಡಿಮೆಯಲ್ಲ: ಸಾಜೀದ್ ಮುಲ್ಲಾ
- ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ಮಸೂದೆ ಅಂಗೀಕಾರವಾಗಿದೆ
- ಮಹಿಳಾ ಮೀಸಲಾತಿ ವಿಷಯದಲ್ಲಿ ಮೋದಿ ಸರ್ಕಾರದಿಂದ ಮಹಿಳೆಯರಿಗೆ ದ್ರೋಹ: ಸಿದ್ದರಾಮಯ್ಯ
ಈಗ ತಾವು ದೂರಸಂಪರ್ಕ ಇಲಾಖೆಯ ಅಧಿಕಾರಿಗಳೆಂದು ಹೇಳಿ ನಿಮ್ಮ ದೂರವಾಣಿ ಸಂಖ್ಯೆ ಬ್ಲಾಕ್ ಆಗಲಿದೆ ಎಂದು ಹೇಳುತ್ತಾರೆ. ಇಲ್ಲವೇ ನಿಮ್ಮ ಮೊಬೈಲ್ ನಂಬರ್ ನಿಂದ ನಿಯಮಬಾಹಿರವಾಗಿ ಜಾಹಿರಾತು ಪ್ರಸಾರವಾಗಿದೆ ಎಂದು ಹೆದರಿಸಿ ವಂಚನೆ ಮಾಡುತ್ತಿದ್ದಾರೆ.
ಇಂತಹ ಘಟನೆಯೊಂದು ಬೆಂಗಳೂರಿನಲ್ಲಿ ನಡೆದಿದೆ. ತಾವು ದೂರಸಂಪರ್ಕ ಇಲಾಖೆಯ ಅಧಿಕಾರಿಗಳೆಂದು ಹೇಳಿ ಮಹಿಳೆಯೊಬ್ಬರಿಗೆ ಬರೋಬ್ಬರಿ 30 ಲಕ್ಷ ವಂಚನೆ ಮಾಡಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಫೆಡ್‌ಎಕ್ಸ್ ಮತ್ತು ಆದಾಯ ತೆರಿಗೆ ಇಲಾಖೆ ಹೆಸರಿನಲ್ಲಿ ಎಸಗುತ್ತಿರುವ ದುಷ್ಕೃತ್ಯಗಳ ಬಗ್ಗೆ ಜನರಿಗೆ ಅರಿವಾಗುತ್ತಿದ್ದಂತೆಯೇ ಸೈಬರ್ ವಂಚಕರು ಈಗ ದೂರಸಂಪರ್ಕ ಇಲಾಖೆಯ ಅಧಿಕಾರಿಗಳಂತೆ ಬಿಂಬಿಸಿ ಸಾರ್ವಜನಿಕರಿಂದ ಹಣ ಲೂಟಿ ಮಾಡುತ್ತಿದ್ದಾರೆ.
ನಾವು ದೂರಸಂಪರ್ಕ ಇಲಾಖೆ ಅಧಿಕಾರಿಗಳು. ನಿಮ್ಮ ಆಧಾರ್ ಬಯೋಮೆಟ್ರಿಕ್ ದುರ್ಬಳಕೆಯಾಗಿದೆ ಮತ್ತು ಬ್ಯಾಂಕ್ ಖಾತೆಗಳ ಪರಿಶೀಲನೆ ಮಾಡಬೇಕಿದೆ ಎಂದು ಕಥೆ ಕಟ್ಟಿ ನಂಬಿಸಿ ಬೆಂಗಳೂರು ಮೂಲಕ ಮಹಿಳೆಯೊಬ್ಬರಿಗೆ ಸುಮಾರು 14 ದಿನಗಳ ಕಾಲ ಸಂಪರ್ಕ ಮಾಡಿ 30 ಲಕ್ಷ ರೂ ವಂಚನೆ ಮಾಡಲಾಗಿದೆ.
ಮಹಿಳೆ ದಾಖಲಿಸಿದ ಎಫ್‌ಐಆರ್ ಪ್ರಕಾರ, ಏಪ್ರಿಲ್ 8 ರಂದು 08146849478 ರಿಂದ ದೂರವಾಣಿ ಕರೆಯನ್ನು ಸ್ವೀಕರಿಸಿದ್ದಾರೆ. ವ್ಯಕ್ತಿಯು ತನ್ನನ್ನು ದೂರಸಂಪರ್ಕ ಅಧಿಸೂಚನೆ ಘಟಕದ ಅಧಿಕಾರಿ ಎಂದು ಪರಿಚಯಿಸಿಕೊಂಡಿದ್ದಾನೆ. ಅಪರಿಚಿತ ವ್ಯಕ್ತಿಗಳು ಮುಂಬೈನಲ್ಲಿ ಸಿಮ್ ಕಾರ್ಡ್‌ಗಳನ್ನು ಖರೀದಿಸಲು ನಿಮ್ಮ ಆಧಾರ್ ಬಯೋಮೆಟ್ರಿಕ್ ಅನ್ನು ಬಳಸಿದ್ದಾರೆ. ಆ ಸಿಮ್ ಕಾರ್ಡ್ ಕಾನೂನುಬಾಹಿರ ಜಾಹೀರಾತುಗಳನ್ನು ಪ್ರಚಾರ ಮಾಡಲು ಮತ್ತು ಅಪರಾಧ ಚಟುವಟಿಕೆಗಳನ್ನು ನಡೆಸಲು ಬಳಸಲಾಗುತ್ತಿದೆ ಎಂದು ವಂಚಕರು ಮಹಿಳೆಗೆ ತಿಳಿಸಿದ್ದಾರೆ.
ಇದರಿಂದ ಗಾಬರಿಗೊಂಡ ಆಕೆ ವ್ಯಕ್ತಿಯ ಮಾತನ್ನು ನಂಬಿ ಅವರು ಹೇಳಿದಂತೆ ಮಾಡಿದ್ದಾರೆ. ವಂಚಕ ವ್ಯಕ್ತಿ ಮಹಿಳೆಗೆ ಬೇರೊಂದು ನಂಬರ್ ಕೊಟ್ಟ ಸಂಪರ್ಕ ಮಾಡಲು ತಿಳಿಸಿದ್ದಾನೆ. ಅದರಂತೆ ಆಕೆ ಕರೆ ಮಾಡಿದ್ದು, ಆತ ತಾನು ಮುಂಬೈನ ಅಂಧೇರಿ ಪೊಲೀಸ್ ಠಾಣೆಯ ಅಧಿಕಾರಿ ಎಂದು ಹೇಳಿಕೊಂಡಿದ್ದಾನೆ.
ನಂತರ ವಂಚಕರು ಆಕೆಯ ಫೋನ್‌ಗೆ 9686071308 ಮತ್ತು 8735028302 ರಿಂದ ವೀಡಿಯೊ ಕರೆಗಳನ್ನು ಮಾಡಿದ್ದಾರೆ. ಆಕೆಯ ಹೆಸರನ್ನು ಬಳಸಿಕೊಂಡು ಖರೀದಿಸಿದ ಸಿಮ್‌ಗಳನ್ನು ಅಕ್ರಮ ಜಾಹೀರಾತುಗಳಿಗೆ ಮತ್ತು ಬಹು ಬ್ಯಾಂಕ್ ಖಾತೆಗಳನ್ನು ತೆರೆಯಲು ಬಳಸಲಾಗಿದೆ ಎಂದು ಹೇಳಿದ್ದಾರೆ. ಕಾನೂನುಬಾಹಿರ ಚಟುವಟಿಕೆಗಳನ್ನು ನಡೆಸಲು ಇಂತಹ ಖಾತೆಗಳನ್ನು ನಿರ್ವಹಿಸಲಾಗುತ್ತದೆ ಎಂದು ಹೇಳಿ ಭಯ ಹುಟ್ಟಿಸಿ ತಮ್ಮನ್ನು ನಂಬುವಂತೆ ಮಾಡಿದ್ದಾರೆ.
ಇನ್ನು ತಾನೊಬ್ಬ ಪೊಲೀಸ್ ಎಂದು ಹೇಳಿಕೊಂಡ ವಂಚಕ, ತನಿಖೆಯ ಬಗ್ಗೆ ಬೇರೆ ಯಾರಿಗಾದರೂ ತಿಳಿದರೆ ನಿಮ್ಮ ಕುಟುಂಬದವರನ್ನು ಸೈಬರ್ ವಂಚಕರು ಟಾರ್ಗೆಟ್ ಮಾಡುತ್ತಾರೆ ಎಂದು ಹೇಳಿ ಭಯ ಹುಟ್ಟಿಸಿದ್ದಾನೆ. ಅವರು ಇದನ್ನು ನಂಬುತ್ತಿದ್ದಂತೆ, ವಂಚಕರು ತನಿಖೆಯ ಭಾಗವಾಗಿ ಆಕೆಯ ಬ್ಯಾಂಕ್ ಖಾತೆಗಳನ್ನು ಪರಿಶೀಲಿಸಬೇಕಾಗಿದೆ ಎಂದು ಹೇಳಿದ್ದಾರೆ.
ಅವರಿಗೆ ಮೊದಲು ಸ್ವಲ್ಪ ಹಣವನ್ನು ಕಳುಹಿಸುವಂತೆ ಹೇಳಿ ಹಣ ವರ್ಗಾಹಿಸಿಕೊಂಡಿದ್ದಾರೆ. ನಂತರ, ಆಕೆಯ ಬ್ಯಾಂಕ್ ಖಾತೆಗಳು ಯಾವುದೇ ಕಾನೂನುಬಾಹಿರ ಚಟುವಟಿಕೆಯಲ್ಲಿ ಭಾಗಿಯಾಗಿಲ್ಲ ಎಂದು ಖಚಿತಪಡಿಸಿಕೊಳ್ಳಲು ಹೆಚ್ಚಿನ ವಹಿವಾಟುಗಳನ್ನು ಮಾಡುವಂತೆ ಕೇಳಿದ್ದಾರೆ.
ಅದರಂತೆ ಆಕೆ ಏಪ್ರಿಲ್ 8 ರಿಂದ 21 ರ ನಡುವೆ ಹಲವಾರು ವಹಿವಾಟುಗಳನ್ನು ನಡೆಸಿ ಒಟ್ಟು 30 ಲಕ್ಷ ರೂ.ಗಳನ್ನು ಕಳುಹಿಸಿದ್ದಾರೆ. ಅಂತಿಮವಾಗಿ 14 ದಿನಗಳ ಬಳಿಕ ಅವರಿಗೆ ವಂಚನೆಯಾಗಿರುವುದು ತಿಳಿದಿದ್ದು ಮೇ 6 ರಂದು ಪೊಲೀಸ್ ಠಾಣೆಗೆ ಹೋಗಿ ದೂರು ದಾಖಲಿಸಿದ್ದಾರೆ.
ಐಟಿ ಕಾಯಿದೆ ಮತ್ತು ಐಪಿಸಿ ಸೆಕ್ಷನ್ 420 (ವಂಚನೆ ಮತ್ತು ಅಪ್ರಾಮಾಣಿಕವಾಗಿ ಆಸ್ತಿ ವಿತರಣೆಯನ್ನು ಪ್ರೇರೇಪಿಸುವುದು) ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಪೊಲೀಸರು ಎಫ್‌ಐಆರ್ ಅನ್ನು ದಾಖಲಿಸಿದ್ದಾರೆ.



