ಬೆಂಗಳೂರು: ಕೆಂಪೇಗೌಡರು ಜನಪರ ಹಾಗೂ ಜಾತ್ಯತೀತ ದೊರೆಯಾಗಿದ್ದರು ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.
ನಾಡಪ್ರಭು ಕೆಂಪೇಗೌಡ ಜಯಂತಿ ಉದ್ಘಾಟಿಸಿ ಮಾತನಾಡಿದ ಅವರು, ಕೆಂಪೇಗೌಡ ಅವರ ಕಾಲದಲ್ಲಿ ಎಲ್ಲರೂ ಸೌಹಾರ್ದತೆಯಿಂದಿದ್ದರು. ಇಂತಹ ಮಾದರಿ ನಾಡಪ್ರಭುವನ್ನು ಸ್ಮರಿಸುವ ಸಲುವಾಗಿ ನಾನು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಸರ್ಕಾರದ ವತಿಯಿಂದಲೇ ಕೆಂಪೇಗೌಡರ ಜಯಂತಿಯನ್ನು ಆಚರಿಸಲು ಆದೇಶ ನೀಡಲಾಗಿತ್ತು. ಕೆಂಪೇಗೌಡರ ಪ್ರತಿಮೆಯನ್ನೂ ನಮ್ಮ ಅವಧಿಯಲ್ಲಿಯೇ ಸ್ಥಾಪಿಸಲು ತೀರ್ಮಾನ ಕೈಗೊಳ್ಳಲಾಗಿತ್ತು. ಕೆಂಪೇಗೌಡರು ಒಬ್ಬ ಪ್ರಗತಿಪರವಾದ, ಜಾತ್ಯತೀತವಾದ ದೊರೆಯನ್ನು ಸ್ಮರಿಸುವ ದಿನವಾಗಿದೆ ಎಂದರು.
ಬೆಂಗಳೂರು ಇಂದು ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದ್ದರೆ ಅದಕ್ಕೆ ಕೆಂಪೇಗೌಡ ಅವರೇ ಮೂಲ ಕಾರಣ. ಕೆಂಪೇಗೌಡ ಅವರು ದೂರದೃಷ್ಟಿಯಿಂದ ನಾಡು ಕಟ್ಟಿದ್ದಾರೆ. ನಾಲ್ಕು ದಿಕ್ಕಿಗೂ ದ್ವಾರ ಮಾಡಿ, ವೃತ್ತಿಗೊಂದು ಮಾರುಕಟ್ಟೆ ಸ್ಥಾಪಿಸಿ, ಕೆರೆ ಕಟ್ಟೆಗಳನ್ನು ಅಭಿವೃದ್ಧಿ ಮಾಡಿದ್ದರು ಎಂದರು.
ಇಂತಹ ಮಹನೀಯರು ಕೇವಲ ಜಾತಿ ವರ್ಗಗಳಿಗೆ ಸೀಮಿತವಾಗದೆ ಸಮಾಜದ ಸ್ವತ್ತಾಗಬೇಕು ಎಂಬ ಉದ್ದೇಶದಿಂದ ಇಂತಹ ಗಣ್ಯರ ಜಯಂತಿಯನ್ನು ಸರ್ಕಾರದ ವತಿಯಿಂದ ಆಯೋಜಿಸಲು ನಿರ್ಧಾರವನ್ನು ತಾವು ಹಿಂದಿನ ಅವಧಿಯಲ್ಲಿ ಮಾಡಿದ್ದಾಗಿ ಹೇಳಿದರು.
ಇದೇ ರೀತಿ ದೇವನಹಳ್ಳಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ನಮ್ಮ ಸರ್ಕಾರದಲ್ಲಿ ನಾಡ ಪ್ರಭು ಕೆಂಪೇಗೌಡ ವಿಮಾನ ನಿಲ್ದಾಣ ಎಂದು ನಾಮಕರಣ ಮಾಡಲಾಯಿತು. ಇದೇ ರೀತಿ ಕೆಂಪೇಗೌಡ ಅಭಿವೃದ್ಧಿ ಪ್ರಾಧಿಕಾರ ಸ್ಥಾಪಿಸಿ ಐದು ಎಕರೆ ಜಾಗ ನೀಡಲಾಯಿತು ಎಂದು ಹೇಳಿದರು.




