ರವಿ ಡಿ ಚನ್ನಣ್ಣನವರ್ ಸ್ಪಷ್ಟೀಕರಣಕ್ಕೆ ಕೆ.ಆರ್.ಎಸ್. ಒತ್ತಾಯ: ದಿ ಫೈಲ್ ವರದಿಗಳ ಉಲ್ಲೇಖ

4 years ago

ಬೆಂಗಳೂರು: ಐಪಿಎಸ್ ಅಧಿಕಾರಿ ರವಿ ಡಿ ಚನ್ನಣ್ಣವರ್ ವಿರುದ್ಧ ಬಂದಿರುವ ಭ್ರಷ್ಟಾಚಾರ ಆರೋಪದ ಕುರಿತು ಕೆ.ಆರ್.ಎಸ್. ಪಕ್ಷದ ಅಧ್ಯಕ್ಷ ರವಿಕೃಷ್ಣಾರೆಡ್ಡಿ ಪ್ರತಿಕ್ರಿಯಿಸಿದ್ದು, ಆಸ್ತಿಯ ವಿವರವನ್ನು ಬಹಿರಂಗಪಡಿಸುವಂತೆ ಆಗ್ರಹಿಸಿದ್ದಾರೆ. ಅವರು ಬರೆದಿರುವ ಪತ್ರದ ಪೂರ್ಣ ಪಾಠ ಈ ಕೆಳಗಿದೆ:

ರಾಜ್ಯಾದ್ಯಂತ ಯುವಜನರಿಗೆ ಸ್ಫೂರ್ತಿಯಾಗಿದ್ದ ಯುವ ಪೊಲೀಸ್ ಅಧಿಕಾರಿ ರವಿ ಡಿ. ಚನ್ನಣ್ಣನವರ್ ಮೇಲೆ ಭ್ರಷ್ಟಾಚಾರದ ಆರೋಪ ಬಂದಿರುವ ಹಿನ್ನೆಲೆಯಲ್ಲಿ…

ಈ ಕೂಡಲೇ ಅವರು ಸಾರ್ವಜನಿಕವಾಗಿ ಸ್ಪಷ್ಟೀಕರಣ ನೀಡಬೇಕು ಹಾಗೂ ತಮ್ಮ ಮತ್ತು ತಮ್ಮ ಕುಟುಂಬದ ಸ್ಥಿರ ಮತ್ತು ಚರಾಸ್ಥಿಗಳನ್ನು ಬಹಿರಂಗಪಡಿಸಬೇಕು.

ಅಯೋಗ್ಯ, ಅದಕ್ಷ, ನಾಲಾಯಕ್ ಸಂಸ್ಥೆಯಾದ ರಾಜ್ಯ ಭ್ರಷ್ಟಾಚಾರ ನಿಗ್ರಹ ದಳ (ACB) ಈ ಕೂಡಲೇ ಅವರ ಮನೆಯ ಮೇಲೆ “ಆದಾಯಮೀರಿದ ಆಸ್ತಿ” (Disproportionate Assets) ವಿಚಾರವಾಗಿ ದಾಳಿ ಮಾಡಬೇಕು.

ರಾಜ್ಯದ ಯುವ IPS ಅಧಿಕಾರಿಗಳಲ್ಲಿ ರವಿ ಡಿ. ಚನ್ನಣ್ಣನವರ್ ಅತ್ಯಂತ ಜನಪ್ರಿಯ ವ್ಯಕ್ತಿ. ತಮ್ಮ ಕೆಲಸದಲ್ಲಿ ಮಾಡಿರಬಹುದಾದ ಸಾಧನೆಗಳಿಗಿಂತ ಅವರ #ಜನಪ್ರಿಯ_ಭಾಷಣಗಳ ಮೂಲಕ ರಾಜ್ಯಾದ್ಯಂತ ಲಕ್ಷಾಂತರ ಯುವಕಯುವತಿಯರಿಗೆ ಕನಸು ಮತ್ತು ಆದರ್ಶ ಕಟ್ಟಿಕೊಳ್ಳಲು ಸ್ಫೂರ್ತಿಯಾದವರು. ಸಾಮಾಜಿಕ ಮಾಧ್ಯಮಗಳ ಮೂಲಕ ಅವರ ಭಾಷಣಗಳು ರಾಜ್ಯದ ಮೂಲೆಮೂಲೆಗೂ ತಲುಪಿವೆ ಮತ್ತು ಅವರೊಬ್ಬ ದಕ್ಷ ಮತ್ತು ಪ್ರಾಮಾಣಿಕ ಅಧಿಕಾರಿ ಎನ್ನುವ ಭಾವನೆ ಇಲ್ಲಿಯತನಕ ಸಾರ್ವಜನಿಕ ವಲಯದಲ್ಲಿ ಅಚ್ಚಾಗಿತ್ತು.

ಆದರೆ, ಕೆಲವು ವಾರಗಳ ಹಿಂದೆ the-file.in ವೆಬ್‌ಸೈಟ್‌ನಲ್ಲಿ ಪ್ರಕಟವಾದ ಒಂದು ವರದಿ ರವಿ ಡಿ. ಚನ್ನಣ್ಣನವರ್ ಅವರ ಪ್ರಾಮಾಣಿಕತೆಯ ಕುರಿತು ಗಂಭೀರವಾಗಿ ಯೋಚಿಸುವಂತೆ ಮಾಡಿದೆ. ನಿಮಗೆಲ್ಲರಿಗೂ ತಿಳಿದಿರುವಂತೆ ತನಿಖಾ ವರದಿಗಾರಿಕೆಯಲ್ಲಿ the-file.in ಇಂದು ರಾಜ್ಯದ ಅತ್ಯಂತ ಪ್ರಮುಖ ಮತ್ತು ವಿಶ್ವಾಸಾರ್ಹ ಮಾಧ್ಯಮ ಸಂಸ್ಥೆ. ಸೂಕ್ತ ದಾಖಲೆಗಳಿಲ್ಲದೆ ಅವರು ಎಂದೂ ವರದಿ ಮಾಡುವುದಿಲ್ಲ ಮತ್ತು ರಾಜ್ಯದ ಹಲವಾರು ಗಂಭೀರ ಭ್ರಷ್ಟಾಚಾರ ಪ್ರಕರಣಗಳು ಈ ಏಕವ್ಯಕ್ತಿ ಮಾಧ್ಯಮ ಸಂಸ್ಥೆಯಿಂದ ಬೆಳಕು ಕಂಡಿವೆ ಮತ್ತು ಇವರು ಪ್ರಕಟಿಸಿರುವ ದಾಖಲೆಗಳ ಆಧಾರದ ಮೇಲೆ ಈಗಾಗಲೇ ಹಲವಾರು ಇಲಾಖೆಗಳಲ್ಲಿ ಮತ್ತು ತನಿಖಾ ಸಂಸ್ಥೆಗಳಲ್ಲಿ ತನಿಖೆ ನಡೆಯುತ್ತಿವೆ.

ರಾಜ್ಯದ ಹಲವಾರು ಭ್ರಷ್ಟರು ಮತ್ತು ಪಟ್ಟಭದ್ರ ಹಿತಾಸಕ್ತಿಗಳು ಈ ವೆಬ್‌ಸೈಟ್ ಅನ್ನು ನಡೆಸುವ Mahanthesh Bhadravatiಯವರ ಮೇಲೆ ನಾನಾ ತರಹದ ಒತ್ತಡ ಹಾಕಿದರೂ, ತಮ್ಮ ಪ್ರಭಾವ ಬಳಸಿ ಸುಳ್ಳುಕೇಸು ದಾಖಲಾಗುವಂತೆ ನೋಡಿಕೊಂಡು ಜಾಮೀನು ತೆಗೆದುಕೊಳ್ಳಬೇಕಾದ ಪರಿಸ್ಥಿತಿ ತಂದಿದ್ದರೂ, ಮಹಾಂತೇಶರು ತಮ್ಮ ಪ್ರಾಮಾಣಿಕತೆ ಮತ್ತು ವೃತ್ತಿಪರತೆಯನ್ನು ಉಳಿಸಿಕೊಂಡು ರಾಜ್ಯದ ಪತ್ರಕರ್ತರಿಗೆ ಮಾದರಿಯಾಗಿದ್ದಾರೆ.

The-file.in ನಲ್ಲಿ ಪ್ರಕಟವಾದ ವರದಿಯಲ್ಲಿದ್ದ ದಾಖಲೆಗಳು ಮತ್ತು ತದನಂತರದ ಬೆಳವಣಿಗೆಗಳಲ್ಲಿ ಬೆಂಗಳೂರಿನ ವಕೀಲ Jagadesh K N Mahadevರವರು ತಮ್ಮ ಫೇಸ್ಬುಕ್ ಖಾತೆಯಲ್ಲಿ ಪ್ರಕಟಿಸಿರುವ ಹಲವಾರು ಮಾಹಿತಿಗಳ ಹಿನ್ನೆಲೆಯಲ್ಲಿ, ಪೊಲೀಸ್ ಅಧಿಕಾರಿ ರವಿ ಡಿ. ಚನ್ನಣ್ಣನವರ್ ತಮ್ಮ ಅಧಿಕೃತ ಆದಾಯಕ್ಕೆ ಮೀರಿದ ಆಸ್ತಿಯನ್ನು ಸಂಪಾದಿಸಿದ್ದಾರೆ ಎನ್ನುವುದು ಮೇಲ್ನೋಟಕ್ಕೆ ಸ್ಪಷ್ಟವಾಗುತ್ತಿದೆ. ನೂರಾರು ಕೋಟಿ ರೂಪಾಯಿ ಆಸ್ತಿ ಮಾಡಿದ್ದಾರೋ ಇಲ್ಲವೋ, ಆದರೆ ಹತ್ತಾರು ಕೋಟಿ ರೂಪಾಯಿಗಳ ಆಸ್ತಿಯಂತೂ ಇದ್ದಹಾಗೆ ಕಾಣಿಸುತ್ತಿದೆ. ಅದು ನಿಜವಾಗಿದ್ದರೆ ಇಷ್ಟೊಂದು ಆಸ್ತಿಯನ್ನು ಅವರು ಭ್ರಷ್ಟಾಚಾರ ಮಾಡದೇ ಸಂಪಾದಿಸಲು ಸಾಧ್ಯವಿಲ್ಲ ಎಂದು ಯಾರು ಬೇಕಾದರೂ ಊಹಿಸಬಹುದು.

ಈ ಹಿನ್ನೆಲೆಯಲ್ಲಿ, ರವಿ ಡಿ. ಚನ್ನಣ್ಣನವರ್ ಈ ಕೂಡಲೇ #ಸಾರ್ವಜನಿಕವಾಗಿ ಸ್ಪಷ್ಟೀಕರಣ ನೀಡಬೇಕು ಮತ್ತು ತಮ್ಮ ಮತ್ತು ತಮ್ಮ ಕುಟುಂಬದ ಸ್ಥಿರ ಮತ್ತು ಚರಾಸ್ಥಿಗಳನ್ನು ಪತ್ರಿಕಾ ಪ್ರಕಟಣೆಯ ಮೂಲಕ #ಬಹಿರಂಗಪಡಿಸಬೇಕು. ತಮ್ಮ ಇಲಾಖಾ ವೃತ್ತಿಗೆ ಸಂಬಂಧಿಸಿಲ್ಲದ ಕಾರಣಗಳಿಗೆ ಸೆಲೆಬ್ರಿಟಿಯಾಗಿ ಸಾರ್ವಜನಿಕ ರಂಗದಲ್ಲಿ ಚಾಲ್ತಿಯಲ್ಲಿದ್ದ ಇವರು, ಈಗ ಇಲಾಖಾ ನಿಯಮಗಳ ಮರೆಯಲ್ಲಿ ಇದರಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಬಾರದು.

ಹಾಗೆಯೇ, ಇಲ್ಲಿಯವರೆಗೂ ಯಾವುದೇ IAS ಮತ್ತು IPS ಅಧಿಕಾರಿಗಳ ಮೇಲೆ ದಾಳಿ ಮಾಡಿದ ಇತಿಹಾಸವಿಲ್ಲದ ಅದಕ್ಷ ಮತ್ತು ನಾಲಾಯಕ್ ಸಂಸ್ಥೆಯಾದ ರಾಜ್ಯ ಭ್ರಷ್ಟಾಚಾರ ನಿಗ್ರಹ ದಳ (ACB) ಸಂಸ್ಥೆಯು ಈಗಾಗಲೇ ಸಾರ್ವಜನಿಕವಾಗಿ ಲಭ್ಯವಿರುವ ದಾಖಲೆಗಳ ಆಧಾರದ ಮೇಲೆ ರವಿ ಡಿ. ಚನ್ನಣ್ಣನವರ್ ಅವರ ಕುಟುಂಬ ಮತ್ತು ಟ್ರಸ್ಟ್‌ನ ಕಟ್ಟಡ ಮತ್ತಿತರ ಕಡೆ ದಾಳಿ ಮಾಡಬೇಕು. ಅವರು ಈ ಕೆಲಸವನ್ನು ಇಲ್ಲಿಯತನಕ ಮಾಡದೇ ಇರುವುದು ಅಕ್ಷಮ್ಯ. ತಮ್ಮ ಸಹೋದ್ಯೋಗಿ ಪೊಲೀಸ್ ಅಧಿಕಾರಿಯ ಮೇಲೆ ಸಾರ್ವಜನಿಕವಾಗಿ ಇಷ್ಟೆಲ್ಲಾ ಗಂಭೀರ ಆರೋಪಗಳು ಬಂದಿದ್ದಾಗಲೂ ದಾಳಿ ಮಾಡದೇ ಅವರನ್ನು ರಕ್ಷಿಸಲು ACBಯ #ಕರ್ತವ್ಯಭ್ರಷ್ಟ ಪೊಲೀಸ್ ಅಧಿಕಾರಿಗಳು ಪ್ರಯತ್ನಿಸುತ್ತಿರುವುದು ನಿಜಕ್ಕೂ ನಾಚಿಕೆಗೇಡು. ಇವರೆಲ್ಲರೂ ಸಮವಸ್ತ್ರ ಕಳಚಿ ಮೊದಲು ಅಲ್ಲಿಂದ ತೊಲಗಬೇಕು.

ಇನ್ನು, ರವಿ ಡಿ. ಚನ್ನಣ್ಣನವರ್ ಭ್ರಷ್ಟಾಚಾರ ಮಾಡಿರುವುದು ನಿಜವೇ ಆದಲ್ಲಿ, ಅದು ಅವರು ರಾಜ್ಯದ ಜನತೆಗೆ ಮಾಡಿದ ಬಹುದೊಡ್ಡ #ವಿಶ್ವಾಸದ್ರೋಹ. ನ್ಯಾಯ, ನೀತಿ, ಧರ್ಮದ ಬಗ್ಗೆ ಭಾಷಣ ಮಾಡುತ್ತಾ, ಅದಕ್ಕೆ ತದ್ವಿರುದ್ಧವಾಗಿ ನಡೆದುಕೊಂಡಿರುವ #ಆತ್ಮದ್ರೋಹದ ಕೆಲಸವೂ ಹೌದು. ಅವರು ಈ ಕೂಡಲೇ ತಮ್ಮ ಕೆಲಸಕ್ಕೆ ರಾಜೀನಾಮೆ ನೀಡಿ, ಮತ್ತಿನ್ಯಾವುದಾದರೂ ಕೆಲಸ ಹುಡುಕಿಕೊಳ್ಳಬೇಕು ಮತ್ತು ಭಾಷಣ ಮಾಡುವುದನ್ನು ನಿಲ್ಲಿಸಬೇಕು. ನೈತಿಕತೆ ಮತ್ತು ಮನಸ್ಸಾಕ್ಷಿ ಇರುವ ಯಾವುದೇ ವ್ಯಕ್ತಿ ಮಾಡಬಹುದಾದ ಕನಿಷ್ಠ ಕೆಲಸ ಇದು.

ಅವರು ಭ್ರಷ್ಟರಲ್ಲದೆ ಇದ್ದಲ್ಲಿ, ಈಗ ತಮ್ಮ ಮೇಲೆ ಬಂದಿರುವ ಆರೋಪಗಳನ್ನು ಅವರು ನ್ಯಾಯಯುತವಾಗಿ ಮತ್ತು ಪಾರದರ್ಶಕವಾಗಿ ಎದುರಿಸಬೇಕು ಮತ್ತು ಈ ಅಗ್ನಿಪರೀಕ್ಷೆಯಲ್ಲಿ ಹಾದು ಬರಬೇಕು. ಹಾಗೆಯೇ, ಅವರು ಮಾಧ್ಯಮಗಳ ವಿರುದ್ಧ ತಂದಿರುವ ತಡೆಯಾಜ್ಞೆಯನ್ನು ಕೂಡಲೇ ತೆರವುಗೊಳಿಸಬೇಕು. ಅಂದಹಾಗೆ, ತಡೆಯಾಜ್ಞೆ ತೆರವು ಮಾಡಿದಾಕ್ಷಣ ಈ ವಿಚಾರವಾಗಿ ನಮ್ಮ ಮಾಧ್ಯಮಗಳು ಸುದ್ದಿ ಮಾಡಲು ಆರಂಭಿಸುತ್ತವೆ ಎನ್ನುವ ಖಾತ್ರಿ ಇಲ್ಲ. ಇಂದಿನ ಬಹುತೇಕ ಮಾಧ್ಯಮಗಳು ಪ್ರಾಮಾಣಿಕತೆ ಮತ್ತು ವಿಶ್ವಾಸಾರ್ಹತೆಯನ್ನು ಉಳಿಸಿಕೊಂಡಿಲ್ಲ. ಹಾಗಾಗಿ ಈ ವಿಚಾರವಾಗಿ ರವಿ ಡಿ. ಚನ್ನಣ್ಣನವರ್ ಆತಂಕ ಪಡಬೇಕಿಲ್ಲ.

ಇನ್ನು, ಅತ್ತಿಬೆಲೆಯ ಮಂಜುನಾಥ್ ಎನ್ನುವವರು ನೀಡಿರುವ ದೂರಿನ ಪ್ರಕರಣದಲ್ಲಿ ಬೆಂಗಳೂರು ಕೇಂದ್ರ ವಲಯದ ಐಜಿಪಿ ಎಂ. ಚಂದ್ರಶೇಖರ್ ವಿಚಾರಣೆ ನಡೆಸಿ ರವಿ ಡಿ. ಚನ್ನಣ್ಣವರ್ ಅವರಿಗೆ “ಕ್ಲೀನ್ ಚಿಟ್” ನೀಡಿದ್ದಾರೆ ಎಂದು ಹೇಳಲಾಗುತ್ತಿದೆ. (https://the-file.in/2022/01/governance/10564/) ಕೆಳಹಂತದ ಅಧಿಕಾರಿಗಳನ್ನು ಬಲಿಪಶು ಮಾಡಿ, ಹಿರಿಯ ಅಧಿಕಾರಿಗಳನ್ನು ರಕ್ಷಿಸುವ ಇಂತಹ ಕೆಲಸಗಳಿಗೆ ಪೊಲೀಸ್ ಇಲಾಖೆ ಕುಖ್ಯಾತಿ ಪಡೆದಿದೆ. ಯಾವೆಲ್ಲಾ ರೀತಿ ವಿಚಾರಣೆ ನಡೆಸಿದ್ದಾರೆ ಮತ್ತು ಅದು ಎಷ್ಟು ಪಾರದರ್ಶಕವಾಗಿತ್ತು ಎನ್ನುವ ವಿವರಗಳಿಲ್ಲದ ಇಂತಹ ತನಿಖಾ ನಾಟಕಗಳನ್ನು ಬಂದ್ ಮಾಡಿ ಪೊಲೀಸ್ ಇಲಾಖೆ ತನ್ನ ಗೌರವ ಉಳಿಸಿಕೊಳ್ಳಬೇಕು.

ಜನರಲ್ಲಿ ಸ್ಫೂರ್ತಿ ತುಂಬುವ ಹಾಗೂ ಉತ್ತಮ ನಡವಳಿಕೆಯ ಮತ್ತು ಆದರ್ಶ ವ್ಯಕ್ತಿತ್ವದ ವ್ಯಕ್ತಿಗಳ ಕೊರತೆ ಸಮಾಜದಲ್ಲಿದೆ ಎಂದರೆ ಅದು ಆ ನಾಡಿನ ದುರಂತ. ನಮ್ಮಲ್ಲಿ ಅಂತಹ ವ್ಯಕ್ತಿಗಳ ಕೊರತೆ ತೀವ್ರವಾಗಿದೆ ಮತ್ತು ಅಂತಹವರು ಕೆಲವರೇ ಇದ್ದಾರೆ. ಸಾರ್ವಜನಿಕರಲ್ಲಿ ಸದಭಿಪ್ರಾಯ ಇರುವ ವ್ಯಕ್ತಿಗಳನ್ನು ಒಂದೇಸಲಕ್ಕೆ ಹಠಕ್ಕೆ ಬಿದ್ದವರಂತೆ ಟೀಕಿಸಬಾರದು ಮತ್ತು ಜನರಲ್ಲಿ ಎಲ್ಲದರ ಮತ್ತು ಎಲ್ಲರ ಬಗ್ಗೆಯೂ ಸಂಶಯವನ್ನು ಹುಟ್ಟಿಸಿ ಅವರನ್ನು ನಿರಾಶೆಯ ಕೂಪಕ್ಕೆ ನೂಕಬಾರದು ಎನ್ನುವ ಕಾರಣಕ್ಕೆ ನಾನು ಹಲವಾರು ವ್ಯಕ್ತಿಗಳ ಕುರಿತು ಪ್ರಜ್ಞಾಪೂರ್ವಕವಾಗಿ ಮಾತನಾಡುತ್ತಿಲ್ಲ. ಈಗಲೂ ಸಮಾಜದಲ್ಲಿ ಪ್ರಾಮಾಣಿಕರೆಂದು ಬಿಂಬಿತವಾಗಿರುವ ಹಲವಾರು ಸಿಂಗಂ’ಗಳು ಮತ್ತು ಅಧಿಕಾರಿಗಳು ಎಂತಹ ಭ್ರಷ್ಟರು, ಅಪ್ರಾಮಾಣಿಕರು ಮತ್ತು ಖದೀಮರು ಎನ್ನುವ ವಿಷಯ ನನಗೆ ನಂಬಲರ್ಹ ಮೂಲಗಳಿಂದ ಇದೆ. ಆದರೆ ಸೂಕ್ತ ದಾಖಲೆಗಳು ಇಲ್ಲದ ಕಾರಣ, ಮತ್ತು ಅದಕ್ಕೂ ಮುಖ್ಯವಾಗಿ ಪ್ರಾಮಾಣಿಕತೆ, ಆದರ್ಶ ಮತ್ತು ಆಶಾವಾದದ ಪ್ರತಿಮೆಗಳನ್ನು ಅತ್ಯುತ್ಸಾಹದಿಂದ ಮುನ್ನುಗ್ಗಿ ಒಡೆಯಬಾರದು ಎನ್ನುವ ಕಾರಣಕ್ಕೆ ನಾನು ಮಾತನಾಡುವುದಿಲ್ಲ. ಹಾಗಾಗಿಯೇ ರವಿ ಡಿ. ಚನ್ನಣ್ಣನವರ್ ವಿಷಯಕ್ಕೆ ನಾನು ಇಷ್ಟು ದಿನಗಳ ಕಾಲ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ. ನೀಡಲೇ ಬೇಕಾದಂತಹ ಸಂದರ್ಭವನ್ನು ರವಿ ಡಿ. ಚನ್ನಣ್ಣನವರ್ ಸೃಷ್ಟಿಸಿರುವ ಕಾರಣ ಈಗ ನಾವು ಪ್ರಶ್ನಿಸಲೇಬೇಕಿದೆ.

ಎಲ್ಲರಿಗೂ ಶುಭವಾಗಲಿ.

ಏನೇ ಆಗಲಿ, ಒಳ್ಳೆಯದನ್ನೇ ಮಾಡಿ; ಮಾಡುತ್ತಲೇ ಇರಿ.

  • ರವಿ ಕೃಷ್ಣಾರೆಡ್ಡಿ, ರಾಜ್ಯಾಧ್ಯಕ್ಷ, ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ

ಪೂರಕ ಮಾಹಿತಿ:

ಈ ವಿಚಾರಕ್ಕೆ The.file.in ಮಾಧ್ಯಮದಲ್ಲಿ ಪ್ರಕಟವಾಗಿರುವ ಕೆಲವು ತನಿಖಾ ವರದಿಗಳು:

55 ಲಕ್ಷ ಸುಲಿಗೆ ಆರೋಪ; ರವಿಚನ್ನಣ್ಣನವರ್‌,ಇತರೆ ಪೊಲೀಸ್‌ ಅಧಿಕಾರಿಗಳ ವಿರುದ್ಧ ದೂರು

ನ್ಯಾಯಾಲಯದಿಂದ ತಡೆಯಾಜ್ಞೆ ತಂದ ಸಿಐಡಿ ಎಸ್ಪಿ ರವಿ ಚನ್ನಣ್ಣನವರ್‌

ಎಫ್‌ಐಆರ್‌ ದಾಖಲಿಸಲು 5 ಲಕ್ಷ ಸುಲಿಗೆ; ಎಡಿಜಿಪಿ, ಎಸ್ಪಿ ಹೆಸರು ಪ್ರಸ್ತಾಪವಾದ ಆಡಿಯೋ ಬಹಿರಂಗ

5 ಲಕ್ಷ ಸುಲಿಗೆ ಆರೋಪ; ಸಿಪಿಐ, ಎಎಸ್‌ಐ ವಿರುದ್ಧ ಶಿಸ್ತುಕ್ರಮ, ಐಪಿಎಸ್‌ಗೆ ಕ್ಲೀನ್‌ಚಿಟ್‌

Leave a Reply