ತಾರಕಕ್ಕೇರಿದ ಕೆ.ಎನ್.ರಾಜಣ್ಣ – ಎಚ್.ಸಿ.ಬಾಲಕೃಷ್ಣ ಜಟಾಪಟಿ

12 hours ago

ಬೆಂಗಳೂರು: ಮಾಜಿ ಸಚಿವ ಕೆ.ಎನ್.ರಾಜಣ್ಣ ಮತ್ತು ಸಣ್ಣ ನೀರಾವರಿ ಮಂತ್ರಿ  ಎಚ್.ಸಿ.ಬಾಲಕೃಷ್ಣ ನಡುವೆ ವಾಕ್ಸಮರ ತೀವ್ರಗೊಂಡಿದೆ. ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿದ್ದ ರಾಜಣ್ಣ ಜೆಡಿಎಸ್ ಸೇರುವ ಕುರಿತಂತೆ ಮಾತನಾಡಿಲ್ಲ ಎಂದು ಅವರ ಮನೆ ದೇವರ ಮುಂದೆ ಪ್ರಮಾಣ ಮಾಡಲಿ ಎಂದು ಬಾಲಕೃಷ್ಣ ಸವಾಲು ಹಾಕಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು ರಾಜಣ್ಣ ಅವರ ಮನೆ ದೇವರ ಬಳಿಗೇ ನಾನೇ ಖುದ್ದಾಗಿ ಬರುತ್ತೇನೆ. ಕುಮಾರಸ್ವಾಮಿ ಅವರ ಬಳಿ ನಾವು ಯಾವುದೇ ರಾಜಕೀಯ ವಿಚಾರಗಳನ್ನು ಮಾತನಾಡಿಲ್ಲ ಎಂದು ದೇವರ ಮುಂದೆ ರಾಜಣ್ಣ ಪ್ರಮಾಣ ಮಾಡಲಿ. ಒಂದು ವೇಳೆ ಅವರು ಹಾಗೆ ಪ್ರಮಾಣ ಮಾಡಿದರೆ ನಾನು ಅಲ್ಲಿಯೇ ಅವರಿಗೆ ಶರಣಾಗುತ್ತೇನೆ ಎಂದು ಸವಾಲೆಸೆದರು.

ರಾಜಕೀಯ ಕ್ಷೇತ್ರದಲ್ಲಿ ಬಹಳ ದಿನಗಳ ಕಾಲ ನಕಲಿ ಅಥವಾ ಡೂಪ್ ರಾಜಕಾರಣ ನಡೆಯುವುದಿಲ್ಲ, ಇಲ್ಲಿ ಕೇವಲ ಪ್ರಾಮಾಣಿಕ ರಾಜಕಾರಣ ಮಾತ್ರ ಉಳಿಯುತ್ತದೆ ಎಂದರು.

ರಾಜಣ್ಣ ಅವರು ಜೆಡಿಎಸ್ ನಾಯಕ ಕುಮಾರಸ್ವಾಮಿ ಅವರನ್ನು ಭೇಟಿಯಾಗಿ ರಾಜಕೀಯ ವಿಚಾರಗಳನ್ನು ಮಾತನಾಡಿರುವುದು ಸತ್ಯ ಎಂದು ಸ್ವತಃ ರಾಜಣ್ಣ ಅವರ ಮಗ ರಾಜೇಂದ್ರ ಅವರೇ ಒಪ್ಪಿಕೊಂಡಿದ್ದಾರೆ. ಹೀಗಿರುವಾಗ ಇವರು ಕುಮಾರಸ್ವಾಮಿ ಅವರ ಬಳಿಗೆ ಏನು ಕಡ್ಲೆಪುರಿ ತಿನ್ನಲು ಹೋಗಿದ್ದರಾ ಎಂದು ಪ್ರಶ್ನಿಸಿದರು.

ಪಕ್ಷದಲ್ಲಿ ತಪ್ಪು ಯಾರೇ ಮಾಡಿದರೂ ಅದನ್ನು ತಪ್ಪು ಎಂದೇ ಹೇಳುತ್ತೇವೆ. ಒಂದು ವೇಳೆ ನಾವೇ ತಪ್ಪು ಮಾಡಿದ್ದರೂ ಅದನ್ನು ನೇರವಾಗಿ ಹೇಳಲಿ, ಇಲ್ಲಿ ನಮಗೆ ಪಕ್ಷ ನಿಷ್ಠೆಯೇ ಮುಖ್ಯ ಎಂದರು. ಅಲ್ಲದೆ, ಅಣ್ಣನಿಗೆ ಮಂತ್ರಿಯಾಗಿ ಒಳ್ಳೆಯ ಹಣವಾಯಿತು, ಇನ್ನೇನು ಮಾಡುತ್ತಾರೆ ಎಂದು ವ್ಯಂಗ್ಯವಾಡಿದರು.

ರಾಜಣ್ಣ ಅವರ ಮಗ ವಿಧಾನ ಪರಿಷತ್ ಸದಸ್ಯ ರಾಜೇಂದ್ರ ಅವರು ಕುಮಾರಸ್ವಾಮಿ ಮಾಜಿ ಪ್ರಧಾನಿ ದೇವೇಗೌಡ ಮತ್ತು ಕೇಂದ್ರ ಗೃಹ ಮಂತ್ರಿ ಅಮಿತ್ ಶಾ ಅವರನ್ನು ಭೇಟಿ ಮಾಡಿದ್ದಾರೆ ಈ ಭೇಟಿ ಯಾವ ಕಾರಣಕ್ಕೆ ನಡೆಯಿತು ಎಂಬುದನ್ನು ದೇವರ ಮುಂದೆ ಬಂದು ಹೇಳಲಿ ಎಂದರು.

Leave a Reply