ಸಮಾಜವಾದಿ ವ್ಯವಸ್ಥೆಯ ಹರಿಕಾರ ಲೆನಿನ್: ಮನೋಜ್ ವಾಮಂಜೂರು

4 years ago

ಮಂಗಳೂರು: ಮಾರ್ಕ್ಸ್‌ವಾದಿ ಸಿದ್ದಾಂತವನ್ನು ಅಳವಡಿಸಿ ಜಗತ್ತಿನಲ್ಲೇ ಪ್ರಪ್ರಥಮ ಬಾರಿಗೆ ಕ್ರಾಂತಿ ನಡೆಸಿ ಸೋವಿಯತ್ ಒಕ್ಕೂಟವನ್ನು ರಚಿಸಿ ಬಂಡವಾಳಶಾಹಿ ವ್ಯವಸ್ಥೆಗೆ ಎದುರಾಗಿ ಸಮಾಜವಾದಿ ವ್ಯವಸ್ಥೆಯನ್ನು ಜಾರಿಗೆ ತರುವ ಮೂಲಕ ದುಡಿಯುವ ವರ್ಗದ ಸರಕಾರವನ್ನು ರಚಿಸಿದ ಲೆನಿನ್, ಜಗತ್ತಿನಾದ್ಯಂತ ಅನೇಕ ದೇಶಗಳಲ್ಲಿ ನಡೆದ ವಿಮೋಚನಾ ಹೋರಾಟಗಳಿಗೆ ಸ್ಪೂರ್ತಿಯ ಸೆಲೆಯಾಗಿದ್ದರು. ಆ ಮೂಲಕ ಸಮಾಜವಾದಿ ವ್ಯವಸ್ಥೆಯ ಹರಿಕಾರರಾಗಿ ಮೂಡಿ ಬಂದಿದ್ದರು ಎಂದು DYFI ಜಿಲ್ಲಾ ನಾಯಕ ಮನೋಜ್ ವಾಮಂಜೂರುರವರು ಹೇಳಿದರು.

ಲೆನಿನ್ 98ನೇ ಸಂಸ್ಮರಣಾ ದಿನಾಚರಣೆಯ ಅಂಗವಾಗಿ ಮಂಗಳೂರಿನ ವಿಕಾಸ ಕಚೇರಿಯಲ್ಲಿ ಜರುಗಿದ ಸಮಾಜವಾದಿ ವ್ಯವಸ್ಥೆಯ ಹರಿಕಾರ ಒಂದು ನೆನಪು ಕಾರ್ಯಕ್ರಮದಲ್ಲಿ ಮಾತನಾಡಿ, ಎಳೆಯ ಪ್ರಾಯದಲ್ಲೇ ಪ್ರತಿಭಾನ್ವಿತ ವಿದ್ಯಾರ್ಥಿಯಾಗಿದ್ದ ಲೆನಿನ್, ಬಂಡವಾಳಶಾಹಿಗಳ ಶೋಷಣೆಯಿಂದ ಆಕ್ರೋಶಿತರಾಗಿ ದುಡಿಯುವ ವರ್ಗದ ಪರವಾಗಿ ಸದಾ ಚಿಂತಿಸುತ್ತಿದ್ದರು ಎಂದರು.

ದುಡಿಯುವ ವರ್ಗದ ಸಿದ್ದಾಂತವಾದ ಮಾರ್ಕ್ಸ್‌ವಾದವನ್ನು ಚೆನ್ನಾಗಿ ಅರ್ಥೈಸಿ ಅದರ ಆಧಾರದಲ್ಲಿ ಸಮಾಜದಲ್ಲಿ ಕ್ರಾಂತಿ ನಡೆಸುವ ಅಗತ್ಯತೆಯನ್ನು ಮನಗಂಡರು. ತನ್ನ ಬರಹಗಳನ್ನು ತೀಕ್ಷಗೊಳಿಸುವ ಮೂಲಕ ಕಾರ್ಮಿಕ ವರ್ಗವನ್ನು ಬಡಿದೆಬ್ಬಿಸಿದರು. ರಷ್ಯಾದ ಝಾರ್ ಆಳ್ವಿಕೆಯಿಂದ ತೀವ್ರ ಸಂಕಷ್ಟಗೊಳಗಾದ ಲೆನಿನ್ ಛಲಬಿಡದೆ ಕಾರ್ಮಿಕರನ್ನು ಒಗ್ಗೂಡಿಸಿ ಕ್ರಾಂತಿಯತ್ತ ಹೆಜ್ಜೆ ಹಾಕಿದರು.1917ರಲ್ಲಿ ಜರುಗಿದ ಸಮಾಜವಾದಿ ವ್ಯವಸ್ಥೆಯ ಅಕ್ಟೋಬರ್ ಕ್ರಾಂತಿ ಜಗತ್ತಿನ ಚರಿತ್ರೆಯಲ್ಲಿ ಹೊಸ ಮೈಲುಗಲ್ಲಾಯಿತು. ಈ ಮೂಲಕ ಕ್ರಾಂತಿಯ ಹರಿಕಾರ ಲೆನಿನ್ ರವರ ಸಂಘಟನಾ ಚಾತುರ್ಯವನ್ನು ಜಗತ್ತೇ ಕೊಂಡಾಡಿತು ಎಂದರು.

ಪ್ರಗತಿಪರ ಚಿಂತಕ ಡಾ.ಕೃಷ್ಣಪ್ಪ ಕೊಂಚಾಡಿ ಮಾತನಾಡಿ, ಮಾರ್ಕ್ಸ್ ವಾದಿ ಸಿದ್ದಾಂತದ ಆಧಾರದಲ್ಲಿ ಕಾರ್ಮಿಕ ವರ್ಗದ ನೇತೃತ್ವದಲ್ಲಿ ಸರಕಾರ ರಚಿಸಲು ಸಾಧ್ಯವಿದೆ ಎಂದು ಜಗತ್ತಿಗೆ ತೋರಿಸಿಕೊಟ್ಟ ಲೆನಿನ್, ಜಾಗತಿಕ ಬಂಡವಾಳ ಶಾಹಿಗಳ ಕೆಂಗಣ್ಣಿಗೆ ಗುರಿಯಾದರು. ಕ್ರಾಂತಿ ನಡೆದ ಬಳಿಕ ಲೆನಿನ್ ನೇತ್ರತ್ವದಲ್ಲಿ ರಷ್ಯಾದಲ್ಲಿ ನಡೆಸಿದ ಸಾಮಾಜಿಕ ಸುಧಾರಣೆಗಳು ಜಗತ್ಪ್ರಸಿದ್ಧವಾಯಿತು. ಈ ಮೂಲಕ ಜಗತ್ತಿನಾದ್ಯಂತ ಕಮ್ಯುನಿಸ್ಟ್ ಚಿಂತನೆಗಳು ವೇಗವಾಗಿ ಪಸರಿಸಿತು ಎಂದರು

ಸಭೆಯ ಅಧ್ಯಕ್ಷತೆಯನ್ನು ವಹಿಸಿದ ಪ್ರಗತಿಪರ ಚಿಂತಕ ಸಂಜೀವ ಬಳ್ಕೂರು, ಲೆನಿನ್ ರವರ ಬದುಕು ಬರಹಗಳ ಬಗ್ಗೆ ಬೆಳಕು ಚೆಲ್ಲುತ್ತಾ, ಇಂದಿನ ಯುವ ಪೀಳಿಗೆ ಹೆಚ್ಚೆಚ್ಚು ಲೆನಿನ್ ರವರನ್ನು ಅರ್ಥೈಸುವ ಮೂಲಕ ಉತ್ತಮ ಸಮಾಜ ನಿರ್ಮಾಣದಲ್ಲಿ ತೊಡಗಿಸಿಕೊಳ್ಳಬೇಕೆಂದು ಹೇಳಿದರು. ಲ ಸುನಿಲ್ ಕುಮಾರ್ ಬಜಾಲ್ ಸ್ವಾಗತಿಸಿದರೆ, ಕೊನೆಯಲ್ಲಿ ಯೋಗೀಶ್ ಜಪ್ಪಿನಮೊಗರುರವರು ವಂದಿಸಿದರು

Leave a Reply