ಹಣದ ಅವ್ಯವಹಾರ ತಡೆಯಲು “ಫ್ರೂಟ್ಸ್” ತಂತ್ರಾಂಶ ಅಭಿವೃದ್ಧಿ
ಮುಂದಿನ ವಾರದೊಳಗೆ 30 ಲಕ್ಷ ರೈತರಿಗೆ ಮೊದಲ ಕಂತಿನ ಪರಿಹಾರ
ಕೇಂದ್ರದಿಂದ ಇನ್ನೂ ಬಂದಿಲ್ಲ ಬರ ಪರಿಹಾರ, ಸಚಿವರ ಬೇಸರ
ಕುಡಿಯುವ ನೀರಿನ ಸಮಸ್ಯೆ ಬಗ್ಗೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ
ಫೆಬ್ರವರಿ ಮೊದಲ ವಾರದೊಳಗೆ ಟಾಸ್ಕ್ ಫೋರ್ಸ್ ಸಭೆ ನಡೆಸಲು ಸೂಚನೆ
ಬೆಂಗಳೂರು: ಬರ ಪರಿಹಾರದ ಮೊದಲ ಕಂತಿನ ಹಣವನ್ನು ಶೀಘ್ರವೇ ರೈತರಿಗೆ ತಲುಪಿಸಿ ಎಂದು ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು.
ವಿಕಾಸಸೌಧದಲ್ಲಿ ಜರುಗಿದ ಎಲ್ಲಾ ಜಿಲ್ಲಾಧಿಕಾರಿಗಳು ಹಾಗೂ ಉಪ ವಿಭಾಗಾಧಿಕಾರಿಗಳ ಜೊತೆಗಿನ ಮಾಸಿಕ ಸಭೆಯ ನಂತರ ಪತ್ರಿಕಾಗೋಷ್ಠಿ ನಡೆಸಿ ಮಾಹಿತಿ ನೀಡಿದ ಅವರು, ಫ್ರೂಟ್ಸ್ನಲ್ಲಿ ಶೇ.75 ರಷ್ಟು ರೈತರ ಸಂಪೂರ್ಣ ಜಮೀನಿನ ಮಾಹಿತಿಯನ್ನು ನವೀಕರಿಸಿದ್ದು ಮುಂದಿನ ಒಂದು ವಾರದಲ್ಲಿ 30 ಲಕ್ಷ ರೈತರಿಗೆ ಮೊದಲ ಕಂತಿನ ಬರ ಪರಿಹಾರದ ಹಣ ಬ್ಯಾಂಕ್ ಖಾತೆಗೆ ತಲುಪಲಿದೆ ಎಂದರು.
ರೈತರಿಗೆ ಬರ ಹಾಗೂ ಮಳೆಹಾನಿ ಪರಿಹಾರ ತಲುಪಿಸುವ ವಿಚಾರದಲ್ಲೂ ಈ ಹಿಂದೆ ಭಾರೀ ಅವ್ಯವಹಾರಗಳು ನಡೆದಿವೆ. ಜಮೀನು ಯಾರದ್ದೋ ಇದೆ, ಪರಿಹಾರ ಇನ್ಯಾರಿಗೋ ಹೋಗಿರುವ ಹಲವು ಪ್ರಕ್ರರಣಗಳು ನನ್ನ ಗಮನಕ್ಕೆ ಬಂದಿವೆ. ಕಡೂರು ಒಂದೇ ತಾಲೂಕಿನಲ್ಲಿ 6 ಕೋಟಿ ರೂ. ಪರಿಹಾರದ ಹಣ ಅಕ್ರಮ ಎಸಲಾಗಿದೆ. ಹಣ ದುರ್ಬಳಕೆಯಾದವರ ಪಟ್ಟಿ ನನ್ನ ಬಳಿ ಇದೆ. ಹಾನಗಲ್, ಶಿಗ್ಗಾಂವ್ ನಲ್ಲೂ ಇಂತಹ ಪ್ರಕರಣಗಳು ಕಂಡುಬಂದಿವೆ. ಗರಿಷ್ಠ 5 ಎಕರೆ ವರೆಗೆ ಪರಿಹಾರ ಕೊಡಬಹುದು. ಆದರೆ, 5 ಎಕರೆ ಮೀರಿ ಪರಿಹಾರ ವಿತರಿಸಿದ್ದಾರೆ. ರೈತರಲ್ಲದವರ ಖಾತೆಗೆ 49,999 ಜಮೆ ಆಗಿದೆ. ಅಸಲಿ ರೈತರ ಖಾತೆಗೆ ಅಲ್ಪ ಪ್ರಮಾಣದ ಮೊತ್ತ ಮಾತ್ರ ಜಮೆ ಆಗಿದೆ. ಇದೇ ಕಾರಣಕ್ಕೆ ಈ ಬಾರಿ ರೈತರಿಗೆ ಬರ ಪರಿಹಾರ ನೀಡಲು ‘ಫ್ರೂಟ್ಸ್’ದಾಖಲಾತಿ ಕಡ್ಡಾಯಗೊಳಿಸಲಾಗಿದೆ ಎಂದರು.
ಈ ಹಿಂದೆ ಫ್ರೂಟ್ಸ್ ಡಾಟಾಬೇಸ್ನಲ್ಲಿ 7.7 ಲಕ್ಷ ರೈತರ ಮಾಹಿತಿಯೇ ಇರಲಿಲ್ಲ. ಇದೀಗ ಹೊಸದಾಗಿ ಸೇರಿಸಲಾಗಿದೆ. 34 ಲಕ್ಷ ರೈತರ ಜಮೀನ ಮಾಹಿತಿಯನ್ನು ಈ ತಂತ್ರಾಂಶದಲ್ಲಿ ದಾಖಲು ಮಾಡಲಾಗಿದೆ. ಬಿಟ್ಟುಹೋಗಿರುವ ಅರ್ಹ ರೈತರ ಮಾಹಿತಿಯನ್ನು ಮತ್ತೆ ದಾಖಲಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಕಳೆದ 15 ದಿನಗಳಿಂದ ನಮ್ಮ ಅಧಿಕಾರಿಗಳು ರಜೆ ತೆಗೆದುಕೊಳ್ಳದೆ ಕೆಲಸ ಮಾಡಿದ್ದು, ರೈತರ ಹಣ ದುರುಪಯೋಗವಾಗದಂತೆ ಅವರಿಗೆ ತಲುಪಿಸಲಾಗುವುದು. ಈಗಾಗಲೇ ಈ ಪ್ರಕ್ರಿಯೆ ಆರಂಭವಾಗಿದ್ದು, 15 ಲಕ್ಷಕ್ಕೂ ಅಧಿಕ ರೈತರಿಗೆ ಈಗಾಗಲೇ ಹಣ ತಲುಪಿಸಲಾಗಿದೆ. ಮುಂದಿನ ವಾರದೊಳಗೆ 30 ಲಕ್ಷ ರೈತರಿಗೆ ಪರಿಹಾರದ ಹಣ ತಲುಪಲಿದೆ ಎಂದರು.
ಕೇಂದ್ರದಿಂದ ಇನ್ನೂ ಬಂದಿಲ್ಲ ಪರಿಹಾರ!: ಬರ ಘೋಷಿಸಿ ನಾಲ್ಕು ತಿಂಗಳಾದರೂ ಕೇಂದ್ರ ಸರ್ಕಾರದಿಂದ ಬರ ಪರಿಹಾರದ ಹಣ ಇನ್ನೂ ಬಂದಿಲ್ಲ ಎಂದು ಕೃಷ್ಣ ಬೈರೇಗೌಡ ಬೇಸರ ವ್ಯಕ್ತಪಡಿಸಿದರು.
ರಾಜ್ಯದ 223 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಗಿದೆ. 48.19 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿಯಾಗಿದ್ದು, ಎನ್ಡಿಆರ್ಎಫ್ ಮಾರ್ಗಸೂಚಿ ಅನ್ವಯ 18,177.44 ಕೋಟಿ ರೂ. ಪರಿಹಾರ ನೀಡುವಂತೆ ಸೆಪ್ಟೆಂಬರ್ 22 ರಂದೇ ಕೇಂದ್ರ ಕೃಷಿ ಸಚಿವಾಲಯಕ್ಕೆ ಮನವಿ ಸಲ್ಲಿಸಲಾಗಿದೆ. ಭಾರತ ಸರ್ಕಾರದ ಬರ ಅಧ್ಯಯನ ತಂಡ ಅಕ್ಟೋಬರ್ ತಿಂಗಳ 4 ರಿಂದ 9ರ ನಡುವೆ ಭೇಟಿ ನೀಡಿ, ವರದಿಯನ್ನೂ ಸಲ್ಲಿಸಿದೆ. ಆದರೂ, ಕೇಂದ್ರ ಸರ್ಕಾರ ಈ ವರೆಗೆ ನಮ್ಮ ಮನವಿಯ ಮೇಲೆ ಸಭೆ ನಡೆಸಿ ತೀರ್ಮಾನ ತೆಗೆದುಕೊಂಡಿಲ್ಲ. ಸಭೆ ನಡೆಸುವುದಾಗಿ ಅಮಿತ್ ಶಾ ಹೇಳಿದ್ದರೂ ಉಪಯೋಗವಾಗಿಲ್ಲ. ಹೀಗಾಗಿ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಪರಿಣಾಮ ರಾಜ್ಯ ಸರ್ಕಾರವೇ ಮೊದಲ ಕಂತಿನಲ್ಲಿ 2,000 ರೂ. ನೀಡಲು ಮುಂದಾಗಿದೆ ಎಂದರು.
ಕುಡಿಯುವ ನೀರಿನ ಸಮಸ್ಯೆಯ ಬಗ್ಗೆ ಮುಂಜಾಗ್ರತೆ: ಕುಡಿಯುವ ನೀರಿಗೆ ಸಮಸ್ಯೆಯಾಗದಂತೆ ಮುಂಜಾಗ್ರತೆ ವಹಿಸಲು ಎಲ್ಲಾ ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಕೃಷ್ಣ ಬೈರೇಗೌಡ ತಿಳಿಸಿದರು.
ಪ್ರಸ್ತುತ ರಾಜ್ಯದಲ್ಲಿ ಕುಡಿಯುವ ನೀರಿನ ಸಮಸ್ಯೆ ಇಲ್ಲ. ಆದರೂ, ಮುಂಜಾಗ್ರತೆ ವಹಿಸಲು ಸೂಚಿಸಲಾಗಿದೆ. 36 ಗ್ರಾಮಗಳಲ್ಲಿ ಮಾತ್ರ ನೀರಿನ ಕೊರತೆ ಇದೆ. ಈ ಎಲ್ಲಾ ಗ್ರಾಮಗಳಿಗೆ ಟ್ಯಾಂಕರ್ ಮೂಲಕ ನೀರು ಪೂರೈಸಲಾಗುತ್ತಿದೆ. 139 ಗ್ರಾಮಗಳಿಗೆ ಬೋರ್ವೆಲ್ ಮೂಲಕ ನೀರು ಪೂರೈಸಲಾಗುತ್ತಿದೆ. ನೀರಿನ ಸಮಸ್ಯೆ ಕಂಡುಬಂದಲ್ಲಿ ಖಾಸಗಿ ಬೋರ್ವೆಲ್ ಮೂಲಕ ನೀರು ಪೂರೈಸಲು ಸೂಚಿಸಲಾಗಿದೆ. ಮುಂದಿನ ದಿನಗಳಲ್ಲಿ 1186 ವಾರ್ಡ್ಗಳಲ್ಲಿ ನೀರಿನ ಸಮಸ್ಯೆ ಉಲ್ಬವಣಿಸುವ ಸಾಧ್ಯತೆ ಇದೆ. ಹೀಗಾಗಿ 2404 ಖಾಸಗಿ ಬೋರ್ವೆಲ್ ಗೆ ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದರು.
ತುಂಗಭದ್ರಾ ಹೊರತುಪಡಿಸಿ ಉಳಿದ ಎಲ್ಲಾ ಅಣೆಕಟ್ಟೆಗಳಲ್ಲೂ ಕುಡಿಯಲು ಬೇಕಾದಷ್ಟು ನೀರಿನ ಸಂಗ್ರಹಣೆ ಇದೆ. ಹೀಗಾಗಿ ಅಣೆಕಟ್ಟೆಗಳಲ್ಲಿನ ಸಂಗ್ರಹಣೆ ನೀರನ್ನು ಸರಿಯಾದ ರೀತಿಯಲ್ಲಿ ನಿರ್ವಹಿಸುವಂತೆ ನೀರಾವರಿ ಇಲಾಖೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಅಲ್ಲದೆ, ಫೆಬ್ರವರಿ ಮೊದಲ ವಾರದೊಳಗಾಗಿ ಎಲ್ಲಾ ತಾಲೂಕುಗಳಲ್ಲೂ ಕಡ್ಡಾಯವಾಗಿ ಟಾಸ್ಕ್ ಫೋರ್ಸ್ ಸಭೆ ನಡೆಸುವಂತೆ ತಹಶೀಲ್ದಾರ್ಗಳಿಗೆ ಸೂಚನೆ ನೀಡಲಾಗಿದೆ ಎಂದರು.
ಮೇವಿಗೂ ಕೊರತೆ ಇಲ್ಲ: ಚಿತ್ರದುರ್ಗದ ಕೆಲವು ಭಾಗಗಳನ್ನು ಹೊರತುಪಡಿಸಿ ರಾಜ್ಯದ ಬೇರೆಲ್ಲೂ ಮೇವಿನ ಕೊರತೆ ಇಲ್ಲ. ಈಗಾಗಲೇ 7 ಲಕ್ಷ ಮೇವಿನ ಬಿತ್ತನೆ ಬೀಜದ ಕಿಟ್ ಅನ್ನು ಉಚಿತವಾಗಿ ವಿತರಿಸಲಾಗಿದೆ. ಫೆಬ್ರವರಿಯಲ್ಲಿ ಮತ್ತೊಮ್ಮೆ ಕಿಟ್ ನೀಡಲಿದ್ದೇವೆ. 16 ಜಿಲ್ಲೆಗಳಲ್ಲಿ ಮೇವು ಖರೀದಿಗೆ ಟೆಂಡರ್ ನಡೆದಿದೆ ಎಂದು ಮಾಹಿತಿ ನೀಡಿದರು.
ಎಸಿ-ತಹಶೀಲ್ದಾರ್ ನ್ಯಾಯಾಲಯಗಳ ಪ್ರಗತಿ: ಕಳೆದ ಮೂರು ತಿಂಗಳಲ್ಲಿ ತಕರಾರು ಪ್ರಕರಣಗಳ ಇತ್ಯರ್ಥ ವೇಗ ಪಡೆದುಕೊಂಡಿದೆ ಉಪ ವಿಭಾಗಾಧಿಕಾರಿ (ಎಸಿ) ನ್ಯಾಯಾಲಯ ಗಳಲ್ಲಿ ಐದು ವರ್ಷಕ್ಕೆ ಮೇಲ್ಪಟ್ಟ 59,800 ಪ್ರಕರಣಗಳು ಇದ್ದವು. ಆದರೆ, ಕಳೆದ ಮೂರೇ ತಿಂಗಳಲ್ಲಿ 33,000 ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ. ತಹಶೀಲ್ದಾರ್ ನ್ಯಾಯಾಲಯದಲ್ಲಿ 2215 ಪ್ರಕರಣಗಳಿದ್ದು, ಈ ಸಂಖ್ಯೆಯನ್ನು ಇದೀಗ ಕೇವಲ 170ಕ್ಕೆ ಇಳಿಸಲಾಗಿದೆ. ರೈತರು ತಕರಾರು ಅರ್ಜಿಗಳ ಇತ್ಯರ್ಥಕ್ಕಾಗಿ ದಿನಂಪ್ರತಿ ಸರ್ಕಾರಿ ಕಚೇರಿಗಳಿಗೆ ಅಲೆಯುವುದಕ್ಕೆ ಬ್ರೇಕ್ ಹಾಕಲಾಗಿದೆ ಎಂದು ತಿಳಿಸಿದರು.




