ದಲಿತ ಹಿಂದುಳಿದ ಮತ್ತು ಶೋಷಿತ ಸಮುದಾಯಗಳ ಸಂಘಟನೆಗೆ ಮುಂದಾದ ಕೆ.ಎಸ್.ಈಶ್ವರಪ್ಪ

2 years ago


ಬೆಂಗಳೂರು: ರಾಜ್ಯ ಬಿಜೆಪಿ ನಾಯಕತ್ವದ ವಿರುದ್ಧ ಸೆಡ್ಡು ಹೊಡೆದಿರುವ ಹಿರಿಯ ನಾಯಕ ಹಾಗೂ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ದಲಿತ ಹಿಂದುಳಿದ ಮತ್ತು ಶೋಷಿತ ಸಮುದಾಯಗಳ ಸಂಘಟನೆಗೆ ಮುಂದಾಗಿದ್ದಾರೆ.

ಈ ಹಿಂದೆ ರಾಯಣ್ಣ ಬ್ರಿಗೇಡ್ ಮೂಲಕ ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪ ವಿರುದ್ಧ ಸಮರ ಘೋಷಣೆ ಮಾಡಿದ್ದ ಕೆ ಎಸ್ ಈಶ್ವರಪ್ಪ ಹೈಕಮಾಂಡ್ ಮಧ್ಯಪ್ರವೇಶದ ಮೂಲಕ ರಾಯಣ್ಣ ಬ್ರಿಗೇಡ್ ಚಟುವಟಿಕೆಗಳನ್ನು ನಿಲ್ಲಿಸಿದ್ದರು. ಇದೀಗ ಮತ್ತೆ ಅದೇ ರೀತಿಯ ಚಟುವಟಿಕೆಗಳನ್ನು ಪುನರಾರಂಭಿಸಲು ತೀರ್ಮಾನಿಸಿದ್ದು, ಬೆಂಬಲಿಗರು ಮತ್ತು ಹಿತೈಷಿಗಳ ಜೊತೆ ಸಮಾಲೋಚನೆ ನಡೆಸಿದ್ದಾರೆ.

ಈ ಬಾರಿ ತಮ್ಮ ಸಂಘಟನೆಗೆ ರಾಯಣ್ಣ ಬ್ರಿಗೇಡ್ ಬದಲಾಗಿ ಬೇರೆ ಹೆಸರು ಇಡಲು ಸಿದ್ಧತೆ ನಡೆಸಿದ್ದಾರೆ. ರಾಯಣ್ಣ ಬ್ರಿಗೇಡ್ ಎಂದರೆ ಅದು ಕೇವಲ ಕುರುಬ ಸಮುದಾಯದ ಸಂಘಟನೆ ಎಂದು ಅಪಪ್ರಚಾರ ಮಾಡುವ ಸಾಧ್ಯತೆ ಇದೆ ಎಂಬುದಾಗಿ ಅವರ ಹಿತೈಷಿಗಳು ಸಲಹೆ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಈ ಸಂಘಟನೆಗೆ ಮರುನಾಮಕರಣ ಮಾಡಲು ಚಿಂತನೆ ನಡೆಸಿದ್ದು, ಸಂಘಟನೆಯಲ್ಲಿ ಕೊಳಗೇರಿ ನಿವಾಸಿಗಳು ಪರಿಶಿಷ್ಟ ಜಾತಿ ಮತ್ತು ವರ್ಗ ಹಾಗೂ ಇತರೆ ಹಿಂದುಳಿದ ವರ್ಗಗಳಿಗೆ ಪ್ರಾತಿನಿಧ್ಯ ನೀಡಲು ತೀರ್ಮಾನಿಸಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ. 

ಕಳೆದ ಲೋಕಸಭೆ ಚುನಾವಣೆ ಸಮಯದಲ್ಲಿ ಪುತ್ರ ಕಾಂತೇಶ್ ಅವರಿಗೆ ಹಾವೇರಿ ಲೋಕಸಭೆ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಲು ಟಿಕೆಟ್ ನೀಡಬೇಕು ಎಂದು ಪಟ್ಟು ಹಿಡಿದಿದ್ದರು. ಆದರೆ ಮಾಜಿ ಬಿ ಎಸ್ ಯಡಿಯೂರಪ್ಪ ಹೈಕಮಾಂಡ್ ಮೇಲೆ ಬೀರಿದ ಪ್ರಭಾವದ ಹಿನ್ನೆಲೆಯಲ್ಲಿ ಹಾವೇರಿ ಕ್ಷೇತ್ರದಲ್ಲಿ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದು ಜಯಗಳಿಸಿದ್ದಾರೆ. 

ತಮ್ಮ ಪುತ್ರನಿಗೆ ಟಿಕೆಟ್ ನೀಡದೆ ಇರುವುದರಿಂದ ಆಕ್ರೋಶಗೊಂಡ ಈಶ್ವರಪ್ಪ ಪಕ್ಷಕ್ಕೆ ಗುಡ್ ಬೈ ಹೇಳಿ ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಯಡಿಯೂರಪ್ಪ ಪುತ್ರ ರಾಘವೇಂದ್ರ ವಿರುದ್ಧ ಬಿಜೆಪಿಯ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿದು ಸೋತಿದ್ದರು. ಬಿಜೆಪಿ – ಜೆಡಿಎಸ್ ಮೈತ್ರಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ 7,78,221, ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜ್ ಕುಮಾರ್ 5,35,006 ಮತಗಳನ್ನು ಪಡೆದರೆ, ಕೆ.ಎಸ್.ಈಶ್ವರಪ್ಪ ಕೇವಲ 30,050 ಮತಗಳನ್ನು ಗಳಿಸುವಲ್ಲಿ ಸುಸ್ತಾಗಿದ್ದರು.

ಇದೀಗ ಮತ್ತೆ ಅವರನ್ನು ಬಿಜೆಪಿಗೆ ಸೇರ್ಪಡೆ ಮಾಡಿಕೊಳ್ಳಲು ಪಕ್ಷದ ಒಂದು ವರ್ಗ ಪ್ರಯತ್ನ ನಡೆಸುತ್ತಿದೆ. ಆದರೆ ಅವರು ಪಕ್ಷದ ಅಧ್ಯಕ್ಷ ವಿಜಯೇಂದ್ರ ಆ ಹುದ್ದೆಯಿಂದ ನಿರ್ಗಮಿಸುವವರೆಗೆ ಬಿಜೆಪಿಗೆ ಬರುವುದಿಲ್ಲ ಎಂದು ಹೇಳಿದ್ದು, ಪರ್ಯಾಯ ಸಂಘಟನೆಗೆ ಮುಂದಾಗಿದ್ದಾರೆ.

ಇದಕ್ಕಾಗಿ ಬಿಜೆಪಿ ರಾಜಕೀಯ ನಾಯಕತ್ವದ ವಿರುದ್ಧ ಅಸಮಾಧಾನಗೊಂಡಿರುವ ಮಾಜಿ ಸಂಸದರಾದ ಅಣ್ಣಾ ಸಾಹೇಬ ಜೊಲ್ಲೆ, ಜಿ ಎಂ ಸಿದ್ದೇಶ್ವರ್, ಪ್ರತಾಪ ಸಿಂಹ, ಮಾಜಿ ಶಾಸಕ ಮಾಡಾಳ್ ವಿರುಪಾಕ್ಷಪ್ಪ, ಮಾಜಿ ಸಚಿವರಾದ ಅರವಿಂದ ಲಿಂಬಾವಳಿ, ಗೂಳಿಹಟ್ಟಿ ಶೇಖರ್, ಹಿರಿಯ ಮುಖಂಡರಾದ ಮುಕುಡಪ್ಪ ಸೇರಿದಂತೆ ಹಲವು ಮುಖಂಡರೊಂದಿಗೆ ಚರ್ಚಿಸಿದ್ದಾರೆ.

Leave a Reply